ಮಂಗಳವಾರ, ಏಪ್ರಿಲ್ 20, 2021
32 °C

ಕೋರ್ಟ್ ಆವರಣದಲ್ಲಿ ಬಾಲ ನ್ಯಾಯ ಮಂಡಳಿ!

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮೈಸೂರು: ಹದಿನೆಂಟು ವರ್ಷದ ಒಳಗಿನ ಮಕ್ಕಳಿಗೆ ನ್ಯಾಯ ಇತ್ಯರ್ಥ ಪಡಿಸಲು ‘ಬಾಲ ನ್ಯಾಯ ಮಂಡಳಿ’ ಆರಂಭಿಸಿರುವುದು ಸರಿಯಷ್ಟೇ. ಆದರೆ, ಕೋರ್ಟ್ ಆವರಣದಲ್ಲಿ ಬಾಲ ನ್ಯಾಯ ಮಂಡಳಿ ಇರಬಾರದು ಎಂದು ಮಕ್ಕಳ ಕಾಯಿದೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ, ಮೈಸೂರಿನಲ್ಲಿ ಮಾತ್ರ ಕೋರ್ಟ್ ಆವರಣದಲ್ಲಿಯೇ ಬಾಲ ನ್ಯಾಯ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ!-ಹೌದು. ಮಕ್ಕಳ ನ್ಯಾಯ ಕಾಯಿದೆ ಪ್ರಕಾರ ಮಕ್ಕಳನ್ನು ಕೋರ್ಟ್‌ಗೆ ಕರೆ ತರಬಾರದು ಎಂಬ ಉದ್ದೇಶದಿಂದ 2000ರಲ್ಲಿ ‘ಬಾಲ ನ್ಯಾಯ ಮಂಡಳಿ’ಯನ್ನು ಆರಂಭಿಸಲಾಗಿದೆ. ಈ ಕಾಯಿದೆ ಪ್ರಕಾರ ಪೊಲೀಸರು, ನ್ಯಾಯಾಧೀಶರು ಮತ್ತು ವಕೀಲರು ಸಮವಸ್ತ್ರ ಧರಿಸಬಾರದು. ಜೊತೆಗೆ ಬಾಲ ನ್ಯಾಯ ಮಂಡಳಿಯನ್ನು ಮಕ್ಕಳ ಪರಿವೀಕ್ಷಣಾಲಯದಲ್ಲಿಯೇ ಆರಂಭಿಸಬೇಕು ಎಂಬುದು ನಿಯಮ.ಈಗಾಗಲೇ ಬೆಂಗಳೂರು, ಮಂಗಳೂರು, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಲಾಗಿರುವ ‘ಬಾಲ ನ್ಯಾಯ ಮಂಡಳಿ’ಗಳು ‘ಮಕ್ಕಳ ಪರಿವೀಕ್ಷಣಾಲಯ’ದಲ್ಲಿಯೇ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿವೆ. ಆದರೆ, ನಗರದಲ್ಲಿ ಮಾತ್ರ ಕೋರ್ಟ್ ಆವರಣದಲ್ಲಿ ಸಮವಸ್ತ್ರಧಾರಿ ಪೊಲೀಸ್ ಮತ್ತು ವಕೀಲರ ನಡುವೆಯೇ ಮಕ್ಕಳನ್ನು ವಿಚಾರಣೆಗೆ ಹಾಜರುಪಡಿಸಲಾಗುತ್ತಿದೆ.ಮೈಸೂರು ವ್ಯಾಪ್ತಿಯ ಕೊಡಗು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಳೆದ ನವೆಂಬರ್‌ನಲ್ಲಿಯೇ ‘ಬಾಲ ನ್ಯಾಯ ಮಂಡಳಿ’ಗಳನ್ನು ಆರಂಭಿಸಲಾಗಿದೆ. ಆದರೆ, ಅವು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ. ಇದರಿಂದಾಗಿ ಬಾಕಿ ಇರುವ ನೂರಾರು ಪ್ರಕರಣಗಳು ಹಾಗೆಯೇ ಉಳಿದುಕೊಂಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಕಿ ಪ್ರಕರಣಗಳನ್ನು ಬೇರ್ಪಡಿಸುವ ಕೆಲಸಕ್ಕೆ ಇದುವರೆಗೂ ಮುಂದಾಗಿಲ್ಲ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಐದೂ ಜಿಲ್ಲೆಗಳ ಪ್ರಕರಣಗಳನ್ನು ಮೈಸೂರಿನ ಬಾಲ ನ್ಯಾಯ ಮಂಡಳಿಯಲ್ಲಿಯೇ ಪ್ರತಿ ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಇತ್ಯರ್ಥ ಪಡಿಸಲಾಗುತ್ತಿದೆ. ಸಮಯದ ಕೊರತೆಯಿಂದ ವಾರದಲ್ಲಿ 40 ರಿಂದ 50 ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳೊಂದಿಗೆ ತಿಂಗಳುಗಟ್ಟಲೇ ಕೋರ್ಟ್‌ಗೆ ಅಲೆಯುವಂತಾಗಿದೆ.ಈ ಕುರಿತು ಮಾತನಾಡಿದ ಬಾಲ ನ್ಯಾಯ ಮಂಡಳಿ ಸದಸ್ಯ ಪಿ.ಪಿ.ಬಾಬುರಾಜ್, ‘18 ವರ್ಷದ ಒಳಗಿನ ಮಕ್ಕಳನ್ನು ಇತರರು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವಂತಿಲ್ಲ. ಕಳ್ಳತನ, ಡಕಾಯಿತಿ, ಹೊಡೆದಾಟ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗುವ 18 ವರ್ಷ ಒಳಗಿನ ಮಕ್ಕಳನ್ನು ಕೈಕೋಳ ತೊಡೆಸಿ ನ್ಯಾಯಾಲಯಕ್ಕೆ ಕರೆ ತರುವಂತಿಲ್ಲ. ಕೋರ್ಟ್ ಆವರಣದಲ್ಲಿರುವ ಪೊಲೀಸರು, ವಕೀಲರನ್ನು ಮಕ್ಕಳು ನೋಡುವುದರಿಂದ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪರಿವೀಕ್ಷಣಾಲಯದಲ್ಲಿಯೇ ಬಾಲ ನ್ಯಾಯ ಮಂಡಳಿಯನ್ನು ಆರಂಭಿಸುವುದು ಸೂಕ್ತ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.