ಶನಿವಾರ, ಸೆಪ್ಟೆಂಬರ್ 26, 2020
23 °C

ಗರಡಿ ಮನೆ ನೆನಪಿನ ತೆನೆ

ವಿದ್ಯಾಶ್ರೀ ಎಸ್. Updated:

ಅಕ್ಷರ ಗಾತ್ರ : | |

ದಶಕಗಳ ಹಿಂದೆ ಶಿವಾಜಿನಗರ, ಕಾಟನ್‌ಪೇಟೆ, ಚಿಕ್ಕಪೇಟೆ ಸುತ್ತಮುತ್ತ ಗರಡಿ ಮನೆಗಳಲ್ಲಿ ಜಟ್ಟಿಗಳು ಬೆಳ್ಳಂಬೆಳಿಗ್ಗೆ ಹಾಗೂ ಬಿಸಿಲು ಇಳಿದ ಮೇಲೆ ತೊಡೆ ತಟ್ಟುವ ಸದ್ದು ತಂತಾನೇ ಕಿವಿಮೇಲೆ ಬೀಳುತ್ತಿತ್ತು. ನೂರಾರು ಯುವಕರು ಗರಡಿ ಮನೆಗೆ ಬಂದು ಬೆವರು ಇಳಿಸುತ್ತಿದ್ದರು. ಯಾವುದೇ  ಪ್ರತಿಫಲಾಪೇಕ್ಷೆ ಇಲ್ಲದೆ ಈ ಗರಡಿ ಮನೆಗಳು ಯುವಕರಿಗೆ ದೇಹವನ್ನು ಹುರಿಗಟ್ಟಿಸಲು ಪ್ರೇರೇಪಿಸುತ್ತಿದ್ದವು.ಆದರೆ ಇಂದು ಜಿಮ್, ಏರೋಬಿಕ್ಸ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿ ನಿಂತಿವೆ. ಸಿಕ್ಸ್‌ಪ್ಯಾಕ್ ಮೋಹಕ್ಕೆ ಒಳಗಾಗಿರುವ ಯುವಕರು ಆಧುನಿಕ ಉಪಕರಣಗಳನ್ನು ಬಳಸಿ ಕಸರತ್ತಿಗೆ ಜೋತುಬಿದ್ದಿದ್ದಾರೆ. ಹೀಗಾಗಿ ಆರೋಗ್ಯದ ಜತೆಗೆ ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ.ಕೆಂಪೇಗೌಡರ ಕಾಲದಿಂದಲೇ ಬೆಂಗಳೂರಿನಲ್ಲಿ ಕುಸ್ತಿ ಕ್ರೀಡೆಗೆ ಮಹತ್ವ ನೀಡಲಾಗಿತ್ತು. 1659ರವರೆಗೆ ಮೈಸೂರನ್ನು ಆಳಿದ ಅರಸು ಕಂಠೀರವ ಪ್ರಸಿದ್ಧ ಕುಸ್ತಿಪಟು ಎನಿಸಿದ್ದರು. ಅವರ ಪ್ರೋತ್ಸಾಹದಿಂದಾಗಿ ಮೈಸೂರು ಪ್ರಾಂತ್ಯದ ಪ್ರತಿ ಹಳ್ಳಿಗಳಲ್ಲಿನ ಹನುಮಾನ್ ಮಂದಿರಗಳ ಪಕ್ಕ ಗರಡಿ ಮನೆಗಳು ತಲೆ ಎತ್ತಿದ್ದವು.ಜಾತ್ರೆಗಳ ಸಮಯದಲ್ಲಿ ಜನರು ಅರಳಿಕಟ್ಟೆಗಳಲ್ಲಿ ಕುಳಿತು ಆ ಸಲ ಅಖಾಡಕ್ಕೆ ಇಳಿಯುವ ಜಟ್ಟಿಗಳ ಆಕರ್ಷಕ ಮೈಕಟ್ಟು, ಪಟ್ಟು, ಅವರ ಗುರುಗಳು, ಅಭ್ಯಾಸದ ರೀತಿ, ದಿನವೂ ಉಣ್ಣುವ ಆಹಾರ, ನಿತ್ಯದ ಅಭ್ಯಾಸ ಇತ್ಯಾದಿ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಕುಸ್ತಿಯ ಜನಪ್ರಿಯತೆ ಹಾಗಿತ್ತು. ಬೆಂಗಳೂರಿನ ತಿಮ್ಮರಾಯಪ್ಪ, ಅಣ್ಣಯ್ಯಪ್ಪ, ದೊಡ್ಡ ಮುನಿಯಪ್ಪ, ಪೈಲ್ವಾನ್ ದಾಸಪ್ಪ, ಬನಪ್ಪ, ಹುಚ್ಚಪ್ಪ ಎಂದರೆ ಸಾಕು ಕುಸ್ತಿಪ್ರಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ತಮ್ಮ ನೆಚ್ಚಿನ ಜಟ್ಟಿಗಳ ವೀರಾವೇಶವನ್ನು ಬಾಯ್ತುಂಬಾ ಕೊಂಡಾಡುತ್ತಿದ್ದರು. ಎದುರಾಳಿಗಳಂತೂ ಇವರ ನೋಟಕ್ಕೇ ಬೆಚ್ಚಿ ಬೀಳುತ್ತಿದ್ದರು.ಆಧುನಿಕತೆಯ ಭರಾಟೆಯಲ್ಲಿ ಇಂದು ಕುಸ್ತಿಪಟುಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಏನಿದ್ದರೂ ಸಿಕ್ಸ್‌ಪ್ಯಾಕ್, ವಿ-ಶೇಪ್‌ಗಳ ಯುವಕರ ದೇಹಗಳೇ ಆಕರ್ಷಣೆ.`ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಗರಡಿ ಮನೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 60ರಿಂದ 70ಕ್ಕೆ ಇಳಿದಿದೆ ಎನ್ನುತ್ತಾರೆ ಕುಂಜಣ್ಣ ಗರಡಿ ಮನೆಯ ಪೈಲ್ವಾನ್ ಜಯರಾಮ್. ತಾಂತ್ರಿಕ ಆವಿಷ್ಕಾರ, ಸಾಂಸ್ಕೃತಿಕ ಪಲ್ಲಟ ಗರಡಿ ಮನೆಗಳ ಮೇಲೂ ಗಾಢ ಪರಿಣಾಮ ಬೀರಿದೆ. ನಗರದಲ್ಲಿ ವಾಸಿಸುವ ಇಂದಿನ ಅದೆಷ್ಟೋ ಯುವಕರಿಗೆ ಗರಡಿ ಮನೆ ಎಂದರೆ ಗೊತ್ತೇ ಇಲ್ಲ. ಹಾಗೆಂದರೆ ಏನು ಎಂದು ಅವರು ಹುಬ್ಬೇರಿಸುತ್ತಾರೆ~ ಎಂದು ವಿಷಾದಿಸುತ್ತಾರೆ.ನೂರೊಂದು ಸಂಕಷ್ಟದ ನಡುವೆಯೂ ಆಧುನಿಕತೆಯೊಂದಿಗೆ ರಾಜಿ ಮಾಡಿಕೊಳ್ಳದೇ ತಮ್ಮ ಹಳೆಯ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಗರಡಿ ಮನೆಗಳು ಬೆಂಗಳೂರಿನಲ್ಲಿ ಇನ್ನೂ ಅಲ್ಲಲ್ಲಿ ಜೀವಂತವಾಗಿವೆ.ತಿಮ್ಮರಾಯಪ್ಪ ದೊಡ್ಡಗರಡಿ ಮನೆ


ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಈ ಗರಡಿ ಮನೆ ಗುರುಮಾನ್ ದತ್ತ ಅವರ ಕನಸಿನ ಕೂಸು. ಇವರ ನಂತರದ ದಿನಗಳಲ್ಲಿ ಇದು ನಗರದ ಪ್ರಸಿದ್ಧ ಜಟ್ಟಿಗಳೆನಿಸಿದ್ದ ತಿಮ್ಮರಾಯಪ್ಪನವರ ಸುಪರ್ದಿಯಲ್ಲಿತ್ತು. ಈಗ ಅವರ ಮೊಮ್ಮಗ, ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕುಸ್ತಿ ಪಟು ಪುರುಷೋತ್ತಮ್ ನಡೆಸಿಕೊಂಡು ಬರುತ್ತಿದ್ದಾರೆ. `ಗರಡಿ ಮನೆಯ ಬಗ್ಗೆ ಜನರಲ್ಲಿ ಹಿಂದಿದ್ದ ಗೌರವ ಇಂದು ಮರೆಯಾಗುತ್ತಿದೆ~ ಎನ್ನುತ್ತಾರೆ ಅವರು.`ನಮ್ಮಲ್ಲಿ ಸುಮಾರು 60ರಿಂದ 70 ಮಂದಿ ಕುಸ್ತಿ ಕಲಿಯಲು ಬರುತ್ತಾರೆ. ವೆಬ್‌ಸೈಟ್‌ಗಳಲ್ಲಿ ಗರಡಿ ಮನೆ ಕುರಿತ ಮಾಹಿತಿಯನ್ನು ನೋಡಿ ಇಲ್ಲಿ ಬರುವವರೇ ಹೆಚ್ಚು. ಪ್ರಾರಂಭದಲ್ಲಿ ಆಸಕ್ತಿಯಿಂದಲೇ ಕಸರತ್ತು ನಡೆಸುತ್ತಾರೆ. ಆದರೆ ಸ್ವಲ್ಪ ದಿನಗಳಲ್ಲೇ ಸಮಯದ ಅಭಾವ, ಕೆಲಸದ ಒತ್ತಡದ ಕಾರಣ ನೀಡಿ ನಿಲ್ಲಿಸಿಬಿಡುವವರೇ ಹೆಚ್ಚು~ ಎನ್ನುತ್ತಾರೆ.  `ಯುವಕರ ಈ ನಿರ್ಲಕ್ಷ್ಯಕ್ಕೆ ಪ್ರೋತ್ಸಾಹದ ಕೊರತೆಯೂ ಕಾರಣ. ಸಾಧನೆ ಮಾಡುವವರಿಗೆ ಸ್ಫೂರ್ತಿ ನೀಡುವವರಿದ್ದರೆ ಅವರಿಗೂ ಕಲಿಯಲು ಆಸಕ್ತಿ ಹುಟ್ಟುತ್ತದೆ. ಹಿಂದೆಲ್ಲ ವಾರಕ್ಕೊಮ್ಮೆ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು. ಸ್ಪರ್ಧಿಗಳು ಭರ್ಜರಿಯಾಗಿ ತಯಾರಾಗುತ್ತಿದ್ದರು. ಆದರೆ ಇಂದು ವರ್ಷಕ್ಕೊಮ್ಮೆ ಕುಸ್ತಿ ನಡೆಯುವುದೇ ಹೆಚ್ಚು ಎಂಬಂತಾಗಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕುಸ್ತಿ ನಡೆಯುವುದೇ ಕಡಿಮೆಯಾಗಿದೆ. ಹೀಗಾಗಿ ಗಂಡು ಕಲೆ ಎನ್ನಿಸಿಕೊಂಡಿರುವ ಇದನ್ನು ಕೇಳುವವರೇ ಇಲ್ಲವಾಗಿದೆ~ ಎಂಬುದು ಅವರ ಅಳಲು. ಹಿಂದೆ ಹರಿಯಾಣ, ಪಂಜಾಬ್, ಮಹಾರಾಷ್ಟ್ರದಿಂದ ಜಟ್ಟಿಗಳು ಬಂದು ನಮ್ಮ ಗರಡಿಯಲ್ಲಿ ನೆಲೆಸುತ್ತಿದ್ದರು. ಸ್ಪರ್ಧೆಗಳಲ್ಲಿ ಗೆದ್ದು ಕೈತುಂಬ ಹಣ ಸಂಪಾದಿಸಿ ಊರಿಗೆ ತೆರಳುತ್ತಿದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ.`ಗರಡಿ ಮನೆಯಲ್ಲಿ ಸಿಗುವ ಆನಂದ ಆಧುನಿಕ ಜಿಮ್‌ಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಇಲ್ಲೊಂದು ಬಗೆಯ ಆಯಸ್ಕಾಂತದ ಗುಣವಿದೆ. ನಿರಂತರವಾಗಿ ಇಲ್ಲಿ ಅಭ್ಯಾಸ ನಡೆಸಿದವರಿಗೆ ದಿನಕ್ಕೊಮ್ಮೆ ಬಾರದೇ ಹೋದರೆ ಕಸಿವಿಸಿ ಎನ್ನಿಸುತ್ತದೆ. ಘಂ ಎನ್ನುವ ಮಟ್ಟಿಯ (ಅರಿಶಿಣ, ಕುಂಕುಮ, ತುಪ್ಪ ಮಿಶ್ರಿತ ಮಣ್ಣು) ಘಮಲಿನಲ್ಲಿ ಮಿಂದೆದ್ದರೆ ಸಾಕು ಮನಸ್ಸಿಗೆ ಹೊಸ ಹುರುಪು ಬರುತ್ತದೆ. ಹಾಗೆ ಇದು ಚರ್ಮವ್ಯಾಧಿಯನ್ನೂ ದೂರ ಇಡುತ್ತದೆ~ ಎನ್ನುವುದು ಇವರ ಅಭಿಮತ.ಈಗಲೂ ವಯಸ್ಸಾದವರು ಬೆಳಗಿನ ಜಾವ ಬಂದು ಯುವಕರೊಂದಿಗೆ ತಮ್ಮ ಕೈಲಾದಷ್ಟು ಕಸರತ್ತು ನಡೆಸಿ ಹೋಗುತ್ತಾರೆ. ಮನಸ್ಸಿಗೆ ಬೇಸರವೆನ್ನಿಸಿದಾಗ ಇಲ್ಲಿ ಬಂದು ಕಸರತ್ತು ನಡೆಸಿದರೆ ಮನಸ್ಸಿನ ನೋವುಗಳೆಲ್ಲ ಕ್ಷಣಾರ್ಧದಲ್ಲಿ ಮರೆಯಾಗುತ್ತವೆ ಎನ್ನುತ್ತಾರೆ ಇವರು.ಬಳೇಗರಡಿ


ಸುಮಾರು ಮೂನ್ನೂರು ವರ್ಷಗಳ ಹಿಂದೆ ಮೈಸೂರು ಮಹಾರಾಜರ ಅರಮನೆಯಲ್ಲಿದ್ದ ಪೈಲ್ವಾನರು ಈ ಗರಡಿ ಮನೆಯನ್ನು ಪ್ರಾರಂಭಿಸಿದರು. ಒಂದು ಕಾಲದ ಜನಪ್ರಿಯ ಕುಸ್ತಿಪಟು, ಕರ್ನಾಟಕ ಒಲಿಂಪಿಕ್ಸ್‌ನಲ್ಲಿ ಸತತ ಐದು ಬಾರಿ ಕುಸ್ತಿಯಲ್ಲಿ ವಿಜಯಿಯಾಗಿದ್ದ ಎಚ್.ಸಿ ರೇವಣ್ಣ ಈಗ ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಜ್ಮೀರ್, ಪಂಜಾಬ್, ದೆಹಲಿ, ಮುಂಬೈ... ಹೀಗೆ ದೇಶದ ವಿವಿಧ ಭಾಗದಲ್ಲಿ ಇವರು ಪ್ರದರ್ಶನ ನೀಡಿದ್ದಾರೆ.ಎಚ್‌ಎಎಲ್‌ನಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಕುಸ್ತಿ ಮೇಲೆ ಅಗಾಧ ಪ್ರೇಮ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕುಸ್ತಿ ಕಲೆ ತನ್ನ ಮಹತ್ವ ಕಳೆದುಕೊಳ್ಳುತ್ತಿರುವುದರ ಕುರಿತು ಇವರಿಗೆ ಬಹಳಷ್ಟು ಬೇಸರವಿದೆ.ಬೆಳಗಾವಿ, ರಾಣೆಬೆನ್ನೂರು, ದಾವಣಗೆರೆ, ಚಿತ್ರದುರ್ಗದ ಕಡೆ ಆಗಾಗ ಕುಸ್ತಿ ಸ್ಪರ್ಧೆ ನಡೆಯುತ್ತಲೇ ಇರುತ್ತವೆ. ಹೀಗಾಗಿ ಈ ಕಲೆ ಅಲ್ಲಿ ಇನ್ನೂ ಜೀವಂತವಾಗಿದೆ. ಆದರೆ ಬೆಂಗಳೂರಿನಲ್ಲಿ ಪ್ರೋತ್ಸಾಹದ ಕೊರತೆಯಿರುವುದರಿಂದ ಯುವಕರು ಈ ಕಲೆಯ ಕುರಿತು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಕೂಡ ಕುಸ್ತಿ ಕಲೆಯ ಅಭಿವೃದ್ಧಿಗೆ ಯಾವ ಯೋಜನೆಯನ್ನೂ ಹಮ್ಮಿಕೊಂಡಿಲ್ಲ~ ಎಂದು ಅವರು ನೊಂದುಕೊಳ್ಳುತ್ತಾರೆ.ಈಗ ಕುಸ್ತಿ ಜತೆಗೆ ಮಲ್ಟಿ ಜಿಮ್ ಅನ್ನು ಆರಂಭಿಸಿದ್ದೇನೆ. ಆದರೆ ಇವೆರಡರಲ್ಲಿ ಯಾವುದು ಉತ್ತಮ ಎಂದು ಕೇಳಿದರೆ ನಾನು ಆಯ್ಕೆ ಮಾಡಿ ಕೊಳ್ಳುವುದು ಕುಸ್ತಿಯನ್ನೇ. ಆರೋಗ್ಯದ ದೃಷ್ಟಿಯಿಂದಲೂ ಕುಸ್ತಿ ಮಾಡುವುದು ಒಳ್ಳೆಯದು. ಇದು ದೇಹವನ್ನು ಲಘುವಾಗಿಸುವುದರ ಜತೆಗೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಕುಸ್ತಿಯ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.ಪೈಲ್ವಾನರು ಪೌಷ್ಟಿಕ ಆಹಾರ ಸೇವನೆಗೆ ವಿಶೇಷ ಮಹತ್ವ ನೀಡುತ್ತಾರೆ. ಇವರ ಮೆನುವಿನಲ್ಲಿ ಲೀಟರ್‌ಗಟ್ಟಲೆ ಬಾದಾಮಿ ಹಾಲು, ರಾಗಿಮುದ್ದೆ, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ, ತುಪ್ಪ ಸೇವನೆಗೆ ವಿಶೇಷ ಪ್ರಾಶಸ್ತ್ಯ. ಆದರೆ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಆಹಾರ ಸೇವನೆಯೂ ಕುಸ್ತಿಪಟುಗಳಿಗೆ ಸವಾಲಾಗಿದೆ ಎನ್ನುತ್ತಾರೆ ಇವರು.ಕುಂಜಣ್ಣ ಗರಡಿ

ನೂರು ವರ್ಷಗಳ ಹಿಂದೆ ಖ್ಯಾತ ಕುಸ್ತಿ ಪಟು ಕುಂಜಣ್ಣ ಇದನ್ನು ಆರಂಭಿಸಿದರು. ಈಗ ಇದರ ಹೊಣೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕುಸ್ತಿಪಟು ಜಯರಾಮ್ ನಡೆಸಿಕೊಂಡು ಬರುತ್ತಿದ್ದಾರೆ. `ನಮ್ಮಲ್ಲಿ 20ರಿಂದ 30 ಯುವಕರು ಬರುತ್ತಾರೆ. ಗರಡಿ ಮನೆಯಲ್ಲಿ ಹಿಂದಿದ್ದ ವೈಭವ ಈಗಿಲ್ಲ. ಆ ಕಾಲದಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಕಣ್ಣಿಗೆ ಮುದ ನೀಡುತ್ತಿತ್ತು. ಗರಡಿ ಮನೆಯೆಂದರೆ ಅಭಿಮಾನ ಗೌರವದ ಸಂಕೇತ ಎನಿಸಿತ್ತು.ಮೊದಲೆಲ್ಲ ಬೆಂಗಳೂರಿನಾದ್ಯಂತ ಹಲವಾರು ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಲೆಯನ್ನು ನಗರಗಳಲ್ಲಿ ಕೇಳುವವರೇ ಇಲ್ಲವಾಗಿದ್ದಾರೆ.ಬೆಂಗಳೂರು ಗ್ರಾಮಾಂತರದಲ್ಲಿ ಅಪರೂಪಕ್ಕೊಮ್ಮೆ ನಡೆಯುವ ಪ್ರದರ್ಶನಕ್ಕೆ ಸ್ಪರ್ಧಿಗಳನ್ನು ಕಳುಹಿಸುತ್ತೇವೆ. ಕುಸ್ತಿ ಪಟುಗಳ ಪರಿಕರಗಳು ಬೆಂಗಳೂರಿನಲ್ಲಿ ಸಿಗುವುದೇ ಕಷ್ಟವಾಗಿದೆ. ಜಟ್ಟಿಗಳು ಧರಿಸುವ ಹನುಮಾನ್ ಕಾಚಾ (ಲಂಗೋಟಿ)ಗೆ ವಿಶೇಷ ಪ್ರಾಧಾನ್ಯ ನೀಡಲಾಗುತ್ತದೆ. ದೇವರ ಮುಂದೆ ಈ ವಸ್ತ್ರವನ್ನಿಟ್ಟು ಪ್ರಾರ್ಥಿಸಿದ ನಂತರ ಇದನ್ನು ಅವರು ಧರಿಸುತ್ತಾರೆ.

ಆದರೆ ಇಂದು ಬೆಂಗಳೂರಿನಲ್ಲಿ ಲಂಗೋಟಿ ಹೊಲಿಯುವವರೇ ಇಲ್ಲವಾಗಿದ್ದಾರೆ. ಲಂಗೋಟಿಯನ್ನು ವಿನ್ಯಾಸವಾಗಿ ಹೊಲಿಯುವುದಕ್ಕೆ ಇವರಿಗೆ ಬರುವುದೇ ಇಲ್ಲ. ಹೀಗಾಗಿ ಇವುಗಳನ್ನು ಕೊಲ್ಲಾಪುರ, ದಾವಣಗೆರೆ ಗಳಲ್ಲಿಯೇ ಹೊಲಿಸಿಕೊಂಡು ಬರಬೇಕು. ಸೌಕರ್ಯಗಳ ಅಭಾವದಿಂದಾಗಿಯೂ ಕುಸ್ತಿ ಕಲೆ ಮರೆಯಾಗುವಂತಾಗಿದೆ~ ಎನ್ನುತ್ತಾರೆ ಇವರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.