ಗುರುವಾರ , ಮೇ 13, 2021
18 °C

ಗಲ್ಲಿಗೇರಿಸುವವರು ಎಲ್ಲಿದ್ದಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲ್ಲು ಶಿಕ್ಷೆಯ ಪರ-ವಿರೋಧದ ಚರ್ಚೆಯು (ಪ್ರ.ವಾ. 24) ಮನೋಜ್ಞವಾಗಿತ್ತು. ಈಗಾಗಲೇ ಮುನ್ನೂರಕ್ಕೂ ಹೆಚ್ಚು ಅಪರಾಧಿಗಳು ಭಾರತದ ವಿವಿಧ ಜೈಲುಗಳಲ್ಲಿ ಗಲ್ಲುಶಿಕ್ಷೆಗಾಗಿ, ಹಲವಾರು ವರ್ಷಗಳಿಂದ ಕಾದಿದ್ದಾರೆ. ಆದರೆ ಇವರನ್ನು ಗಲ್ಲಿಗೇರಿಸುವ ಫಾಶೀದಾರರೇ (ಹಂತಕರು) ಇಲ್ಲವೆಂಬುದು ವಿಚಿತ್ರವೆನಿಸಿದರೂ ಸತ್ಯ ಸಂಗತಿ!ಆಗಸ್ಟ್ 2004 ರಲ್ಲಿ ಧನಂಜಯ ಚಟರ್ಜಿ ಎಂಬ ಅಪರಾಧಿಯನ್ನು ಬಲಾತ್ಕಾರ ಮತ್ತು ಕೊಲೆಯ ಆರೋಪದಲ್ಲಿ ಗಲ್ಲಿಗೇರಿಸಲಾಯಿತು. ಅದು ಸದ್ಯಕ್ಕೆ ಸ್ವತಂತ್ರ ಭಾರತದಲ್ಲಿ ಜಾರಿಯಾದ ಕೊನೆಯ ಹಾಗೂ 55ನೆಯ ಗಲ್ಲು ಶಿಕ್ಷೆ. ಗಲ್ಲಿಗೇರಿಸುವ ಕೆಲಸ ಹಿಂಸೆ ಮತ್ತು ಕ್ರೌರ್ಯದ ಪ್ರತೀಕವೆಂಬ ಪಾಪ ಪ್ರಜ್ಞೆಯ ಕಾರಣದಿಂದ ಈ ಕೆಲಸಕ್ಕೆ ಬರಲು ಈಗ ಯಾರೂ ಒಪ್ಪುತ್ತಿಲ್ಲ. ತಲೆತಲಾಂತರದಿಂದ ಈ ಕೆಲಸವನ್ನು ನಿರ್ವಹಿಸುತ್ತಿದ್ದವರೂ ಮರಣ ಹೊಂದಿ, ಅವರ ಮಕ್ಕಳು ಪಾಪಭೀತಿಯಿಂದ ಈ ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ. ಹೀಗಾಗಿ ದೇಶದ ಜೈಲುಗಳಲ್ಲಿ ಈ ಸರ್ಕಾರಿ ಹುದ್ದೆಗಳು, ಸಂಬಳದೊಂದಿಗೆ, ವಿಶೇಷ ಭತ್ಯೆ, ಸವಲತ್ತು, ನಿವೃತ್ತಿಯ ನಿರ್ಬಂಧವೇ ಇಲ್ಲದಿದ್ದರೂ ಕಳೆದ ಏಳು ವರ್ಷಗಳಿಂದ ಖಾಲಿ ಬಿದ್ದಿವೆ!ಗಲ್ಲು ಶಿಕ್ಷೆ ನೀಡಲೇ ಬೇಕೆಂದು ನ್ಯಾಯಾಲಯ ನಿರ್ಧರಿಸಿದರೂ ಗಲ್ಲಿಗೇರಿಸುವವರಿಲ್ಲದ ಕಾರಣ, ಶಿಕ್ಷೆಯ ವಿಧಾನವನ್ನು ಬದಲಿಸಿಕೊಳ್ಳುವ ಅಥವಾ ಹೊರ ದೇಶದಿಂದ ಪಾಶೀದಾರರನ್ನು ಕರೆಸಿ ಶಿಕ್ಷೆ ನೀಡಬೇಕಾದ ಗಂಭೀರ ಪರಿಸ್ಥಿತಿಯನ್ನು ಈಗ ದೇಶ ಎದುರಿಸುತ್ತಿದೆ. ಕ್ರೂರಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವುದು ಸುಲಭವಿರಬಹುದು. ಆದರೆ ಗಲ್ಲಿಗೇರಿಸುವವನು ಮನುಷ್ಯನಾಗಿರುವುದರಿಂದ ಅವನ ಸಂವೇದನೆಗೂ ಬೆಲೆ ಕೊಟ್ಟು ಈ ವಿಷಯ ನಿರ್ಧರಿಸುವುದು ಮುಖ್ಯವಾಗುತ್ತದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.