ಶುಕ್ರವಾರ, ಮೇ 14, 2021
30 °C
`ಸುಸ್ಥಿರ ಆರೋಗ್ಯ ವ್ಯವಸ್ಥೆ: ನಿರ್ವಹಣೆ' ಕುರಿತ ವಿಚಾರ ಸಂಕಿರಣದಲ್ಲಿ ವಿಷಾದ

ಗ್ರಾಮೀಣರಿಗೆ ದೊರೆಯದ ಆರೋಗ್ಯ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಅದರಲ್ಲಿ ಒಂದು ಲಕ್ಷದ 20 ಸಾವಿರ ಮಂದಿ ಮಾತ್ರ ಶಸ್ತ್ರಚಿಕಿತ್ಸೆ ಪಡೆದುಕೊಳ್ಳುವಷ್ಟು ಆರ್ಥಿಕ ಸುಸ್ಥಿತಿಯಲ್ಲಿದ್ದಾರೆ' ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿಶೆಟ್ಟಿ ತಿಳಿಸಿದರು.ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಸುಸ್ಥಿರ ಆರೋಗ್ಯ ವ್ಯವಸ್ಥೆ: ನಿರ್ವಹಣೆ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಇಂದಿಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ಆರೋಗ್ಯ ಕೇಂದ್ರದ ಸುತ್ತಮುತ್ತಲೂ ವೈದ್ಯಕೀಯ ಸೌಲಭ್ಯವಿರುವುದಿಲ್ಲ. ಇದರಿಂದ ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ದೊರೆಯುತ್ತಿಲ್ಲ.  ಹೀಗಿದ್ದರೂ ವ್ಯವಸ್ಥೆ ಕಣ್ಮುಚ್ಚಿ ಕುಳಿತಿರುವುದಕ್ಕೆ ಬೇಸರವೆನಿಸುತ್ತದೆ' ಎಂದು ವಿಷಾದ ವ್ಯಕ್ತಪಡಿಸಿದರು.`ಮುಂದಿನ ಐದು ವರ್ಷಗಳಲ್ಲಿ ನರ್ಸ್ ಸಿಬ್ಬಂದಿ ಕೊರತೆ ತೀವ್ರಗೊಳ್ಳಲಿದೆ. ಈಗಾಗಲೇ ನರ್ಸಿಂಗ್ ಕೋರ್ಸ್‌ಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ನಡೆದಿಲ್ಲ. ಇದರಿಂದ ಹಳೆ ಮಾದರಿಯಲ್ಲಿಯೇ ಈ ವೃತ್ತಿ ಮುಂದುವರಿದಿರುವುದರಿಂದ ಜಾಗತಿಕ ಮಟ್ಟದಲ್ಲಿ ದೇಶದ ನರ್ಸಿಂಗ್ ಶಿಕ್ಷಣ ಮನ್ನಣೆ ಕಳೆದುಕೊಳ್ಳುತ್ತಿದೆ' ಎಂದರು.`ಲಕ್ಷಾಂತರ ಗರ್ಭಿಣಿಯರಿದ್ದರೂ, ಚಿಕಿತ್ಸೆ ನೀಡಲು ಕೇವಲ 26 ಸಾವಿರ ಮಂದಿ ಸ್ತ್ರೀರೋಗ ತಜ್ಞರಿದ್ದಾರೆ. ತಾಯಿಯ ಮರಣ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದನ್ನು ಈ ಅಂಕಿ ಅಂಶ ಸುಳ್ಳುಮಾಡುತ್ತದೆ. ಕಡಿಮೆ ಶುಲ್ಕದಲ್ಲಿ ಆರೋಗ್ಯ ವಿಮೆ ಯೋಜನೆಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಒದಗಿಸುವ ಅಗತ್ಯವಿದೆ' ಎಂದರು.`ಕೋಟಿಗಟ್ಟಲೆ ಹಣವನ್ನು ನೀರಿನಂತೆ ಖರ್ಚು ಮಾಡಿ ಆಸ್ಪತ್ರೆಗಳನ್ನು ಕಟ್ಟಿಸುವ ಬದಲು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸರಳತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರೊಂದಿಗೆ ವೈದ್ಯಕೀಯ ತಜ್ಞರು, ಅರೆವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸುವತ್ತ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು' ಎಂದರು.ಫೋರ್ಟಿಸ್ ಹೆಲ್ತ್ ಕೇರ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವಿಶಾಲ್ ಬಾಲಿ, `ಆರ್ಥಿಕ ಸಮಸ್ಯೆಗಳ ನಡುವೆಯೂ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವತ್ತ ಎಲ್ಲರೂ ಒಂದುಗೂಡುವ ಅಗತ್ಯವಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.