ಮಂಗಳವಾರ, ಮೇ 17, 2022
26 °C

ಗೊಂದಲದ ಗೂಡಾದ ದುರ್ಗಿಗುಡಿ ರಸ್ತೆ ವಿಸ್ತರಣೆ

ವಿಶೇಷ ವರದಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ದುರ್ಗಿಗುಡಿ ರಸ್ತೆ ವಿಸ್ತರಣೆ ಕಾಮಗಾರಿ ವರ್ತಕರಲ್ಲಿ ಹಲವು ಗೊಂದಲಗಳನ್ನು ಹುಟ್ಟಿಹಾಕಿದೆ. ಈ ಮೊದಲು 35 ಅಡಿ ವಿಸ್ತರಣೆ ಮಾಡುವಂತೆ ವರ್ತಕರ ಸಭೆಯಲ್ಲಿ ನಿರ್ಣಯ ಪ್ರಕಟಿಸಿದ್ದ ಶಾಸಕ ಕೆ.ಎಸ್. ಈಶ್ವರಪ್ಪ, ಇದೀಗ ದಿಢೀರನೆ ತಮ್ಮ ಮಾತು ಬದಲಿಸಿ 50 ಅಡಿ ವಿಸ್ತರಣೆಗೆ ಸೂಚನೆ ನೀಡಿದ್ದಾರೆ.ಅಲ್ಲದೇ, ಈಶ್ವರಪ್ಪ ಅವರು ದುರ್ಗಿಗುಡಿ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗುವುದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದರೆ, ಜಿಲ್ಲಾಧಿಕಾರಿ ಡಾಂಬರೀಕರಣ ಮಾಡಲಾಗುವುದು ಎಂಬ ಮಾತುಗಳನ್ನಾಡುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ರಸ್ತೆ ಡಾಂಬರೀಕರಣವನ್ನೂ ಮಾಡಲಾಗಿದೆ.ಈ ಹಿಂದಿನ 35 ಅಡಿ ರಸ್ತೆ ವಿಸ್ತರಣೆ ತೀರ್ಮಾನದಲ್ಲಿ ರಸ್ತೆಯ ಒಂದು ಬದಿಯಲ್ಲಿ ಗುಂಡಿಗಳನ್ನು ತೋಡಿರುವುದು ಬಿಟ್ಟರೆ ಇನ್ಯಾವುದೇ ಕಾರ್ಯಗಳನ್ನು ಜಾರಿ ಗೊಳಿಸದಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಿರುವಾಗ ಯಾರ ಅಭಿಪ್ರಾಯವನ್ನೂ ಪಡೆಯದೆ ಏಕಾಏಕಿಯಾಗಿ 50 ಅಡಿ ರಸ್ತೆ ವಿಸ್ತರಣೆಗೆ ಸೂಚನೆ ನೀಡಿರುವುದು ವರ್ತಕರಲ್ಲಿ ಆತಂಕವನ್ನು ಹುಟ್ಟಿಸಿದೆ.ನಮ್ಮ ಹಲವು ಕಷ್ಟಗಳ ನಡುವೆಯೂ 35 ಅಡಿ ರಸ್ತೆ ವಿಸ್ತರಣೆಗೆ ಒಪ್ಪಿಗೆ ನೀಡಿದ್ದೆವು. ಇದೀಗ 50 ಅಡಿ ವಿಸ್ತರಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದು, ನಮ್ಮ ಜೀವನವನ್ನೇ ಸರ್ವನಾಶ ಮಾಡುವಂತಹ ಯೋಜನೆಯಾಗಿದೆ. ಬಿ.ಎಚ್. ರಸ್ತೆ ವಿಸ್ತರಣೆಯಿಂದಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸಿ ಇಂದಿಗೂ ಸೂಕ್ತ ಪರಿಹಾರವನ್ನು ಪಡೆಯಲಾಗಿಲ್ಲ. ಸಂಚಾರ ನಿರ್ವಹಣೆಗಾಗಿ ಈ ಕ್ರಮ ಎಂಬ ಮಾತುಗಳು ಬೋಗಸ್ ಆಗಿವೆ. ನಮಗೆ ಅವರು ನೀಡುವ ಪರಿಹಾರ ಒಂದು ದಿನದ ಊಟವಿದ್ದಂತೆ. ಆದರೆ, ನಮ್ಮ ಕೆಲಸ ದಿನದ ಗಂಜಿಯನ್ನು ಒದಗಿಸುತ್ತದೆ ಎಂದು ಬೀಡಾ ಅಂಗಡಿ ಮಾಲಿಕ ತ್ಯಾಗರಾಜ್ ಅವರು ತಮ್ಮ ಅಳಲು ವ್ಯಕ್ತಪಡಿಸಿದರು.ದುರ್ಗಿಗುಡಿ ಮುಖ್ಯ ರಸ್ತೆಯನ್ನು ಒಮ್ಮುಖವೆಂದು ತೀರ್ಮಾನಿಸಲಾಗಿದೆ. ಹೀಗಿರುವಾಗ 35 ಅಡಿಯಷ್ಟೇ ರಸ್ತೆ ವಿಸ್ತರಣೆಗೊಳಿಸಿದಲ್ಲಿ ವಾಹನಗಳ ನಿಲುಗಡೆಗೆ ಈಗಾಗಲೇ ಕಾಂಕ್ರಿಟೀಕರಣಗೊಳಿಸಲಾಗಿರುವ ಕನ್‌ಸರ್‌ವೆನ್ಸಿಗಳನ್ನು ಮತ್ತು ವಾಹನ ಸಂಚಾರಕ್ಕೆ ಅಕ್ಕ ಪಕ್ಕದಲ್ಲಿರುವ ಸಮಾನಾಂತರ ರಸ್ತೆಗಳನ್ನು ಪರ್ಯಾಯವಾಗಿ ಸಂಚಾರಕ್ಕೆ ಬಳಸಿಕೊಳ್ಳಬಹುದು. ಇದರಿಂದಾಗಿ ಸಂಚಾರವೂ ಸುಗಮವಾಗಿರುತ್ತದೆ. ನಮ್ಮ ಬದುಕೂ ಉಳಿಯುತ್ತದೆ ಎನ್ನುತ್ತಾರೆ `ಶೂಸ್ ಕೆಂಪ್~ ಮಾಲೀಕ ಶ್ರೀಧರ್.ಈ ಹಿಂದಿನ ತೀರ್ಮಾನಕ್ಕೆ ಅನುಗುಣವಾಗಿ ನಾವೆಲ್ಲಾ ಜಾಗ ಬಿಟ್ಟು ಮಳಿಗೆಗಳನ್ನು ಪುನರ್ ನಿರ್ಮಾಣ ಮಾಡಿಕೊಂಡಿರುತ್ತೇವೆ. ಮಕ್ಕಳು, ಮರಿಗಳ ಓದು ಒಂದು ಹಂತಕ್ಕೆ ಬಂದಿದೆ. ಪ್ರಸ್ತುತ ತೀರ್ಮಾನ ಜಾರಿಯಾದಲ್ಲಿ ಬೀದಿಗೆ ಬೀಳಲಿದ್ದೇವೆ ಎನ್ನುತ್ತಾರೆ ಸೋನಿ ವಾಚ್ ವರ್ಕ್ಸ್‌ನ ಉಮೇಶ್.ದುರ್ಗಿಗುಡಿ ರಸ್ತೆಯಲ್ಲಿರುವ ಬಹುಪಾಲು ಅಂಗಡಿಗಳು 10್ಡ15 ಜಾಗವನ್ನು ಹೊಂದಿರುವವಾಗಿವೆ. 50 ಅಡಿ ವಿಸ್ತರಣೆ ಜಾರಿಗೊಂಡಲ್ಲಿ ಸಣ್ಣ ವ್ಯಾಪಾರಸ್ಥರೆಲ್ಲರೂ ಸಂಪೂರ್ಣವಾಗಿ ಜಾಗ ಕೀಳಬೇಕಾಗುತ್ತದೆ. ಬಾಡಿಗೆದಾರರ ಪರಿಸ್ಥಿತಿ ಬಗೆಗಂತೂ ಹೇಳುವಂತಿಲ್ಲ. ನಮ್ಮ ಅಭಿಪ್ರಾಯವನ್ನೂ ಪರಿಗಣಿಸದೆ ಏಕಮುಖವಾಗಿ ತೀರ್ಮಾನ ಕೈಗೊಂಡಿರುವುದು ತುಂಬಾ ನೋವುಂಟು ಮಾಡಿದೆ ಎಂಬುದು ಅಲ್ಲಿನ ಎಲ್ಲಾ ವ್ಯಾಪಾರಸ್ಥರ ಅಳಲು.ಇದಕ್ಕೆ ಸಂಬಂಧಿಸಿದಂತೆ `ಪ್ರಜಾವಾಣಿ~ ಪಿಡಬ್ಲ್ಯೂಡಿ ಕಾರ್ಯಪಾಲಕ ಎಂಜಿನಿಯರ್ ನಂಜೇಶಯ್ಯ ಅವರನ್ನು ಮಾತನಾಡಿಸಿದಾಗ, `ಗೊಂದಲಗಳ ಕುರಿತಾಗಿ ನಮಗೆ ಗೊತ್ತಿಲ್ಲ. ನಮಗೆ ಆದೇಶವಿರುವಂತೆ 50 ಅಡಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ರಸ್ತೆ ಅಳತೆ, ತೊಂದರೆಗೀಡಾಗಲಿರುವ ಮಳಿಗೆಗಳು ಹಾಗೂ ಕಾಮಗಾರಿಯ ಒಟ್ಟು ಅಂದಾಜು ಮೊತ್ತವನ್ನು 2-3 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದೇವೆ~ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ `ಪ್ರಜಾವಾಣಿ~ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಅವರನ್ನು ಅರ್ಧ ದಿವಸ ಕಾಲ ದೂರವಾಣಿ ಮೂಲಕ ಪ್ರಯತ್ನಿಸಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.