ಸೋಮವಾರ, ಜನವರಿ 27, 2020
26 °C

ಗುಣಮಟ್ಟದ ಶಿಕ್ಷಣದಿಂದ ಉತ್ತಮ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ಉತ್ತಮ ಭವಿಷ್ಯ ಸಾಧ್ಯ. ಈ ನಿಟ್ಟಿನಲ್ಲಿ ದೇವಾಂಗ ಸಂಘ ವಿದ್ಯಾ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದು ನಗರ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಮೇಶ್‌ ಹೇಳಿದರು.ನಗರದಲ್ಲಿ ಸೋಮವಾರ ನಡೆದ ದೇವಾಂಗ ಸಂಘ ವಿದ್ಯಾ ಸಂಸ್ಥೆಗಳ 34ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಗುಣಮಟ್ಟದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು  ಹಾಗೂ ಪೋಷಕರು ಅಂತಹ ಶಿಕ್ಷಣ ಸಂಸ್ಥೆಗಳನ್ನು ಹುಡುಕಿಕೊಂಡು ಬರುತ್ತಾರೆ ಎಂದು ಅವರು ತಿಳಿಸಿದರು.ಸಂಘದ ಅಧ್ಯಕ್ಷ ಸ.ಸೂರ್ಯ­ನಾರಾಯಣ ಮಾತನಾಡಿ, ವಿದ್ಯಾರ್ಥಿ­ಗಳಿಗೆ ಧನ ಸಹಾಯ ಮಾಡುವುದು ತೀರ್ಥ ಕ್ಷೇತ್ರಗಳನ್ನು ಸುತ್ತಾಡಿ ಪಡೆವ ಪುಣ್ಯಕ್ಕಿಂತ ಹೆಚ್ಚು. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪ್ರೋತ್ಸಾಹ ಇದ್ದರೆ ಸಂಸ್ಥೆಯಲ್ಲಿ ಕಲಿಯುವ ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸಲು ಸಾಧ್ಯ ಎಂದು ಹೇಳಿದರು.ಸಂಘದ ಗೌರವ ಕಾರ್ಯದರ್ಶಿ ಟಿ.ಭಾಸ್ಕರ್‌ ಮಾತನಾಡಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ಆರಂಭಿಸಲಾದ ಈ ಶಾಲೆ ಇಂದು ಯಾವುದೇ ಪ್ರತಿಷ್ಠಿತ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಬೆಳೆದಿದೆ. ಪೋಷಕರು ಆಗಾಗ ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆಯ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದರು.2012–13ನೇ ಸಾಲಿನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಅತಿ ಹೆಚ್ಚು ಅಂಕ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಏಳನೇ ತರಗತಿಯಲ್ಲಿ ಶೇ 99 ಅಂಕ ಗಳಿಸಿದ ವಿದ್ಯಾರ್ಥಿ ಮನೋಜ್‌ಗೆ ‘ಇನ್‌ಸ್ಪಯರ್ ಅವಾರ್ಡ್‌’ ಪ್ರದಾನ ಮಾಡಲಾಯಿತು.

ಪ್ರತಿಕ್ರಿಯಿಸಿ (+)