ಗುಜರಾತ್ ಮಾದರಿಗೆ ನ್ಯಾನ್ಸಿ ಶ್ಲಾಘನೆ

ಗಾಂಧಿನಗರ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ ಎಂಬ ಒಂಬತ್ತು ವರ್ಷಗಳ ಬಹಿಷ್ಕಾರವನ್ನು ಕೊನೆಗೊಳಿಸಿ ಭಾರತದಲ್ಲಿ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್ ಗುರುವಾರ ಅವರನ್ನು ಭೇಟಿಯಾದರು.
ಲೋಕಸಭಾ ಚುನಾವಣೆಯ ನಂತರ ಭಾರತದ ಜನರು ಆಯ್ಕೆ ಮಾಡುವ ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಪೊವೆಲ್ ಹೇಳಿದರು. ಚುನಾವಣೆ ನಂತರ ಒಂದು ವೇಳೆ ಮೋದಿ ಅವರೇ ಪ್ರಧಾನಿಯಾದರೂ ಅವರೊಂದಿಗೆ ವ್ಯವಹಾರ ನಡೆಸುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಅವರು ನೀಡಿದರು.
ಮೋದಿ ಅವರೊಂದಿಗೆ ಸುಮಾರು ಒಂದು ತಾಸು ನಡೆದ ಮಾತುಕತೆಯಲ್ಲಿ ಆಡಳಿತದ ‘ಗುಜರಾತ್ ಮಾದರಿ’ ಯನ್ನು ಪೊವೆಲ್ ಶ್ಲಾಘಿಸಿದರು ಎಂದು ತಿಳಿದು ಬಂದಿದೆ. ಈ ಮಾದರಿಯನ್ನು ಜಗತ್ತಿನ ಇತರ ಪ್ರದೇಶಗಳಲ್ಲಿಯೂ ಅನುಕರಿಸ ಬಹುದು. ಗುಜರಾತ್ನಲ್ಲಿ ಅತ್ಯುತ್ತಮವಾದ ಹೂಡಿಕೆ ವಾತಾವರಣ ಇದೆ ಎಂದು 20 ವರ್ಷಗಳ ನಂತರ ಆ ರಾಜ್ಯಕ್ಕೆ ಭೇಟಿ ನೀಡಿದ ಪೊವೆಲ್ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ದಶಕಗಳಲ್ಲಿ ಗುಜರಾತ್ ರಾಜ್ಯದ ಅಭಿವೃದ್ಧಿಯು ಅತೀವ ಮೆಚ್ಚುಗೆಗೆ ಪಾತ್ರವಾಗುವಂತಹುದು ಎಂದು ಪೋವೆಲ್ ಅಭಿಪ್ರಾಯಪಟ್ಟರು.
ಭೇಟಿಯ ಸಂದರ್ಭದಲ್ಲಿ ಮೋದಿ ಅವರು ದೇವಯಾನಿ ಖೋಬ್ರಾಗಡೆ ಪ್ರಕರಣವನ್ನು ಪ್ರಸ್ತಾಪಿಸಿದ್ದು, ಅದನ್ನು ತ್ವರಿತವಾಗಿ ವಿಲೇವಾರಿ ಮಾಡುವ ಭರವಸೆಯನ್ನು ಪೊವೆಲ್ ನೀಡಿದ್ದಾರೆ.
ಯಾರದೇ ಪರ ವಹಿಸುವುದಿಲ್ಲ: ‘ಮುಂಬರುವ ಸಾರ್ವತ್ರಿಕ ಚುನಾವಣೆಯ ಬಗೆಗಿನ ಚರ್ಚೆಗಾಗಿ ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಹಿರಿಯ ನಾಯಕರನ್ನು ಅಮೆರಿಕ ರಾಯಭಾರ ಕಚೇರಿ ಭೇಟಿಯಾಗುತ್ತಿದೆ. ಅದರ ಭಾಗವಾಗಿ ಮೋದಿ ಅವರನ್ನು ಪೊವೆಲ್ ಭೇಟಿ ಮಾಡಿದ್ದಾರೆ’ ಎಂದು ಅಮೆರಿಕ ಹೇಳಿಕೆ ನೀಡಿದೆ. ಭಾರತದ ಲೋಕಸಭಾ ಚುನಾವಣೆಯಲ್ಲಿ ಅಮೆರಿಕ ಯಾವುದೇ ಪಕ್ಷದ ಪರ ವಹಿಸುವುದಿಲ್ಲ. ಪೊವೆಲ್ ಅವರು ಮೋದಿ ಅವರನ್ನು ಭೇಟಿಯಾಗಿರುವುದು ಅದರ ಸೂಚನೆಯೂ ಅಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಜೆನ್ ಸಾಕಿ ಹೇಳಿದ್ದಾರೆ.
ಈ ಭೇಟಿಯ ಮೂಲಕ ಮೋದಿ ಅವರ ರಾಜಕೀಯ ಮಹತ್ವಕ್ಕೆ ಅಮೆರಿಕ ಮನ್ನಣೆ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2002ರ ಗುಜರಾತ್ ಗಲಭೆ ಕಾರಣದಿಂದ 2005ರಲ್ಲಿ ಅಮೆರಿಕ ಮೋದಿ ಅವರ ವೀಸಾವನ್ನು ರದ್ದುಪಡಿಸಿತ್ತು. ಕಳೆದ ಹಲವು ವರ್ಷಗಳಲ್ಲಿ ಅಮೆರಿಕದ ಐರೋಪ್ಯ ಮಿತ್ರರಾಷ್ಟ್ರಗಳ ಪ್ರತಿನಿಧಿಗಳು ಮೋದಿಯನ್ನು ಭೇಟಿಯಾಗಿದ್ದರು. ಇದೇ ಮೊದಲ ಬಾರಿ ರಾಯಭಾರಿ ಮಟ್ಟದ ಅಧಿಕಾರಿಯೊಬ್ಬರು ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಮಾಹಿತಿ ವಿನಿಮಯಕ್ಕೆ ರಾಯಭಾರಿಗಳು ಸ್ವತಂತ್ರರು
ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್ ನಡುವಿನ ಭೇಟಿಗೆ ಮಹತ್ವ ನೀಡದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ‘ಭಾರತವನ್ನು ಚೆನ್ನಾಗಿ ಅರಿಯಲು ಯಾವುದೇ ದೇಶದ ರಾಯಭಾರಿ ಯಾರೊಂದಿಗಾದರೂ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸ್ವತಂತ್ರರು’ ಎಂದಿದ್ದಾರೆ. ಮೋದಿ ಅವರ ಕುರಿತು ಯಾವ ನಿಲುವು ತಾಳಬೇಕು ಎನ್ನುವುದು ಅಮೆರಿಕಕ್ಕೆ ಬಿಟ್ಟದ್ದು ಎಂದು ಖುರ್ಷಿದ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.