ಭಾನುವಾರ, ಜೂನ್ 20, 2021
20 °C

ಗಿರಿಜನರ ಸಹಕಾರದಿಂದ ಬೆಂಕಿ ಹತೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ವಿರಾಜಪೇಟೆ ತಾಲ್ಲೂಕು ನಾಗರಹೊಳೆ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಈಚೆಗೆ ತಗುಲಿರುವ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಗಿರಿಜನರ ಪಾತ್ರ ಪ್ರಮುಖವಾಗಿದೆ~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ ಹೇಳಿದರು.ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ 4ನೇ ವಲಯಕ್ಕೆ ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬೇಸಿಗೆಯಲ್ಲಿ ಅಗ್ನಿ ಆಕಸ್ಮಿಕ ಸಹಜ. ಆದರೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ 600 ಹೆಕ್ಟೇರ್ ಅರಣ್ಯ ನಾಶವಾಗಿದೆ. ಜಿಪಿಎಸ್‌ನಿಂದ ಬೆಂಕಿ ಬಿದ್ದಿರುವ ಚಿತ್ರಗಳು ಲಭ್ಯವಾಗಿದ್ದು, 4-5 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು~ ಎಂದು ಹೇಳಿದರು.`ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಗಿರಿಜನರು, ಕಾಡು ಕುರುಬರು ಅನೇಕ ವರ್ಷಗಳಿಂದ ಕಾಡಿ ನೊಂದಿಗೆ ಒಡನಾಟ ಹೊಂದಿದ್ದಾರೆ. ಕಾಡು ನಮ್ಮದು ಎಂಬ ಪ್ರೀತಿ ಇಟ್ಟುಕೊಂಡಿದ್ದಾರೆ. ಸ್ಥಳೀಯರ ನೆರವು, ಅನುಭವದಿಂದ ಬೆಂಕಿ ಎರಡೇ ದಿನಗಳಲ್ಲಿ ಹತೋಟಿಗೆ ಬಂದಿದೆ. ಇಲಾಖೆ ಸಿಬ್ಬಂದಿ, ಅಧಿಕಾರಿಗಳೂ ಸಾಕಷ್ಟು ಶ್ರಮಿಸಿದ್ದಾರೆ~ ಎಂದರು.`ನಾಗರಹೊಳೆ ಅರಣ್ಯದ 7 ವಲಯಗಳಲ್ಲಿ 400 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮಕೈಗೊಂಡಿದ್ದರೂ ಇಂತಹ ಘಟನೆ ನಡೆದಿರುವುದು ಆಶ್ಚರ್ಯ ಉಂಟುಮಾಡಿದೆ. ಬಿದಿರು 32 ವರ್ಷಗಳ ಆಯುಸ್ಸನ್ನು ಪೂರ್ಣಗೊಳಿಸಿ ಹೂ ಬಿಡುವ ಹಂತದಲ್ಲಿದೆ. ಇದರಿಂದಾಗಿ ಬೆಂಕಿಗೆ ಆಹುತಿ ಯಾಗಿದೆ. ಮುಂದಿನ 5 ವರ್ಷಗಳಲ್ಲಿ ಬಿದಿರನ್ನು ಬೆಳೆಸುವ ಮೂಲಕ ಅರಣ್ಯ ಪ್ರದೇಶವನ್ನು ಮತ್ತೆ ಯಥಾಸ್ಥಿತಿಗೆ ತರಲಾಗುವುದು~ ಎಂದು ತಿಳಿಸಿದರು.`ನಾಗರಹೊಳೆ ಹುಲಿ ರಕ್ಷಿತಾರಣ್ಯ ಪ್ರದೇಶ ವಾದ್ದರಿಂದ ಒಣಗಿದ ಬಿದಿರು, ಮರಗಳನ್ನು ಸಾಗಿಸುವ ಹಾಗಿಲ್ಲ. ಜೀವ ವೈವಿಧ್ಯ ದೃಷ್ಟಿಯಿಂದ ಈ ಕ್ರಮ ಅನುಸರಿಸಲಾಗುತ್ತಿದೆ. ಫೆಬ್ರುವರಿಯಲ್ಲಿ ಮಳೆ ಆಗಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದಾಗ್ಯೂ, ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದು ಹೇಳಿದರು.ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ಬಿ.ಜೆ.ಹೊಸಮಠ್ ಮಾತನಾಡಿ, `ಭಾನುವಾರ ಮಧ್ಯಾಹ್ನ 2.15 ಗಂಟೆಗೆ ಬೆಂಕಿ ಬಿದ್ದಿದೆ. ಅಂದಿನಿಂದ ಇಲ್ಲಿಯವರೆಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಬೆಂಕಿ ನಂದಿಸಲು ಯತ್ನಿಸಲಾಗಿದೆ. ಬಿದಿರು ಒಣಗಿರುವ ಪ್ರದೇಶದಲ್ಲಿ ಮಾತ್ರ ಬೆಂಕಿ ಬಿದ್ದಿದೆ. ಗಿರಿಜನರ ಸಹಕಾರದಿಂದ ಸಕಾಲಕ್ಕೆ ಬೆಂಕಿ ನಂದಿಸಲಾಗಿದೆ. ಕಾರ್ಮಿಕರ ಕಲ್ಯಾಣಕ್ಕೆ 25 ಲಕ್ಷ ರೂಪಾಯಿ ಮೀಸಲಾಗಿ ಇಡಲಾಗಿದೆ. ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಇಲಾಖೆ ಸಜ್ಜಾಗಿದೆ~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.