ಭಾನುವಾರ, ಜನವರಿ 26, 2020
24 °C

ಕ್ಯಾತೇದೇವರ ಜಾತ್ರಾ ಕಾರ್ಯಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಶುರಾಂಪುರ: ಕಾಡುಗೊಲ್ಲರ ಆರಾಧ್ಯ ದೈವ ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರ ಜಾತ್ರೆ  ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆಯುವ ಅತಿದೊಡ್ಡ ಬುಡಕಟ್ಟು ಸಮುದಾಯದ ಜಾತ್ರೆಯಾಗಿದೆ.ಸಮೀಪದ ಪುರ‌್ಲೆಹಳ್ಳಿಯ ವಸಲು ದಿನ್ನೆಯಲ್ಲಿ ಪ್ರತಿವರ್ಷ, ಇಲ್ಲವೆ ಮೂರು ವರ್ಷಕ್ಕೊಮ್ಮೆ(ಡಿಸೆಂಬರ್-ಜನವರಿ) ನಡೆಯುವ ಜಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಪಾರಂಪರಿಕವಾಗಿ ಆಚರಣೆಯಲ್ಲಿರುವ ಸಂಪ್ರದಾಯಗಳನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಆಧುನಿಕತೆಯ ಭರಾಟೆಯಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ.ದೇವರಿಗೆ ಕಂಕಣ ಕಟ್ಟುವ ಕಾರ್ಯದೊಂದಿಗೆ ಪ್ರಾರಂಭವಾಗುವ ಜಾತ್ರೆಯ ವಿಧಿ-ವಿಧಾನಗಳು, ಹುರುಳಿ ಕೈ ತೊಳೆಯುವುದು, ವಸಲು ದಿನ್ನೆಯಲ್ಲಿ ಕಳ್ಳೆ ಗುಡಿ ನಿರ್ಮಿಸಲು ಮರತರುವ ಕಾರ್ಯ, ನಂತರ ಎರೆದ ಕಳ್ಳೆ ತುಗ್ಗಲಿ ಮೋರುಗಳನ್ನು ವಸಲು ದಿನ್ನೆಗೆ ಸಾಗಿಸುತ್ತಾರೆ.ಸಮುದಾಯಕ್ಕೆ ಸೇರಿದ ಬಂಜಿಗೆರೆ ಈರಣ್ಣ, ಐಗಾರ‌್ಲಹಳ್ಳಿಯ ತಾಳಿದೇವರು, ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರುಗಳು ಪುರ‌್ಲೆಹಳ್ಳಿಯ ವಸಲು ದಿನ್ನೆಗೆ ಬರುತ್ತವೆ. ಆಗ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಎರೆದ ಕಳ್ಳೆಯಿಂದ ಸುಮಾರು 25ಅಡಿ ಎತ್ತರದ ಗುಡಿಯನ್ನು ಬೊಮ್ಮನ ಗೌಡರ ಆರು ಗುಡಿಕಟ್ಟಿನ ಗುಡಿಹಳ್ಳಿ ವಂಶಸ್ಥರು ಹಾಗೂ ಕೋಣನ ಗೌಡರ ಆರುಗುಡಿಕಟ್ಟಿನ ಈರಗಾರರ ವಂಶಸ್ಥರ ಅಣ್ಣತಮ್ಮಂದಿರು ಸೇರಿ ಮೊದಲೇ ಸಂಗ್ರಹಿಸಿದ್ದ ಎರೆದ ಕಳ್ಳೆಯಿಂದ ನಿರ್ಮಿಸುತ್ತಾರೆ. ಈ ಕಾರ್ಯ ಬುಧವಾರ ಬೆಳಗಿನಜಾವ ನೆರವೇರಿತು.

 

ಪ್ರತಿ ಗುಡಿಕಟ್ಟಿಗೆ ಒಬ್ಬರಂತೆ ಇಬ್ಬರನ್ನು ಕಳಸ ಸ್ಥಾಪಿಸಲು ಬಿಡಲಾಗುತ್ತದೆ. ಪೈಪೋಟಿಯ ನಡುವೆ ಕಳ್ಳೆ ಮುಳ್ಳನ್ನು ಲೆಕ್ಕಿಸದೆ ಕಳಸವನ್ನು ಪ್ರತಿಷ್ಠಾಪಿಸುವ ಪರಿಯನ್ನು ನೋಡಲು ಮಾಘಿಯ ಚಳಿಯನ್ನು ಲೆಕ್ಕಿಸದೇ ನೂರಾರು ಜನರು ಸೇರುತ್ತಾರೆ.ಹೀಗೆ ನಿರಂತರ ಆಚರಣೆಯೊಂದಿಗೆ ನಡೆಯುವ ಜಾತ್ರೆಯಲ್ಲಿ ಜ. 16ರಂದು ಕಳಸ ಕೀಳುವ(ಇಳಿಸುವ) ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ತಾಲ್ಲೂಕುಗಳಲ್ಲದೆ ಆಂಧ್ರದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.ಚರ್ಚೆ

ಪುರ‌್ಲೆಹಳ್ಳಿ ಗ್ರಾಮದ ವಸಲು ದಿನ್ನೆಯಲ್ಲಿ ನಡೆಯುವ ಚನ್ನಮ್ಮನಾಗತಿಹಳ್ಳಿ ಕ್ಯಾತೇದೇವರ ಜಾತ್ರೆಯ ಪ್ರಯುಕ್ತ ಪೂರ್ವಭಾವಿಯಾಗಿ ಸಿಪಿಐ ಮಂಜುನಾಥ್ ಜಾತ್ರ ಸ್ಥಳಕ್ಕೆ ಭೇಟಿ ನೀಡಿ, ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿ ಶಾಂತಿ ಸಭೆ ನಡೆಸಿದರು. ಸಭೆಯಲ್ಲಿ ಸಮುದಾಯದ ಮುಖಂಡರು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತಿರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)