ಶನಿವಾರ, ಮೇ 15, 2021
23 °C

ಗುಡ್ ಬೈ ಗಣೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡ್ ಬೈ ಗಣೇಶ

ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಿದ ಗಣಪನನ್ನು ಮೊನ್ನೆ ಭಾನುವಾರ ನೀರಿಗೆ ಬಿಡುವ ಸಂಭ್ರಮ. ಹಾಡು ನರ್ತನ, ಜನಪದ ಕುಣಿತ, ಬ್ಯಾಂಡ್ ಮೆರವಣಿಗೆ ಮಧ್ಯೆ ನಗರದ ವಿವಿಧ ಕೆರೆಗಳಲ್ಲಿ ಸುಗಮವಾಗಿ ವಿಸರ್ಜನೆ ನಡೆಯಿತು.ಮನೆ- ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳನ್ನು 5, 7ನೇ ದಿನವೇ ನೀರಿಗೆ ಬಿಟ್ಟರೆ ಗಲ್ಲಿ ಗಲ್ಲಿಗಳು, ರಸ್ತೆಗಳಲ್ಲಿ ಪ್ರತಿಷ್ಠಾಪನೆಗೊಂಡ ಭಾರಿ ಗಾತ್ರದ ಗಣಪನಿಗೆ 11ನೇ ದಿನದಂದೇ ಜಲ ಯೋಗ. ಬಹುಶಃ ಪ್ರತಿಷ್ಠಾಪನೆ ಕಾಲಕ್ಕೆ ನಡೆಯುವಷ್ಟೇ ಅದ್ಧೂರಿಯಾಗಿರುತ್ತವೆ ವಿಸರ್ಜನೆಯ ಮೆರವಣಿಗೆಗಳು.ಭಾನುವಾರ ಸಂಜೆಯಿಂದ ನಗರದ ಬಹುತೇಕ ಕಡೆ ಪ್ರಾರಂಭವಾದ ಜಡಿ ಮಳೆ ರಾತ್ರಿ ಬಹು ಹೊತ್ತಿನ ತನಕವೂ ಮುಂದುವರಿಯಿತು. ಆದರೂ ಮೆರವಣಿಗೆಕಾರರ ಉತ್ಸಾಹಕ್ಕೇನೂ ಭಂಗ ಬರಲಿಲ್ಲ.

 

ತಮ್ಮ ತಮ್ಮ ಶಕ್ತ್ಯಾನುಸಾರ, ಗಣೇಶನ ಭಾರ ಗಾತ್ರಕ್ಕೆ ತಕ್ಕಂತೆ ಟೆಂಪೊ, ಆಟೊಗಳಲ್ಲಿ ಸುರಿವ ಮಳೆಯಲ್ಲೇ ಮೆರವಣಿಗೆ ಮಾಡಿದರು. ತಾವು ತೊಯ್ದು ತೊಪ್ಪೆಯಾದರೂ ಗಣೇಶನನ್ನು ಮಾತ್ರ ಜೋಪಾನವಾಗಿ ನೋಡಿಕೊಂಡರು.ಏಕೆಂದರೆ ಇವರಲ್ಲಿ ಹೆಚ್ಚಿನವರು ಯುವಕರು, ಸಹಜವಾಗೇ ಉತ್ಸಾಹಿಗಳು.

ಇನ್ನೊಂದು ವಿಶೇಷ ಎಂದರೆ ಪ್ರತಿ ವರ್ಷ 4.5 ಲಕ್ಷ  ಗಣೇಶಮೂರ್ತಿಗಳು ಬೆಂಗಳೂರು ನಗರ ಪ್ರದೇಶ ಒಂದರಲ್ಲೇ ವಿಸರ್ಜನೆಯಾಗುತ್ತವೆ.ಈ ವರ್ಷ ಇದುವರೆಗೆ ಸುಮಾರು 3.5 ಲಕ್ಷ ಮೂರ್ತಿಗಳನ್ನು ನೀರಿಗೆ ಬಿಡಲಾಗಿದೆ. ಹಲಸೂರು, ಸ್ಯಾಂಕಿ ಮತ್ತು ಯಡಿಯೂರು ಕೆರೆಗಳಲ್ಲಿ ರಾಜ್ಯೋತ್ಸವದ ತನಕವೂ ಗಣೇಶ ವಿಸರ್ಜನೆ ನಡೆಯುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.ನಗರದಲ್ಲಿ ಗಣೇಶ ವಿಸರ್ಜನೆಯ ಸಂಭ್ರಮದ ಬಿಸಿ ತಟ್ಟುವುದು ವಾಹನ ಸಂಚಾರಕ್ಕೆ. ಗಂಟೆಗಟ್ಟಲೆ ಬೀದಿ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಯುವಕರು ಇಡೀ ರಸ್ತೆಯನ್ನೇ ಆಕ್ರಮಿಸುವುದೇ ಇದಕ್ಕೆ ಕಾರಣ.ವಿಸರ್ಜನೆಗೂ ಮೊದಲು ಗಣೇಶನಿಗೆ ಹೂವು ಹಣ್ಣಿನ ಅಲಂಕಾರ. ವಾಹನದಲ್ಲಿ ಕುಳ್ಳಿರಿಸಿದ ಮೇಲೆ ಡೊಳ್ಳು, ನಗಾರಿ, ಜಾನಪದ ತಂಡಗಳ ನೃತ್ಯ ವೈಭವ ಒಂದೆಡೆಯಾದರೆ. ಮತ್ತೊಂದೆಡೆ ಪಟಾಕಿಗಳ ಸದ್ದು. ಡೊಳ್ಳು ತಮಟೆಗಳ ತಾಳಕ್ಕೆ ಯುವಕರ ನರ್ತನ.

 

ಈ ಎಲ್ಲಾ ಸಂಭ್ರಮದೊಂದಿಗೆ `ಗಣಪತಿ ಬಪ್ಪ ಮೋರಯಾ~, `ಗಣೇಶ ಬಂದ ಕಾಯಿ ಕಡುಬು ತಿಂದ, ಚಿಕ್ಕೆರೆಲಿ ಬಿದ್ದ ದೊಡ್ಡಕೆರೆಲಿ ಎದ್ದ~ ಹೀಗೆ ಮುಗಿಲು ಮುಟ್ಟುವಂಥ ಘೋಷಣೆಗಳು.ನಗರ ಪ್ರದೇಶದ ವ್ಯಾಪ್ತಿ ಬೆಳೆದಂತೆ ಇದ್ದ ಕೆರೆಗಳೆಲ್ಲಾ ಬಡಾವಣೆ, ಐಟಿ- ಬಿಟಿ, ಮಾಲ್‌ಗಳಾಗಿ ರೂಪ ತಾಳಿವೆ. ಇದರ ನಡುವೆಯೇ ಈ ಬಾರಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಗೆ ಸುಮಾರು 26 ಕೆರೆಗಳಲ್ಲಿ ವ್ಯವಸ್ಥೆ ಕಲ್ಪಿಸಿತ್ತು. ಇದಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕ ಗಾತ್ರದ ಗಣಪತಿ ವಿಸರ್ಜನೆಗೆ ಸಂಚಾರಿ ಜಲಾಗಾರದ ಏರ್ಪಾಟು ಮಾಡಿತ್ತು.ಗಣೇಶಮೂರ್ತಿ ಪ್ರತಿಷ್ಠಾಪನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ವಿನಾ ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ಲಕ್ಷಾಂತರ ಮೂರ್ತಿಗಳ ವಿಸರ್ಜನೆಗೆ ಸ್ಥಳಾವಕಾಶವಾದರೂ ಎಲ್ಲಿ ಎಂಬ ಪ್ರಶ್ನೆ ಮೂಡುವುದು ಸಹಜ. ಮಾಲಿನ್ಯ, ಹಬ್ಬದ ಸಂಭ್ರಮ ಇವೆರಡರ ನಡುವೆ ಸಮತೋಲನ ಅತ್ಯಗತ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.