ಶುಕ್ರವಾರ, ಮೇ 20, 2022
19 °C

`ಕ್ಷೀಣಿಸುತ್ತಿರುವ ಮೂಲ ವಿಜ್ಞಾನದ ಆಸಕ್ತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಮೂಲ ವಿಜ್ಞಾನದತ್ತ ಆಸಕ್ತಿ ಕ್ಷೀಣಿಸುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಕೆ.ಶಿವಕುಮಾರ್ ವಿಷಾದಿಸಿದರು.ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ, ದಾವಣಗೆರೆ ವಿಜ್ಞಾನ ಕೇಂದ್ರ, ಸರ್.ಎಂ.ವಿ. ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ `21ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾಗಾರ' ಉದ್ಘಾಟಿಸಿ ಅವರು ಮಾತನಾಡಿದರು.`ಇಲಾಖೆಯಲ್ಲಿ 30 ವರ್ಷದ ಅನುಭವದಲ್ಲಿ ನಾನು ಗುರುತಿಸಿದಂತೆ, ಮೂಲ ವಿಜ್ಞಾನದತ್ತ ಆಸಕ್ತಿ ಕಡಿಮೆಯಾಗುತ್ತಿದೆ. ಮೂಲ ವಿಜ್ಞಾನವನ್ನೇ ಬುಡಮೇಲು ಮಾಡಲಾಗುತ್ತಿದೆ. ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿಯೂ ಮೂಲವಿಜ್ಞಾನದ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಶಿಕ್ಷಕರು ಆಸಕ್ತಿ ಬೆಳೆಸಿಕೊಂಡು ವಿದ್ಯಾರ್ಥಿಗಳಿಗೂ ತಿಳಿಹೇಳಬೇಕು' ಎಂದು ಸಲಹೆ ನೀಡಿದರು.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಸಮಾಜದಲ್ಲಿರುವ ಮೂಢನಂಬಿಕೆ ತೊಲಗಿಸುವಲ್ಲಿ ವಿಜ್ಞಾನ ಶಿಕ್ಷಕರ ಪಾತ್ರ ಮಹತ್ವ್ದ್ದದಾಗಿದೆ. ಇಂದು ಒಳ್ಳೆಯ ವಿಜ್ಞಾನ ಶಿಕ್ಷಕರ ಅಗತ್ಯ ಹೆಚ್ಚಿದೆ. ಐಟಿ, ಬಿಟಿ ವ್ಯಾಮೋಹ ಹೆಚ್ಚಾಗುತ್ತಿದೆ. ಅಲ್ಲದೇ, ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾತಿ ಹೆಚ್ಚುತ್ತಿದೆ. ಶಿಕ್ಷಕರು ಬದಲಾದ ಪದ್ಧತಿಗೆ ಹೊಂದಿಕೊಂಡು ಕಲಿಸಬೇಕು. ಪೂರಕ ಜ್ಞಾನ ಹೊಂದಬೇಕು.ಕಳೆದ ಸಾಲಿನಲ್ಲಿ 8ನೇ ತರಗತಿ ಹಾಗೂ ಈ ಸಾಲಿನಲ್ಲಿ 9ನೇ ತರಗತಿಗೆ ಪಠ್ಯಕ್ರಮ ಬದಲಾಗಿದೆ. ಮುಂದೆ 10ನೇ ತರಗತಿಗೂ ಬದಲಾಗಬಹುದು. ಇದರ ಅರಿವು ಶಿಕ್ಷಕರಿಗೆ ಇರಬೇಕು ಎಂದು ಹೇಳಿದರು. ಆನಗೋಡು ಬಳಿ `ವಿಜ್ಞಾನ ಕೇಂದ್ರ' ಸ್ಥಾಪನೆಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಕಟ್ಟಡ ನಿರ್ಮಾಣಕ್ಕೆ ತಲಾ ರೂ 1 ಸಾವಿರ ನೀಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದರು.ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿ, ಜನರೇಟರ್‌ನಿಂದ ಉತ್ಪತ್ತಿಯಾಗುವ ಯುನಿಟ್ ವಿದ್ಯುತ್‌ಗೆ ರೂ.20 ವೆಚ್ಚವಾಗುತ್ತದೆ. ಅದೇ ಜಲವಿದ್ಯುತ್‌ನಿಂದ ಯುನಿಟ್‌ಗೆ ಕೇವಲ 70 ಪೈಸೆ ಖರ್ಚಾಗುತ್ತದೆ. ವೈಯಕ್ತಿಕವಾಗಿ ಜನರೇಟರ್ ಅಳವಡಿಸಿ ಕೊಳ್ಳುವುದಕ್ಕಿಂತ, ಪಾಲಿಕೆಯೇ ಒಂದು ಕಡೆ ಜನರೇಟರ್ ಘಟಕ ಸ್ಥಾಪಿಸಿ ವಿದ್ಯುತ್ ಪೂರೈಸಬಹುದು. ಒಂದಿಷ್ಟು ತೆರಿಗೆ ವಿಧಿಸಬಹುದು. ಹೀಗೆ, ಶಕ್ತಿಯ ಅಪವ್ಯಯವಾಗದಂಥ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.ಒಣಗಿದ ಎಲೆ ಮಣ್ಣಲ್ಲಿ ಕರಗಿ ಗೊಬ್ಬರವಾಗುತ್ತದೆ. ಇದರಿಂದ ಬಹಳ ಉಪಯೋಗವಿದೆ. ಹೀಗಾಗಿ, ಎಲೆ ಬಳಸಿ ಶಕ್ತಿ ಉತ್ಪಾದನೆ ಮಾಡುವ ಯೋಜನೆ ಪ್ರೋತ್ಸಾಹಿಸಬಾರದು ಎಂದರು.ಸಂಪನ್ಮೂಲ ವ್ಯಕ್ತಿ ಯು.ಎಂ.ರವಿಕುಮಾರ್, ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಮಂಜುನಾಥಸ್ವಾಮಿ, ಸರ್.ಎಂ.ವಿ. ಪಿಯು ಕಾಲೇಜಿನ ಕಾರ್ಯದರ್ಶಿ ಶ್ರೀಧರ್, ಎಂ.ಗುರುಸಿದ್ದಸ್ವಾಮಿ, ಅಂಗಡಿ ಸಂಗಪ್ಪ ಹಾಜರಿದ್ದರು.ಚಂದ್ರು ವಿಜ್ಞಾನ ಗೀತೆ ಹಾಡಿದರು. ಚೈತ್ರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಸವರಾಜ್ ಸ್ವಾಗತಿಸಿದರು. ಗುರುಸಿದ್ದಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.