ಮಂಗಳವಾರ, ಏಪ್ರಿಲ್ 20, 2021
27 °C

ಗ್ರಾಮ ಸಭೆ ವಿಳಂಬ: ಸಿಗದ ಮನೆ

ಪ್ರಜಾವಾಣಿ ವಾರ್ತೆ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ವಸತಿ ಯೋಜನೆಯ ಪ್ರಗತಿಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯಂತ ಕೆಳಗಿನ ಸ್ಥಾನ ಪಡೆದಿದೆ. ಕಳೆದ ಐದಾರು ವರ್ಷಗಳಿಂದಲೂ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಮಂಜೂರಾದ ಮನೆಗಳು ಫಲಾನುಭವಿಗಳಿಗೆ ಸಿಗದಂತಾಗಿದೆ.ಬಸವ ವಸತಿ, ಇಂದಿರಾ ಆವಾಸ್, ಗ್ರಾಮೀಣ ಅಂಬೇಡ್ಕರ್, ವಿಶೇಷ ಅಭಿವೃದ್ಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಮನೆಗಳನ್ನು ಪಡೆದಿರುವ ಫಲಾನುಭವಿಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಎಂದು ಗ್ರಾಮೀಣ ಭಾಗದ ಜನರು ದೂರುವಂತಾಗಿದೆ.ಕಳೆದ ಎರಡು ವರ್ಷಗಳಲ್ಲಿ ಮಂಜೂರಾದ ಮನೆಗಳ ನಿರ್ಮಾಣವೂ ಆಮೆಗತಿಯಲ್ಲಿ ಸಾಗುತ್ತಿದೆ. ಆರಂಭದಲ್ಲಿಯೇ ತೊಡಕು ಎದುರಾಗುತ್ತಿದ್ದು, ಫಲಾನುಭವಿಗಳ ಆಯ್ಕೆಯೇ ಗೊಂದಲಮಯವಾಗಿ ಪರಿಣಮಿಸುತ್ತಿದೆ. 2010-11 ರಲ್ಲಿ ಜಿಲ್ಲೆಗೆ ಬಸವ ವಸತಿ ಯೋಜನೆಯಡಿ 27,571 ಗುರಿ ನೀಡಲಾಗಿದ್ದು, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 10,137 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಅದರಲ್ಲಿ 10,137 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳ ಪೈಕಿ ಈವರೆಗೆ 205 ಮನೆಗಳು ಮಾತ್ರ ಪೂರ್ಣಗೊಂಡಿವೆ. 2027 ಮನೆಗಳು ವಿವಿಧ ಹಂತದಲ್ಲಿವೆ.ಇನ್ನು ಇಂದಿರಾ ಆವಾಸ್ ಯೋಜನೆಯಡಿ 2011-12 ರಲ್ಲಿ 5,148 ಮನೆಗಳ ಗುರಿ ನೀಡಲಾಗಿದ್ದು, ಅದರಲ್ಲಿ 4,895 ಮನೆಗಳಿಗೆ ನಿಗಮದಿಂದ ಮಂಜೂರಾತಿ ನೀಡಲಾಗಿದೆ. ಎಲ್ಲ ಮನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಕೇವಲ 335 ಮನೆಗಳು ನಿರ್ಮಾಣಗೊಂಡಿದ್ದು, ಇನ್ನೂ 2,556 ಮನೆಗಳು ನಿರ್ಮಾಣ ಹಂತದಲ್ಲಿಯೇ ಉಳಿದಿವೆ.ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಒಟ್ಟು 37,129 ಮನೆಗಳ ಗುರಿ ನೀಡಲಾಗಿದ್ದು, 15,748 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಎಲ್ಲ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದರೂ, ಕೇವಲ 576 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಇನ್ನೂ 4,890 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳೇ ನೀಡುತ್ತಾರೆ.ತಾಲ್ಲೂಕುವಾರು ಪ್ರಗತಿಯೂ ಕುಂಠಿತಗೊಳ್ಳುತ್ತಿದೆ. 2005-06 ರಿಂದ ಶಹಾಪುರ ತಾಲ್ಲೂಕಿನಲ್ಲಿ 12,389 ಮನೆಗಳ ಗುರಿ ನೀಡಲಾಗಿದೆ. ಅದರಲ್ಲಿ 680 ಮನೆಗಳು ಪೂರ್ಣಗೊಂಡಿದ್ದು, ಇನ್ನೂ 3,159 ಮನೆಗಳು ಆರಂಭವಾಗಿಲ್ಲ. ಸುರಪುರ ತಾಲ್ಲೂಕಿನಲ್ಲಿ 18,460 ಮನೆಗಳ ಗುರಿ ನೀಡಲಾಗಿದ್ದು, 8170 ಮನೆಗಳು ಪೂರ್ಣವಾಗಿವೆ. ಇನ್ನೂ 7,395 ಮನೆಗಳ ನಿರ್ಮಾಣ ಆರಂಭವಾಗಬೇಕಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 12,330 ಮನೆಗಳ ಗುರಿ ನೀಡಲಾಗಿದೆ. ಅವುಗಳ ಪೈಕಿ 5,666 ಮನೆಗಳು ನಿರ್ಮಾಣಗೊಂಡಿದ್ದು, ಇನ್ನೂ 3,197 ಮನೆಗಳ ನಿರ್ಮಾಣ ಶುರುವಾಗಬೇಕಾಗಿದೆ.ನಡೆಯದ ಗ್ರಾಮ ಸಭೆಗಳು: ವಸತಿ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆಗಳನ್ನು ನಡೆಸಬೇಕಾಗಿದೆ. ಆದರೆ ಪಿಡಿಒಗಳು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವಾರು ಜನರು ಇಲ್ಲಿ ಸೇರಬೇಕಾಗಿರುವುದರಿಂದ ಈ ಸಭೆಗಳನ್ನು ಕರೆಯುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಗ್ರಾಮದಲ್ಲಿ ಬಣ ರಾಜಕಾರಣ ನಡೆಯುತ್ತಿರುವುದರಿಂದ ಫಲಾನುಭವಿಗಳ ಆಯ್ಕೆಯಲ್ಲೂ ಇದು ಪ್ರತಿಧ್ವನಿಸುತ್ತಿದೆ. ಇದರಿಂದಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬೀಳುತ್ತಿದೆ. ಇತ್ತೀಚೆಗೆ ನಾಯ್ಕಲ್ ಗ್ರಾಮ ಪಂಚಾಯಿತಿಯಲ್ಲಿಯೂ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು ಎಂದು ಕ್ಷೇತ್ರದ ಜನರು ದೂರುತ್ತಿದ್ದಾರೆ.ಗ್ರಾಮ ಸಭೆಗಳನ್ನು ನಿಗದಿಯಂತೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಿದಲ್ಲಿ ಯಾವುದೇ ತೊಂದರೆ ಉಂಟಾಗದು. ಆದರೆ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಫಲಾನುಭವಿಗಳು ಮನೆಗಾಗಿ ಕಾಯುತ್ತಲೇ ಇರುವಂತಾಗಿದೆ.

ಅವ್ಯವಹಾರದ ವಾಸನೆ: ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿರುವುದನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವಿಶೇಷಾಧಿಕಾರಿಗಳೇ ಪತ್ತೆ ಮಾಡಿದ್ದಾರೆ.ತಾಲ್ಲೂಕಿನ ಬಾಡಿಯಾಳ ಗ್ರಾಮದಲ್ಲಿ ಸುಮಾರು 231 ಮನೆಗಳು ಮಂಜೂರಾಗಿದ್ದರೂ, ನಿಗಮದ ವಿಶೇಷಾಧಿಕಾರಿಯ ಭೇಟಿ ವೇಳೆ ಸಿಕ್ಕಿದ್ದು ಕೇವಲ 21. ಅಲ್ಲದೇ ಉಳಿದ ಫಲಾನುಭವಿಗಳಿಗೆ, ಮನೆಗಾಗಿ ತಮ್ಮ ಹೆಸರನ್ನೂ ಆಯ್ಕೆ ಮಾಡಲಾಗಿದೆ ಎಂಬ ವಿಷಯವೂ ತಿಳಿದಿಲ್ಲ. ಶಹಾಪುರ ತಾಲ್ಲೂಕಿನ ವಡಗೇರಾದಲ್ಲೂ ಇದೇ ರೀತಿಯ ಅವ್ಯವಹಾರ ನಡೆದಿರುವುದನ್ನು ನಿಗಮದ ಅಧಿಕಾರಿಗಳೇ ಪತ್ತೆ ಮಾಡಿದ್ದಾರೆ.ಇದರ ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುಗಳು ವ್ಯಾಪಕವಾಗಿದೆ. ವಸತಿ ಸಚಿವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸ್ವತಃ ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ ಅವರೇ ಪಿಡಿಒಗಳ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.ಹಲವಾರು ಪಂಚಾಯಿತಿಗಳಲ್ಲಿ ಮನೆ ಹಂಚಿಕೆಯಲ್ಲಿ ಸಾಕಷ್ಟು ಅವ್ಯವಹಾರ ಮಾಡಲಾಗುತ್ತಿದೆ. ಇದೆಲ್ಲದಕ್ಕೂ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಇದಕ್ಕಾಗಿಯೇ ವಸತಿ ಇಲಾಖೆಯಿಂದಲೋ ಅಥವಾ ವಸತಿ ನಿಗಮದಿಂದಲೋ ವಿಶೇಷ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು ಎನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಒತ್ತಾಯ.ಎಸಿಗೆ ಅಧಿಕಾರ: ವಸತಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ಸಾಧನೆಯನ್ನು ಗಮನಿಸಿದಂತಿರುವ ವಸತಿ ಖಾತೆ ಸಚಿವ ವಿ. ಸೋಮಣ್ಣ, ಫಲಾನುಭವಿಗಳ ಆಯ್ಕೆಗಾಗಿ ಗ್ರಾಮ ಸಭೆ ನಡೆಯದೇ ಇದಲ್ಲಿ ಸಹಾಯಕ ಆಯುಕ್ತರೇ ಸಭೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ, ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅಂದೇ ಪಂಚಾಯಿತಿ ಸೂಚನಾ ಫಲಕದಲ್ಲಿ ಪಟ್ಟಿ ಪ್ರಕಟಿಸಬೇಕು. ಆ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ವಸತಿ ಇಲಾಖೆಗೆ ಸಲ್ಲಿಸುವಂತೆಯೂ ಸೂಚನೆ ನೀಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿವೆ.ಜಿಲ್ಲೆಯಲ್ಲಿ ವಸತಿರಹಿತ ಜನರಿಗೆ ಸೂರು ಒದಗಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಸಮರ್ಪಕವಾಗಿ ಅನುಷ್ಠಾನ ಆಗದೇ ಇರುವುದರಿಂದ ಜನರು ಈಗಲೂ ಗುಡಿಸಲುಗಳಲ್ಲಿಯೇ ವಾಸಿಸುವಂತಹ ಅನಿವಾರ್ಯತೆ ಇದೆ. ಇನ್ನಾದರೂ ಅಧಿಕಾರಿಗಳು ಪ್ರಕ್ರಿಯೆ ತೀವ್ರಗೊಳಿಸಬೇಕು. ಫಲಾನುಭವಿಗಳ ಆಯ್ಕೆ ಮಾಡಿ, ಶೀಘ್ರ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ವಿದ್ಯಾರ್ಥಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಪ್ಪ ಬಿರಾಳ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.