ಸೋಮವಾರ, ಏಪ್ರಿಲ್ 19, 2021
23 °C

ಗಂಧವಿಲ್ಲದ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಗಂಧದ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಲು ಸರ್ಕಾರದ ನೀತಿಯೇ ಕಾರಣ. ಐದು ವರ್ಷಗಳ ಹಿಂದೆ ಒಂದು ಕೆಜಿ ಶ್ರೀಗಂಧಕ್ಕೆ 1600 ರೂಪಾಯಿ ಇತ್ತು. ಈಗ ಅದೇ ಬೆಲೆ ಆರರಿಂದ ಏಳು ಸಾವಿರಕ್ಕೆ ಏರಿಕೆಯಾಗಿದೆ. ಸರ್ಕಾರ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿರುವುದರಿಂದ ನಾವು ಗಂಧದ ಮೂರ್ತಿಗಳನ್ನು ತಯಾರಿಸುವುದನ್ನೂ ನಿಲ್ಲಿಸಿದ್ದೇವೆ.ಅರ್ಧ ಅಡಿ ಎತ್ತರದ ಮೂರ್ತಿಗೆ 8000 ಬೆಲೆ ಇಟ್ಟರೆ ಯಾರು ಕೊಳ್ಳುತ್ತಾರೆ? ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡಿ ಎನ್ನುವ ರಾಜಕಾರಣಿಗಳ ಮಾತು ವೇದಿಕೆ ಮೇಲೆ ಕೇಳಲು, ಇಲ್ಲವೇ ಪತ್ರಿಕೆಗಳಲ್ಲಿ ಓದಲಷ್ಟೇ ಸೀಮಿತವಾಗಿದೆ. ನಮ್ಮಂತಹ ಶಿಲ್ಪಿಗಳಿಗೇನೂ ಉಪಯೋಗವಾಗಿಲ್ಲ~ ಎಂದು ಬೇಸರ ತೋಡಿಕೊಂಡರು ಸೋಮನಾಥ್.ಪ್ರಸ್ತುತ ಸಫೀನಾ ಪ್ಲಾಜಾದಲ್ಲಿ ನಡೆಯುತ್ತಿರುವ ಸಿಸಿಐಸಿ ಕಾಟೇಜ್ ಮೇಳದಲ್ಲಿ ತಮ್ಮ ಅಪರೂಪದ ಶ್ರೀಗಂಧದ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿರುವ ಅವರ ಮಾತಿನಲ್ಲಿ ಈ ಉದ್ಯಮದ ವಾಸ್ತವದ ನೋಟವಿತ್ತು.ಕಳೆದ ನಲ್ವತ್ತು ವರ್ಷಗಳಿಂದ ಗಂಧದ ಪೆನ್ನು, ಮೂರ್ತಿ ಮತ್ತಿತರ ಉತ್ಪನ್ನ ತಯಾರಿಸುತ್ತಿದ್ದ ಇವರಿಗೆ ಗಂಧದ ಬೆಲೆ ಕೈಗೆಟುಕದಷ್ಟು ಹೆಚ್ಚಾದ ಬಗ್ಗೆ ಆಕ್ರೋಶವೂ ಇತ್ತು. `ಬಾಲ್ಯದಿಂದ ಕಲಿತಿದ್ದು ಇದೊಂದೇ ಕಲೆ. ಈಗ ಶಿವಾನಿ ಇಲ್ಲವೇ ರೋಸ್‌ವುಡ್‌ಗಳನ್ನು ಬಳಸಿಕೊಂಡೇ ಮೂರ್ತಿಗಳನ್ನು ತಯಾರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕೊಳ್ಳುವವರೂ ಕಡಿಮೆಯಾಗಿದ್ದಾರೆ. ಶ್ರೀಗಂಧ ಕೊಳ್ಳುವುದೇ ಅಪರಾಧ, ಸಿಕ್ಕಿಬಿದ್ದರೆ ಕೇಸು-ಜೈಲು, ಎಂಬ ತಪ್ಪು ಮಾಹಿತಿ ಅವರಲ್ಲಿರುವುದೂ ಇದಕ್ಕೆ ಕಾರಣವಿರಬಹುದು. ಈ ಶಿಲ್ಪಕಲೆಯ ಉದ್ಯೋಗದ ಹೊರತಾಗಿ ಕೂಲಿ ಕೆಲಸವನ್ನಾದರೂ ಕಲಿತಿದ್ದರೆ ಈಗ ಹೊಟ್ಟೆ ಹೊರೆಯುವ ಸಮಸ್ಯೆ ಎದುರಾಗುತ್ತಿರಲಿಲ್ಲ~ ಎಂಬುದು ಅವರ ನೋವು.ರೂ. 300ರಿಂದ ಆರಂಭಗೊಂಡು ಹತ್ತುಸಾವಿರದವರೆಗಿನ ವಸ್ತುಗಳು ಇವರ ಬಳಿ ಇವೆ. ಸಣ್ಣ ಮೂರ್ತಿಗಳಾದರೆ ತಯಾರಿಕೆ ಎರಡು ದಿನ ಸಾಕು. ಅದೇ ಒಂದು ಅಡಿ ಎತ್ತರದ ಮೂರ್ತಿಗಳ ವಿನ್ಯಾಸಕ್ಕೆ ತಿಂಗಳು ಬೇಕಾಗಿದ್ದೂ ಉಂಟು. ಶ್ರೀಗಂಧದ ಸರ, ಕೀಚೈನ್, ಆನೆ, ದೇವರ ಮೂರ್ತಿ, ಪೆನ್ನು, ಹಾರಗಳು, ಗೋಡೆ ಅಲಂಕಾರದ ಮೂರ್ತಿಗಳು, ಬಾಕ್ಸ್, ಪೇಪರ್ ಕಟ್ಟರ್ ಮತ್ತಿತರ ಆಕರ್ಷಕ ಉತ್ಪನ್ನಗಳು ಇವರ ಸಂಗ್ರಹದಲ್ಲಿವೆ. `ತಂದೆ ಇದೇ ಉದ್ಯೋಗ ಮಾಡಿಕೊಂಡಿದ್ದರು. ಈಗ ನಾವು ಮೂರು ಮಂದಿ ಅಣ್ಣ ತಮ್ಮಂದಿರು ಈ ಕಲೆಯನ್ನೇ ಬದುಕಾಗಿಸಿಕೊಂಡಿದ್ದೇವೆ. ಉದ್ಯಮವನ್ನು ಹಿರಿದಾಗಿಸೋಣ ಎಂದರೆ ಕಾರ್ಮಿಕರು ಕೂಡ ಸಿಗುತ್ತಿಲ್ಲ, ಸ್ವಂತ ಅಂಗಡಿ ತೆರೆಯಲು ಬಂಡವಾಳವೂ ಇಲ್ಲ. ಹಾಗೋ ಹೀಗೋ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾ ಪುಡಿಗಾಸು ಗಿಟ್ಟಿಸಿಕೊಳ್ಳುವಲ್ಲಿಗೆ ಬಂದು ನಿಂತಿದೆ ಈ ಕಲಾಕಾರನ ಬದುಕು...~ ಎನ್ನುತ್ತಾ ನಿಟ್ಟುಸಿರು ಬಿಟ್ಟರು ಸೋಮನಾಥ್. ಇವರ ಬದುಕಿನಲ್ಲಿ ಮಾತ್ರ ಅದೇಕೋ ಶ್ರೀಗಂಧ ತನ್ನ ಕಂಪು ಬೀರದೆ ಮುನಿಸು ತೋರಿದೆ. ಸಂಪರ್ಕ: 99160 49434.ವಿಶಿಷ್ಟ ಮೇಳ

ಶಿವಾಜಿನಗರದ ಸಫೀನಾ ಫ್ಲಾಜಾದಲ್ಲಿ ಸಿಸಿಐಇ ಕಾಟೇಜ್ ಮೇಳ ಇದೇ 26ರವರೆಗೆ ನಡೆಯಲಿದೆ. ಭಾರತದ ವೈವಿಧ್ಯಮಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕಲೆ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇಲ್ಲಿನ ವಿಶೇಷ.ಧೋಕ್ರಾ ಹಿತ್ತಾಳೆಯ ಕಲೆ, ಬಸ್ತಾರ್‌ನ ಪೀಠೋಪಕರಣಗಳು, ಉತ್ತರ ಪ್ರದೇಶದ ಖುರ್ಜಾ ಮಡಿಕೆ ಕುಡಿಕೆಗಳು, ದೆಹಲಿಯ ಓರಿಯೆಂಟಲ್ ಫರ್ನಿಚರ್, ಮಹಾರಾಷ್ಟ್ರದ ವರ್ಲಿ ಮತ್ತು ಬಸ್ತಾರ್, ಬಿಹಾರದ ಮಧುಬನಿ, ದೀಪ, ಲ್ಯಾಂಪ್‌ಶೇಡ್, ಚಿಮಣಿ, ರಾಜಸ್ತಾನದ ಹರಳುಗಳು, ಬಗ್ರು ಪ್ರಿಂಟ್, ಲಖನೌನ ಎಂಬ್ರಾಯಿಡರಿ ಕುರ್ತಾ, ಜಾಕೆಟ್, ಸಿಲ್ಕ್ ಸ್ಕಾರ್ಫ್ ಮತ್ತು ರೇಷ್ಮೆ ಟೈಗಳು ಪ್ರದರ್ಶನದ ಪ್ರಮುಖ ಆಕರ್ಷಣೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.