ಗುರುವಾರ , ಆಗಸ್ಟ್ 13, 2020
27 °C

ಕೊಳವೆಬಾವಿ ನೀರನು ಕೆರೆಗೆ ಚೆಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳವೆಬಾವಿ ನೀರನು ಕೆರೆಗೆ ಚೆಲ್ಲಿ...

ಮಾಲೂರು: ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಕೆಲ ಗ್ರಾಮಗಳಲ್ಲಿ ನೀರಿದ್ದರೂ ಸಮರ್ಪಕ ಬಳಕೆಯಾಗುತ್ತಿಲ್ಲ.ತಾಲ್ಲೂಕಿನ ಗಡಿ ಪ್ರದೇಶ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಹನ್ಯ, ಪಡುವನಹಳ್ಳಿ, ವಪ್ಪಚ್ಚಹಳ್ಳಿ, ತರಬಹಳ್ಳಿ, ಕಡದನಹಳ್ಳಿ, ಬೆನ್ನಘಟ್ಟ, ಡಿ.ಎನ್.ದೊಡ್ಡಿ ಮತ್ತು ಚಿಕ್ಕದೊಮ್ಮರ ಪಾಳ್ಯದಲ್ಲಿ ತಲಾ ಒಂದು ಕೊಳವೆ ಬಾವಿ, ಬಂಟಹಳ್ಳಿ ಗ್ರಾಮದಲ್ಲಿ 2 ಕೊಳವೆ ಬಾವಿ ಸೇರಿದಂತೆ ಒಟ್ಟು 10 ಕೊಳವೆ ಬಾವಿ ಕಾರ್ಯ ನಿರ್ವಹಿಸುತ್ತಿವೆ.ಇನ್ನೆರಡು ಹಳ್ಳಿಗಳಲ್ಲಿ ನೂತನವಾಗಿ ಕೊಳವೆಬಾವಿ ಕೊರೆಯಿಸಿದ್ದು, ನೀರಿನ ವ್ಯವಸ್ಥೆಗಾಗಿ ಪಂಪ್- ಮೋಟಾರ್ ಪೈಪ್‌ಲೈನ್ ಕಾಮಗಾರಿ ನಡೆಯಬೇಕಾಗಿದೆ. ಉಳಿದಂತೆ ಡಿ.ಎನ್.ದೊಡ್ಡಿ, ಪಡುವನಹಳ್ಳಿ ಮತ್ತು ಚಿಕ್ಕ ದೊಂಬರಪಾಳ್ಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿದೆ. ಆ ಪೈಕಿ ಹಲವು ಬತ್ತಿಹೋಗಿ ಇಲ್ಲಿನ ಮಹಿಳೆಯರು ಕಿಲೋಮೀಟರ್ ದೂರದಿಂದ  ನೀರು ತರಬೇಕಾಗಿದೆ.ಅಹನ್ಯ ಗ್ರಾಮದಲ್ಲಿ ಟ್ಯಾಂಕ್ ಮೂಲಕ ನೀರು ಪೂರೈಸುತ್ತಿದ್ದು, 6 ತಿಂಗಳಿಂದ ಈಚೆಗೆ ಗ್ರಾಮದ ಕೆಲವು ಪ್ರಭಾವಿ ಮುಖಂಡರು ಟ್ಯಾಂಕ್‌ಗೆ ನೀರು ಪೂರೈಸುವ ಪೈಪ್‌ಲೈನ್‌ಗೆ ನೇರವಾಗಿ ನಲ್ಲಿಗಳನ್ನು ಅಳವಡಿಸಿದ್ದರಿಂದ ಕೊಳವೆಬಾವಿ ನೀರು ಟ್ಯಾಂಕಿಗೆ ಹೋಗದೆ ಪೈಪ್‌ಲೈನಲ್ಲೇ ಹರಿಯುತ್ತಿದೆ.

 

ಇದರಿಂದ ಮನೆಗಳಿಗೆ ತೊಂದರೆಯಾಗಿದೆ. ಈಗ ಟ್ಯಾಂಕ್‌ಗೆ ನೀರು ಹರಿಸುವುದನ್ನು ನಿಲ್ಲಿಸಿ ಕೆರೆಯಲ್ಲೇ ನೇರವಾಗಿ ಕೊಳವೆಬಾವಿಯಿಂದ ನೀರು ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ಗ್ರಾಮಸ್ಥರು ಅಲ್ಲೇ ನೀರು ಹಿಡಿದುಕೊಳ್ಳಬೇಕಿದೆ.ಗ್ರಾಮದಲ್ಲಿ ವಿದ್ಯುತ್ ಇದ್ದರಂತೂ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ನೀರನ್ನು ಹಿಡಿದ ನಂತರ ಅದನ್ನು ನಿಲ್ಲಿಸಲು ಜನ ಮುಂದಾಗುತ್ತಿಲ್ಲ. ಈ ಗ್ರಾಮದಲ್ಲಿ ನೀರಿಗೆ ತೊಂದರೆ ಇಲ್ಲದಿದ್ದರೂ ಪಂಚಾಯಿತಿಯ ಇತರ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ.ಬಂಟಹಳ್ಳಿಯಲ್ಲಿ ಕೊಳವೆ ಬಾವಿಯಿಂದ ನೀರನ್ನು ಸಿಸ್ಟನ್‌ಗೆ ಅಥವಾ ನೀರಿನ ಟ್ಯಾಂಕ್‌ಗೆ ಹರಿಸದೆ ನೇರವಾಗಿ ಪೈಪ್‌ಮೂಲಕ ನೀರು ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ವ್ಯರ್ಥವಾಗಿ ನೀರು ಚರಂಡಿ ಸೇರುತ್ತಿದೆ. ಗ್ರಾಮದಲ್ಲಿ 2 ಸಿಸ್ಟನ್, ನೀರಿನ ಟ್ಯಾಂಕ್ ಇ್ದ್ದದೂ ಉಪಯೋಗಕ್ಕೆ ಬಾರದಂತಾಗಿದೆ.  ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ಹಾಗೂ ಅಹನ್ಯ ಮತ್ತು ಬಂಟಹಳ್ಳಿ ಗ್ರಾಮಗಳಲ್ಲಿ ಸಮರ್ಪಕವಾಗಿ ಸಿಗುವಂಥ ನೀರನ್ನು ವ್ಯವಸ್ಥಿತವಾಗಿ ಪೂರೈಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಗ್ಗೆ ಈ ಭಾಗದ ಗ್ರಾಮಸ್ಥರು ಅಸಮಾಧಾನಗೊಂಡಿದ್ದು, ಅಧಿಕಾರಿಗಳು ಗಮನ ಹರಿಸಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.