ಮಂಗಳವಾರ, ಜೂನ್ 15, 2021
22 °C

ಕೋರ್ಟ್ ಮೆಟ್ಟಿಲೇರಿದ ಗಣಿಗಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಗಡಿ ಭಾಗದಲ್ಲಿರುವ ನಡೆಯುತ್ತಿರುವ ಮರಳು ಗಣಿಗಾರಿಕೆ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಮರಳು ತೆಗೆಯಲು ನೀಡಿರುವ ಗುತ್ತಿಗೆ ರದ್ದುಪಡಿಸುವಂತೆ ಈ ಭಾಗದ ರೈತರು, ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ನೇತೃತ್ವದಲ್ಲಿ ಹೈಕೋರ್ಟ್ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ, ಮರಳು ಗಣಿಗಾರಿಕೆಯಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಇದರಿಂದ ರೈತರಿಗೆ ತೊಂದರೆ ಉಂಟಾಗಲಿದೆ. ಇದನ್ನು ತಡೆಯುವುದಕ್ಕಾಗಿಯೇ ಹೈಕೋರ್ಟ್ ಹಸಿರು ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದರು.ಮರಳು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುವ ಬಗ್ಗೆ ವೈಜ್ಞಾನಿಕ ವರದಿಯನ್ನು ಸಲ್ಲಿಸಲಾಗಿದೆ. ಜೊತೆಗೆ 15 ಕಾರಣಗಳನ್ನು ತೋರಿಸಲಾಗಿದೆ. ಮೊದಲ ಹಂತದಲ್ಲಿ ಹಸಿರು ಪೀಠ ಇದನ್ನು ವಿಚಾರಣೆಗೆ ಅಂಗೀಕರಿಸಿದ್ದು, 2-3 ದಿನಗಳಲ್ಲಿ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು.ಸರ್ಕಾರದ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಕಾಡಾ ಅಧ್ಯಕ್ಷನಾಗಿದ್ದರೂ, ಪರಿಸರದ ಮೇಲಾಗುವ ದೀರ್ಘಾವಧಿ ದುಷ್ಪರಿಣಾಮವನ್ನು ತಡೆಗಟ್ಟಲು ಸರ್ಕಾರದ ವಿರುದ್ಧವೇ ಹಸಿರು ಪೀಠದಲ್ಲಿ ಅರ್ಜಿ ಸಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿಯುವುದು ಒಂದು ದಿನದ ಸಮಸ್ಯೆ ಅಲ್ಲ. ಮರಳು ತೆಗೆಯುವುದರಿಂದ ಬೋರ್‌ವೆಲ್‌ಗಳು ಬತ್ತಿ ಹೋಗುವ ಸಾಧ್ಯತೆಗಳಿದ್ದು, ರೈತರು ಕೃಷಿ ಹಾಗೂ ಜನರು ಕುಡಿಯುವ ನೀರಿಗೂ ಪರದಾಡುವಂತಾಗಲಿದೆ. ಇದೆಲ್ಲವನ್ನೂ ಸರ್ಕಾರದ ಗಮನಕ್ಕೆ ತರಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.ಅಧಿಕಾರಿಗಳ ಸಹಕಾರದಿಂದ ಈ ಗ್ರಾಮಗಳಲ್ಲಿ ಈಗಾಗಲೇ ಮರಳು ಗಣಿಗಾರಿಕೆ ನಿಂತಿದೆ. ಗಡಿ ಭಾಗದ ಗ್ರಾಮಗಳಲ್ಲಿ ಗ್ರಾಮ ಸಭೆಯನ್ನು ತಹಸೀಲ್ದಾರರ ನೇತೃತ್ವದಲ್ಲಿ ನಡೆಸಲಾಗಿತ್ತು. ಗ್ರಾಮಸ್ಥರಿಂದ ಮರಳು ಗಣಿಗಾರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಇದೊಂದು ಆಂದೋಲನದ ಸ್ವರೂಪ ಪಡೆಯುತ್ತಿದ್ದು, ರೈತರಿಗೆ ಪ್ರಾರಂಭಿಕ ಜಯ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟರು.ರೈತರಲ್ಲಿ ಜಾಗೃತಿ ಮೂಡಿದ್ದು, ನೀರಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಬೊರ್‌ವೆಲ್ ಹೊಂದಿದವರು ತಲಾ ರೂ.1,000 ದಂತೆ ಹಣ ಕೂಡಿಸಿ, ಹೋರಾಟಕ್ಕೆ ಧುಮುಕಿದ್ದಾರೆ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡರಿಂದಲೂ ಸಾಕಷ್ಟು ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.

ನಿಯಮ ಪಾಲನೆ ಇಲ್ಲ: ಗಡಿ ಭಾಗದಲ್ಲಿ ಮರಳು ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದೆ. ಆದರೆ ಮರಳು ನೀತಿಯಲ್ಲಿ ತೋರಿಸಿರುವ ಯಾವುದೇ ನಿಯಮಗಳನ್ನು ಇಲ್ಲಿ ಪಾಲಿಸುತ್ತಿಲ್ಲ ಎಂದು ಗಿರೀಶ ಮಟ್ಟೆಣ್ಣವರ ದೂರಿದರು.ಮರಳು ಸಾಗಿಸುವ ಪ್ರದೇಶದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಬೇಕು. ಜಿಪಿಆರ್‌ಎಸ್ ವ್ಯವಸ್ಥೆ ಅಳವಡಿಸುವ ಮೂಲಕ ಎಷ್ಟು ಪ್ರಮಾಣದ ಮರಳು ಸಾಗಾಣಿಕೆ ಆಗಿದೆ ಎಂಬುದರ ಮೇಲೆ ನಿಗಾ ವಹಿಸಬೇಕು. ಅಲ್ಲದೇ ಮರಳು ಸಾಗಿಸುವ ವಾಹನಗಳಿಗೆ ನಿರ್ದಿಷ್ಟ ಬಣ್ಣ ಬಳೆಯಬೇಕು. ಆದರೆ ಇದಾವುದು ಈ ಪ್ರದೇಶದಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.ಗಡಿ ಭಾಗದ ಗ್ರಾಮಗಳ ಜನರಿಗೆ ಕನ್ನಡ ಬರುವುದಿಲ್ಲ. ಮರಳು ಗಣಿಗಾರಿಕೆ ಆರಂಭವಾದ ನಂತರವೇ ತಮ್ಮ ಗ್ರಾಮಗಳ ಸುತ್ತಲೂ ಏನಾಗುತ್ತಿದೆ ಎಂಬುದು ಇಲ್ಲಿನ ಜನರ ಅರಿವಿಗೆ ಬಂದಿದೆ. ಹೀಗಾಗಿ ಕೂಡಲೇ ಹೋರಾಟ ಆರಂಭಿಸಿದ್ದಾರೆ ಎಂದ ಅವರು, ಟೆಂಡರ್ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಗೊತ್ತಾಗಿದ್ದರೆ,  ಆ ಹಂತದಲ್ಲಿಯೇ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಇದಾವುದು ಅವರ ಗಮನಕ್ಕೆ ಬಂದಿಲ್ಲ. ಹೀಗಾಗಿ ಗಣಿಗಾರಿಕೆ ಆರಂಭವಾದ ನಂತರ ಹೋರಾಟ ನಡೆಸಿದ್ದಾರೆ ಎಂದು ವಿವರಿಸಿದರು.ಚಿಗಾನೂರು, ಅಣೂರು, ಲಿಂಗೇರಿ ಸೇರಿದಂತೆ ಹಲವಾರು ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಬಗ್ಗೆ ತಾವು ಹಾಗೂ ಬಿಜೆಪಿ ನೀರು ನಿರ್ವಹಣಾ ಘಟಕದ ಅಧ್ಯಕ್ಷ ರಮೇಶ ಶಿವರಾಜ ಜೊತೆಗೂಡಿ, ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ, ಇವುಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿರುವುದಾಗಿ ತಿಳಿಸಿದರು.ಈ ಭಾಗದ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ನೇರವಾಗಿ ಬಜೆಟ್ ಸಮಿತಿಯನ್ನು ಕೋರಲಾಗಿದೆ. ತಾವು ಬಜೆಟ್ ಸಮಿತಿ ಸದಸ್ಯರಾಗಿದ್ದು, ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.ಸಮಗ್ರ ನೀರಾವರಿ ಹೋರಾಟ ಸಮಿತಿ ವತಿಯಿಂದ ಜಿಲ್ಲೆಯ ರೈತರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಯುವಕರು, ರೈತರು ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ ಅವರು, ಅಧಿಕಾರಿಗಳು ರೈತರ ಪರವಾಗಿಯೇ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಾಯಿಬಣ್ಣ ಬಸವಂತಪೂರ, ರವಿ ಪಾಟೀಲ, ಬಸನಗೌಡ ಗೌಡಗೇರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.