ಗುರುವಾರ , ಏಪ್ರಿಲ್ 15, 2021
31 °C

ಗೊಂಬೆನಗರಿಯಲ್ಲಿ ಗುಂಪುಗಾರಿಕೆಯ ಕುಣಿತ..!

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಮುಂಬರುವ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಈಗಲೇ ಬಿರುಸಿನ ಚಟುವಟಿಕೆ ಆರಂಭಗೊಂಡಿದ್ದು ತಾಲ್ಲೂಕಿನಾದ್ಯಂತ ಮೂರೂ ಪಕ್ಷಗಳಲ್ಲಿ ಭುಸುಗುಡುತ್ತಿರುವ ಭಿನ್ನಮತ ಮುಖಂಡರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.ಈಗಾಗಲೇ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಬಹುತೇಕ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಜನಸಂಪರ್ಕ ಸಭೆಗಳನ್ನು ಏರ್ಪಡಿಸುತ್ತಾ ಪ್ರಚಾರ ಕಾರ್ಯ ಆರಂಭಿಸಿದ್ದರೆ, ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಅನಿತಾ ಕುಮಾರಸ್ವಾಮಿ ಹೆಸರನ್ನು ಘೋಷಿಸಿ ಸಣ್ಣ ಸಂಚಲನ ಉಂಟುಮಾಡಿದೆ. ಕಾಂಗ್ರೆಸ್ ರಘುನಂದನ್ ರಾಮಣ್ಣಅವರ ಹೆಸರನ್ನು ಅಂತಿಮ ಗೊಳಿಸಿದ್ದು ಪಕ್ಷದ ಪದಾಧಿಕಾರಿಗಳ ಬದಲಾವಣೆಗೆ ಕೈ ಹಾಕಿದೆ. ರಾಮನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿ ಸಚಿವ ಸ್ಥಾನವನ್ನೂ ಅಲಂಕರಿಸಿರುವ ಸಿ.ಪಿ.ಯೋಗೇಶ್ವರ್ ಸ್ವತಃ ಭಿನ್ನಮತಕ್ಕೆ ಈಡಾಗಿದ್ದಾರೆ. ತಾಲ್ಲೂಕಿನಲ್ಲಿ ಯೋಗೇಶ್ವರ್ ಬಣ, ಬಿಜೆಪಿ ಘಟಕದ ಅಧ್ಯಕ್ಷ ಆನಂದಸ್ವಾಮಿ ಬಣ ಎಂಬ ಎರಡು ಗುಂಪುಗಳು ತಿಕ್ಕಾಟಕ್ಕೆ ಇಳಿದಿವೆ. ಈ ವೈಮನಸ್ಯ ಮೊನ್ನೆ ಸದಾನಂದಗೌಡರ ಸ್ವಾಗತದೊಂದಿಗೆ ಬಹಿರಂಗಗೊಂಡಿದೆ.`ಯೋಗೇಶ್ವರ್ ತಮ್ಮ ಹಿಂಬಾಲಕರನ್ನು ಮಾತ್ರ ಓಲೈಸುತ್ತಾರೆ. ಪಕ್ಷಕ್ಕೆ ದುಡಿದವರನ್ನು ಕಡೆಗಣಿಸುತ್ತಾರೆ. ಪಕ್ಷದ ಸಂಘಟನೆಗಿಂತ ತಮ್ಮ ಸ್ವಕಾರ್ಯಗಳಲ್ಲಿಯೇ ಹೆಚ್ಚು ಆಸಕ್ತಿ ವಹಿಸುತ್ತಾರೆ~ ಎಂಬ ಆರೋಪದೊಂದಿಗೆ ಆರಂಭಗೊಂಡ ಬಿಜೆಪಿಯ ಭಿನ್ನಮತ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ತಾರಕಕ್ಕೇರಿತು.ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ರೇಣುಕಾಚಾರ್ಯ ಅವರನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸಿದ ಮೇಲೆ ಅಪಸ್ವರ ಹೆಚ್ಚಾಯಿತು. ಮಂಡ್ಯ ಜಿಲ್ಲಾ ಉಸ್ತುವಾರಿ ಹೊತ್ತ ಯೋಗೇಶ್ವರ್ ಒಳಗೊಳಗೆ ಮತ್ತೆ ತವರು ಜಿಲ್ಲೆಗೆ ಮರಳಲು ನಡೆಸುತ್ತಿದ್ದ ಪ್ರಯತ್ನಕ್ಕೆ ಆನಂದಸ್ವಾಮಿ ಮತ್ತವರ ತಂಡ ಅಡ್ಡಿಪಡಿಸಿತು.ರೇಣುಕಾಚಾರ್ಯ ಅವರೇ ಜಿಲ್ಲಾ ಉಸ್ತುವಾರಿಯಾಗಿ ಮುಂದುವರೆಯಲಿ ಎಂದು ಮುಖ್ಯಮಂತ್ರಿ ಶೆಟ್ಟರ್ ಅವರಿಗೆ ಮನವಿಪತ್ರ ಅರ್ಪಿಸುವವರೆಗೂ ವೈಮನಸ್ಯದ ಹಾದಿ ಮುಂದುವರಿದಿದೆ. ಇದು ಯಾವುದೇ ಕ್ಷಣದಲ್ಲಾದರೂ ಮತ್ತೆ ಬೆಂಕಿಯಾಗಿ ಭುಗಿಲೇಳಬಹುದು ಎಂದೇ ಈಗ ಲೆಕ್ಕ ಹಾಕಲಾಗುತ್ತಿದೆ.ನಾವಿಕನಿಲ್ಲದ ದೋಣಿಯಂತಾಗಿದ್ದ ತಾಲ್ಲೂಕು ಜೆಡಿಎಸ್‌ಗೆ ಅನಿತಾಕುಮಾರ ಸ್ವಾಮಿ ಅವರ ಬರುವಿಕೆ ಹೊಸ ಉತ್ಸಾಹವನ್ನು ತರುವ ಬದಲು ನಿಷ್ಠ ಮುಖಂಡರಲ್ಲಿ ಅಸಮಾಧಾನದ ಹೊಗೆಯನ್ನೇ ಎಬ್ಬಿಸಿದೆ. ಇದರಿಂದ ಜೆಡಿಎಸ್‌ನಲ್ಲಿ ಹಲವಾರು ವರ್ಷಗಳಿಂದ ಕುದಿಯುತ್ತಾ, ಕುಂಟುತ್ತಾ ಸಾಗುತ್ತಿದ್ದ ಗುಂಪುಗಾರಿಕೆ ಶಮನವಾಗುವ ಬದಲು ದಿನೇ ದಿನೇ ಹೆಚ್ಚಾಗತೊಡಗಿದೆ. ಕಾಲದಿಂದಲೂ ತಾಲ್ಲೂಕಿನಲ್ಲಿ ಗುಂಪುಗಾರಿಕೆಯನ್ನೇ ಹೊದ್ದು ಮಲಗಿರುವ ಜೆಡಿಎಸ್‌ನಲ್ಲಿ ಅನಿತಾ ಕುಮಾರಸ್ವಾಮಿ ಅವರ ಘೋಷಣೆ ಹೊಸ ಗಾಯದ ಗುರುತಿಗೆ ನಾಂದಿಯಾಗುವ ಎಲ್ಲ ಲಕ್ಷಣಗಳನ್ನೂ ತೆರೆದಿಟ್ಟಿದೆ. `ರಾಮನಗರ ಜಿ.ಪಂ. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷ ಸ್ಥಾನವೇರಿದ ಯು.ಪಿ.ನಾಗೇಶ್ವರಿ ಮತ್ತವರ ಪತಿ ಬೋರ್‌ವೆಲ್ ರಾಮಚಂದ್ರ ಅವರ ಬಗ್ಗೆ ಪಕ್ಷ ಕಠಿಣ ಕ್ರಮ ತೆಗೆದುಕೊಳ್ಳದಿರುವುದೇ ಜೆಡಿಎಸ್‌ನ ಗುಂಪುಗಾರಿಕೆ ಬಲಿಯಲು ಮೂಲ ಕಾರಣ~ ಎಂಬುದು ಹೆಸರು ಹೇಳಲಿಚ್ಛಿಸದ ಪಕ್ಷದ ಹಿರಿಯ ಸದಸ್ಯರೊಬ್ಬರ ಅಭಿಪ್ರಾಯ.ಚುನಾವಣೆಯಿಂದ ಚುನಾವಣೆಗೆ ಕ್ಷೀಣವಾಗುತ್ತಾ ನಡೆದಿರುವ ಕಾಂಗ್ರೆಸ್ ಕೂಡಾ ಇಂಥದೇ ಗುಂಪುಗಾರಿಕೆಯಿಂದ ನರಳುತ್ತಿದೆ. ಕಳೆದ ಎರಡು ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡಿದ್ದ ಕಾಂಗ್ರೆಸ್ ಈಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಕಿರಿಕಿರಿ ಅನುಭವಿಸುತ್ತಿದೆ.ತಾಲ್ಲೂಕು ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಹಾಗೆಯೇ ಉಳಿಸಿಕೊಂಡು ಕೇವಲ ನಗರ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಿರುವ ವಿಚಾರ ಈಗ ಮಾಜಿ ಹಾಗೂ ಹಾಲಿ ಅಧ್ಯಕ್ಷರ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ಎರಡು ಬಣಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ.ಹಾಲಿ ಅಧ್ಯಕ್ಷ ಎ.ಸಿ.ವೀರೇಗೌಡ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ವಿಚಾರವನ್ನು ಹೊರಗೆಡಹುತ್ತಿದ್ದಂತೆ ಹಿಂದೆ ಅಧ್ಯಕ್ಷರಾಗಿದ್ದ ಆರ್.ಎಂ.ಮಲವೇಗೌಡ ಸಿಡಿದೆದ್ದು `ಈಗಲೂ ನಾನೇ ಅಧ್ಯಕ್ಷ~ ಎಂದು ಗುಡುಗಿದ್ದಾರೆ. `ಕಾಂಗ್ರೆಸ್ ವರಿಷ್ಠರು ನನ್ನನ್ನು ವಿನಾಕಾರಣ ಕೆಳಗಿಳಿಸಿದ್ದಾರೆ. ಯಾವುದೇ ತಪ್ಪು ಮಾಡದ ನನ್ನನ್ನು ಯಾವುದೇ ನೋಟಿಸ್ ನೀಡದೇ ಕೆಳಗಿಳಿಸಿರುವುದರ ಹಿಂದೆ ಒಳ ರಾಜಕೀಯ ಅಡಗಿದೆ ಎಂದು ಅವರು ದೂರಿದ್ದಾರೆ.

 

ವರಿಷ್ಠರು ಮೊದಲು ಪಕ್ಷದ ನೀತಿ ನಿಯಮಗಳ ಪ್ರಕಾರ ನಡೆದುಕೊಳ್ಳಲಿ ಎಂದು ಹಿರಿಯರಿಗೇ ಅವರು ಸಡ್ಡುಹೊಡೆದು ನಿಂತಿರುವುದು ಎಲ್ಲ ಪಕ್ಷಗಳ ನಾಯಕರ ಪಾಲಿಗೆ ಚನ್ನಪಟ್ಟಣದ ರಾಜಕೀಯದ ತಿಳಿಗಾಳಿ ಎತ್ತ ಸಾಗಿದೆ ಎಂಬುದರ ದಿಕ್ಸೂಚಿಯಂತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.