ಗುರುವಾರ , ಫೆಬ್ರವರಿ 25, 2021
17 °C

ಗೃಹಸಾಲ ಬಡ್ಡಿ ಇಳಿಯುವುದೆಂದು?

ಕೆ.ಎಸ್.ಜಿ Updated:

ಅಕ್ಷರ ಗಾತ್ರ : | |

ಗೃಹಸಾಲ ಬಡ್ಡಿ ಇಳಿಯುವುದೆಂದು?

ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...

ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಇಚ್ಛೆಯನರಿವ ಸತಿ ಸಿಗುತ್ತಾಳೋ, ಇಲ್ಲವೋ? ಬೆಲೆ ಏರಿಕೆಯ ಈ ದಿನಗಳಲ್ಲಿ ವೆಚ್ಚಕ್ಕೆ ಹಣ ಉಳಿತಾಯವಾಗುತ್ತದೋ ಇಲ್ಲವೋ? ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಎಲ್ಲರೂ ನಮ್ಮದೇ  ಆದ ಒಂದು ಬೆಚ್ಚನೆ ಮನೆಯಿರಬೇಕು ಎಂದು ಕನಸು ಕಾಣುವುದಂತೂ ದಿಟ.ತಮ್ಮ ಕನಸಿನ ಮನೆಯ ಸಾಕಾರಕ್ಕಾಗಿ ಅವರು `ಸಾಲದ ಶೂಲ'ಕ್ಕೆ ಬೇಕಾದರೂ ಏರಬಲ್ಲರು. ಸಾಲಕ್ಕಾಗಿ ಇರುವ ಬಹುದೊಡ್ಡ ಹೆದ್ದಾರಿ ಎಂದರೆ ಬ್ಯಾಂಕ್ ಸಾಲ. ಹೌದು ಬಹುತೇಕ ಮಧ್ಯಮ ವರ್ಗದವರು, ಮೇಲ್ಮಧ್ಯಮ ವರ್ಗದವರು ಮನೆ ಖರೀದಿಸಲು ಇಲ್ಲವೇ ಕಟ್ಟಿಸಲು ನಂಬಿಕೊಂಡಿರುವ `ಬಂಧು'ವೇ ಬ್ಯಾಂಕುಗಳು.ಆದರೆ ಕಳೆದ ಮಾಸಾಂತ್ಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಟಿಸಿದ ಅರ್ಧವಾರ್ಷಿಕ ಹಣಕಾಸು ಪರಾಮರ್ಶೆ ವರದಿಯಲ್ಲಿ `ಮನೆ ನಿರ್ಮಾಣ ಅಥವಾ ಖರೀದಿಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ನೀಡುತ್ತಿರುವ ಸಾಲದ ಪ್ರಮಾಣ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಡಿಮೆ ಆಗಿದೆ ಎಂದು ಹೇಳಿದೆ.2007-08ರಲ್ಲಿ ಶೇ 13.3ರಷ್ಟು ಸಾಲವನ್ನು ಮನೆ ಕಟ್ಟುವುದಕ್ಕೆಂದೇ ಕೊಡುತ್ತಿದ್ದ ಬ್ಯಾಂಕುಗಳು ಪ್ರಸಕ್ತ ಸಾಲಿನಲ್ಲಿ ಶೇ 9.5ರಷ್ಟು ಮಾತ್ರ ಗೃಹ ಸಾಲ ನೀಡಿವೆ ಎಂಬ ಅಂಕಿ-ಅಂಶಗಳನ್ನು ಆರ್‌ಬಿಐ ಪ್ರಕಟಿಸಿದೆ.ಒಂದೆಡೆ ಮನೆಗಳ ಖರೀದಿ ಬೆಲೆ ನಾಗಾಲೋಟದಂತೆ ಏರಿಕೆ ಕಾಣುತ್ತಿದ್ದರೆ ಮತ್ತೊಂದೆಡೆ ಬ್ಯಾಂಕುಗಳು ಈ ವಲಯಕ್ಕೆ ನೀಡುತ್ತಿರುವ ಸಾಲದ ಪ್ರಮಾಣ ಇಳಿಕೆಯಾಗುತ್ತಿದೆ. ಇದರ ನೇರ ಪರಿಣಾಮ `ರಿಯಲ್ ಎಸ್ಟೇಟ್ ಉದ್ಯಮ'ವನ್ನೇ ಅವಲಂಬಿಸಿರುವ 250 ಉಪ ವಲಯಗಳ ಮೇಲಾಗುತ್ತಿದೆ. ಇದರ ಒಟ್ಟಾರೆ ಪ್ರತಿಫಲನ ಆರ್ಥಿಕತೆಯ ಮೇಲೆ ಬೀಳುತ್ತಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.ಇದರ ಪರಿಣಾಮ ಮೆಟ್ರೊ(ಮಹಾ ನಗರ)ಗಳ ವಸತಿ ಸಾಮ್ರಾಜ್ಯದ ಮೇಲಾಗುತ್ತಿದ್ದು, ಮನೆಗಳ ಬೆಲೆ ಗಮನಾರ್ಹವಾಗಿ ಹೆಚ್ಚಳ ಕಾಣುತ್ತಿದೆ. ಒಂದೆಡೆ ಬೆಲೆಗಳು ಕೈಗೆಟುಕದ ರೀತಿಯಲ್ಲಿ ಗಗನದತ್ತ ಹಾರುತ್ತಿದ್ದರೆ, ಮತ್ತೊಂದೆಡೆ ಅವುಗಳನ್ನು ಹೇಗಾದರೂ ಮಾಡಿ ಎಟುಕಿಸಿಕೊಳ್ಳಬೇಕೆನ್ನುವ ತುಡಿತಕ್ಕೆ ಬ್ಯಾಂಕ್ ಸಾಲಗಳೂ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಒಟ್ಟಾರೆ ಮಧ್ಯಮ ವರ್ಗದವರ ತಮ್ಮ ಸ್ವಂತ ಸೂರಿನ ಕನಸು ಕನಸಾಗಿಯೇ ಉಳಿಯುತ್ತಿದೆ ಎಂದು ವರದಿ ಬೊಟ್ಟು ಮಾಡಿದೆ.ವಸತಿ ವಲಯಕ್ಕೆ ಸಂಬಂಧಿಸಿದಂತೆ ವಸೂಲಾಗದ ಸಾಲದ ಪ್ರಮಾಣ ಗಮನಾರ್ಹವಾಗಿ ಇಳಿಯುತ್ತಿದೆ ಎಂಬ ಆಶಾದಾಯಕ ಅಂಶವೊಂದು ಈ ವರದಿಯಲ್ಲಿ ಬೆಳ್ಳಿರೇಖೆಯಂತೆ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದರ ಪ್ರಮಾಣ ಇಳಿಕೆ ಆಗುತ್ತಿರುವುದು ಸಮಾಧಾನಕರ ಸಂಗತಿ ಎಂದಿದೆ.ರಿಯಲ್ ಎಸ್ಟೇಟ್ ವಲಯದಲ್ಲಿ ಇನ್ನಷ್ಟು ಪಾರದರ್ಶಕತೆ ಇರಬೇಕು ಎಂದು ಹೇಳಿರುವ ಆರ್‌ಬಿಐ, ಇದರಿಂದ ಮನೆ ಖರೀದಿಸಲೆಂದು ಕೂಡಿಟ್ಟ ಹಣ ರಿಯಲ್ ಎಸ್ಟೇಟ್ ಉದ್ಯಮದ ಮಧ್ಯವರ್ತಿಗಳ ಪಾಲಾಗುವುದು ತಪ್ಪುತ್ತದೆ. ಪರಿಣಾಮ ಗ್ರಾಹಕರಲ್ಲಿ ಹೊಸ ಭರವಸೆ, ನಂಬಿಕೆ ಮೂಡುತ್ತದೆ ಎಂದು  ವಿಶ್ವಾಸ ವ್ಯಕ್ತಪಡಿಸಿದೆ.ಹಾಗೊಮ್ಮೆ ನೋಡಿದರೆ ಆರ್‌ಬಿಐ ಪ್ರಸಕ್ತ ವರ್ಷ ಹಣಕಾಸು ನಿಯಂತ್ರಣ  ನೀತಿಯಲ್ಲಿ ಬಡ್ಡಿದರಗಳನ್ನೇನೂ ಹೇಳಿಕೊಳ್ಳುವ ಪ್ರಮಾಣದಲ್ಲಿ ಕಡಿತ ಮಾಡಿಲ್ಲ. ಬಹಳ ಎಚ್ಚರಿಕೆ ನಡೆ ಅನುಸರಿಸಿದ್ದ ಕೇಂದ್ರ ಬ್ಯಾಂಕ್, ಶೇ 0.25ರಷ್ಟು ಬಡ್ಡಿ ಕಡಿತ ಮಾಡಿ ಮೂಲ ಬಡ್ಡಿದರವನ್ನು ಶೇ 7.25ಕ್ಕೆ ಮಿತಿಗೊಳಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.