ಭಾನುವಾರ, ಏಪ್ರಿಲ್ 18, 2021
29 °C

ಖಾಲಿ ನಿವೇಶನಕ್ಕೆ ತ್ಯಾಜ್ಯ ಉಪಕರ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜನತೆಯಿಂದ ತ್ಯಾಜ್ಯ ಉಪಕರ ಸಂಗ್ರಹಿಸಲು ನಿರ್ಧರಿಸಿದಂತಿರುವ ಬಿಬಿಎಂಪಿ ಆಡಳಿತ ಏಪ್ರಿಲ್ 1ರಿಂದ ಮಾಸಿಕ ತ್ಯಾಜ್ಯ ಉಪಕರ ಸಂಗ್ರಹಿಸಲು ಮುಂದಾಗಿದೆ. ಅದರಂತೆ 2011-12ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವ ಸಂದರ್ಭದಲ್ಲೇ ಆಸ್ತಿದಾರರು ತ್ಯಾಜ್ಯ ಉಪಕರವನ್ನು ತೆರಬೇಕಾಗುತ್ತದೆ. ಆದರೆ ಖಾಲಿ ನಿವೇಶನಗಳಿಗೆ ವಿನಾಯ್ತಿ ನೀಡಲಾಗಿದೆ.ವಾಸದ ಕಟ್ಟಡ, ವಾಣಿಜ್ಯ ಕಟ್ಟಡ, ಕೈಗಾರಿಕೆಗಳು, ಹೋಟೆಲ್, ಕಲ್ಯಾಣ ಮಂಟಪ, ನರ್ಸಿಂಗ್ ಹೋಂಗಳಲ್ಲಿ ನಿರ್ಮಾಣಗೊಂಡ ಪ್ರದೇಶಕ್ಕೆ (ಬಿಲ್ಟ್‌ಅಪ್ ಏರಿಯಾ) ಅನುಗುಣವಾಗಿ ತ್ಯಾಜ್ಯ ಉಪಕರ ವಿಧಿಸಲಾಗಿದೆ. ಒಂದೊಮ್ಮೆ ತ್ಯಾಜ್ಯ ಉಪಕರ ಪಾವತಿಸದಿದ್ದರೆ ದಂಡ ಶುಲ್ಕ (ಬಡ್ಡಿ) ಸಮೇತ ಉಪಕರ ಸಂಗ್ರಹಿಸುವುದಾಗಿ ಪಾಲಿಕೆ ಆಡಳಿತ ಎಚ್ಚರಿಕೆ ನೀಡಿದೆ.ಉದಾಹರಣೆಗೆ 40/ 30 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮೊದಲ ಮಹಡಿ ಕಟ್ಟಡ ನಿರ್ಮಿಸಿದ್ದರೆ, ನೆಲ ಮಹಡಿ ಹಾಗೂ ಮೊದಲ ಮಹಡಿಯಲ್ಲಿ ನಿರ್ಮಾಣಗೊಂಡ ಒಟ್ಟು ಚದರ ಅಡಿ ವಿಸ್ತೀರ್ಣದ ಆಧಾರದ ಮೇಲೆ ಉಪಕರ ಶುಲ್ಕ ನಿಗದಿಯಾಗುತ್ತದೆ.‘ಬಿಬಿಎಂಪಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಪ್ರತಿ ವರ್ಷ ಸುಮಾರು 200 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ವೆಚ್ಚ ಮಾಡಲಾಗುತ್ತಿದೆ. ಇದರಿಂದ ಪಾಲಿಕೆಗೆ ಸಾಕಷ್ಟು ಹೊರೆಯಾಗುತ್ತಿದೆ. ಹಾಗಾಗಿ 1976ರ ಕೆಎಂಸಿ ಕಾಯ್ದೆಯ 103(ಬಿ) ಹಾಗೂ ತೆರಿಗೆ ನಿಯಮಾವಳಿ 19ಎ ಅನ್ವಯ ಘನ ತ್ಯಾಜ್ಯ ವಸ್ತು ನಿರ್ವಹಣಾ ಉಪಕರ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದು ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್. ಸದಾಶಿವ ‘ಪ್ರಜಾವಾಣಿ’ಗೆ ತಿಳಿಸಿದರು.‘ಅಲ್ಲದೇ ‘ನರ್ಮ್’ ಯೋಜನೆಯ ಅನುದಾನ ಪಡೆಯಬೇಕಾದರೆ ತ್ಯಾಜ್ಯ ಉಪಕರ ಸಂಗ್ರಹಿಸಬೇಕು ಎಂಬ ನಿರ್ದೇಶನ ಕೂಡ ಇದೆ. ಆ ಹಿನ್ನೆಲೆಯಲ್ಲಿ ತ್ಯಾಜ್ಯ ಉಪಕರ ಸಂಗ್ರಹಿಸಲಾಗುತ್ತಿದ್ದು, ಸುಮಾರು 150 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ’ ಎಂದರು. ‘ಖಾಲಿ ನಿವೇಶನಗಳಿಗೆ ತ್ಯಾಜ್ಯ ಉಪಕರ ವಿಧಿಸುವುದಿಲ್ಲ. ನಿವೇಶನದಲ್ಲಿ ನಿರ್ಮಾಣಗೊಂಡ ಒಟ್ಟು ಚ.ಅ. ವಿಸ್ತೀರ್ಣಕ್ಕೆ ಅನುಗುಣವಾಗಿ ದರ ನಿಗದಿಯಾಗಲಿದೆ’ ಎಂದು ಹೇಳಿದರು.ಖಂಡನೀಯ:  ‘ನಗರದಲ್ಲಿ ಕಸಕ್ಕೂ ಉಪಕರ ವಿಧಿಸಿರುವುದು ಖಂಡನೀಯ. ವರ್ಕ್‌ಕೋಡ್ ನೀಡಿಕೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಎರವಲು ಸೇವೆ ಅಧಿಕಾರಿಗಳಿಗೆ ದುಬಾರಿ ವೇತನ ನೀಡಲಾಗುತ್ತಿದೆ. ಪಾಲಿಕೆ ಆರ್ಥಿಕತೆಯಲ್ಲಿ ಶಿಸ್ತು ತರಲು ಆಸಕ್ತಿ ತೋರದ ಬಿಜೆಪಿ ಆಡಳಿತ ಜನತೆಗೆ ಹೆಚ್ಚುವರಿ ಉಪಕರ ವಿಧಿಸಿದೆ.ಕಲ್ಯಾಣಮಂಟಪ, ನರ್ಸಿಂಗ್ ಹೋಂಗಳ ಮೇಲೆ ವಿಧಿಸಿರುವ ಉಪಕರ ಕೂಡ ಪರೋಕ್ಷವಾಗಿ ಜನತೆಯ ಮೇಲೆ ಬೀಳಲಿದೆ.ಇದನ್ನು ಖಂಡಿಸಿ ಹೋರಾಟ ನಡೆಸಲಾಗುವುದು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ. ನಾಗರಾಜ್ ದೂರಿದರು.‘ತ್ಯಾಜ್ಯ ಉಪಕರ ವಿಧಿಸದಂತೆ ಪಾಲಿಕೆ ಸಭೆಯಲ್ಲಿ ಸಾಕಷ್ಟು ಬಾರಿ ಮನವಿ ಮಾಡಲಾಯಿತು. ಧರಣಿ, ಪ್ರತಿಭಟನೆ ನಡೆಸಿದರೂ ಉಪಕರ ಸಂಗ್ರಹಿಸಲು ಮುಂದಾಗಿರುವುದು ದುರದೃಷ್ಟಕರ. ಇದರಿಂದ ಬಿಜೆಪಿಯ ಬಂಡವಾಳ ಬಯಲಾಗಿದೆ’ ಎಂದು ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.