ಹಗಲೆಲ್ಲ ಉಗುಳೂ ನುಂಗದೆ ಉಪವಾಸದಲ್ಲೇ ದುಡಿದ ಆ ಹಾಲುಗೆನ್ನೆಯ ಯುವಕ ಸಂಜೆಯಾಗುತ್ತಿದ್ದಂತೆ ಕಾಯಕಕ್ಕೆ ಬ್ರೇಕ್ ಹಾಕಿ, ಪಕ್ಕದ ಸ್ನೇಹಿತನ ಅಂಗಡಿಯ ಮೊಗಸಾಲೆಯಲ್ಲಿ ಪ್ಲಾಸ್ಟಿಕ್ ಚಾಪೆಯಲ್ಲಿ ಕುಳಿತು ಅಲ್ಲಾಹುವಿನ ಪ್ರಾರ್ಥನೆಗೆ ಸಿದ್ಧನಾದ. ಅಕ್ಕಪಕ್ಕದ ದುಕಾನ್ಗಳ ಹದಿನೈದು ಮಂದಿ ಯುವಕರು ಜೊತೆಗೂಡಿದರು. `ಬಿಸ್ಮಿಲ್ಲಾ ಇರ್ರೆಹಮಾನ್ ಎ ರಹೀಮ್~ (ದೇವರ ಹೆಸರಿನಲ್ಲಿ) ಎಂಬ ಸವಿವಾಣಿ ಕಿವಿಗೆ ಬಿದ್ದೊಡನೆ ಆ ದಂಡು ಅಂದಿನ ಉಪವಾಸ ಅಂತ್ಯಗೊಳಿಸುವ ಇಫ್ತಾರ್ ಹಂಚಿಕೊಂಡರು.

ಮೈಸೂರು ರಸ್ತೆಯ ಮಗ್ಗುಲಲ್ಲಿರುವ ಗೋರಿಪಾಳ್ಯದ ಜಾಮಿಯಾ ಮಸೀದಿಗೆ ಹೊಂದಿಕೊಂಡ ಮುಖ್ಯರಸ್ತೆ ಬದಿಯ ಅಂಗಡಿಗಳು ಪ್ರತಿದಿನವೂ ಇಫ್ತಾರ್ ಕೂಟಕ್ಕೆ ಸಾಕ್ಷಿಯಾಗುತ್ತಿವೆ. ಸುನ್ನಿ ಪಂಗಡಕ್ಕೆ ಸೇರಿದ, ಕೆಳಮಧ್ಯಮ ಹಾಗೂ ಬಡವರೇ ಹೆಚ್ಚಾಗಿರುವ ಮುಸ್ಲಿಮರು ಈ ಪ್ರದೇಶದಲ್ಲಿದ್ದಾರೆ. ಇಕ್ಕಟ್ಟಾದ ರಸ್ತೆಗಳು, ಎಂದೂ ದುರಸ್ತಿಯಾಗದ ಮೋರಿಗಳು, ಅವೆಲ್ಲ ಮಾಮೂಲಿ ಎಂಬಂತೆ ಒಪ್ಪಿಕೊಂಡು ಅಲ್ಲಲ್ಲೇ ಬದುಕುತ್ತಿರುವ ಇಲ್ಲಿನ ನಾಗರಿಕರಿಗೆ ಕೂಲಿಯೇ ಜೀವನಾಧಾರವಾದರೂ ರಂಜಾನ್ ಮಾಸಾಚರಣೆಯಲ್ಲಿ ಇನ್ನಿಲ್ಲದ ಶ್ರದ್ಧೆ, ಭಕ್ತಿ.

ಮೈಸೂರು ಮೂಲದ ಎಲೆಕ್ಟ್ರಿಷಿಯನ್ ಫಿರೋಜ್ಖಾನ್ ಅವರ ದಿನದ ದುಡಿಮೆ 300 ರೂ. ಅಣ್ಣ, ಅಕ್ಕ, ಅಮ್ಮ ಹಾಗೂ ಮಕ್ಕಳು ಸೇರಿದಂತೆ ಒಟ್ಟು ಹತ್ತು ಮಂದಿಯ ಸಂಸಾರ. ಹಬ್ಬ ಇನ್ನೂ ಆರು ತಿಂಗಳು ದೂರವಿದೆಯೆನ್ನುವಾಗಲೇ ಒಂದಿಷ್ಟು ಹಣ ಕೂಡಿಡುವ ಶಿಸ್ತು ಫಿರೋಜ್ ಅವರದು.

`ಒಂದೇ ಬಾರಿ ಮನೆಮಂದಿಗೆಲ್ಲಾ ಹೊಸ ಬಟ್ಟೆ ಕೊಂಡುಕೊಳ್ಳಲು ಸಾಧ್ಯವಾಗೋದಿಲ್ಲ. ಹಾಗಾಗಿ ಪ್ರತಿ ತಿಂಗಳು ದುಡಿಮೆಯ ಸ್ವಲ್ಪ ಹಣವನ್ನು ಕೂಡಿಟ್ಟು ರಂಜಾನ್ ಮಾಸದಲ್ಲಿ ಅದನ್ನು ಖರ್ಚು ಮಾಡುತ್ತೇವೆ. ಮಕ್ಕಳಿಗೆ ಹೊಸ ಬಟ್ಟೆ, ಅಮ್ಮ ಹಾಗೂ ಹೆಂಡತಿಗೆ ಸೀರೆ ಕೊಡಿಸುತ್ತೇನೆ~ ಎನ್ನುವಾಗ ಫಿರೋಜ್ಖಾನ್ ಮುಖದಲ್ಲಿ ನಿರಾಳ ಭಾವ.

ಮಸೀದಿಯಲ್ಲಿ ನಿತ್ಯ ಮೌಜಾನ್ (ನಮಾಜ್ಗಾಗಿ ಕೂಗುವುದು) ಮಾಡುವ ಮೊಹಮ್ಮದ್ ಅಲ್ತಾಫ್, `ಉಪವಾಸ ಇರೋದ್ರಿಂದ್ರ ಈ ವರ್ಷದ ಪಾಪವೆಲ್ಲಾ ದೂರವಾಗುತ್ತದೆ.
ವರ್ಷವಿಡೀ ಕಷ್ಟಕಾರ್ಪಣ್ಯಗಳು ಎದುರಾಗುವುದಿಲ್ಲ~ ಎಂದು ಹೇಳುತ್ತಾರೆ. ಅಲ್ಲಾಹುವಿನ ಬಗ್ಗೆ ಭಯವಿರುವವರು ಶ್ರದ್ಧೆಯಿಂದ ರೋಜಾ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಉಪವಾಸ ಮಾಡಲಾಗದ ಪರಿಸ್ಥಿತಿ ಇರುತ್ತದೆ ಎನ್ನುತ್ತಾರೆ ಅವರು.

ಹಳೆ ಕಂಪ್ಯೂಟರ್ಗಳ ವ್ಯಾಪಾರಿ ಸಲೀಂ ಪಾಷಾ ಹೀಗೆ ಹೇಳುತ್ತಾರೆ- `ನಮ್ಮ ಮನೆ ಅಂಗಡಿಯಿಂದ ದೂರವಿದೆ. ಹಾಗಾಗಿ ಅಂಗಡಿಯಲ್ಲೇ ಇಫ್ತಾರ್ ಮಾಡುತ್ತೇವೆ. ಅಕ್ಕಪಕ್ಕದ ಅಂಗಡಿಗಳಿಂದ ಸ್ನೇಹಿತರೂ ಬಂದು ಒಟ್ಟಿಗೆ ಆಹಾರ ಸೇವಿಸುತ್ತೇವೆ. ಬೆಳಗಿನ ಜಾವದ ಸೆಹರಿಯಾದ ಮೇಲೆ ಸಂಜೆಯವರೆಗೂ ಒಂದು ಹನಿ ನೀರನ್ನೂ ಕುಡಿಯದೇ ಶ್ರದ್ಧೆಯಿಂದ ಉಪವಾಸ ವ್ರತಾಚರಣೆ ಮಾಡುತ್ತೇವೆ~.

`ಜುಲೈ 19ರಂದು ಚಂದ್ರ ದರ್ಶನದೊಂದಿಗೆ ರೋಜಾ ಆರಂಭಿಸಿದ್ದೇವೆ. ಆಗಸ್ಟ್ 19ಕ್ಕೆ ಮತ್ತೆ ಚಂದ್ರ ದರ್ಶನದೊಂದಿಗೆ ಮುಕ್ತಾಯವಾಗುತ್ತದೆ. ಬಡವ ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರೂ ಪ್ರಾರ್ಥನೆ ಸಲ್ಲಿಸುತ್ತೇವೆ. ಮುಂಜಾನೆ ಖರ್ಜೂರ, ಸಮೋಸ, ಒಣ ಹಣ್ಣುಗಳು ಹಾಗೂ ಶೀರ್ ಕುರ್ಮಾ ಸೇವಿಸುತ್ತೇವೆ. ಸೆಹರಿ ಆದ ಮೇಲೆ ಮನೆಮಂದಿಯೆಲ್ಲ ಸೇರಿ ಖುರಾನ್ ಪಠಣ, ದಿನಕ್ಕೆ ಐದು ಬಾರಿ ಪ್ರಾರ್ಥನೆ. ಸಂಜೆ ಇಫ್ತಾರ್ ಆದ ಮೇಲೆ ಪ್ರಾರ್ಥನೆ ಸಲ್ಲಿಸುತ್ತೇವೆ~ ಎಂಬುದು ಹಸೀನಾ ತಾಜ್ ವಿವರಣೆ.

ಸಂಜೆ ವೇಳೆ ಸ್ನೇಹಿತೆಯರೊಂದಿಗೆ ಶಾಪಿಂಗ್ ಹೋಗುವುದು ಅವರಿಗಿಷ್ಟ. ಶಾಪಿಂಗ್ ಅಂದಾಕ್ಷಣ ದೊಡ್ಡ ದೊಡ್ಡ ಮಾಲ್ಗಳಿಗೆ ಇಲ್ಲಿನ ಮಂದಿ ಹೋಗುವುದಿಲ್ಲ.

ಗೋರಿಪಾಳ್ಯದಲ್ಲೇ ಇರುವ ಸಣ್ಣಪುಟ್ಟ ಅಂಗಡಿ, ತಳ್ಳುಗಾಡಿಗಳೇ ಇವರ ಮಾಲ್ಗಳು!
ಅಂದಿನ ಕೂಲಿಯನ್ನು ಅಂದೇ ಸಂಪಾದಿಸಿಕೊಂಡು ಬರುವ ಆಟೊ ಚಾಲಕರು, ತರಕಾರಿ ಮಾರುವವರು, ತಳ್ಳುಗಾಡಿ ವ್ಯಾಪಾರಿಗಳು ತಮ್ಮ ಕೈಲಾದ ರೀತಿಯಲ್ಲಿ ರಂಜಾನ್ ಆಚರಿಸುತ್ತಾರೆ. ಇಲ್ಲಿನ ಸಣ್ಣಪುಟ್ಟ ಚಿಲ್ಲರೆ ಅಂಗಡಿಗಳೇ ವ್ಯಾಪಾರ ತಾಣ. ಬೆಳಿಗ್ಗೆಯಿಂದ ಸಂಜೆವರೆಗೆ ಬೆವರು ಸುರಿಸಿ ದುಡಿಯುವ ಕೈಗಳು ಸಂಜೆಯಾಗುತ್ತಿದ್ದಂತೆ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ನಿತ್ಯ ನೋಟ. ಸಹೋದರತ್ವ, ಸಮಪಾಲು, ಸಮಬಾಳಿನ ಮಂತ್ರವನ್ನು ಧೇನಿಸುತ್ತ ಈ ಮಾಸವನ್ನು ಕಳೆಯುತ್ತಾರೆ.

ಸ್ವೇಚ್ಛೆ, ಸ್ವಾರ್ಥ ಮತ್ತು ಎಲ್ಲಾ ವಿಧದ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಉದ್ದೇಶದ ಈ ವ್ರತಾಚರಣೆ ಮೇಲು-ಕೀಳು ಎಂಬ ಭೇದವಿಲ್ಲದೆ ನೆರವೇರುತ್ತದೆ. ಕೊನೆಗುಳಿಯುವುದೊಂದೇ ಭಕ್ತಿ ಮಂತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.