ಭಾನುವಾರ, ಮೇ 9, 2021
27 °C

ಗ್ರಂಥಾಲಯಕ್ಕೆ ಗ್ರಹಣ

ಸವಿತಾ ಎಸ್. Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಗ್ರಂಥಾಲಯ ಜನಸಾಮಾನ್ಯನ ವಿಶ್ವವಿದ್ಯಾಲಯವಿದ್ದಂತೆ ಎಂಬ ಮಾತಿದೆ. ಜ್ಞಾನಾರ್ಜನೆಗೆ ನೆರವಾಗಬೇಕಾದ ಗ್ರಂಥಾಲಯದಲ್ಲಿಯೂ ಎಲ್ಲಾ ಸಾರ್ವಜನಿಕ ಇಲಾಖೆಗಳಲ್ಲಿದ್ದಂತೆ ಹಲವಾರು ಸಮಸ್ಯೆಗಳಿವೆ. ಉತ್ತಮ ಸೇವೆ ಬಯಸುವ ನಾಗರಿಕರಿಗೆ ಈ ಸಮಸ್ಯೆಯ ತೀವ್ರತೆ ವಿವರಿಸಲಾಗದ ಪರಿಸ್ಥಿತಿಯಲ್ಲಿ ಅಧಿಕಾರಿಗಳಿದ್ದಾರೆ. ಪುಸ್ತಕಗಳಿಂದಿಡಿದು ಕುರ್ಚಿ, ಜಾಗ ಎಲ್ಲದರಲ್ಲೂ ಇಲ್ಲಿ ಸಮಸ್ಯೆ ತಳುಕುಹಾಕಿಕೊಂಡಿದೆ. ಸರ್ಕಾರಿ ಗ್ರಂಥಾಲಯಗಳೆಂದರೆ ಅವ್ಯವಸ್ಥೆಯ ಮೂಲ ಎಂಬಂತಾಗಿದೆ.

`ಸರ್ಕಾರಿ ಇಲಾಖೆಗಳಲ್ಲಿ ಅತಿ ನಿರ್ಲಕ್ಷಿತ ವಿಭಾಗ ಗ್ರಂಥಾಲಯ. ಆಸ್ಪತ್ರೆ, ಬಸ್‌ಸ್ಟ್ಯಾಂಡ್‌ಗಳಿಗೆ ಇರುವಂತೆ ಸ್ವಂತ ಕಟ್ಟಡ ನಮಗಿಲ್ಲ. ಇತರ ವಿಭಾಗಗಳಿಗೆ ನೀಡುವ ಪ್ರಾಶಸ್ತ್ಯವೂ ನಮಗೆ ನೀಡಿಲ್ಲ. ನಗರದಲ್ಲಿರುವ ಒಟ್ಟು 298 ವಾರ್ಡ್‌ಗಳಲ್ಲೂ ಪ್ರತ್ಯೇಕವಾದ ಗ್ರಂಥಾಲಯ ತೆರೆಯಬೇಕೆಂಬ ನಿಯಮವೂ ಇದೆ, ಅದಕ್ಕೆ ಬೇಡಿಕೆಯೂ ಇದೆ. ಆದರೆ ಅದನ್ನು ಕಾರ್ಯಗತಗೊಳಿಸಲು ಇನ್ನೂ ಸಾಧ್ಯವಾಗಿಲ್ಲ~ ಎಂಬ ನೋವು ನಿರ್ದೇಶಕ ವೆಂಕಟೇಶ್ ಅವರದ್ದು.

ನಗರದಲ್ಲಿರುವ 7 ಗ್ರಂಥಾಲಯಗಳಿಗೆ ಮಾತ್ರ ಸ್ವಂತ ಕಟ್ಟಡದ ಭಾಗ್ಯ ಸಿಕ್ಕಿದೆ. ಉಳಿದಂತೆ 24 ಬಾಡಿಗೆ ಹಾಗೂ 130 ಪಾಲಿಕೆ ಕಟ್ಟಡಗಳು. ಪುಸ್ತಕಗಳನ್ನು ವಿಶಾಲವಾದ ಸ್ಥಳದಲ್ಲಿ ಸಮರ್ಪಕವಾಗಿ ಜೋಡಿಸಿಟ್ಟರೆ ಮಾತ್ರ ಸಾರ್ವಜನಿಕರಿಗೆ ಹುಡುಕಲು ಸುಲಭವಾಗುತ್ತವೆ. ನಮ್ಮ ಹಲವಾರು ಶಾಖೆಗಳಲ್ಲಿ ಸ್ಥಳದ ಅಭಾವವಿದೆ. ಒಂದು ಸಣ್ಣ ಕೊಠಡಿ ಬಾಡಿಗೆ ಪಡೆದು ಅಲ್ಲಿ ಗ್ರಂಥಾಲಯ ಆರಂಭಿಸುವುದೇನೋ ಸುಲಭವೇ, ಆದರೆ ನಿರ್ವಹಣೆ ಅಸಾಧ್ಯ ಎನ್ನುತ್ತಾರೆ ಅನುಭವಿ ಗ್ರಂಥಪಾಲಕರು.

1968ರ ಗ್ರಂಥಾಲಯ ಕಾಯ್ದೆ ಅನ್ವಯ ಸ್ಥಳೀಯ ಸಂಸ್ಥೆಗಳು ಆಸ್ತಿತೆರಿಗೆಯಲ್ಲಿ ಶೇ.6ನ್ನು ಗ್ರಂಥಾಲಯ ತೆರಿಗೆಯಾಗಿ ಸ್ವೀಕರಿಸಿ ಅದನ್ನು ಇಲಾಖೆಗೆ ವರ್ಗಾಯಿಸಬೇಕು. ಇದರ ಹೊರತಾಗಿ ರಾಜ್ಯ ಬಜೆಟ್‌ನಲ್ಲಿ ಈ ಇಲಾಖೆಗೆ ಯಾವುದೇ ವಿಶೇಷ ಸವಲತ್ತು ನೀಡುವುದಿಲ್ಲ. ವಿಪರ್ಯಾಸವೆಂದರೆ ಕಳೆದ ಕೆಲವು ವರ್ಷಗಳಿಂದ ಪಾಲಿಕೆ ಕರಪಾವತಿ ಮಾಡದೆ ಉಳಿಸಿಕೊಂಡ ಮೊತ್ತವೇ 115 ಕೋಟಿ!

ಈ ಕುರಿತು ಇತ್ತೀಚೆಗಷ್ಟೇ ಸಭೆ ಕರೆದು ಪಾಲಿಕೆಯೇ ಆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಈ ಹಣ ದೊರೆತರೆ ಇಲಾಖೆಯ ಶೇ.80ರಷ್ಟು ಸಮಸ್ಯೆಗಳು ಬಗೆಹರಿದಂತೆ. ಇದರ ಹೊರತಾಗಿ ಪ್ರತಿ ವಲಯಕ್ಕೆ ನಗರ ಶುಲ್ಕ ಪರಿಹಾರ ಧನದ ಹೆಸರಿನಲ್ಲಿ 1 ಲಕ್ಷ ನೀಡಲಾಗುತ್ತದೆ. ಈ ಮೊತ್ತದಲ್ಲಿ ಗ್ರಂಥಾಲಯ ನಿರ್ವಹಣೆ, ಸಿಬ್ಬಂದಿಗಳ ವೇತನ, ಬೇಡಿಕೆಯ ಪುಸ್ತಕಗಳನ್ನು ಪೂರೈಸುವುದು ಹೇಗೆ ಸಾಧ್ಯ ಎಂಬುದು ನಿರ್ದೇಶಕರ ಪ್ರಶ್ನೆ.

ಇಲಾಖೆಯಲ್ಲಿ ಒಟ್ಟು 150 ಗ್ರಂಥಾಲಯ ಸಹಾಯಕರ ಕೊರತೆ ಇದೆ. ಅನೇಕ ಬಾರಿ ಬೇಡಿಕೆ ಸಲ್ಲಿಸಿದ ಬಳಿಕ ಪ್ರಸಕ್ತ ಸಾಲಿನಲ್ಲಿ 20 ಸಿಬ್ಬಂದಿಗಳನ್ನು ಒದಗಿಸಿ ಕೈ ತೊಳೆದುಕೊಂಡಿದೆ. 2012ರಲ್ಲಿ 150 ಮಂದಿ ಹಾಗೂ 13ನೇ ಸಾಲಿನಲ್ಲಿ ಶೇ.60ರಷ್ಟು ಮಂದಿ ನಿವೃತ್ತಿ ಹೊಂದಲಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡದೆ ಹೋದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ.

ಗ್ರಂಥಾಲಯ ಪದೇ ಪದೇ ಜನ ಬಂದು ಹೋಗುವ ಸ್ಥಳವಾದ್ದರಿಂದ ಸ್ವಚ್ಛವಾಗಿಟ್ಟುಕೊಳ್ಳುವುದು ಅನಿವಾರ್ಯ. ಪ್ರತಿ ಗ್ರಂಥಾಲಯದಲ್ಲೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು ಅದನ್ನು ಚೊಕ್ಕವಾಗಿಟ್ಟುಕೊಳ್ಳಲು ನೌಕರರನ್ನು ನೇಮಿಸಿಕೊಂಡರೆ ವೇತನ ನೀಡಲು ನಮ್ಮಲ್ಲಿ ಬಂಡವಾಳವಿಲ್ಲ. ಸ್ವಚ್ಛವಾಗಿಲ್ಲ ಎಂದಾದರೆ ಸಾರ್ವಜನಿಕರಿಂದ ಟೀಕೆ ಎದುರಿಸಬೇಕಾಗುತ್ತದೆ. ಇನ್ನು ಗುಣಮಟ್ಟದ ಸೇವೆಯ ಮಾತೆಲ್ಲಿ ಎಂಬ ಆಕ್ರೋಶ ಉಪನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಅವರದ್ದು.

ಗ್ರಂಥಾಲಯದಲ್ಲಿ ಎಲ್ಲಾ ಪುಸ್ತಕಗಳ ಮಾಹಿತಿ ಕಂಪ್ಯೂಟರ್‌ನಲ್ಲಿ ದೊರೆಯುವಂತೆ ಮಾಡುವ ತಂತ್ರಜ್ಞಾನ ಹತ್ತು ವರ್ಷಗಳ ಹಿಂದೆಯೇ ಪರಿಚಯಿಸಲ್ಪಟ್ಟಿದೆ. ಹೀಗಿದ್ದೂ ಇಲಾಖೆಯಲ್ಲಿ ಈ ಕುರಿತಾದ ಪರಿಣಿತರಿಲ್ಲ. ಇಂದಿಗೂ ಶಾಖೆಗಳಲ್ಲಿ ಕಂಪ್ಯೂಟರ್ ಅಳವಡಿಸಬೇಕಾದರೆ ಹೊರಗುತ್ತಿಗೆಯನ್ನೇ ಅವಲಂಬಿಸಬೇಕಾಗಿದೆ.

ಕೆಲ ಓದುಗರು ಹಳೆ ಲೇಖಕರ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸುತ್ತಾರೆ. ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಆ ವರ್ಷದಲ್ಲಿ ರಚಿತವಾದ ಪುಸ್ತಕವನ್ನಷ್ಟೇ ಆಯ್ಕೆ ಮಾಡುತ್ತಾರೆ. ಅದರ ಹೊರತಾಗಿ ಎರಡು ವರ್ಷಗಳ ಹಿಂದಿನ ಪುಸ್ತಕವನ್ನು ತರಿಸಲಷ್ಟೇ ನಮಗೆ ಅನುಮತಿ ಇದೆ. ಓದುಗರು ರಾಧಾದೇವಿ, ಶಿವರಾಮ ಕಾರಂತ, ಅನುಸೂಯಮ್ಮ ಮೊದಲಾದವರ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದರೆ ನಾವು ಕೈಚೆಲ್ಲಿ ಕುಳಿತುಕೊಳ್ಳಬೇಕಷ್ಟೇ ಎಂಬ ಬೇಸರ ಉಪನಿರ್ದೇಶಕಿ ಪುಷ್ಪಲತಾ ಅವರಿಗೆ.

ಕುರ್ಚಿಗಳೇ ಇಲ್ಲ

ಬೆಳಿಗ್ಗೆ ಹೊತ್ತು ಬಂದರೆ ಇಲ್ಲಿ ಕೂತು ಓದಲು ಕುರ್ಚಿಗಳೇ ಇರುವುದಿಲ್ಲ. ಮನೆಯಲ್ಲಿ ಎಲ್ಲಾ ಪತ್ರಿಕೆಗಳು ತರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ತಾನೇ ನಾವು ಗ್ರಂಥಾಲಯಕ್ಕೆ ಓದಲು ಬರುತ್ತೇವೆ. ಇಲ್ಲಿ ನೋಡಿದರೆ...ಹೀಗೆ. ಇನ್ನು ನಮಗೆ ಉಪಯೋಗವಾಗುವ ಐಎಎಸ್, ಐಪಿಎಸ್ ಪರೀಕ್ಷೆಗಳ ಪುಸ್ತಕವನ್ನು ಪರಾಮರ್ಶನ (ರೆಫರೆನ್ಸ್) ವಿಭಾಗದಲ್ಲಿಟ್ಟು ಮನೆಗೊಯ್ಯದಂತೆ ನಿರ್ಬಂಧ ಹೇರಿದ್ದಾರೆ. ಇದರ ವಿದ್ಯಾರ್ಥಿಗಳಾದ ನಮಗೆ ಪ್ರಯೋಜನವಾಗುತ್ತಿಲ್ಲ.

- ದೀಪಕ್ ವಿದ್ಯಾರ್ಥಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.