ಸೋಮವಾರ, ಮೇ 25, 2020
27 °C

ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬೀದರ್ ಜಿಲ್ಲೆಗೆ ಅಲ್ಪಸಂಖ್ಯಾತರ ಮಹಿಳಾ ಸರ್ಕಾರಿ ವಸತಿ ನಿಲಯ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ತಿಳಿಸಿದರು.ಬೀದರ್‌ನಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗಸ್ಥ ಅಲ್ಪಸಂಖ್ಯಾತರ ಮಹಿಳೆಯರಿಗಾಗಿ ವಸತಿ ನಿಲಯ ಮಂಜೂರು ಮಾಡಲಾಗಿದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣವಾಗಲಿದೆ. ಶಾಹೀನ್ ಶಿಕ್ಷಣ ಸಂಸ್ಥೆ ಈ ವಸತಿ ನಿಲಯದ ನಿರ್ವಹಣೆ ಮಾಡಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಭೂರಹಿತ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು ನಿಗಮದಿಂದ ಸಬ್ಸಿಡಿ ಒದಗಿಸಲಾಗುವುದು. ಕೃಷಿಕರಿಗೆ ಎರಡು ಎಕರೆ ಖುಷ್ಕಿ ಅಥವಾ 1 ಎಕರೆ ತರಿ ಭೂಮಿಯನ್ನು ಈ ಯೋಜನೆ ಅಡಿ ಖರೀದಿಸಲು ನೆರವು ನೀಡಲಾಗುವುದು. ಭೂಮಿ ಖರೀದಿಗೆ 2.5 ಲಕ್ಷ ರೂಗಳಲ್ಲಿ ಶೇ. 50 ಸಬ್ಸಿಡಿ ಹಾಗೂ ಉಳಿದ ಮೊತ್ತವನ್ನು ಶೇ.6 ರ ಬಡ್ಡಿದರದಲ್ಲಿ ಬ್ಯಾಂಕ್‌ನಿಂದ ಒದಗಿಸಲಾಗುವುದು. ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 10 ಫಲಾನುಭವಿಗಳಿಗೆ ಈ ಯೋಜನೆ ಅಡಿ ಭೂಮಿ ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಅಲ್ಪಸಂಖ್ಯಾತರಿಗೆ ಎನ್‌ಐಐಟಿ ಮೂಲಕ ಬ್ಯಾಂಕಿಂಗ್ ತರಬೇತಿ ನೀಡುವ ಯೋಜನೆಯನ್ನು ನಿಗಮ ಆರಂಭಿಸಿದೆ. ತರಬೇತಿ ಪಡೆದವರಿಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ನೇಮಕಾತಿಗೂ ನೆರವು ನೀಡಲಾಗುವುದು. ಈ ಯೋಜನೆಯ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಅರಿವು ಯೋಜನೆ ಅಡಿಯಲ್ಲಿ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ. 2ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಈ ಯೋಜನೆ ಅಡಿ 598 ವಿದ್ಯಾರ್ಥಿಗಳಿಗೆ 81ಲಕ್ಷ ರೂ. ಸಾಲದ ನೆರವು ಒದಗಿಸಲಾಗಿದೆ. 2010-11ನೇ ಸಾಲಿನಲ್ಲಿ 588 ವಿದ್ಯಾರ್ಥಿಗಳಿಗೆ 88ಲಕ್ಷ ರೂ. ಸಾಲ ನೆರವು ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ಕಳೆದ ಎರಡುವರೆ ವರ್ಷಗಳಲ್ಲಿ ಬೀದರ್ ಜಿಲ್ಲೆಯಲ್ಲಿ ನಿಗಮದ ವಿವಿಧ ಯೋಜನೆಗಳಿಂದ 4,365 ಫಲಾನುಭವಿಗಳಿಗೆ 7.30 ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.ಎಲ್ಲ ಜಿಲ್ಲೆಗಳಲ್ಲಿ ನಿಗಮದ ಕಚೇರಿ ಆರಂಭಿಸಲಾಗಿದ್ದು, ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನಿಗಮದ ಕಾರ್ಯ ಚಟುವಟಿಕೆಗಳನ್ನು ಕಂಪ್ಯೂಟರೀಕರಣ ಮಾಡಲಾಗುತ್ತಿದ್ದು, ಫೆಬ್ರುವರಿಯಿಂದ ಆನ್‌ಲೈನ್ ಮೂಲಕ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.