ಸೋಮವಾರ, ಜನವರಿ 27, 2020
26 °C
ಡಿಸೆಂಬರ್‌ 23 ‘ರೈತರ ದಿನ’

ಖುಷಿಯಲಿ ಕೃಷಿಯಲಿ...

ಆನಂದತೀರ್ಥ ಪ್ಯಾಟಿ. Updated:

ಅಕ್ಷರ ಗಾತ್ರ : | |

‘ಬೇಸಾಯ ಮನೆಮಕ್ಕಳೆಲ್ಲ ಸಾಯ’ ಎನ್ನುವುದು ಭಾರತೀಯ ರೈತಾಪಿ ವಲಯದಲ್ಲಿ ಚಾಲ್ತಿಯಲ್ಲಿರುವ ಹತಾಶೆಯ ಮಾತು. ನಿಯಮಿತವಾಗಿ ವರದಿಯಾಗುವ ರೈತರ ಆತ್ಮಹತ್ಯೆಯ ವರದಿಗಳ ಹಿನ್ನೆಲೆಯಲ್ಲಿ ಈ ಮಾತಿನ ಸತ್ಯ ಕಣ್ಣಿಗೆ ರಾಚುವಂತಿದೆ. ಕಪ್ಪಿಟ್ಟ ಮೋರೆಗಳು, ಕನಸುಗಳಿಲ್ಲದ ಕಣ್ಣುಗಳು, ಕಳವಳಗಳನ್ನೇ ಉಸಿರಾಡುವ ಹೊಲಬಯಲುಗಳ ಚಿತ್ರಗಳು ಭಾರತೀಯ ಕೃಷಿ ಪರಿಸರದ ತಲ್ಲಣಗಳನ್ನು ಸೂಚಿಸುವಂತಿವೆ.

ಇಂಥ ನಿರಾಶಾದಾಯಕ ಪರಿಸ್ಥಿತಿಯಲ್ಲೂ ಕೃಷಿಯನ್ನು ಬದುಕಿನ ನೆಮ್ಮದಿಯ ರೂಪವಾಗಿ ರೂಢಿಸಿಕೊಂಡ ತರುಣ–ತರುಣಿಯರಿದ್ದಾರೆ. ಅಂಥವರು ಕೃಷಿ ಕ್ಷೇತ್ರದ ಬೆಳ್ಳಿಚುಕ್ಕಿಗಳಂತೆ ಕಾಣಿಸುತ್ತಿದ್ದಾರೆ. ಅರಮನೆಯ ಐಭೋಗದಲ್ಲಿ ಮುಳುಗೇಳುತ್ತಿದ್ದ ಸಿದ್ದಾರ್ಥ, ಬಯಲಿಗೆ ಬಿದ್ದು ಬುದ್ಧನಾದುದು ಇತಿಹಾಸದ ಪವಾಡಸದೃಶ ಕಥನಗಳಲ್ಲೊಂದು. ಕೆಲವು ಯುವ ಕೃಷಿ ಸಾಧಕರದೂ ಸಿದ್ದಾರ್ಥನ ಹಾದಿಯೇ.

ಕೈತುಂಬಾ ಸಂಬಳ ತಂದುಕೊಡುವ ಹಾಗೂ ಪ್ರತಿಷ್ಠೆಯ ನೌಕರಿಗಳಿಗೆ ಬೆನ್ನು ಮಾಡಿ, ಸ್ಪರ್ಧಾತ್ಮಕ ಜಗತ್ತಿನ ರಂಗುಗಳೆಲ್ಲ ಕಳಾಹೀನವೆನ್ನಿಸಿ, ಬದುಕಿನ ಸಾಧ್ಯತೆಗಳಿಗಾಗಿ ಮಣ್ಣಿನ ಸಂಗ ಬಯಸಿದ ತರುಣ ತರುಣಿಯರು ಸಣ್ಣ ಪಡೆಯೊಂದು ನಮ್ಮ ನಡುವಿದೆ. ಆಧುನಿಕ ಜಗತ್ತಿನ ಸುಖದ ಪರಿಕಲ್ಪನೆಯನ್ನೇ ಅಣಕ ಮಾಡುವಂತೆ ತೋರುವ ಈ ಯುವಕ ಯುವತಿಯರು ಕೃಷಿಯಲ್ಲಿ ಸುಖ ಕಾಣುತ್ತಿರುವುದು ಭಾರತೀಯ ಕೃಷಿ ಸಂದರ್ಭದಲ್ಲಿ ಒಂದು ಪವಾಡವಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ. ಆದರೆ, ಈ ಕೃಷಿಮಿತ್ರರಿಗೋ ಇದು ಪವಾಡವಲ್ಲ, ಸಹಜ ಜೀವನ ವಿಧಾನ. ಬನ್ನಿ, ಅಂಥ ಕೆಲವು ಕೃಷಿಪ್ರೇಮಿಗಳ ಪರಿಚಯ ಮಾಡಿಕೊಳ್ಳೋಣ.

ಯೋಗದಿಂದ ನೇಗಿಲಯೋಗಿ

‘ನೇಗಿಲು ಹೇಗೆ ಹಿಡಿಯಬೇಕು ಅಂತ ಕಲಿತಿದ್ದೇ ಮೊದಲಿಗೆ ಉಳುಮೆ ಮಾಡೋ ದಿನದಂದು’ ಎಂದು ನೆನಪಿಸಿಕೊಳ್ಳುವ ಜಯಂತ ಬಿಸರಳ್ಳಿ, ಕೃಷಿಗೆ ಕಾಲಿಟ್ಟು ಎಂಟು ವರ್ಷಗಳಾಗಿವೆ. ಏನೇನು ಬೆಳೆಯುತ್ತೀರಿ? ಎಂಬ ಪ್ರಶ್ನೆಗೆ ಚುಟುಕಾದ ಉತ್ತರ: ‘ಮನೆಗೆ ಏನು ಬೇಕೋ ಅದನ್ನೆಲ್ಲ. ಸಾಂಬಾರು ಪದಾರ್ಥ, ಉಪ್ಪು ಹೊರತುಪಡಿಸಿ ಬೇರೆಲ್ಲವನ್ನೂ’.ಬೆಂಗಳೂರಿಗೆ ಬಂದವರು ಮೆಜೆಸ್ಟಿಕ್–ರೈಲು ನಿಲ್ದಾಣ ಸಂಪರ್ಕದ ಸಬ್‌ವೇ ನೋಡಿರಲೇಬೇಕು. ಇದನ್ನು ನಿರ್ಮಿಸಿದ ಸಂಸ್ಥೆಯ ತಂಡದಲ್ಲಿ ಕೆಲಸ ಮಾಡಿದವರು ಜಯಂತ. ಮೈಸೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದ್ದ ಅವರು, ಹಲವು ವರ್ಷ ಮಲೇಷ್ಯಾ, ಥಾಯ್ಲೆಂಡಿನಲ್ಲಿ ಉದ್ಯೋಗ ಕೂಡ ಮಾಡಿದರು. ಬ್ಯಾಂಕಾಕ್‌ನಲ್ಲಿ ಏಷ್ಯನ್ ಗೇಮ್ಸ್ ಸಂದರ್ಭದಲ್ಲಿ ಕೈಗೆತ್ತಿಕೊಂಡ ರೈಲ್ವೆ ಮಾರ್ಗದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಇವರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರಿಂದ ವಾರ್ಷಿಕ ಬೋನಸ್ ಸಿಗಲಿಲ್ಲ. ಇದರಿಂದ ಬೇಸತ್ತು, ಕೆಲಸಕ್ಕೆ ರಾಜೀನಾಮೆ ಕೊಟ್ಟರು; ವಾರ್ಧಾದ ಗಾಂಧಿ ಆಶ್ರಮದಲ್ಲಿ ಯೋಗ ಶಿಕ್ಷಕರಾಗಿ ಸೇರಿಕೊಂಡರು. ಅಲ್ಲಿಂದ ಮಥುರಾಕ್ಕೆ ಪಯಣ. ಅಲ್ಲಿ ಪರಿಚಯವಾದ ಜಾನಕಿ ಜತೆ ವಿವಾಹ. ಕೊನೆಗೆ ಕೊಪ್ಪಳ ಬಳಿಯ ಬಿಕನಳ್ಳಿಗೆ ವಾಪಸು ಬಂದು ಮನೆತನದ ಜಮೀನಿನಲ್ಲಿ ಬೇಸಾಯ ಶುರು ಮಾಡಿದರು.ಕೃಷಿಗೆ ಅಪರಿಚಿತರಾಗಿದ್ದ ಜಯಂತ್‌ಗೆ ಹೊಸ ದಾರಿ ತೋರಿದ್ದು ಜಪಾನಿನ ನೈಸರ್ಗಿಕ ಕೃಷಿ ಋಷಿ ಮಸನೊಬು ಫುಕುವೊಕ. ಆಗಲೇ ಕೂಲಿಕಾರರ ಅಭಾವದಿಂದಾಗಿ ಉಳುಮೆಯಿಲ್ಲದ ವ್ಯವಸಾಯ ಅನಿವಾರ್ಯವಾಗಿತ್ತು. ಅದನ್ನೇ ಜಯಂತ್ ನೆಚ್ಚಿಕೊಂಡರು. ಪತ್ನಿ ಜಾನಕಿ ಸಾಥ್ ನೀಡಿದರು. ‘ಬೇಸಾಯ ಕಠಿಣ, ನಿಜ. ಹಾಗೆಂದು ಎಲ್ಲರೂ ಪಟ್ಟಣಕ್ಕೆ ಹೋದರೆ ಅನ್ನ ಸಿಕ್ಕೀತಾದರೂ ಹೇಗೆ?’ ಎನ್ನುವ ಜಯಂತ್ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ.ಗಾಂಧಿ ಅನುಯಾಯಿಯಾದ ಜಯಂತ, ಹಿಂದಿನ ಕಾಲದ ವಿನಿಮಯ ಪದ್ಧತಿ ಮತ್ತೆ ಚಾಲ್ತಿಗೆ ಬರಬೇಕೆನ್ನುವ ಹಂಬಲದವರು. ಉತ್ಪನ್ನದ ಮಾರಾಟಕ್ಕೆ ಅವರು ಒಪ್ಪುವುದಿಲ್ಲ. ತಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಕೊಟ್ಟು, ಅವರಿಂದ ತಮಗೆ ಬೇಕಾದ ಪದಾರ್ಥ ತರುವುದು ಅವರ ವಿಧಾನ. ಇದನ್ನು ಪಾಲಿಸುವುದು ಕಠಿಣ ಅನಿಸಿದರೂ ಅನುಸರಿಸುತ್ತಿದ್ದಾರೆ ಎಂಬುದು ಇನ್ನೊಂದು ಅಚ್ಚರಿ. ಹಾಗಿದ್ದರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಸರಿಯಲ್ಲವೇ?ನಾನೇ ಒಡತಿ–ನಾನೇ ಕೂಲಿ

‘ಮೊದಲು ನಮಗೆ ಬೇಕಿರುವುದನ್ನು ಬೆಳೆದುಕೊಳ್ಳಬೇಕು; ಹೆಚ್ಚಾಗಿ ಉಳಿದರೆ ಮಾರಾಟ ಮಾಡಬೇಕು’ ಎಂಬ ಅಭಿಪ್ರಾಯ ಪ್ರತಿಭಾ ನಾಗವಾರ ಅವರದು. ಕನಕಪುರದ ಹಾರೋಹಳ್ಳಿ ಸಮೀಪದ ಹೊಸಗಬ್ಬಾಡಿ ಹಳ್ಳಿಯ ಹೊರವಲಯದಲ್ಲಿರುವ ಹನ್ನೊಂದು ಎಕರೆ ಜಮೀನಿನ ಒಡತಿ ಪ್ರತಿಭಾ ಅವರು ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ.

ಸಾಫ್ಟ್‌ವೇರ್ ತಂತ್ರಜ್ಞೆಯಾಗಿ ಅಮೆರಿಕದಲ್ಲಿ ಹನ್ನೊಂದು ವರ್ಷಗಳ ಕಾಲ ಕೆಲಸ ಮಾಡಿದವರು. ಅಲ್ಲಿದ್ದಾಗ ವಾರಾಂತ್ಯದಲ್ಲಿ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರು. ಒಂದು ಹಂತದಲ್ಲಿ ಎಲ್ಲ ಬೇಸರ ಎನಿಸಿದಾಗ ಭಾರತಕ್ಕೆ ಮರಳಿದರು. ಮುಂದೇನು ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಕಂಡಿದ್ದು- ಬೇಸಾಯ.‘ಮೊದಲಿನಿಂದಲೂ ಸಮಸ್ಯೆಗಳಿಗೆ ಪರಿಹಾರ ಕಂಡು­ಹಿಡಿಯು­ವುದರಲ್ಲಿ ನನಗೆ ಹೆಚ್ಚು ಆಸಕ್ತಿ. ಭಾರತಕ್ಕೆ ಬಂದ ಮೇಲೆ ಕೃಷಿ ಮಾಡಬೇಕು ಎಂದು ನಿರ್ಧರಿಸಿದೆ. ಆಗ ಕಾಣಿಸಿದ್ದು ಹತ್ತಾರು ಸಮಸ್ಯೆಗಳು! ಏನಾದರಾಗಲೀ ಇದೇ ಹಾದಿಯಲ್ಲಿ ನಡೆಯಬೇಕು ಎಂದು ನಿರ್ಧರಿಸಿದೆ. ಆಸಕ್ತಿಕರ ಸಂಗತಿ ಏನು ಗೊತ್ತೇ? ನಾವು ಅಂದುಕೊಂಡ ಸಮಸ್ಯೆಗಳೆಲ್ಲ ಸಮಸ್ಯೆಗಳೇ ಆಗಿರುವುದಿಲ್ಲ. ಉತ್ತರ ಹುಡುಕುವ ಗೋಜಿಗೆ ನಾವು ಹೋಗಿರುವುದಿಲ್ಲ ಅಷ್ಟೇ’ ಎಂಬ ಅನುಭವದ ನುಡಿ ಅವರದು.ಪ್ರಸ್ತುತ ಪ್ರತಿಭಾ, ಭತ್ತ, ತೊಗರಿ, ಸಿರಿಧಾನ್ಯ, ತರಕಾರಿ ಸೇರಿದಂತೆ ಹಲವು ಬಗೆಯ ಬೆಳೆ ಬೆಳೆಯುತ್ತಿದ್ದಾರೆ. ‘ಪ್ರತಿ ಸಲ ಕಾಲು, ಅರ್ಧ ಎಕರೆ ಭತ್ತ ಬೆಳೆಯುತ್ತಿದ್ದೆ. ಈ ಸಲ ಒಂದು ಎಕರೆ ಬೆಳೆದಿದ್ದೇನೆ. ದಿನಕ್ಕೆ ನಾಲ್ಕು ತಾಸಿನಂತೆ ಗದ್ದೆಯಲ್ಲಿ ಕೆಲಸ ಮಾಡುತ್ತೇನೆ. ಇಡೀ ಭತ್ತದ ನಿರ್ವಹಣೆ ನಾನೊಬ್ಬಳೇ ಮಾಡಿದ್ದು. ಕೊಯ್ಲು ನಡೆಯುವಾಗ ಇಬ್ಬರು ಕಾರ್ಮಿಕರನ್ನು ಹೊರತುಪಡಿಸಿದರೆ ಉಳಿದಿದ್ದೆಲ್ಲ ನಾನೇ ಮಾಡಿದ್ದು’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ನಿಜ, ಉದ್ಯೋಗ ಮಾಡುವಾಗ ಸಿಗುತ್ತಿದ್ದಷ್ಟು ಹಣ ಈಗ ಸಿಗುವುದಿಲ್ಲ. ಆದರೆ ಯಾರಿಗೂ ಸಿಗದಷ್ಟು ನೆಮ್ಮದಿ, ಸಮಯ ನನಗೆ ಸಿಕ್ಕಿದೆ. ಯಾವುದೇ ಒತ್ತಡ ನನ್ನ ಮೇಲಿಲ್ಲ. ಅಷ್ಟಕ್ಕೂ ನಾನೀಗ ಯಾರಿಗೂ ಗುಲಾಮಳಲ್ಲ. ನನ್ನ ತುಂಡು ಜಮೀನಿಗೆ ನಾನೇ ಒಡತಿ. ಉಳುಮೆ ಮಾಡುತ್ತೇನೆ, ಕಳೆ ಕೀಳುತ್ತೇನೆ. ಕೊಯ್ಲು ಮಾಡಿದ ಬಳಿಕ ಧಾನ್ಯದ ರಾಶಿ ಕಂಡಾಗ ಮನಸ್ಸು ಪ್ರಫುಲ್ಲವಾಗುತ್ತದೆ’ ಎನ್ನುತ್ತಾರೆ ಪ್ರತಿಭಾ.

ತಮಗೆ ಅಗತ್ಯವಾದುದನ್ನು ಉಳಿಸಿಕೊಂಡು ಉಳಿದಿದ್ದನ್ನು ಮಾರುಕಟ್ಟೆಗೆ ಕಳಿಸುತ್ತಾರೆ. ಯುವತಿಯೊಬ್ಬಳು ಏಕಾಂಗಿಯಾಗಿ ದುಡಿದು ಸೃಷ್ಟಿಸಿದ ಈ ಕೃಷಿಲೋಕ, ಕೈ–ಕಾಲು ಗಟ್ಟಿಯಿದ್ದವರನ್ನು ನಾಚಿಸುವಂತಿದೆ! ಇಂಥವರು ನಿರ್ಮಿಸಿದ ಹೊಲ–ಗದ್ದೆಗಳೇ ಕೃಷಿ ಕಲಿಕೆಯ ತಾಣಗಳೇ ಹೊರತೂ ಕೃಷಿ ವಿಶ್ವವಿದ್ಯಾಲಯಗಳ ಪ್ರಯೋಗಾಲಯಗಳಲ್ಲ. ಅಲ್ಲಿ ಏನಿದ್ದರೂ ಬೌದ್ಧಿಕ ಕಸರತ್ತಿಗೆ ಆದ್ಯತೆ.ಓದಿದ್ದೆಲ್ಲ ವೇಸ್ಟ್!

‘ಅದು ನನಗೆ ಚೆನ್ನಾಗಿ ಗೊತ್ತಾಯ್ತು. ಹಾಗಾಗಿಯೇ ಆ ಪರಿಧಿಯಿಂದ ಹೊರಬಂದು ಬಿಟ್ಟೆ. ಅಲ್ಲೇ ಇದ್ದಿದ್ದರೆ ಯಾವುದೋ ಕೃಷಿ ಕಂಪನೀಲಿ ಆಫೀಸರ್ ಅಥವಾ ಮ್ಯಾನೇಜರ್ ಆಗಿ ಇರ್ತಾ ಇದ್ದೆ ಅಷ್ಟೇ. ಆದರೆ ನೆಲದ ಮೇಲಿನ ಪ್ರೀತಿ ಇಂದು ನನ್ನನ್ನು ಎಲ್ಲರಿಗಿಂತ ವಿಭಿನ್ನವಾಗಿಸಿದೆ’. ಇದು ರಾಯಚೂರು ಜಿಲ್ಲೆ ಮಾನ್ವಿಯ ಪ್ರವೀಣ ಪಾಟೀಲರ ಮಾತು.ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಪ್ರವೀಣ ಅವರಿಗೆ ಇದರಲ್ಲೇನೂ ಉಪಯೋಗವಿಲ್ಲ ಎಂಬುದು ಗೊತ್ತಾಗಿ ಹೋಯಿತು! ನೆಲ-ಜಲ ವಿಷಮಯವಾಗಿಸುತ್ತಿದ್ದ ರಾಸಾಯನಿಕಗಳ ಹಾವಳಿಗೆ ಪರ್ಯಾಯವಾಗಿ ಕೃಷಿ ಮಾಡಬೇಕು ಅನಿಸಿತಂತೆ. ಆಗ ಕಂಡಿದ್ದು ಸಾವಯವ ಕೃಷಿ. ಜತೆಗೆ ಅಭ್ಯಾಸ ಮಾಡಿದ ಸ್ನೇಹಿತರು ಬೇರೆ ಬೇರೆ ಉದ್ಯೋಗ ಹಿಡಿದುಕೊಂಡರೆ, ಪ್ರವೀಣ ಗಟ್ಟಿಯಾಗಿ ನಂಬಿಕೊಂಡಿದ್ದು ಮಣ್ಣಿನ ನಂಟನ್ನು. ಆಗ ಅವರಿಗೆ ಹಲವರು ಹಲವು ಪ್ರಶ್ನೆ ಹಾಕಿದ್ದರು!ವ್ಯವಸಾಯದಲ್ಲಿ ಎಷ್ಟೆಲ್ಲ ಕಷ್ಟಗಳು ಇವೆಯಲ್ಲ? ಇವಾವೂ ಬಾಧಿಸಿಲ್ಲವೇ? ಈ ಪ್ರಶ್ನೆಗೆ ಪ್ರವೀಣ ಮರುಪ್ರಶ್ನೆ ಹಾಕುತ್ತಾರೆ. ‘ಬೇರೆ ಯಾವ ಕ್ಷೇತ್ರದಲ್ಲೂ ಸಮಸ್ಯೆಗಳಿಲ್ಲವೇ?’ ಅವರ ಪ್ರಕಾರ, ಅನಿಶ್ಚಿತತೆ ಮಧ್ಯೆಯೂ ಅತ್ಯಂತ ನೆಮ್ಮದಿ ನೀಡುವ ಸುರಕ್ಷಿತ ತಾಣವೇನಾದರೂ ಇದ್ದರೆ ಅದು ವ್ಯವಸಾಯ ಮಾತ್ರ. ‘ನನ್ನ ಜತೆ ಓದಿ, ಎಲ್ಲೆಲ್ಲೋ ಉದ್ಯೋಗ ಮಾಡುತ್ತಿರುವವರು ನನ್ನ ಮನೆಗೆ ಬಂದು, ನನ್ನ ಬದುಕು ನೋಡಿದಾಗ ಮತ್ತೆ ಮತ್ತೆ ಉದ್ಗರಿಸುತ್ತಾರೆ: ‘ನೀನ್ ಬಿಡಪ್ಪಾ ಆರಾಮ್ ಇದೀಯಾ!’. ‘ಹೌದು. ಓದು, ಸಂಗೀತದಂಥ ಹವ್ಯಾಸಕ್ಕೆ ಬೇಕಾಗುವಷ್ಟು ಸಮಯ ನನಗೆ ಸಿಗುತ್ತದೆ. ಒತ್ತಡದ ಬದುಕು ನನ್ನದಲ್ಲ’ ಎನ್ನುತ್ತಾರೆ ಪ್ರವೀಣ.

ಜೀವವೈವಿಧ್ಯ ತಾಣದ ಕನಸು

ಒತ್ತಡದ ಬದುಕಿಗೆ ಬೇಸತ್ತು ನೆಮ್ಮದಿ ಅರಸಿಕೊಂಡು ವ್ಯವಸಾಯಕ್ಕೆ ಬಂದವರ ಪೈಕಿ ಹಲವರಲ್ಲಿ ಅಪರೂಪದ ಕನಸುಗಳೂ ಇವೆ. ವಿಷಮುಕ್ತ ಆಹಾರ ಉತ್ಪಾದನೆ, ತದ್ರೂಪಿ ಕಾಡು ಸೃಷ್ಟಿ, ಅರಣ್ಯ ಪುನರುಜ್ಜೀವನ, ಕಾಡುಪ್ರಾಣಿಗಳಿಗೆ ಜಮೀನು ಮೀಸಲಿಡುವುದು ಇತ್ಯಾದಿ. ಜಿ.ಶ್ರೀವತ್ಸ ಇದೇ ಸಾಲಿಗೆ ಸೇರುತ್ತಾರೆ. ದೇಸೀ ತಳಿಗಳ ಪ್ರಾಣಿಗಳುಳ್ಳ ಜೀವ ವೈವಿಧ್ಯ ತೋಟ ರೂಪಿಸುವುದು ಅವರ ಕನಸು!‘ಇದು ನೋಡಿ ಪುಂಗನೂರು ತಳಿ ಹಸು’ ಎಂದು ತೋರಿಸಿದೆಡೆ ನೋಡಿದಾಗ, ಬರೀ ಎರಡೂವರೆ ಅಡಿ ಎತ್ತರದ ಆಕಳ ಮರಿ ಕಾಣಿಸಿತು. ಆದರೆ ಅದು ಮರಿಯಲ್ಲ; ದೊಡ್ಡ ಆಕಳು ಎಂಬುದು ಗೊತ್ತಾದಾಗ ಆಶ್ಚರ್ಯ! ಬಿ.ಎಸ್‌ಸಿ ಎಲೆಕ್ಟ್ರಾನಿಕ್ಸ್ ಓದಿದ ಬಳಿಕ ಶ್ರೀವತ್ಸ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗ ಹಿಡಿದುಕೊಂಡರು. ಸ್ವೀಡನ್, ಅಮೆರಿಕ, ಹಂಗೇರಿ, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಹಲವೆಡೆ ಸುತ್ತಾಡುತ್ತ ೧೯ ವರ್ಷ ಈ ವಲಯದಲ್ಲಿ ಕೆಲಸ ಮಾಡಿದರು.ರಜೆ ಸಿಕ್ಕರೆ ಸಾಕು; ನಿಸರ್ಗದ ಮಧ್ಯೆ ಕಳೆದುಹೋಗುವ ಆಸೆ. ಒತ್ತಡದ ಬದುಕು ಸಾಕೆನಿಸಿತು. ಒಂದು ದಿನ ಕೆಲಸಕ್ಕೆ ಶರಣು ಹೊಡೆದು ಬೆಂಗಳೂರಿನ ಮಾಗಡಿ ರಸ್ತೆಯ ಸಿಂಗದಾಸನಹಳ್ಳಿಗೆ ಬಂದರು. ಈ ಹಿಂದೆ ಖರೀದಿಸಿದ್ದ ಹತ್ತು ಎಕರೆ ಜಮೀನು ಇತ್ತು. ಇಲ್ಲೇ ನೆಲೆಯೂರಲು ನಿರ್ಧರಿಸಿದಾಗ ‘ಇವರಿಗೆಲ್ಲೋ ಹುಚ್ಚು’ ಅಂದವರು ಬಹಳ ಮಂದಿ.‘ಮೂಲತಃ ನಾನು ಸ್ವಾರ್ಥಿ. ವಿಷಮುಕ್ತ ಆಹಾರ ಉತ್ಪಾದಿಸಿ ನಾನು ಸೇವಿಸಬೇಕು ಅಂತ ತೋಟ ಮಾಡಿದೆ. ನಂತರ ಇತರರಿಗೂ ಕೊಡಬೇಕು ಎಂಬ ಆಸೆ ಮೂಡಿತು. ಈಗ ವಿವಿಧ ತರಕಾರಿ, ರಾಗಿ, ಹುರುಳಿ, ನವಣೆ ಬೆಳೆಯುತ್ತಿದ್ದೇನೆ. ಹೆಚ್ಚೇನಿಲ್ಲ; ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಪಾಠ ಹೇಳಿಕೊಡುವ ಜೀವವೈವಿಧ್ಯ ತಾಣವನ್ನಾಗಿ ನಮ್ಮ ತೋಟ ಮಾಡುವ ಆಸೆ’ ಎಂದು ತಮ್ಮ ಆಸೆಯನ್ನು ಬಿಚ್ಚಿಡುತ್ತಾರೆ.

ನಂಬಿ ಕೆಟ್ಟವರಿಲ್ಲವೋ...

ಜಯಂತ, ಪ್ರತಿಭಾ, ಪ್ರವೀಣ್‌ ಪಾಟೀಲ, ಶ್ರೀವತ್ಸ– ಇವರೆಲ್ಲರಲ್ಲಿ ಕಾಣುವ ಸಾಮಾನ್ಯ ಸಂಗತಿ ಎಂದರೆ, ಎದುರಾಗುವ ಸಮಸ್ಯೆಗೆ ಹೆದರದೇ ಧೈರ್ಯದಿಂದ ಎದುರಿಸಿ, ಪರಿಹಾರ ಕಂಡುಕೊಂಡಿರುವುದು; ಮೂಲತಃ ಕೃಷಿಯ ಯಾವುದೇ ಹಿನ್ನೆಲೆ ಇರದಿದ್ದರೂ ಅದರಲ್ಲಿ ಸಫಲತೆ ಪಡೆದಿರುವುದು. ಭೂಮಿ ತುಂಡನ್ನು ಬರೀ ನಿವೇಶನದಂತೆ ನೋಡುವ ಮಂದಿಯ ಮಧ್ಯೆ ಕೃಷಿ ಹುಚ್ಚು ಹಚ್ಚಿಸಿಕೊಂಡವರು ಇವರು.

ಕೂಲಿಕಾರರ ಕೊರತೆ, ಒಳಸುರಿ ವೆಚ್ಚ ಏರಿಕೆ, ಬೆಳೆಗೆ ಬೆಲೆ ಸಿಗದಿರುವುದು ಇತ್ಯಾದಿ ಸಮಸ್ಯೆಗಳು ಇವರನ್ನು ಕಾಡಿದರೂ ಮಣ್ಣನ್ನೇ ನಂಬಿ ಕೆಲಸ ಮಾಡುತ್ತಿದ್ದಾರೆ. ‘ಅವರಿಗೇನು? ಸಾಕಷ್ಟು ಹಣ ಇದ್ದವರು!’ ಎಂದು ಮೂದಲಿಸುವುದು ಸುಲಭ; ಆದರೆ ವ್ಯವಸಾಯದಲ್ಲಿ ನಷ್ಟ ಅನುಭವಿಸದೇ ಅದನ್ನು ಲಾಭದಾಯಕ ಮಾಡಿಕೊಂಡ ಬಗೆಯನ್ನು ಕಡೆಗಣಿಸಲಾದೀತೆ?‘ಇನ್ನೈದು ವರ್ಷ ಬರ–ನೆರೆ ಬಂದ್ರೂ ನನಗೇನೂ ಸಮಸ್ಯೆ ಇಲ್ಲ. ಅಷ್ಟು ಧಾನ್ಯ ನನ್ನಲ್ಲಿದೆ. ಆಹಾರ ಭದ್ರತೆ ಅಂದ್ರೆ ಇದು’ ಎನ್ನುವುದು ಜಯಂತರ ಆತ್ಮವಿಶ್ವಾಸ. ‘ನನ್ನ ಮನೆಗೇ ಬಂದು ಅಕ್ಕಿ ಖರೀದಿಸ್ತಾರೆ. ಮಾರ್ಕೆಟ್ ಸಮಸ್ಯೆ ಯಾವತ್ತೂ ಇಲ್ಲ’ ಎನ್ನುವುದು ಪ್ರವೀಣ ಪಾಟೀಲರ ನಿರುಮ್ಮಳದ ಮಾತು.

ನಿರಾಶೆ ಕವಿದ ಬೇಸಾಯ ಲೋಕದಲ್ಲಿ ಜಯಂಥ, ಪ್ರವೀಣರಂಥವರ ಮಾತುಗಳು ಹೊಸ ದಾರಿ–ಮಾದರಿಗಳನ್ನು ಬಿಂಬಿಸುವಂತಿವೆ.

–ಆನಂದತೀರ್ಥ ಪ್ಯಾಟಿ.

ಪ್ರತಿಕ್ರಿಯಿಸಿ (+)