ಸೋಮವಾರ, ಮೇ 17, 2021
31 °C

ಗುಣಾತ್ಮಕ ಕೆಲಸ: ಎನ್‌ಜಿಒಗಳಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

~ಮನೆಯಂಗಳದಲ್ಲಿ ಮಾತುಕತೆ~ಬೆಂಗಳೂರು:
`ಸ್ವಯಂಸೇವಾ ಸಂಸ್ಥೆಗಳು ಸರ್ಕಾರಕ್ಕೆ ಮಾದರಿಯಾಗುವಂತಹ ಗುಣಾತ್ಮಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಕಡಿಮೆ ವೆಚ್ಚ ಹಾಗೂ ಮೌಲ್ಯಯುತವಾದ ರೀತಿಯಲ್ಲಿ ಮಾಡಿ ತೋರಿಸಬೇಕು~ ಎಂದು ಸಮಾಜ ಸೇವಾಕರ್ತ ಜಿ.ಎಸ್. ಜಯದೇವ ಶನಿವಾರ ಇಲ್ಲಿ ಸಲಹೆ ಮಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ಭವನದ `ನಯನ~ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ~ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.`ಸ್ವಯಂಸೇವಾ ಸಂಸ್ಥೆಗಳು ಇಂದು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. ಇದರಿಂದ ಒಳ್ಳೆಯ ಸಂಸ್ಥೆಗಳ್ಯಾವುವು ಹಾಗೂ ಕೆಟ್ಟ ಸಂಸ್ಥೆಗಳ್ಯಾವುವು ಎಂಬ ಬಗ್ಗೆ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ, ಯಾವುದೇ ಸ್ವಯಂಸೇವಾ ಸಂಸ್ಥೆಗಳು ಸರ್ಕಾರ ಮಾಡುವಂತಹ ಬೃಹತ್ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಬದಲಿಗೆ ಸರ್ಕಾರ ಮಾಡದಂತಹ ಗುಣಾತ್ಮಕ ಕೆಲಸಗಳನ್ನು ಮಾಡಿ ತೋರಿಸಬೇಕು~ ಎಂದು ಹೇಳಿದರು.`ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ 1978ರಲ್ಲಿ ಮೊದಲ ಬಾರಿಗೆ ತೆರಳಿದ್ದಾಗ ಹಾಡಿಯೊಂದರಲ್ಲಿ ಸೋಲಿಗರ ಮಹಿಳೆಯರು ತಮ್ಮ ಬಳಿಯಿದ್ದ ಒಂದೇ ಒಂದು ಸೀರೆಯನ್ನು ಒಗೆದು ಒಣಗಲು ಬೇಲಿಯ ಮೇಲೆ ಹಾಕಿ, ಬೆತ್ತಲೆಯಾಗಿ ಪೊದೆಗಳಲ್ಲಿ ಅಡಗಿ ಕುಳಿತದ್ದನ್ನು ಕಂಡ ನನಗೆ ಆ ಜನಾಂಗಕ್ಕೆ ಏನಾದರೂ ಮಾಡಬೇಕೆಂದೆನಿಸಿತು.ಸೋಲಿಗರ ಅಸಹನೀಯವಾದ ಬದುಕು ಕೂಡ ನನ್ನನ್ನು ಸಮಾಜ ಸೇವೆಯತ್ತ ಮುಖಮಾಡಲು ಪ್ರೇರೇಪಿಸಿತು. ಶಿಕ್ಷಣ ಮನುಷ್ಯನ ರೂಪುರೇಖೆಗಳನ್ನು ನಿರ್ಧರಿಸುತ್ತದೆ ಎಂಬುದನ್ನು ಅರಿತು ನಂತರ ಗಿರಿಜನ ಮಕ್ಕಳಿಗಾಗಿ ಶಾಲೆ ಹಾಗೂ ಅನಾಥ ಮಕ್ಕಳಿಗಾಗಿ ಆಶ್ರಮ ಪ್ರಾರಂಭಿಸಿದೆ. ಸೋಲಿಗರ ಮಕ್ಕಳ ಪರಿಸರದಲ್ಲಿಯೇ ನಾನು ಬಹಳಷ್ಟು ಜ್ಞಾನ ಸಂಪಾದಿಸಿದ್ದೇನೆ~ ಎಂದು ಹೇಳಿದರು.`ಪ್ರೀತಿ, ಸ್ವೀಕಾರ ಮನೋಭಾವ ಹಾಗೂ ಇದು ನನ್ನ ಮನೆ ಎಂಬ ಭಾವನೆಯೊಂದಿಗೆ ಗಿರಿಜನ ಮಕ್ಕಳನ್ನು ಸೆಳೆಯಲು ಪ್ರಯತ್ನಿಸಿದೆ. ಯಾವುದೇ ಪರಿಕರ ಅಥವಾ ವಸ್ತುಗಳನ್ನು ನೀಡಿ ಮನುಷ್ಯನ ಮನಸ್ಸನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. 10ರಿಂದ 12 ವರ್ಷದೊಳಗೇ ವ್ಯಕ್ತಿತ್ವ ವಿಕಸನಗೊಳ್ಳುವುದರಿಂದ ಆ ಹಂತದಲ್ಲಿಯೇ ವ್ಯಕ್ತಿತ್ವದಲ್ಲಿ ಮೂಲಭೂತ ಬದಲಾವಣೆ ತರಲು ಪ್ರಯತ್ನಿಸಿದೆ. ಪರಿಣಾಮ, ಅನೇಕ ಸೋಲಿಗ ಮಕ್ಕಳು ಇಂದು ಭವಿಷ್ಯದ ದಾರಿ ಕಂಡುಕೊಳ್ಳಲು ಸಾಧ್ಯವಾಗಿದೆ~ ಎಂದು ಹೆಮ್ಮೆಯಿಂದ ಹೇಳಿಕೊಂಡರು.`ಮಕ್ಕಳ ಮನಸ್ಸಿನಲ್ಲಿ ಶಿಸ್ತು ಹಾಗೂ ಹೊಣೆಗಾರಿಕೆ ಮನೋಭಾವದ ಜತೆಗೆ, ಶಿಸ್ತನ್ನು ಬೆಳೆಸಬೇಕಾಗಿದೆ. ಯಾವುದೇ ಪರಿಸ್ಥಿತಿಗೆ ಬೇರೆಯವರನ್ನು ದೂರುವ ಬದಲು ಅದನ್ನು ಸಮರ್ಥವಾಗಿ ಎದುರಿಸುವಂತಹ ಮನೋಭೂಮಿಕೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ~ ಎಂದು ಅವರು ಸಲಹೆ ಮಾಡಿದರು.`ನನ್ನ ತಂದೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಹೆಸರನ್ನು ಎಂದಿಗೂ ಬಳಸಿಕೊಂಡಿಲ್ಲ. ದುರ್ಬಳಕೆಯೂ ಮಾಡಿಕೊಂಡಿಲ್ಲ. ಆದರೆ, ನಾನು ಜಿ.ಎಸ್. ಶಿವರುದ್ರಪ್ಪನವರ ಪುತ್ರ ಎಂಬ ಕಾರಣಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಬೇಗ ಕೆಲಸ ಕಾರ್ಯಗಳಾಗುತ್ತಿದ್ದವು. ಪರಿಸರಕ್ಕೆ ಸ್ಪಂದಿಸುವ ಸಂವೇದನಾಶೀಲತೆ ನನ್ನಲ್ಲಿದ್ದುದರಿಂದ ಮಾನವೀಯತೆ ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು. ವೈಜ್ಞಾನಿಕ ಮನಸ್ಸು ಹಾಗೂ ಸ್ಪಂದಿಸುವ ಜೀವಂತಿಕೆ ಕೂಡ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು~ ಎಂದು ಹೇಳಿದರು.`ವಿಶ್ವದಲ್ಲಿಯೇ ಅತಿ ಹೆಚ್ಚು ಮಕ್ಕಳ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಶೇ 42ರಷ್ಟು ಮಕ್ಕಳಿದ್ದಾರೆ. ಬೆಂಗಳೂರಿನಲ್ಲಿಯೇ 50 ಸಾವಿರ ಮಂದಿ ಬೀದಿ ಮಕ್ಕಳಿದ್ದಾರೆ. ಸರ್ಕಾರಿ ಅನಾಥಾಶ್ರಮಗಳಲ್ಲಿ ಕೇವಲ 4ರಿಂದ 5 ಸಾವಿರ ಮಕ್ಕಳನ್ನು ಮಾತ್ರ ಸಾಕಿ ಸಲಹಬಹುದು. ಹೀಗಾಗಿ, ಅನಾಥ ಮಕ್ಕಳದ್ದು ದೊಡ್ಡ ಸಮಸ್ಯೆ. ಈ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಬಡ ಮಕ್ಕಳ ಆರೈಕೆಗೆ ಒತ್ತು ನೀಡಬೇಕು~ ಎಂದು ಮನವಿ ಮಾಡಿದರು.`ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕಲಿಸುವುದು ಅನಿವಾರ್ಯ. ಮಕ್ಕಳಿಗೆ ಇಂಗ್ಲಿಷ್ ಕಲಿಸುವಂತಹ ಸಾಮರ್ಥ್ಯ ನಮ್ಮ ಶಿಕ್ಷಕರಲ್ಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇಂಗ್ಲಿಷ್ ಕಲಿಸುವುದರಿಂದ ಭಾಷೆ ಮತ್ತಷ್ಟು ಹದಗೆಡಲಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕಲಿಸುವುದು ಸೂಕ್ತ~ ಎಂದು ಸಲಹೆ ಮಾಡಿದರು.

ಚಾಮರಾಜನಗರ ಪುಣ್ಯ ಕ್ಷೇತ್ರ!

ಚಾಮರಾಜನಗರಕ್ಕೆ ಬರುವ ಮುಖ್ಯಮಂತ್ರಿಗಳು- ಸಚಿವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಸಭಿಕರ ಪ್ರಶ್ನೆಗೆ, `ಚಾಮರಾಜನಗರ ಒಂದು ಪುಣ್ಯ ಕ್ಷೇತ್ರ. ಅಲ್ಲಿಗೆ ತಪ್ಪು ಮಾಡಿದವರು ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಹೀಗಾಗಿ, ರಾಜಕಾರಣಿಗಳು ಜಿಲ್ಲೆಗೆ ಬರಲು ಹೆದರುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಅಲ್ಲಿ ಸಿಗುತ್ತೆ~ ಎಂದು ಪ್ರತಿಕ್ರಿಯಿಸಿದರು.

ಪಶ್ಚಿಮಘಟ್ಟಕ್ಕೆ ಪಾರಂಪರಿಕ ಸ್ಥಾನ: ಒಳ್ಳೆಯ ತೀರ್ಮಾನ

`ಕರ್ನಾಟಕದ ಪಶ್ಚಿಮಘಟ್ಟ ವ್ಯಾಪ್ತಿಯ 10 ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಸ್ತಾವ ಒಳ್ಳೆಯ ತೀರ್ಮಾನ. ಇದರಿಂದ ನಮ್ಮ ಅರಣ್ಯ ರಕ್ಷಣೆಯಾಗಲಿದೆ. ಆದರೆ, ಪ್ರಸ್ತಾವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು~ ಎಂದು ಜಿ.ಎಸ್. ಜಯದೇವ ಸಲಹೆ ಮಾಡಿದರು.`ನಾವು ಈಗಾಗಲೇ ಬಹಳಷ್ಟು ಅರಣ್ಯವನ್ನು ಕಳೆದುಕೊಂಡಿದ್ದೇವೆ. ವಿಶ್ವದಲ್ಲಿ ಸರಾಸರಿ ಶೇ 30ರಷ್ಟು ಅರಣ್ಯವಿದ್ದರೆ, ಭಾರತದಲ್ಲಿ ಅದು ಸರಾಸರಿ ಶೇ 23ರಿಂದ 24ಕ್ಕೆ ಇಳಿದಿದೆ. ಹೀಗಾಗಿ, ಅರಣ್ಯ ಸಂರಕ್ಷಿಸುವುದು ಅನಿವಾರ್ಯವಾಗಿದೆ~ ಎಂದು ಪ್ರತಿಪಾದಿಸಿದರು.`ಉನ್ನತ ಶಿಕ್ಷಣ ಪಡೆದವರೇ ಇಂದು ಪರಿಸರ ನಾಶದ ಕೆಲಸದಲ್ಲಿ ತೊಡಗಿದ್ದಾರೆ. ಕಳೆದುಹೋದ ಚಿನ್ನ ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಜೀವ ಜಂತುಗಳು ನಾಶವಾದರೆ ಅವುಗಳನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ~ ಎಂದು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.