ಬುಧವಾರ, ಜನವರಿ 22, 2020
25 °C
ಆಸ್ಟ್ರೇಲಿಯಾದ ಬೃಹತ್‌ ಮೊತ್ತ

ಕ್ರಿಕೆಟ್‌: ಕ್ಲಾರ್ಕ್‌, ಹಡಿನ್‌ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್‌ (ಎಎಫ್‌ಪಿ): ನಾಯಕ ಮೈಕಲ್‌ ಕ್ಲಾರ್ಕ್‌ (148) ಹಾಗೂ ಬ್ರಾಡ್‌ ಹಡಿನ್‌ (118) ಅವರ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿ ರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಬೃಹತ್‌ ಮೊತ್ತ ಪೇರಿಸಿದ್ದಾರೆ.ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 158 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 570 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ತಂಡದವರು ಎರಡನೇ ದಿನದಾಟದ ಅಂತ್ಯಕ್ಕೆ 21 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 35 ರನ್‌ ಗಳಿಸಿದ್ದಾರೆ.257 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾಕ್ಕೆ ಕ್ಲಾರ್ಕ್‌ ಹಾಗೂ ಹಡಿನ್‌ ಆಸರೆಯಾದರು. ಇವರಿಬ್ಬರು ಆರನೇ ವಿಕೆಟ್‌ಗೆ 200 ರನ್‌ ಸೇರಿಸಿದರು. 245 ಎಸೆತ ಎದುರಿಸಿದ ಕ್ಲಾರ್ಕ್‌ 17 ಬೌಂಡರಿ ಗಳಿಸಿದರು. ಇದು ಅವರ 26ನೇ ಶತಕ.ಬಿರುಸಿನ ಆಟವಾಡಿದ ಹಡಿನ್‌ ಟೆಸ್ಟ್‌ನಲ್ಲಿ  ನಾಲ್ಕನೇ ಶತಕ ಗಳಿಸಿದರು. 177 ಎಸೆತ ಎದುರಿಸಿದ ಅವರ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ರ್‍ಯಾನ್‌ ಹ್ಯಾರಿಸ್‌  54 ಎಸೆತಗಳಲ್ಲಿ 55 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಪ್ರವಾಸಿ ತಂಡದ ಸ್ಟುವರ್ಟ್‌ ಬ್ರಾಡ್‌ ಮೂರು ವಿಕೆಟ್‌ ಪಡೆದರು.ಆದರೆ ಇಂಗ್ಲೆಂಡ್‌ ಆರಂಭದಲ್ಲೇ ಆಘಾತ ಅನುಭವಿಸಿದೆ. ನಾಯಕ ಅಲಸ್ಟೇರ್‌ ಕುಕ್‌ ಅವರ ವಿಕೆಟ್‌ ಕಬಳಿಸುವಲ್ಲಿ ಮಿಷೆಲ್‌ ಜಾನ್ಸನ್‌ ಯಶಸ್ವಿಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 158 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 570 ಡಿಕ್ಲೇರ್ಡ್‌ (ಮೈಕಲ್‌ ಕ್ಲಾರ್ಕ್‌ 148, ಬ್ರಾಡ್‌ ಹಡಿನ್‌ 118, ರ್‍ಯಾನ್‌ ಹ್ಯಾರಿಸ್‌ ಔಟಾಗದೆ 55; ಸ್ಟುವರ್ಟ್‌ ಬ್ರಾಡ್‌ 98ಕ್ಕೆ3, ಗ್ರೇಮ್‌ ಸ್ವಾನ್‌ 151ಕ್ಕೆ2, ಬೆನ್‌ ಸ್ಟೋಕ್ಸ್‌ 70ಕ್ಕೆ2); ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 21 ಓವರ್‌ಗಳಲ್ಲಿ 1ವಿಕೆಟ್‌ ನಷ್ಟಕ್ಕೆ 35 (ಮೈಕಲ್‌ ಕಾರ್ಬೆರಿ ಬ್ಯಾಟಿಂಗ್‌ 20; ಮಿಷೆಲ್‌ ಜಾನ್ಸನ್‌ 9ಕ್ಕೆ1).

ಪ್ರತಿಕ್ರಿಯಿಸಿ (+)