ಭಾನುವಾರ, ಮೇ 22, 2022
21 °C

ಗೃಹ ನಿರ್ಮಾಣ ಸಾಲ: ಡಿಎಚ್‌ಎಫ್ ನೆರವು

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಸ್ವಂತಕ್ಕೊಂದು ಸೂರು ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬರ ಬದುಕಿನಲ್ಲಿ     ಮಹತ್ವದ ಘಟ್ಟ. ಮನೆ ನಿರ್ಮಾಣವು ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುವುದರಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ.ಕಡಿಮೆ ಪ್ರಮಾಣದ ಮಾಸಿಕ ವರಮಾನ ಇರುವ ವೇತನ ವರ್ಗಕ್ಕೆ ಮತ್ತು ಸ್ವಯಂ ಉದ್ಯೋಗಿಗಳಿಗೆ   ನ್ಯಾಯಯುತವಾಗಿ ಸಿಗಬೇಕಾದ ಪ್ರಮಾಣದಲ್ಲಿ ಗೃಹ ಸಾಲವು ಅನೇಕ ಕಾರಣಗಳಿಗೆ ಸುಲವಾಗಿ ದೊರೆಯುವುದಿಲ್ಲ.

 

ಏನೆಲ್ಲಾ ಅಡಚಣೆಗಳು, ತಾಂತ್ರಿಕ ಕಾರಣಗಳ ನೆಪದಲ್ಲಿ ಅವಕಾಶ ನಿರಾಕರಿಸಲಾಗುತ್ತದೆ ಇಲ್ಲವೇ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಸಾಲ ಮಂಜೂರಾತಿ ಮಾಡಲಾಗುತ್ತದೆ.ಹೀಗಾಗಿ ಅನೇಕರು ತಮ್ಮ ಮನೆ ನಿರ್ಮಾಣದ ಕನಸು ನನಸಾಗಿಸಲು ಹೆಣಗಾಡಬೇಕಾಗುತ್ತದೆ. ಕಡಿಮೆ ವರಮಾನದವರ ಕನಸು ನನಸಾಗಿಸುವ ಉದ್ದೇಶದಿಂದಲೇ 1984ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಖಾಸಗಿ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ತನ್ನ ಸ್ಥಾಪನೆ ಉದ್ದೇಶದ ಹಾದಿಯಲ್ಲಿ ಈಗ ಸಾಕಷ್ಟು ದೂರ ಕ್ರಮಿಸಿದೆ.

 

25 ವರ್ಷಗಳಲ್ಲಿ ದೇಶದ ಎರಡನೇ ಅತಿದೊಡ್ಡ ಖಾಸಗಿ ಗೃಹ ನಿರ್ಮಾಣ ಹಣಕಾಸು ಸಂಸ್ಥೆಯಾಗಿ ತ್ವರಿತವಾಗಿ ಬೆಳೆದಿದೆ. ಕಳೆದ 17 ವರ್ಷಗಳಿಂದ ರಾಜ್ಯದಲ್ಲಿ ವಹಿವಾಟು ನಿರ್ವಹಿಸುತ್ತಿದ್ದು, ಎರಡನೆ ಹಂತದ ನಗರಗಳಲ್ಲಿನ  ಕಡಿಮೆ ಮತ್ತು ಮಧ್ಯಮ ವರ್ಗದವರ ಗೃಹ ಸಾಲದ ಅಗತ್ಯಗಳನ್ನು ಈಡೇರಿಸಲು ಆದ್ಯತೆ ನೀಡುತ್ತಿದೆ. ಗೃಹ ನಿರ್ಮಾಣ ಸಾಲಗಳ ಮೇಲಿನ ಬಡ್ಡಿ ದರಗಳು ಶೇ 18ರಷ್ಟು ಇದ್ದಾಗಲೇ   ಅಸ್ತಿತ್ವಕ್ಕೆ ಬಂದಿದ್ದ `ಡಿಎಚ್‌ಎಫ್‌ಎಲ್~ ಈಗ ಬದಲಾದ ಪರಿಸ್ಥಿತಿಯಲ್ಲಿ ಕಡಿಮೆ ದರಕ್ಕೆ ಗೃಹ ಸಾಲ ನೀಡುತ್ತಿದೆ. ಕಡಿಮೆ ಮತ್ತು ಮಧ್ಯಮ ವರ್ಗದವರರಿಗೆ ಗೃಹ ನಿರ್ಮಾಣ ಹಣಕಾಸು ಸೌಲಭ್ಯವನ್ನು ಸುಲಭವಾಗಿ ಕಲ್ಪಿಸಿ ಕೊಡುತ್ತ ಅವರ ಮನಗೆಲ್ಲುತ್ತಲೇ ವಹಿವಾಟು ವಿಸ್ತರಿಸುತ್ತಿದೆ.  ಸಂಸ್ಥೆಯ ಪಾರದರ್ಶಕ ಮತ್ತು ತ್ವರಿತ ಸಾಲ ಮಂಜೂರಾತಿ ವಿಧಾನವು  ಕಡಿಮೆ ವರಮಾನದ ಜನರಲ್ಲಿ ತುಂಬ ಜನಪ್ರಿಯವಾಗಿದೆ ಎಂದು ದಿವನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ನಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಸಚಿದಾನಂದ್ ಹೇಳುತ್ತಾರೆ.`ಡಿಎಚ್‌ಎಫ್‌ಎಲ್~ ಒಟ್ಟಾರೆ ರೂ 24 000 ಕೋಟಿಗಳಷ್ಟು ಒಟ್ಟಾರೆ ವಹಿವಾಟು ನಿರ್ವಹಿಸುತ್ತಿದೆ. ಬಹುತೇಕ ಬ್ಯಾಂಕ್‌ಗಳು, ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು ರೂ  16 ರಿಂದ ರೂ 20 ಲಕ್ಷದವರೆಗೆ ಸಾಲ ನೀಡಲು ಉದ್ದೇಶಿಸಿರುತ್ತವೆ. ಆದರೆ, `ಡಿಎಚ್‌ಎಫ್‌ಎಲ್~ ರೂ  7 ರಿಂದ ರೂ  8 ಲಕ್ಷಗಳವರೆಗಿನ ಗೃಹ ಸಾಲ ನೀಡುವುದರತ್ತ ಗಮನ ಕೇಂದ್ರೀಕರಿಸಿದ್ದು, ಆ ನಿಟ್ಟಿನಲ್ಲಿಯೇ ಸಾಲ ನೀಡುತ್ತ ಬಂದಿದೆ.ಕಡಿಮೆ ವರಮಾನ ಮತ್ತು ಮಧ್ಯಮ ವರ್ಗದವರ (ಔಐ) ಗೃಹ ಸಾಲದ ಅಗತ್ಯಗಳನ್ನು ಈಡೇರಿಸುವತ್ತ ಮತ್ತು ಇದೇ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ಗೃಹ ವಿಸ್ತರಣೆ, ಸುಧಾರಣೆ ಮತ್ತಿತರ ಉದ್ದೇಶಗಳಿಗೂ ಸಾಲ ನೀಡುತ್ತಿದೆ.ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ವಹಿವಾಟು ವಿಸ್ತರಿಸಲು ಸಂಸ್ಥೆಯು ಈಗ  ಹೆಚ್ಚು ಗಮನ ಕೇಂದ್ರೀಕರಿಸುತ್ತಿದೆ.  ರಾಜ್ಯದಲ್ಲಿ 24 ಶಾಖೆಗಳು ಮತ್ತು 8 ಸೇವಾ ಕೇಂದ್ರಗಳ ಮೂಲಕ ಹಣಕಾಸು ವಹಿವಾಟು ನಿರ್ವಹಿಸುತ್ತಿದೆ. ಗುಲ್ಬರ್ಗ, ದಾವಣಗೆರೆ ಮತ್ತಿತರ ಕಡೆಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಸಾಲ ನೀಡಲಾಗಿದೆ ಎಂದು ಸಚಿದಾನಂದ ಹೇಳುತ್ತಾರೆ.ಮಹಾನಗರಗಳ ಹೊರ ವಲಯ ಮತ್ತು ಎರಡನೇ ಹಂತದ  ನಗರಗಳಲ್ಲಿ ಗೃಹ ನಿರ್ಮಾಣಕ್ಕೆ ಸಾಲ ನೀಡಲು ಆದ್ಯತೆ ನೀಡಲಾಗುತ್ತಿದೆ. ಮಹಾನಗರಗಳ ಹೊರ ವಲಯದ ಪ್ರದೇಶಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಂತಹ ಪ್ರಮುಖ ನಗರಗಳಲ್ಲಿ ಗೃಹ ನಿರ್ಮಾಣ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಇಲ್ಲಿ ಅಗತ್ಯವಾಗಿರುವ ಹಣಕಾಸು ನೆರವು ನೀಡುವುದು `ಡಿಎಚ್‌ಎಫ್‌ಎಲ್~ನ ಮುಖ್ಯ ಉದ್ದೇಶವಾಗಿದೆ ಎಂದೂ ಅವರು ಹೇಳುತ್ತಾರೆ.ಗೃಹ ನಿರ್ಮಾಣ ಸಾಲಗಾರರಿಗೆ - ಸಾಲದ ಅಂದಾಜು ವೆಚ್ಚ, ತಾಂತ್ರಿಕ ಪರಿಣತಿಯನ್ನೂ ನೀಡಲಾಗುವುದು. ಗೃಹ ನಿರ್ಮಾಣ ಉದ್ದೇಶದ ಸಾಲಗಳನ್ನು ನೀಡುವಾಗ ಪ್ರತಿಯೊಂದು ಬ್ಯಾಂಕ್ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತದೆ. ಹಲವಾರು ನಿಬಂಧನೆಗಳನ್ನೂ ವಿಧಿಸುತ್ತವೆ.ಸಾಲ ಪಡೆಯುವ ಅರ್ಹತೆ, ಸಾಲಗಾರನ ಮಾಸಿಕ ವರಮಾನ, ಕುಟುಂಬದ ವೆಚ್ಚ, ಸಾಲ ಮರುಪಾವತಿ ಸಾಮರ್ಥ್ಯ ಮತ್ತಿತರ ಸಂಗತಿಗಳನ್ನು ಆಧರಿಸಿ ಮಂಜೂರು ಮಾಡುವ ಸಾಲದ ಮೊತ್ತ ನಿರ್ಧಾರವಾಗುತ್ತದೆ. `ಡಿಎಚ್‌ಎಫ್~ನಲ್ಲಿ ಒಟ್ಟಾರೆ ಕುಟುಂಬದ ವರಮಾನವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.ಹೀಗಾಗಿ ನಮ್ಮದು ಭಿನ್ನ ಧೋರಣೆಯಾಗಿದೆ. ಸಾಲ ಪಡೆಯುವ ಅರ್ಹತಾ ಮಟ್ಟ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದನ್ನೇ ನಾವು ಮುಖ್ಯ ಮಾನದಂಡವಾಗಿ ಪರಿಗಣಿಸುತ್ತೇವೆ ಎಂದು ಹೇಳುತ್ತಾರೆ.ದಿವಾನ್ ಹೌಸಿಂಗ್ ಫೈನಾನ್ಸ್ , ಇದುವರೆಗೆ ಪಾಲಿಸಿಕೊಂಡು ಬಂದಿರುವ ಧೋರಣೆಯಿಂದ ಯಾವತ್ತೂ ದೂರ ಸರಿದಿಲ್ಲ. ಸ್ವಯಂ ಉದ್ಯೋಗದಾರರಿಗೆ  ಶೇ 22 ಮತ್ತು ವೇತನವರ್ಗದವರಿಗೆ ಶೇ 78 ರಷ್ಟು ಸಾಲ ನೀಡಲಾಗುತ್ತಿದೆ. ಸಾಲದ ಅರ್ಜಿ ಪ್ರಕ್ರಿಯೆಯನ್ನು   ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು. ಸಮಾಜದ ಎಲ್ಲ ವರ್ಗದವರ ಸಾಲದ  ಅಗತ್ಯಗಳನ್ನು ಈಡೇರಿಸಲು `ಡಿಎಚ್‌ಎಫ್~ ಶ್ರಮಿಸುತ್ತಿದೆ.ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆಗಿನ ಸಹಯೋಗದಲ್ಲಿಯೂ ಗೃಹ ಸಾಲ ಸೌಲಭ್ಯ ವಿಸ್ತರಿಸಲೂ ಮುಂದಾಗಿದೆ. `ಡಿಎಚ್‌ಎಫ್‌ಎಲ್~ ನಿಗದಿಪಡಿಸುವ ಬಡ್ಡಿ ದರಕ್ಕೆ ಸಾಲ ನೀಡಲಾಗುವುದು.ರೂ 4000 ರಿಂದ ರೂ 5000 ಮಾಸಿಕ ವರಮಾನ ಇರುವ ಕುಟುಂಬದ ಸದಸ್ಯರಿಗೂ ನಮ್ಮಲ್ಲಿ ಗೃಹ ಸಾಲ ಸೌಲಭ್ಯ ಒದಗಿಸಲಾಗುವುದು. ಸುಸ್ಥಿದಾರರ ಸಂಖ್ಯೆ ಕಡಿಮೆ ಇದೆ.ಗೃಹ ಸಾಲ ಬೆಳವಣಿಗೆ ಶೇ 40 ರಿಂದ ಶೇ 50ರಷ್ಟು  ದರದಲ್ಲಿ ವೃದ್ಧಿ ಆಗುತ್ತಿದೆ.  ಗ್ರಾಮೀಣ ವಸತಿಗೆ ಅಗತ್ಯವಾದ ಹಣಕಾಸಿನ ನೆರವು ನೀಡಲೂ `ಡಿಎಚ್‌ಎಫ್~ ಮುಂದೆ ಬಂದಿದೆ. ಸಾಲ ಮರುಪಾವತಿ ಸುಗಮವಾಗಿರುವುದರಿಂದ ವಸೂಲಾಗದ ಗೃಹ ಸಾಲದ ಪ್ರಮಾಣ (ಎನ್‌ಪಿಎ) ಕಡಿಮೆ ಇದೆ ಎಂದೂ ಅವರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.