ಶುಕ್ರವಾರ, ಜನವರಿ 24, 2020
20 °C

ಗರ್ಭ ಕೊರಳಿನ ಕ್ಯಾನ್ಸರ್ ಶೀಘ್ರ ಪತ್ತೆ: ಚಿಕಿತ್ಸೆಗೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರ್ಭ ಕೊರಳಿನ ಕ್ಯಾನ್ಸರ್ ವಾಸ್ತವವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಹುತೇಕ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಭಾರತದಲ್ಲಿ ಮಾತ್ರ ಇದರ ಚಿತ್ರಣ ತದ್ವಿರುದ್ಧವಾಗಿದೆ. ಜಾಗತಿಕವಾಗಿ ಪ್ರತಿ ವರ್ಷ ಪತ್ತೆಯಾಗುವ ಈ ಬಗೆಯ ಕ್ಯಾನ್ಸರ್‌ಗೆ ತುತ್ತಾಗುವವರ ಪೈಕಿ ನಮ್ಮ ದೇಶದವರೇ ಶೇ. 18 ರಿಂದ 24ರಷ್ಟಿದ್ದಾರೆ. ಅಂದರೆ ಸರಿಸುಮಾರು ಕಾಲು ಭಾಗದಷ್ಟು ಮಹಿಳೆಯರು ಭಾರತದವರೇ ಎನ್ನುವುದು ಆಘಾತಕಾರಿ ಸಂಗತಿ.ಆರಂಭದಲ್ಲೇ ಈ ಕ್ಯಾನ್ಸರ್‌ನ ಪತ್ತೆಗಾಗಿ ತಪಾಸಣೆ ಮಾಡಿಕೊಳ್ಳುವುದು, ಇದರ ಬಗ್ಗೆ ಅರಿತುಕೊಳ್ಳುವುದು ಹಾಗೂ ಜಾಗೃತಿ ಮೂಡಿಸುವುದು - ಇದನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ, ಈ ಕ್ಯಾನ್ಸರ್‌ನಿಂದ ಹೊರಬಂದು ಉತ್ತಮ ಜೀವನ ನಡೆಸಲು ವೈದ್ಯಕೀಯ ರಂಗದಲ್ಲಿರುವ ಕಾಂತ್ರಿಕಾರಿ ತಂತ್ರಜ್ಞಾನಗಳು ಸಹಕಾರಿಯಾಗಿರುವುದು ಎಲ್ಲಾ ರೋಗಿಗಳಿಗೆ  ಆಶಾಕಿರಣವಾಗಿದೆ.ಕ್ಯಾನ್ಸರ್‌ನ ಕಾರಣಗಳು

* ಮಾನವರಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಸಾಮಾನ್ಯ ಸೂಕ್ಷ್ಮ ರೋಗಾಣು (ವೈರಸ್) ಇದಾಗಿದೆ.

* ಲೈಂಗಿಕ ಸಂಪರ್ಕದಿಂದ ಇದು ಹರಡುತ್ತದೆ.

* ಕೆಲವೊಂದು ಸಂದರ್ಭಗಳಲ್ಲಿ ತನಗೆ ತಾನಾಗೇ ಸೋಂಕು ಕಡಿಮೆಯಾಗುತ್ತದೆ. ಅಂತಹವುಗಳಿಗೆ ಚಿಕಿತ್ಸೆಯ ಅಗತ್ಯವಿಲ್ಲ.

* ಶುಚಿತ್ವದ ಕೊರತೆ

* ಹಲವಾರು ಲೈಂಗಿಕ ಸಂಗಾತಿಗಳು

* ಚಿಕ್ಕವಯಸ್ಸಿನಲ್ಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು

* ಸ್ವಚ್ಛಂದ ಸಂಭೋಗಲಕ್ಷಣಗಳು

* ಯೋನಿಯಲ್ಲಿ ಅಸಹಜ ರಕ್ತಸ್ರಾವ

* ಋತುಸ್ರಾವದ ನಡುವೆ ಮೇಲಿಂದ ಮೇಲೆ ರಕ್ತಸ್ರಾವ.

* ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವ (ಸಂಭೋಗದ ನಂತರ)

* ಮುಟ್ಟು ನಿಂತ ಬಳಿಕ ರಕ್ತಸ್ರಾವ

* ಕೆಟ್ಟವಾಸನೆಯ ಸ್ರಾವ

* ಆಗಿಂದಾಗ್ಗೆ ಮೂತ್ರ ವಿಸರ್ಜನೆ

* ಸೊಂಟನೋವು ಅಥವಾ ಕೆಳ ಬೆನ್ನುನೋವು

ಜಾಗತಿಕವಾಗಿ ಪ್ರತಿ ವರ್ಷ ಪತ್ತೆಯಾಗುವ ಗರ್ಭ ಕೊರಳಿನ ಕ್ಯಾನ್ಸರ್‌ಗಳ  ಪೈಕಿ ಕಾಲುಭಾಗದಷ್ಟು ಭಾರತದಲ್ಲೇ ವರದಿಯಾಗುತ್ತಿವೆ. ವಾರ್ಷಿಕವಾಗಿ ಸುಮಾರು 74 ಸಾವಿರದಷ್ಟು ಭಾರತೀಯ ಮಹಿಳೆಯರು ಈ ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಗರ್ಭಕೋಶದಲ್ಲಿ ಉತ್ಪತ್ತಿಯಾಗುವ ಕೆಲವು ಕೋಶಗಳ (ಸೆಲ್) ಅಸಹಜ ಬೆಳವಣಿಗೆ ಈ ಕ್ಯಾನ್ಸರ್‌ಗೆ ಕಾರಣ ಎನ್ನಲಾಗುತ್ತದೆ.ಗರ್ಭಗೊರಳಿನ ಕ್ಯಾನ್ಸರ್ 35 ವರ್ಷ ಅದಕ್ಕೂ ಮೇಲ್ಪಟ್ಟ ಮಹಿಳೆಯರಲ್ಲಿ ಸಾಮಾನ್ಯ.

ಗರ್ಭ ಕೊರಳಿನ ಕ್ಯಾನ್ಸರ್‌ಗೆ ಹ್ಯೂಮನ್ ಪ್ಯಾಪ್ಪಿಲ್ಲೋಮಾ ವೈರಸ್  ಪ್ರಮುಖ ಕಾರಣ ಎನ್ನಲಾಗಿದೆ.

 

ಲೈಂಗಿಕವಾಗಿ ಮತ್ತು ಹೆಚ್ಚಾಗಿ ಯಾವುದೇ ಲಕ್ಷಣಗಳಿಲ್ಲದ ಸೋಂಕಿನ ರೂಪದಲ್ಲಿ ಇದು ಹರಡುತ್ತದೆ. ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಈ ಎಚ್‌ಪಿವಿಯಿಂದ ಸೋಂಕು ತಗಲಿದ್ದರೂ ಕೆಲವು ಸಂದರ್ಭಗಳಲ್ಲಿ ಅದು ಸ್ಥಿರವಾಗಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಉಲ್ಬಣಗೊಳ್ಳುತ್ತದೆ. ಇದಲ್ಲದೆ, ಇನ್ನು ಕೆಲವು ಅಂಶಗಳು ಮಹಿಳೆಯರ ಗರ್ಭಕೋಶದಲ್ಲಿ ಅನಿಯಮಿತವಾಗಿ ಆಗುವ ಕೋಶಗಳಲ್ಲಿನ ಬದಲಾವಣೆಯ ನಂತರದ ಹಂತದಲ್ಲಿ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ.ಚಿಕ್ಕವಯಸ್ಸಿನಲ್ಲೇ ಮೊದಲ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ, ಹೆಚ್ಚು ಮಕ್ಕಳನ್ನು ಹೆರುವುದು, ತಂಬಾಕಿನ ಬಳಕೆ, ದೀರ್ಘಕಾಲಿಕ ಹಾರ್ಮೋನ್ ಕಾಂಟ್ರಾಸೆಪ್ಟ್‌ಗಳ ಬಳಕೆ ಮತ್ತು ಕುಂದಿರುವ ರೋಗ ನಿರೋಧ ವ್ಯವಸ್ಥೆ, ಅದರಲ್ಲೂ ಹೆಚ್‌ಐವಿ ಸೋಂಕಿಗೆ ತುತ್ತಾಗಿರುವುದು ಸಹ ಈ ಕಾರಣಗಳಲ್ಲಿ ಒಂದಾಗಿರುತ್ತದೆ.ನಿಯಂತ್ರಣ ಹೇಗೆ?

ಗರ್ಭಕೊರಳಿನ ಕ್ಯಾನ್ಸರ್‌ಗೆ ಕಾರಣವಾಗಿರುವ ಎಚ್‌ಪಿವಿ ಪೈಕಿ ವಿವಿಧ ರೀತಿಯ ಶೇ. 70ರಷ್ಟು ಸೋಂಕನ್ನು ಪರಿಣಾಮಕಾರಿ ಲಸಿಕೆಗಳ ಮೂಲಕ ನಿಯಂತ್ರಿಸಬಹುದು. ಈ ಬಗೆಯ ಲಸಿಕೆಗಳನ್ನು ಪ್ರಧಾನವಾಗಿ 9 ರಿಂದ 26 ವರ್ಷದೊಳಗಿನವರಿಗೆ ಶಿಫಾರಸು ಮಾಡಲಾಗುತ್ತದೆ.

 

ಈ ಲಸಿಕೆಗಳನ್ನು ಪಡೆದುಕೊಳ್ಳುವುದರಿಂದ ಯೋನಿ ಕ್ಯಾನ್ಸರ್ ಮತ್ತು ಜನನಾಂಗ ನಾಳದ ಕ್ಯಾನ್ಸರ್‌ನಿಂದಲೂ ರಕ್ಷಣೆ ಪಡೆದುಕೊಳ್ಳಬಹುದು. ಹಾಗೆಯೇ, ಈ ಲಸಿಕೆಗಳು ಎಲ್ಲಾ ರೀತಿಯ  ಎಚ್‌ಪಿವಿಗಳಿಗೆ ನಿರೋಧಕವಾಗಿರುವುದಿಲ್ಲ. ಜೊತೆಗೆ, ಲೈಂಗಿಕ ಸಂಪರ್ಕದಿಂದ ಹರಡುವ ಇತರ ಸೋಂಕಿನಿಂದಲೂ ಪಸರಿಸುವ ಸಾಧ್ಯತೆಗಳಿರುತ್ತವೆ.ಹೀಗಾಗಿ ಲಸಿಕೆಗಳನ್ನು ಪಡೆದುಕೊಂಡ ಬಳಿಕವೂ ನಿಯಮಿತವಾಗಿ ಗರ್ಭಕೊರಳಿನ ಕ್ಯಾನ್ಸರ್‌ನ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಈಗಾಗಲೇ ಎಚ್‌ಪಿವಿ ಸೋಂಕಿನಿಂದ ಬಳಲುತ್ತಿದ್ದು, ಅವುಗಳು ಕ್ಯಾನ್ಸರ್‌ಗೆ ಬದಲಾವಣೆಗೊಳ್ಳುತ್ತಿದ್ದರೆ, ಅಂತಹ ವೇಳೆ ಈ ಲಸಿಕೆಗಳು ಪರಿಣಾಮಕಾರಿ ಎನಿಸುವುದಿಲ್ಲ.ಮೂವತ್ತು ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಗರ್ಭಕೊರಳಿನ ಕ್ಯಾನ್ಸರ್‌ನ ಪರೀಕ್ಷೆಗೆ ಒಳಾಗುವುದು ಉತ್ತಮ. ಸಾಮಾನ್ಯವಾಗಿ ಈ ಬಗೆಯ ಕ್ಯಾನ್ಸರ್‌ನ ಪತ್ತೆಗಾಗಿ ಪ್ಯಾಪ್ ಸ್ಮೀಯರ್ ಟೆಸ್ಟ್ (Pap smear test), ಎಚ್‌ಪಿವಿ ಡಿಎನ್‌ಎ ಟೆಸ್ಟ್ (ಹೆಚ್ಚು ಅಪಾಯಕಾರಿ ಸೂಕ್ಷ್ನ ರೋಗಾಣುಗಳಿದ್ದ ಸಂದರ್ಭದಲ್ಲಿ) ಮತ್ತು ನಿರ್ದಿಷ್ಟ ಭಾಗಕ್ಕೆ ಮಾಡುವ ಬಯಾಪ್ಸಿಗಳು ಸೇರಿವೆ.ಸುರಕ್ಷಿತ ಲೈಂಗಿಕ ಸಂಪರ್ಕ, ಸೂಕ್ತ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು, ಧೂಮಪಾನ ತ್ಯಜಿಸುವುದು, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಮತ್ತು ಹೆಚ್ಚು ಹಸಿರಿನಿಂದ ಕೂಡಿರುವ ತರಕಾರಿ ಮತ್ತು ಹಣ್ಣುಗಳು ಹಾಗೂ ಆರೋಗ್ಯಕರವಾದ ಮತ್ತು ಕೊಬ್ಬಿನಿಂದ ಕೂಡಿರದ ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

(ಲೇಖಕರು ಕನ್ಸಲ್ಟೆಂಟ್ , ಸರ್ಜಿಕಲ್ ಆಂಕಾಲಜಿಸ್ಟ್) 

ಪ್ರತಿಕ್ರಿಯಿಸಿ (+)