ಅದು ಟಿ.ಎನ್. ಸೀತಾರಾಮ್ ಅವರ `ಮುಕ್ತ ಮುಕ್ತ' ಧಾರವಾಹಿಯ ಸಂವಾದ. ಸ್ವಾಮೀಜಿ ಗೃಹಸ್ಥಾಶ್ರಮ ಪ್ರವೇಶಿಸುವುದನ್ನು ಆಕ್ಷೇಪಿಸಿ ಯುವಕನೊಬ್ಬ ಪ್ರಶ್ನೆ ಕೇಳಿದ್ದ. `ನಿನ್ನ ಪ್ರಶ್ನೆಗೆ ಬಹುಮಾನ ಕೊಡುವುದಿಲ್ಲ. ನನ್ನ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಕೊಡುತ್ತೀನಿ ನಟಿಸುತ್ತೀಯ'

ನಿರ್ದೇಶಕರಿಂದ ಬಂದ ಉತ್ತರಕ್ಕೆ ಆ ಯುವಕನ ಮೊಗದಲ್ಲಿ ಅಚ್ಚರಿಯ ಜತೆಗೆ ತನ್ನ ಕನಸು ಕೈಗೂಡಿದ ಸಂತುಷ್ಟಭಾವ.

ಆದರೆ ಸೀತಾರಾಮ್ ಅವರನ್ನು ಭೇಟಿಯಾಗಲು ತೆರಳಿದಾಗ ಅಲ್ಲಿದ್ದ ನಿರ್ದೇಶರೊಬ್ಬರಿಂದ ಅವಮಾನಕ್ಕೊಳಗಾಗಿ ನಟನಾಗುವ ಕನಸನ್ನು ದೂರವಿಟ್ಟ. ಕೆಲಕಾಲದಲ್ಲಿಯೇ ಸಹೋದ್ಯೋಗಿಗಳ ಬೆಂಬಲದಿಂದ ಬಣ್ಣ ಹಚ್ಚಿ, ಅವಮಾನಿಸಿದ್ದ ನಿರ್ದೇಶಕರೇ ಶಹಬ್ಬಾಸ್ ಹೇಳುವಂತೆ ನಟನಾ ಚಾಕಚಕ್ಯತೆ ಮೆರೆದ.

ನಟ ಅಶ್ವಿನ್ ಬದುಕಿನಲ್ಲಿ ಇಂತಹ ಹಲವು ಪ್ರಸಂಗಗಳಿವೆ. ಅವರ ನಟನೆಯ ಮುನ್ನಡೆಗೆ ಪ್ರಮುಖ ತಿರುವುಗಳೇ ಅವಮಾನ, ಪ್ರೋತ್ಸಾಹ. ಬಹುಪಾಲು ಮಂದಿಗೆ ಅಶ್ವಿನ್ ಹೆಸರು ಅಪರಿಚಿತ. ಆದರೆ ಸುವರ್ಣ ವಾಹಿನಿಯ `ಪಲ್ಲವಿ ಅನುಪಲ್ಲವಿ' ಧಾರಾವಾಹಿಯಲ್ಲಿ ಅಣ್ಣನ ಆಸ್ತಿ ಕಬಳಿಸಲು ಸಂಚು ಹೂಡುವ, ಅತೃಪ್ತ ಮನಸ್ಸಿನ ವಿಲನ್ `ವಿಕಾಸ್' ಪಾತ್ರ ಪರಿಚಯ ಬಹು ಮಂದಿಗಿದೆ.

ಹಾಸನ ಬಳಿಯ ಮೊಸಳೆಯವರಾದ ಅಶ್ವಿನ್ ಬಿ.ಇ ಪದವೀಧರ. 7ನೇ ತರಗತಿಯಲ್ಲಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ನಿರ್ವಹಿಸಿ, ಬಹುಮಾನ ಪಡೆದಾಗ ಅವರಲ್ಲಿ ನಟನಾಗುವ ಕನಸು ಇಮ್ಮಡಿಯಾಗಿತ್ತು. ಆದರೆ ಹಾಸನದಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಉದ್ಯೋಗ ಅರಸಿದಾಗ ಅವರ ನಿಲುವು ಬದಲಾಗಿತ್ತು. ಎಂಜಿನಿಯರಿಂಗ್ ಅನುಭವದ ಮೂಲಕ ವಿದೇಶಕ್ಕೆ ಹಾರಲು ತವಕಿಸಿದ್ದರು.

ಆ ತವಕದ ನಡುವೆಯೇ ಪ್ರಮುಖ ತಿರುವು ಸಿಕ್ಕಿತ್ತು. ಕಂಪೆನಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಶ್ವಿನ್ ಅವರ ನಟನೆಯನ್ನು ಮೆಚ್ಚಿದ ಸಹೋದ್ಯೋಗಿಗಳು ಸುಪ್ತವಾಗಿದ್ದ ಅವರ ಅಭಿನಯದ ಕನಸುಗಳನ್ನು ಉದ್ದೀಪಿಸಿದರು. ಬೆಳಿಗ್ಗೆ 10ರಿಂದ ಸಂಜೆಯವೆರಗೂ ಚಿತ್ರೀಕರಣದಲ್ಲಿ ಪಾಲ್ಗೊಂಡು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಎರಡು ದೋಣಿಯ ಪಯಣ ಅವರದ್ದು.

ಕಲಾ ಗಂಗೋತ್ರಿ ಸೇರಿದ ಅಶ್ವಿನ್, ಹವ್ಯಾಸಿ ನಾಟಕ ತಂಡಗಳಲ್ಲಿ ಸಕ್ರಿಯರಾಗಿ ಪಕ್ವವಾಗುತ್ತ ಸಾಗಿದರು. ಬೀದಿ ನಾಟಕ ತಂಡಗಳಲ್ಲಿ ಸಿಕ್ಕ ಮೊದಲ ಅವಕಾಶ ಕರಪತ್ರಗಳನ್ನು ಹಂಚುವುದು. ಆ ಕರಪತ್ರ ಹಂಚುವಿಕೆಯ ಪಾತ್ರ ಜನರಿಗೆ ನಟನೊಬ್ಬ ಹೇಗೆ ಹತ್ತಿರವಾಗಬಲ್ಲ ಎನ್ನುವ ಗುಟ್ಟು ತಿಳಿಯಲು ನೆರವಾಯಿತಂತೆ.

ನಾಯಕ ನಟನೇ ಆಗಬೇಕು ಎಂದುಕೊಂಡಿದ್ದ ಅಶ್ವಿನ್ ನಿಲುವು ಬದಲಿಸಿದ್ದು ರಂಗಭೂಮಿ. ನಾಟಕಗಳಿಗೆ ಬಣ್ಣ ಹಚ್ಚುತ್ತಲೇ ಎಲ್ಲ ಪಾತ್ರಗಳಿಗೂ ಸಿದ್ಧರಾದರು. ತೀಕ್ಷ್ಣ ಕಣ್ಣೋಟ, ಕಸರತ್ತಿನಲ್ಲಿ ಪಳಗಿದಂತಿರುವ ಮೈಕಟ್ಟು, ದೃಢ ಮಾತು, ಖಳನಟನಿಗೆ ಸೂಕ್ತವಾಗಿರುವ ದೇಹಭಾಷೆಯ ಅಶ್ವಿನ್ ಕಿರುತೆರೆ ಪ್ರವೇಶಿಸುತ್ತಿದ್ದಂತೆ ದೊರೆತಿದ್ದು ವಿಲನ್ ಪಾತ್ರಗಳು. ಖಳನಾಯಕನ ಖದರಿನಲ್ಲಿಯೇ ಅವರ ನಟನಾ ಕೌಶಲ ವಿಕಾಸಗೊಂಡಿತು.

`ಮನೆಯೊಂದು ಮೂರು ಬಾಗಿಲು', `ಮಳೆಬಿಲ್ಲು', `ಅಪ್ಪ' ಧಾರವಾಹಿಗಳಲ್ಲಿ ಖಳನಟನ ಕಿರು ಪಾತ್ರಗಳು ಒಲಿದವು. `ಮಳೆಬಿಲ್ಲು' ದಾರಾವಾಹಿಯಲ್ಲಿ `ರಾಕೇಶ್', `ಅಪ್ಪ' ಧಾರಾವಾಹಿಯಲ್ಲಿ `ನರೇಶ್'ನ ಪಾತ್ರಗಳಲ್ಲಿ ಖಳನಾಯಕನಿಗೆ ಕಾಣಿಸಿಕೊಂಡು ಇಮೇಜು ವೃದ್ಧಿಸಿಕೊಂಡರು.

`ಅಂಕುಶ', `ಮಂದಾಕಿನಿ' ಚಿತ್ರಗಳಲ್ಲಿ ನಟಿಸಿದ್ದು ಅವರು ಚಿತ್ರಪಾಠ ಅರಿಯಲು ನೆರವಾಯಿತು. ಮೊದಲ ಬಾರಿ ಚಿತ್ರರಂಗ ಪ್ರವೇಶಿಸುವ ತುಡಿತ ಅವರನ್ನು ದಿಕ್ಕುತಪ್ಪಿಸಿತಂತೆ. ಪಾತ್ರ ಮತ್ತು ಕಥೆಯ ಬಗ್ಗೆ ಅರಿತುಕೊಳ್ಳದೆ ದುಡುಕಿನಿಂದ ಚಿತ್ರಗಳಿಗೆ ಒಪ್ಪಿಕೊಂಡೆ ಎನ್ನುವ ಅಶ್ವಿನ್ ಈಗಲೂ ಈ ಚಿತ್ರಗಳ ನಟನೆಯ ಬಗ್ಗೆ ಬೇಸರಿಸಿಕೊಳ್ಳುತ್ತಾರೆ.

ಎರಡು ಚಿತ್ರಗಳಲ್ಲಿನ ಕಹಿ ಅನುಭವಗಳಿಂದ ಚಿತ್ರರಂಗದಿಂದ ದೂರವಾಗಿದ್ದ ಅಶ್ವಿನ್ ಪುನಃ ಅರ್ಜುನ್ ಸರ್ಜಾ ಅವರ `ಪ್ರಸಾದ್' ಮತ್ತು ಗಣೇಶ್ ಅಭಿನಯದ `ಕೂಲ್' ಮೂಲಕ ಚಿತ್ರರಂಗದತ್ತ ಮುಖ ಮಾಡಿದರು. `ಪಲ್ಲವಿ ಅನುಪಲ್ಲವಿ' ಧಾರಾವಾಹಿ ಪಾತ್ರಗಳೇ ಅಶ್ವಿನ್ಗೆ ಯಶಸ್ಸು ತಂದುಕೊಟ್ಟವಂತೆ. ವಿಲನ್ `ವಿಕಾಸ್' ಪಾತ್ರಕ್ಕೆ ಒಪ್ಪಿಕೊಳ್ಳುವಾಗ ನಾಯಕನಾಗಲು ಬಂದವನು ಖಳನಾಯಕನಾದೆ ಎಂದು ಮನಸ್ಸಿನಲ್ಲಿ ಅಳುಕಿತ್ತಂತೆ.

ಅಶ್ವಿನ್ರ ಬದುಕು ಬದಲಾಗಿದ್ದು ಗೃಹಸ್ಥರಾಗುವುದರೊಂದಿಗೆ. ಉದ್ಯೋಗ ತ್ಯಜಿಸಿ ಪೂರ್ಣವಾಗಿ ಅಭಿನಯದಲ್ಲೇ ತೊಡಗಿಸಿಕೊಳ್ಳುವಂತೆ ಪತ್ನಿ ದಿವ್ಯ ಬೆಂಬಲಿಸಿದರು ಎಂದು ಅರ್ಧಾಂಗಿಯ ಗುಣಗಾನ ಮಾಡುತ್ತಾರೆ.

ಧಾರಾವಾಹಿಗಳನ್ನು ಕಡೆಗಣಿಸುವುದಿಲ್ಲ ಎನ್ನುತ್ತಲೇ ಚಿತ್ರರಂಗದಲ್ಲಿ ಹೆಜ್ಜೆಗುರುತು ಮೂಡಿಸುವ ಆಸೆಯನ್ನು ಅಶ್ವಿನ್ ವ್ಯಕ್ತಪಡಿಸುತ್ತಾರೆ. ಎಸ್.ಎಲ್. ಭೈರಪ್ಪ ಅವರ ಮೆಚ್ಚಿನ ಸಾಹಿತಿ. `ಹುಚ್ಚುಡುಗ್ರು' ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅವರಿಗೆ ವಿಜಯ ಪ್ರಸಾದ್ರ `ನೀರು ದೋಸೆ' ಚಿತ್ರದಲ್ಲೂ ಅವಕಾಶವಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.