ಭಾನುವಾರ, ಮೇ 16, 2021
28 °C

ಗುಣಾತ್ಮಕ ಶಿಕ್ಷಣ: ಹಾಲಿ-ಮಾಜಿ ಶಾಸಕರ ವಾದ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಗುಣಮಟ್ಟದ ಶಿಕ್ಷಕರು, ಸವಲತ್ತುಗಳು ಇದ್ದು ಗುಣಾತ್ಮಕ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿಲ್ಲ ಏಕೆ? ಎಂಬ ವಿಚಾರ ಕುರಿತು ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಪರಸ್ಪರ ವಾದ ವಿವಾದಕ್ಕೆ ಸೋಮವಾರ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಚರ್ಚಾ ವೇದಿಕೆಯಾಯಿತು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಣ್ಣ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ನಂತರ ಮಾತನಾಡಿದ ಶಾಸಕ ಮರಿತಿಬ್ಬೇಗೌಡ, `ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಗುಣಾತ್ಮಕ ಶಿಕ್ಷಣ ನೀಡಲು ಜಿಲ್ಲೆಯ ಶಿಕ್ಷಕರು ಹೆಚ್ಚು ಕ್ರಿಯಾಶೀಲರಾಗಬೇಕು~ ಎಂದು ಸಲಹೆ ನೀಡಿದರು.ಈ ಸಲಹೆಗೆ ಪ್ರತಿಕ್ರಿಯಿಸಿ ಮಾತನಾಡಿದ ಶಾಸಕ ಬಿ.ರಾಮಕೃಷ್ಣ, `ಸರ್ಕಾರಿ ಶಾಲೆಗಳಿಗೆ ಉತ್ತಮ ಕೊಠಡಿ, ಗುಣಮಟ್ಟದ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳಿಗೂ ವಿವಿಧ ಉಚಿತ ಸವಲತ್ತುಗಳನ್ನು ನೀಡುತ್ತಿದ್ದರೂ, ದಿನೇ ದಿನೇ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣವೇನು? ಇಲ್ಲಿ ಶಿಕ್ಷಣ ವ್ಯವಸ್ಥೆಯ ದೋಷವೋ, ಶಿಕ್ಷಕರ ದೋಷವೋ, ಪೋಷಕರ ಆಯ್ಕೆ ದೋಷವೋ? ಏನು ಎಂಬುದು ಯಾರಿಗೂ ತಿಳಿಯುತ್ತಿಲ್ಲ~ ಎಂಬ ತಮ್ಮ ವಾದ ಮಂಡಿಸಿದರು.ಇದಕ್ಕೆ ಇಂಬು ನೀಡುವಂತೆ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, `ಶಾಸಕ ರಾಮಕೃಷ್ಣ ಅವರ ಮಾತಿನಲ್ಲಿ ಸತ್ಯವಿದೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಿದ್ದ ಪೋಷಕರು, ಇಂಗ್ಲಿಷ್ ಮಾಧ್ಯಮದ ಮೋಡಿಗೆ ಮರುಳಾಗಿದ್ದಾರೆ. ಈ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ವರ್ಷದೊಳಗೆ 300ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಲಿದ್ದು, ಇಲ್ಲಿನ 500ಕ್ಕೂ ಹೆಚ್ಚು ಶಿಕ್ಷಕರು ಇಲ್ಲಿಂದ ರಾಯಚೂರಿನಂತಹ ದೂರದ ಜಿಲ್ಲೆಗಳಿಗೆ ಸ್ಥಳಾಂತರಗೊಳ್ಳುವುದು ನಿಶ್ಚಿತ. ಈ ಸಮಸ್ಯೆಯ ಪರಿಹಾರವಾದರೂ ಹೇಗೆ?~ ಎಂಬ ಪ್ರಶ್ನೆ ಮುಂದಿಟ್ಟರು.ಮಾಜಿ ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, `ಶಿಕ್ಷಣ ನೀಡುವಲ್ಲಿ ಖಾಸಗಿ, ಸರ್ಕಾರಿ ಎಂಬ ಭೇದ ಭಾವವೇನು ಇಲ್ಲ. ಗುಣಾತ್ಮಕ ಶಿಕ್ಷಣ ನೀಡುವ ಬಗೆಗೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಎರಡೂ ಹೆಚ್ಚಿನ ಒತ್ತು ನೀಡಬೇಕು~ ಎಂದರು.ಅಂತಿಮವಾಗಿ ಎಲ್ಲರ ಮಾತುಗಳಿಗೆ ಉತ್ತರವೆಂಬಂತೆ ಮಾತನಾಡಿದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, `ಸರ್ಕಾರಿ ಶಾಲೆಗಳು ಮುಚ್ಚಲು ಸರ್ಕಾರದ ಶಿಕ್ಷಣ ವ್ಯವಸ್ಥೆಯ ಲೋಪ ದೋಷಗಳೇ ಮುಖ್ಯ ಕಾರಣವಾಗಿದೆ. 20 ಮಕ್ಕಳಿರುವ 1ರಿಂದ 5ನೇ ತರಗತಿ ಒಳಗೊಂಡ ಶಾಲೆಗೆ ಮಕ್ಕಳ ಸಂಖ್ಯಾನುಪಾತದಲ್ಲಿ ಒಬ್ಬರು ಶಿಕ್ಷಕರು ಮಾತ್ರ ಸರ್ಕಾರಿ ಶಾಲೆಯಲ್ಲಿದ್ದು, ಇವರೇ 5ತರಗತಿಗಳ ಎಲ್ಲ ವಿಷಯಗಳನ್ನು ಬೋಧಿಸುವ ಅನಿವಾರ್ಯವೂ, ಸಂಕಷ್ಟವೂ ಸೃಷ್ಟಿಯಾಗಿದೆ. ಜೊತೆಗೆ ಬಿಸಿಯೂಟ, ಮತಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಅನ್ಯ ಕೆಲಸಗಳನ್ನು ಮಾಡಬೇಕಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸಿ, ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಅದೇ ಖಾಸಗಿ ಶಾಲೆಗಳಲ್ಲಿ ತರಗತಿಗೊಬ್ಬರು ಶಿಕ್ಷಕರು ಇದ್ದು, ಶಿಕ್ಷಣದ ಗುಣಮಟ್ಟ ಸ್ವಭಾವತಃ ಹೆಚ್ಚಿರುವುದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮುಗಿ ಬೀಳುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಯನ ಸಮಿತಿಯೊಂದನ್ನು ರಚಿಸಿ ಪರಿಹಾರ ಹುಡಕಬೇಕಿದೆ~ ಎಂದು ಸಲಹೆ ನೀಡಿದರು.ಶಾಸಕಿ ಕಲ್ಪನ ಸಿದ್ದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, `ಏನೇ ವಾದ ವಿವಾದಗಳಿದ್ದರೂ, ಶಿಕ್ಷಕ ವೃತ್ತಿ ಅತ್ಯಂತ ಗೌರವಯುತ ವೃತ್ತಿಯಾಗಿದೆ. ಶಿಕ್ಷಕರು ತಮ್ಮ  ವೃತ್ತಿ ಪಾವಿತ್ರ್ಯತೆ ಅರಿತು ವೃತ್ತಿಗೆ ಗೌರವ ತಂದುಕೊಡಬೇಕು. ಮಕ್ಕಳ ಸರ್ವಾಂಗೀಣ ಪ್ರಗತಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದೇ ಶಿಕ್ಷಕರ ಮೂಲ ಧ್ಯೇಯವಾಗಬೇಕು~ ಎಂದು ಹೇಳುವ ಮೂಲಕ ವಾದ ವಿವಾದಕ್ಕೆ ಅಂತಿಮ ತೆರೆ ಎಳೆದರು.ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಕೃಷ್ಣ ಪ್ರಧಾನ ಭಾಷಣ ಮಾಡಿದರು. ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಾದಪ್ಪ, ತಾಪಂ ಅಧ್ಯಕ್ಷೆ ಚೌಡಮ್ಮ, ಉಪಾಧ್ಯಕ್ಷ ಸಿದ್ದಪ್ಪ, ಪುರಸಭಾಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಮಹದೇವಮ್ಮ ಅವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು. ಜಿಪಂ ಸದಸ್ಯರಾದ ಕಂಠಿ ಸುರೇಶ್, ಕೆ.ರವಿ, ಲಲಿತಾ, ತಾಪಂ ಸದಸ್ಯೆ ಶೋಭ ಉಪನಿರ್ದೇಶಕರಾದ ಕೆ.ಗೋಪಾಲ್, ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಶಿಕ್ಷಣ ತಜ್ಞ ಕೆ.ಟಿ.ಚಂದು ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.