ಗುರುವಾರ , ಮೇ 6, 2021
33 °C

ಕ್ಷೀರ ಭವನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ತಾಲ್ಲೂಕಿನಲ್ಲಿ 179 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಇವುಗಳಲ್ಲಿ 5 ಮಹಿಳಾ ಸಂಘಗಳು ಉತ್ತಮ ಆಡಳಿತದ ಮೂಲಕ ಸ್ವಂತ ಕಟ್ಟಡ ಹೊಂದುತ್ತಿರುವುದು ಮಾದರಿಯಾಗಿದೆ ಎಂದು ಕೆ.ಎಂ.ಎಫ್. ಮಾಜಿ ಅಧ್ಯಕ್ಷ ಆರ್.ಬಚ್ಚೇಗೌಡ ಸಂತಸ ವ್ಯಕ್ತಪಡಿಸಿದರು.ಸಮೀಪದ ಚನ್ನರಾಯಪಟ್ಟಣ ಹೋಬಳಿಯ ದಿನ್ನೂರು ಗ್ರಾಮದಲ್ಲಿ ಸೋಮವಾರ ನಡೆದ ನೂತನ ಕ್ಷೀರ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹೈನುಗಾರಿಕೆಗೆ ಬ್ಯಾಂಕ್‌ನಿಂದಲೂ ಬಡ್ಡಿ ರಹಿತ ಸಾಲ ಸಿಗುವುದರಿಂದ ಎಲ್ಲಾ ವರ್ಗದವರು ಇದನ್ನು ಉಪಕಸುಬನ್ನಾಗಿ ಮಾಡಿಕೊಂಡು ಲಾಭಗಳಿಸಬಹುದು. ಬೆಂಗಳೂರು ಹಾಲು ಒಕ್ಕೂಟವು ಎಲ್ಲಾ ವಿಧದಲ್ಲೂ ಸಂಘಗಳಿಗೆ ಸಹಕಾರ ನೀಡಲಿದೆ ಎಂದು ತಿಳಿಸಿದರು.ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎ.ಸೋಮಣ್ಣ ಮಾತನಾಡಿ, ತಾಲ್ಲೂಕಿನಲ್ಲಿ 5 ಹಾಲು ಉತ್ಪಾದಕರ ಮಹಿಳಾ ಸಂಘಗಳಿದ್ದು, ದಿನ್ನೂರು ಸ್ವಂತ ಕಟ್ಟಡ ಹೊಂದಿದ 2ನೇ ಸಂಘ ಎಂಬ ಖ್ಯಾತಿಗೆ ಭಾಜನವಾಗಿದೆ. ಸಂಘದ ಏಳಿಗೆಗೆ  ಪದಾಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.ಶಾಸಕ ಕೆ.ವೆಂಕಟಸ್ವಾಮಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನಲ್ಲಿರುವ 179 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 151 ಸಂಘಗಳಿಗೆ ಕಟ್ಟಡ ಇದ್ದು ಉಳಿದ 28 ಸಂಘಗಳು ಕಟ್ಟಡವನ್ನು ನಿರ್ಮಿಸಬೇಕಿದೆ ಎಂದು ಹೇಳಿದರು.ಜಿ.ಪಂ.ಸದಸ್ಯ ಬಿ.ರಾಜಣ್ಣ  ಮಾತನಾಡಿ, ಜಿಲ್ಲಾ ಪಂಚಾಯಿತಿ ವತಿಯಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಎಸ್‌ಜಿಎಸ್‌ವೈ (ಸಂಪೂರ್ಣ ಗ್ರಾಮ ಸುವರ್ಣ ಯೋಜನೆ) ಯೋಜನೆಯಡಿ 1.5ಲಕ್ಷ ರೂಪಾಯಿಗಳನ್ನು ದಿನ್ನೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನೀಡುತ್ತಿದ್ದು, ಒಕ್ಕೂಟದಿಂದ 1 ಲಕ್ಷ ರೂ ಸಾಲ ಮತ್ತು 50 ಸಾವಿರ ಸಬ್ಸಿಡಿ  ನೀಡಲಾಗುತ್ತಿದೆ. ಸಂಘವು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ದಿನ್ನೂರಿನ ಎಂ.ಪಿ.ಸಿ.ಎಸ್. ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ, ಚನ್ನರಾಯಪಟ್ಟಣ ಗ್ರಾ.ಪಂ.ಉಪಾಧ್ಯಕ್ಷ ಮುನಿಕೃಷ್ಣಪ್ಪ, ತಾ.ಪಂ.ಸದಸ್ಯ ನಾರಾಯಣ ಸ್ವಾಮಿ, ಚನ್ನರಾಯಪಟ್ಟಣ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ರಾಮಚಂದ್ರ, ನಾಗರಾಜ್ ಹಾಗೂ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರು, ಕಾರ್ಯಕಾರಿ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಹಾಜರಿದ್ದರು.ಸಮಾರಂಭದಲ್ಲಿ ದಿವ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಬೆಂಗಳೂರು ಹಾಲು ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿ ಬಿ.ವೆಂಕಟೇಶ್ ನಿರೂಪಿಸಿದರು. ಚನ್ನರಾಯಪಟ್ಟಣ ಬೆಳೆಗಾರರ ಸಂಘದ ನಿರ್ದೇಶಕ ಕೆ.ವೆಂಕಟೇಶ್ ಸ್ವಾಗತಿಸಿ ರಮೇಶ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.