ಸೋಮವಾರ, ಮೇ 16, 2022
27 °C

ಗಡಿ ಭಾಗದಲ್ಲೊಬ್ಬ ಆದರ್ಶ ಶಿಕ್ಷಕ

ಎಸ್.ಬಿ. ಮಂಜರಗಿ ಸಂಕೇಶ್ವರ Updated:

ಅಕ್ಷರ ಗಾತ್ರ : | |

ಕೇವಲ ಪುಸ್ತಕದಲ್ಲಿನ ವಿಷಯಗಳನ್ನು ಬೋಧನೆ ಮಾಡುತ್ತಾ ಹೋಗದೆ ಬದುಕಿನ ಸಮಸ್ತ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಡಿ ತೋರಿಸಿ ರಾಷ್ಟ್ರ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದ ಸಂಕೇಶ್ವರದ ದುರುದುಂಡೀಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ.ಹಿರೇಮಠ ಅವರು ಕಳೆದ ತಿಂಗಳು 30ರಂದು ನಿವೃತ್ತರಾದರು.1953ರಲ್ಲಿ ಹುಕ್ಕೇರಿ ತಾಲ್ಲೂಕಿನ ಅಂಕಲಗುಡಿಕೇತರ ಜನಿಸಿದ ಎಸ್.ಬಿ.ಹಿರೇಮಠ ಅವರು ಬಿ.ಎಸ್.ಸಿ ಮತ್ತು ಬಿ.ಇಡಿ ಪದವೀಧರರು. 1978ರಲ್ಲಿ ಸಂಕೇಶ್ವರದ ಎಸ್.ಡಿ.ವಿ.ಎಸ್ ಸಂಘದಲ್ಲಿ ಶಿಕ್ಷಕ ಸೇವೆ ಆರಂಭಿಸಿದ ಅವರು ಕೇವಲ ಪುಸ್ತಕದಲ್ಲಿನ ವಿಷಯಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಬೋಧನೆ ಮಾಡದೆ ಸಮಸ್ತ ಬದುಕಿನ ಬಗೆಗೆ ಪ್ರಯೋಗಗಳನ್ನು ಮಾಡಿ ತೋರಿಸಿದರು. ಶಾಲೆಯಲ್ಲಿ ಪರಿಸರ ಸಂರಕ್ಷಣೆ ವೇದಿಕೆಯನ್ನು ಸ್ಥಾಪಿಸಿ ಅದರ ಮೂಲಕ ವಿದ್ಯಾರ್ಥಿಗಳ ಕೈಯಿಂದ 300 ಸಸಿಗಳನ್ನು ನೆಡಿಸಿ ಕಿರು ಅರಣ್ಯ  ನಿರ್ಮಾಣ ಮಾಡಿ ರಾಷ್ಟ್ರಮಟ್ಟದಲ್ಲಿ ಬಹುಮಾನ ಬರುವಂತೆ ಮಾಡಿದರು.ಬಾಲಕರಿಂದ ಪಾಲಕರ ದುಶ್ಚಟ ಬಿಡಿಸುವ ಕಾರ್ಯಕ್ರಮ ಬಹುವಾಗಿ ಪರಿಣಾಮ ಬೀರಿತು. ಹಳೆಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಪ್ರತಿಭಾ ಪ್ರೇರಣೆ ಕಾರ್ಯಕ್ರಮ, ಕುಂಚದಿಂದ ವಿಜ್ಞಾನ ಕಲಿಯುವ ಕಾರ್ಯಕ್ರಮ, ರಂಗೋಲಿಯಿಂದ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಕಾರ್ಯಕ್ರಮ, `ಏಡ್ಸ್ ಬಂದೀತು ಎಚ್ಚರಿಕೆ' ನಾಟಕ ಪ್ರದರ್ಶನ ಮುಂತಾದ ಹಲವು ಚಟುವಟಿಕೆಗಳನ್ನು ಮಾಡಿ ವಿದ್ಯಾರ್ಥಿಗಳ ಮನ ಸೆಳೆದಿದ್ದರು.ಇದಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಸಮಯ ಪ್ರಜ್ಞೆ ಮತ್ತು ಶಿಸ್ತು ಮೂಡಿಸಲು ಅವರು ಕೈಕೊಂಡ ಕ್ರಮಗಳು ಎಲ್ಲರ ಮೆಚ್ಚುಗೆ ಗಳಿಸಿದ್ದವು. ಇವರ ಸೇವೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಇವರಿಗೆ ವಿವಿಧ ಪ್ರಶಸ್ತಿಗಳು ಬಂದಿವೆ.2004 ರಲ್ಲಿ ಇವರಿಗೆ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯೂ ಬಂದಿದೆ. ವಿಜ್ಞಾನ ಬೆಳೆಸುವಲ್ಲಿನ ಇವರ ಸೇವೆಯನ್ನು ಅಮೆರಿಕದ ಡಾ. ಡಗ್ಲಸ್ ಲೆಮನ್, ಡಾ.ಕಿಲ್ಲಿ, ರೀಸ್, ಡಾ.ಮೊರೆ ಹಾಗೂ ಬೆಂಗಳೂರಿನ ಡಾ.ಎಚ್.ನರಸಿಂಹಯ್ಯ, ವೈದ್ಯ ವಿಜ್ಞಾನಿ ಡಾ.ಸ.ಜ. ನಾಗಲೋಟಿಮಠ ಶ್ಲಾಘಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.