ಭಾನುವಾರ, ಮೇ 9, 2021
24 °C

ಗಾಂಧಿ ಜಯಂತಿಗೆ ಪರಿಷ್ಕೃತ ಪಂಚಾಯತ್ ರಾಜ್ ಕಾಯ್ದೆ

ಎನ್‌. ಉದಯಕುಮಾರ್‌ Updated:

ಅಕ್ಷರ ಗಾತ್ರ : | |

ಸಾಂವಿಧಾನಿಕ ಮಾನ್ಯತೆಯೊಂದಿಗೆ ಅನುಷ್ಠಾನಕ್ಕೆ ಬಂದ ಪಂಚಾಯತ್ ರಾಜ್ ಕಾಯ್ದೆಗೆ 20 ವರ್ಷ ತುಂಬುವ ಹೊತ್ತಿಗೆ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕಾಯ್ದೆಯ ಪುನರ್ ಪರಿಶೀಲನೆಗೆ ಮುಂದಾಗಿದೆ. ಇದಕ್ಕಾಗಿ ರೂಪುಗೊಂಡಿರುವ ಸಮಿತಿಯ ನೇತೃತ್ವ ಮಾಜಿ ಸ್ಪೀಕರ್ ಹಾಗೂ ಹಿರಿಯ ರಾಜಕಾರಣಿ ಕೆ.ಆರ್. ರಮೇಶ್‌ಕುಮಾರ್ ಅವರದ್ದು. ಸಮಿತಿ ಪರಿಗಣಿಸಿರುವ ಹೊಸ ಬದಲಾವಣೆಗಳ ಸ್ವರೂಪದ ಕುರಿತಂತೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ನಡೆದ ಕುತೂಹಲಕಾರಿ ರಾಜಕೀಯ ಸಂಘರ್ಷವನ್ನೂ ತೆರೆದಿಟ್ಟಿದ್ದಾರೆ.*ರಾಜ್ಯ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅನಿಸಿದ್ದೇಕೆ?

–ಎಂಬತ್ತರ ದಶಕದಲ್ಲಿ ಜಾರಿಗೆ ಬಂದ  ಪಂಚಾಯತ್‌ ರಾಜ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಕ್ರಮೇಣ ಅದರ ಶಕ್ತಿ ಕುಂದುತ್ತಾ ಬಂದಿದೆ. ಎಂ.ವೈ. ಘೋರ್ಪಡೆ ಅವರು ಕಾಯ್ದೆಗೆ ಶಕ್ತಿ ತುಂಬಲು ಪ್ರಯತ್ನಿಸಿದರೂ ಅದು ಪರಿಣಾಮಕಾರಿ ಆಗಲಿಲ್ಲ. ಈಗಂತೂ ಹೆಸರಿಗೆ ಮಾತ್ರ ಎಂಬಂತಾಗಿದೆ.

ನಮ್ಮ ಸರ್ಕಾರ ಗ್ರಾಮಸಭೆ ನಡೆಸುವುದನ್ನು ಕಡ್ಡಾಯಗೊಳಿಸಿ, ಅದನ್ನು ನಡೆಸದೇ ಇದ್ದರೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಂಬಂಧಪಟ್ಟ ಸದಸ್ಯರನ್ನು ಅನರ್ಹಗೊಳಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿತು. ಆದರೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಆಗಲಿಲ್ಲ.ಈ ನಿಟ್ಟಿನಲ್ಲಿ ಆರಂಭವಾದ ಚಿಂತನೆ ಪುನರಾವಲೋಕನದ ಅಗತ್ಯವನ್ನು ಮನಗಂಡಿತು. ತೇಪೆ ಹಚ್ಚುವ ಬದಲು ಸಮಗ್ರವಾಗಿ ಪುನರ್‌ ಪರಿಶೀಲನೆ ಮಾಡುವುದೇ ಒಳಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌  ಸಚಿವ ಎಚ್‌.ಕೆ. ಪಾಟೀಲರು, ನನ್ನ ನೇತೃತ್ವದಲ್ಲಿ ಸಮಿತಿ ರಚಿಸಿದರು.*ಸಮಿತಿ ಈಗ ಏನೆಲ್ಲ ಕೆಲಸ ಮಾಡಿದೆ?

–ಪಂಚಾಯತ್‌ ರಾಜ್‌ ವ್ಯವಸ್ಥೆ ಕುರಿತ ಬೇರೆ ಬೇರೆ ಕಾರಣಗಳಿಗಾಗಿ ಗಮನ ಸೆಳೆದ ಆರು ರಾಜ್ಯಗಳನ್ನು ಗುರುತಿಸಿದ್ದೇವೆ. ಸಮಿತಿಯ ಸದಸ್ಯರು  ಮೂರು ತಂಡಗಳಾಗಿ ಆ  ರಾಜ್ಯಗಳಿಗೆ (ಪ್ರತೀ ತಂಡ ಎರಡು ರಾಜ್ಯಕ್ಕೆ)  ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಬಂದಿದ್ದಾರೆ.ಈಗಾಗಲೇ ಅರ್ಧಕ್ಕಿಂತ ಹೆಚ್ಚು ಕೆಲಸ ಮುಗಿಸಿದ್ದೇವೆ. ಸಂಸತ್‌ ಚುನಾವಣೆ ಅಡ್ಡಿ ಬರುತ್ತಿದೆ. ಈ ತಿಂಗಳ 24ಕ್ಕೆ ಸಭೆ ಇಟ್ಟುಕೊಂಡಿದ್ದೇವೆ. ಆ ಸಭೆಯಲ್ಲಿ ಸ್ಥೂಲ ಕಲ್ಪನೆ ಒಡಮೂಡಬಹುದು.ನಮ್ಮ ಆಲೋಚನೆಗಳು ಸ್ಪಷ್ಟ ಸ್ವರೂಪ ಪಡೆದ ಬಳಿಕ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಎಲ್ಲಾ    ರಾಜಕೀಯ ಪಕ್ಷಗಳಿಗೆ ಕರಡು ಪ್ರತಿ ಕೊಟ್ಟು ಆ ಪಕ್ಷಗಳ ಸಲಹೆಗಳನ್ನು ಪಡೆಯುತ್ತೇವೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪಂಚಾಯತ್‌ ರಾಜ್‌ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪರಿಣತರ ಸಲಹೆಯನ್ನೂ ಪಡೆಯುತ್ತೇವೆ. ಈ ಸಲಹೆಗಳ ರಚನಾತ್ಮಕ ಅಂಶಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಅಂತಿಮ  ಕರಡು ರೂಪಿಸುತ್ತೇವೆ. ಅದನ್ನು ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಪ್ರಕಟಸಿ, ಆಕ್ಷೇಪಗಳನ್ನು ಆಹ್ವಾನಿಸುತ್ತೇವೆ. ಈ ಸಲದ ಗಾಂಧಿ ಜಯಂತಿ (ಅ.2) ಹೊತ್ತಿಗೆ  ಹೊಸ ಕಾಯ್ದೆಯನ್ನು ತರಬೇಕು ಎಂಬುದು ನಮ್ಮ ಆಶಯ.*ಏನೆಲ್ಲ ಬದಲಾವಣೆ ಮಾಡಬೇಕು ಅಂತ ಅನ್ನಿಸಿದೆ?

–ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಬೇಕು ಎಂಬುದು ನಮ್ಮ ಅಂತರಾಳದ ಬಯಕೆ. ಅದಕ್ಕೆ ಎಲ್ಲರ ಸಹಕಾರ, ಮನ್ನಣೆ ದೊರೆತರೆ ಜಾರಿ ಹಾದಿ ಸುಲಭ.  ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನೇರವಾಗಿ ನಡೆಸಬೇಕು. ಇಡೀ ಚುನಾವಣೆಯ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಬೇಕು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ನಿಗದಿ ಮಾಡಬೇಕು. ಈ ಮೀಸಲಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರಬೇಕು ಮತ್ತು ವೈಜ್ಞಾನಿಕವಾಗಿರಬೇಕು. ಇದರಲ್ಲಿ ಸರ್ಕಾರ ಇಲ್ಲವೇ ಜಿಲ್ಲಾಧಿಕಾರಿ ಮೂಗು ತೂರಿಸಲು ಅವಕಾಶ ಇರಬಾರದು.*ಅಧ್ಯಕ್ಷ, ಉಪಾಧ್ಯಕ್ಷರ ಅವಧಿಗೆ ಸಂಬಂಧಿಸಿದಂತೆ ಏನಾದರೂ ಬದಲಾವಣೆ ತರುವ ಉದ್ದೇಶ ಇದೆಯೇ?

–ಖಂಡಿತ ಇದೆ. ಅಧ್ಯಕ್ಷ, ಉಪಾಧ್ಯಕ್ಷರನ್ನು  ಆರು ತಿಂಗಳಿಗೆ, ಮೂರು ತಿಂಗಳಿಗೆ ಬದಲಿಸುವ ಕಣ್ಣಾಮುಚ್ಚಾಲೆ ಇರಬಾರದು. ಅವರು ಪೂರ್ಣ ಅವಧಿಗೆ ಇರಬೇಕು.  ಚುನಾವಣೆ ಘೋಷಣೆ ಆಗುವ ಮೂರು ತಿಂಗಳ ಮೊದಲೇ ಇಂತಹ ಸ್ಥಾನ ಈ ಪ್ರವರ್ಗಕ್ಕೆ ಮೀಸಲು ಎಂದು  ಪ್ರಕಟಿಸಬೇಕು.*ಆವರ್ತಕ ಮೀಸಲಾತಿಯನ್ನು ಒಂದು ಅವಧಿಗೆ ಸೀಮಿತಗೊಳಿಸಿದರೆ ನಾಯಕತ್ವ ಬೆಳೆಯುವುದೇ?

–ಆವರ್ತಕ ಮೀಸಲಾತಿ ಸತತ ಎರಡು ಅವಧಿಗೆ ಇರಬೇಕು. ಹಾಗಿದ್ದರೆ ಮಾತ್ರ ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಸದಸ್ಯರಿಗೆ ಜವಾಬ್ದಾರಿ ಇರುವುದಿಲ್ಲ. ಪಂಚಾಯ್ತಿ ವ್ಯವಸ್ಥೆಗೆ  ಗೌರವ ಉಳಿಯುವುದಿಲ್ಲ.*ಚುನಾವಣಾ ತಕರಾರು ಅರ್ಜಿಗಳು ಜನಪ್ರತಿನಿಧಿಯ ಅವಧಿ ಮುಗಿದರೂ ಇತ್ಯರ್ಥ ಆಗುವುದಿಲ್ಲ...

–ಇಂತಹ ವಿಳಂಬ ತಪ್ಪಿಸಲೇಬೇಕು. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಕಾಲಮಿತಿಯೊಳಗೆ ತಕರಾರು ಅರ್ಜಿಗಳು ಇತ್ಯರ್ಥಗೊಳ್ಳುವಂತೆ ಮಾಡಬೇಕು. ಇದಕ್ಕಾಗಿ ಪ್ರತಿ ಕಂದಾಯ ವಿಭಾಗದಲ್ಲಿ  ಸಿವಿಲ್  ಜಡ್ಜ್‌ ದರ್ಜೆಯ ನ್ಯಾಯಾಧೀಶರನ್ನು ನೇಮಿಸಬೇಕು. ಚುನಾವಣೆ ಮುಗಿದ ತಿಂಗಳೊಳಗೆ ತಕರಾರು ಅರ್ಜಿ ಸಲ್ಲಿಸಬೇಕು. ಅಲ್ಲಿಂದ ಆಚೆಗೆ ಮೂರು ತಿಂಗಳ ಒಳಗೆ ಅರ್ಜಿ ಇತ್ಯರ್ಥ ಆಗಬೇಕು. ಮೇಲ್ಮನವಿಗೆ ಸಂಬಂಧಿಸಿದಂತೆ ಸಮಿತಿ ಏನನ್ನೂ ಹೇಳುವುದಿಲ್ಲ.*ಪಂಚಾಯ್ತಿ ಚುನಾವಣೆಗಳಿಗೂ ವ್ಯಾಪಿಸಿರುವ ಮದ್ಯದ ಪ್ರಭಾವ ನಿಯಂತ್ರಿಸುವುದು ಹೇಗೆ?

–ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದ ದಿವಸ ಮದ್ಯ ತಯಾರಿಕಾ ಘಟಕಗಳ ಕೀಲಿ ಜಿಲ್ಲಾಧಿಕಾರಿಗಳ ಕೈಸೇರಬೇಕು. ಎಲ್ಲಾ ಮದ್ಯದ  ಅಂಗಡಿಗಳು ಆ ದಿವಸ ಬಂದ್‌ ಆದರೆ ಮತ ಎಣಿಕೆ ಮುಗಿದ ನಂತರ ಪುನಃ ಆರಂಭ ಆಗುವಂತಿರಬೇಕು.ಪ್ರಚಾರಕ್ಕೂ ಒಂದು ವ್ಯವಸ್ಥಿತ ರೂಪ ಕೊಡುವ ಉದ್ದೇಶ ಇದೆ. ಒಂದು  ಪಂಚಾಯ್ತಿ ವ್ಯಾಪ್ತಿ ಒಳಗೆ ನಿರ್ದಿಷ್ಟ ಸಂಖ್ಯೆಯ ಬಹಿರಂಗ ಸಭೆಗಳು ನಡೆಯಬೇಕು. ದಿನ, ಸ್ಥಳ ಇತ್ಯಾದಿಗಳನ್ನು ಆಯೋಗವೇ ನಿಗದಿ ಮಾಡಬೇಕು. ವೇಳಾಪಟ್ಟಿ ಪ್ರಕಟವಾದ ದಿನದಿಂದ ಮತ ಎಣಿಕೆ ಮುಗಿಯುವ ಅವಧಿ 15 ದಿನಕ್ಕಿಂತ ಹೆಚ್ಚು ಇರಬಾರದು. ಇದರ ಜೊತೆಗೆ ಕಣಕ್ಕೆ ಇಳಿಯುವ ಅಭ್ಯರ್ಥಿಗಳಿಗೆ ತರಬೇತಿ ಕಡ್ಡಾಯ ಮಾಡುವ ಉದ್ದೇಶ ಇದೆ.*ಯಾವ ಬಗೆಯ ತರಬೇತಿ?

–ಪ್ರತೀ ಜಿಲ್ಲೆಯಲ್ಲಿ ಒಂದು ಪಂಚಾಯತ್‌ ರಾಜ್‌ ತರಬೇತಿ ಸಂಸ್ಥೆ ತೆರೆಯಬೇಕು. ಅದು, ಚುನಾವಣಾ  ಆಯೋಗದ  ಅಡಿಯಲ್ಲೇ ಕೆಲಸ ಮಾಡಬೇಕು. ರಾಜಕೀಯ ಪಕ್ಷಗಳು, ಹುರಿಯಾಳುಗಳ ಪಟ್ಟಿ ಕಳುಹಿಸಿ ತರಬೇತಿಗೆ ನೋಂದಾಯಿಸಿಕೊಳ್ಳಬೇಕು. ಸ್ವತಂತ್ರವಾಗಿ ಸ್ಪರ್ಧಿಸಬಯಸುವವರೂ ವೈಯಕ್ತಿಕ ನೆಲೆಯಲ್ಲಿ ಬಂದು ನೋಂದಾಯಿಸಿಕೊಳ್ಳಬೇಕು. ಅವರಿಗೆ ಕಿರು ಅವಧಿಯ ತರಬೇತಿ ನೀಡಲಾಗುವುದು. ಚುನಾವಣೆಯ ನೀತಿ–ನಿಯಮ, ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು. ಚರ್ಚೆಯ ಸ್ವರೂಪ, ಜವಾಬ್ದಾರಿಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. ಪಂಚಾಯ್ತಿ ಸಭೆಗಳ ಕಲಾಪಕ್ಕೆ ಹೆಚ್ಚು ಘನತೆ ತರುವುದು ಹಾಗೂ ಗುಣಮಟ್ಟ ಹೆಚ್ಚಿಸುವುದು ಇದರ ಉದ್ದೇಶ. ತರಬೇತಿ ಸಂಸ್ಥೆಯ ಸರ್ಟಿಫಿಕೇಟ್‌ ಇಲ್ಲದವರ ನಾಮಪತ್ರ ತಿರಸ್ಕೃತಗೊಳಿಸಬೇಕು ಎಂಬ ಸಲಹೆ ನೀಡಲಾಗುವುದು.ನಮ್ಮ ಗ್ರಾಮೀಣ ಭಾಗದಲ್ಲಿ ಗುಲಾಮಿ ಮನೋಭಾವ ಮತ್ತು ಪಾಳೆಗಾರಿಕೆ ವ್ಯವಸ್ಥೆ ಕಣ್ಣಿಗೆ ಕಾಣದಂತೆ ಈಗಲೂ ಅಸ್ತಿತ್ವ ಉಳಿಸಿಕೊಂಡಿವೆ. ಅದನ್ನು ತೊಡೆದುಹಾಕಿದರೆ ಮಾತ್ರ ಬದಲಾವಣೆ ಸಾಧ್ಯ. ನಮ್ಮ ಪಯಣ ಈ ದಿಕ್ಕಿನಲ್ಲಿ ಸಾಗಿದೆ.*ಪಂಚಾಯ್ತಿ ವ್ಯವಸ್ಥೆಯಲ್ಲಿ ಅಧಿಕಾರವೆಲ್ಲಾ ಅಧಿಕಾರಿಗಳ ಬಳಿ ಕೇಂದ್ರೀಕೃತ ಆಗಿದೆಯಲ್ಲ...

–ನಿಜ. ಅದನ್ನು ತಪ್ಪಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇರಬೇಕು. ಮೂರು ತಿಂಗಳಿಗೊಮ್ಮೆ ಆಂತರಿಕ ಲೆಕ್ಕಪರಿಶೋಧನೆ ಆಗಬೇಕು. ಅಪರಾ ತಪರಾ ಆದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲೂ ಅವಕಾಶ ಇರಬೇಕು. ಜವಾಬ್ದಾರಿಗಳನ್ನು ಕೊಡಬೇಕು. ಅದಕ್ಕೆ ತಕ್ಕಂತೆ  ನಿರ್ಬಂಧಗಳೂ ಇರಬೇಕು. ಪಂಚಾಯ್ತಿ ಸಂಸ್ಥೆಗಳ ಸಹಯೋಗದಲ್ಲಿ  ಸಹಕಾರ ಸಂಸ್ಥೆಗಳೂ  ಕೆಲಸ ನಿರ್ವಹಿಸಬೇಕು. ಏಕ ಗವಾಕ್ಷಿ ವ್ಯವಸ್ಥೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗ್ರಾಮೀಣ ಜನರಿಗೆ ಸಾಲ ಸಿಗಬೇಕು. ‘ಮೀಟರ್ ಬಡ್ಡಿ’ ದಂಧೆಯ ಕಪಿಮುಷ್ಟಿಯಿಂದ ಜನರನ್ನು ಬಿಡುಗಡೆ ಮಾಡುವುದು ಅನಿವಾರ್ಯ.*ಅವಿಶ್ವಾಸ ಎಂಬುದು ಆಟ ಆಗಿದೆಯಲ್ಲ...

–ವಿಕೇಂದ್ರೀಕರಣ ವ್ಯವಸ್ಥೆಯ ಅಧಿಕಾರ ಹಂಚಿಕೆಯು ಅತ್ಯಂತ ವಿಕಾರ ಸ್ವರೂಪ ಪಡೆದಿದೆ. ಆಡಳಿತ ವಿಕೇಂದ್ರೀಕರಣದ ಆಶಯಕ್ಕೆ ವಿರೋಧಿಗಳೇ ಹೆಚ್ಚು. ಈ ವ್ಯವಸ್ಥೆ ಬಗ್ಗೆ ಜನರಿಗೆ ಅಸಹ್ಯ ಭಾವನೆ ಬರಬೇಕು. ಸಂಸ್ಥೆಗಳು ನಗಣ್ಯ ಆಗಬೇಕು. ನಿರ್ಣಾಯಕ ಪಾತ್ರ ವಹಿಸಬಾರದು ಎಂದೇ ಕೆಲವರು ತೆರೆಮರೆಯಲ್ಲಿ ನಿಂತು ನಿಶ್ಶಕ್ತಗೊಳಿಸುವ ಪ್ರಯತ್ನ ಮಾಡುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷರ ಸೀಮಿತ ಅವಧಿ  ಮತ್ತು ಅಸಮರ್ಪಕ ಮೀಸಲು ನಿಯಮದಿಂದ ಸದಸ್ಯರಿಗೆ ಉತ್ತರದಾಯಿತ್ವದ ಭಯ ಇಲ್ಲವಾಗಿದೆ. ಹಣ ದುರುಪಯೋಗದ ಬಗ್ಗೆ ಅಧಿಕಾರಿಗಳೇ  ಹೇಳಿಕೊಡುತ್ತಾರೆ. ಇಂತಹ ತೊಡರುಗಳನ್ನು ನಿವಾರಿಸಬೇಕು. ಇಷ್ಟಾಗಿಯೂ ಮಹಿಳೆಯರು, ಪರಿಶಿಷ್ಟರು ಮತ್ತು ಹಿಂದುಳಿದವರ ಪಾಲ್ಗೊಳ್ಳುವಿಕೆಯನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳು ಹೆಚ್ಚಿಸಿವೆ. ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ದೇವರಾಜ ಅರಸು ಅವರು ಪ್ರಯಾಸಪಟ್ಟು ಮಾಡಿದ ಪ್ರಯೋಗವನ್ನು ಹೆಗಡೆ ಅವರು ಸಾಂಸ್ಥಿಕವಾಗಿ ಅನಿವಾರ್ಯಗೊಳಿಸಿದ್ದಾರೆ.

*ಹಲವು ಲಾಬಿಗಳನ್ನು ಮಣಿಸಿದ ನಜೀರ್ಬರಹಗಳಿಗೆ ಸ್ವಾಗತ

ಪಂಚಾಯತ್ ರಾಜ್ ಕ್ಷೇತ್ರದ ಕುರಿತ ಆಸಕ್ತಿ ಇರುವ ಎಲ್ಲರೂ ‘ಪಂಚಾಯತ್ ರಾಜ್–20’ ವಿಶೇಷ ಪುಟ­ದಲ್ಲಿ ನಡೆಯುವ ಚರ್ಚೆ, ವಿಶ್ಲೇಷಣೆಗಳಲ್ಲಿ ಭಾಗಿ­ಯಾಗ­ಬಹು­ದು. ನೀವು ಏನನ್ನು ಬರೆಯ­ಬಯಸು­ತ್ತೀರಿ ಎಂಬುದರ ಕುರಿತಂತೆ ಈ ಕೆಳಗಿನ ಇ–ಮೇಲ್ ಅಥವಾ ಅಂಚೆ ವಿಳಾಸಕ್ಕೆ ಒಂದು ಸಂಕ್ಷಿಪ್ತ ಪ್ರಸ್ತಾವನೆಯನ್ನು ಕಳುಹಿಸಿದರೆ ನಮ್ಮ ಸಂಪಾದಕೀಯ ಬಳಗದ ಸದಸ್ಯರು ನಿಮ್ಮನ್ನು ಸಂಪರ್ಕಿ­ಸುತ್ತಾರೆ. ನಿಮ್ಮ ಪ್ರಸ್ತಾವನೆಗಳನ್ನು ಕಳುಹಿ­ಸ­­ಬೇಕಾದವಿಳಾಸ: ಸಂಪಾದಕರು, ಪಂಚಾಯತ್ ರಾಜ್-20, ಪ್ರಜಾವಾಣಿ, ನಂ.75, ಮಹಾತ್ಮಾ­ಗಾಂಧಿ ರಸ್ತೆ, ಬೆಂಗಳೂರು–1

ಇ–ಮೇಲ್: panchayathraj20@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.