ಗುರುವಾರ , ಜನವರಿ 23, 2020
28 °C
ನಗರ ಸಂಚಾರ

ಘಟಿಕೋತ್ಸವ ಸಂಭ್ರಮದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ

ಪ್ರಜಾವಾಣಿ ವಾರ್ತೆ/ ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರಾಜ್ಯದ ಪ್ರಥಮ ಹಾಗೂ ದೇಶದ ಮೂರನೇ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂಬ ಪ್ರಸಿದ್ಧಿಗೆ ಪಾತ್ರವಾಗಿರುವ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮೂರನೇ ಘಟಿಕೋತ್ಸವದ ಸಂಭ್ರಮದಲ್ಲಿದೆ.ವಿಶ್ವವಿದ್ಯಾಲಯ ಪ್ರಾರಂಭಗೊಂಡು ಐದೇ ವರ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯತೊಡಗಿದೆ. ವಿಶ್ವವಿದ್ಯಾಲಯ ಅವರಣದಲ್ಲಿ ಬೃಹತ್‌ ಕಟ್ಟಡಗಳು ತಲೆ ಎತ್ತತೊಡಗಿವೆ. ಉದ್ಯಾನಗಿರಿ ನಿಧಾನವಾಗಿ ಹಸಿರಾಗುವ ಜೊತೆಗೆ ಹೆಸರಾಗತೊಡಗಿದೆ.ರಾಜ್ಯದ 23 ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ವಿಶ್ವವಿದ್ಯಾಲಯವು 7 ಮಹಾವಿದ್ಯಾಲಯ, ಒಂದು ಸ್ನಾತಕೋತ್ತರ ಕೇಂದ್ರ, 11 ಸಂಶೋಧನಾ ಕೇಂದ್ರಗಳು, 10 ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಗಳು ಹಾಗೂ 12 ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕಗಳನ್ನು ಒಳಗೊಂಡಿದೆ.ಸ್ನಾತಕೋತ್ತರ ತೋಟಗಾರಿಕೆ ಪದವಿಗೆ ಅಫ್ಘಾನಿಸ್ತಾನದ ಒಬ್ಬ ವಿದ್ಯಾರ್ಥಿ ಹಾಗೂ ಬಿ.ಎಸ್‌ಸಿ ತೋಟಗಾರಿಕೆಗೆಗೆ ಭೂತಾನ್‌ ಒಬ್ಬ ವಿದ್ಯಾರ್ಥಿ ಹಾಗೂ ಪಿ.ಎಚ್‌ಡಿ ಅಧ್ಯಯನಕ್ಕೆ ಸಿರಿಯಾ ದೇಶದ ವಿದ್ಯಾರ್ಥಿನಿಯೊಬ್ಬರು ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದಿರುವುದು ವಿಶೇಷ­ವಾಗಿದೆ. ರಾಜ್ಯ, ಹೊರರಾಜ್ಯ ಸೇರಿದಂತೆ ಒಟ್ಟು 1788 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

2011 ಡಿಸೆಂಬರ್‌ 27ರಂದು ನಡೆದ ವಿಶ್ವ­ವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ – 95 ಬಿಎಸ್‌ಸಿ ತೋಟಗಾರಿಕೆ ಮತ್ತು 11 ಎಂಎಸ್‌ಸಿ ತೋಟಗಾರಿಕಾ ಪದವಿಗಳನ್ನು ಹಾಗೂ 28 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.2012 ಡಿಸೆಂಬರ್‌ 21ರಂದು ನಡೆದ ದ್ವಿತೀಯ ಘಟಿಕೋತ್ಸವದಲ್ಲಿ 149 ವಿದ್ಯಾ­ರ್ಥಿಗಳಿಗೆ ಸ್ನಾತಕ ಪದವಿ ಮತ್ತು 49 ವಿದ್ಯಾರ್ಥಿ­ಗಳಿಗೆ ಸ್ನಾತಕೋತ್ತರ ಪದವಿ ಹಾಗೂ ಪ್ರತಿಭಾ­ವಂತ ವಿದ್ಯಾರ್ಥಿಗಳಿಗೆ 38 ಬಂಗಾರದ ಪದಕಗಳನ್ನು ನೀಡಲಾಗಿತ್ತು.ಇದೇ 23ರಂದು ನಡೆಯಲಿರುವ 3ನೇ ಘಟಿಕೋತ್ಸವದಲ್ಲಿ 203 ಸ್ನಾತಕ, 72 ಸ್ನಾತಕೋತ್ತರ ಹಾಗೂ 2 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ 41ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ.ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ­ಮಟ್ಟ­ದಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. 2013–14ನೇ ಸಾಳಿಗೆ ಐಸಿಎಆರ್‌ ನಡೆಸಿ­ರುವ ಜೆಆರ್‌ಎಫ್‌ ಪರೀಕ್ಷೆಯಲ್ಲಿ ವಿಶ್ವ­ವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಟ್ಟು 14 ರ್‍ಯಾಂಕ್‌­ಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.2012–13ನೇ ಸಾಲಿಗೆ ನವನದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಸಂಸ್ಥೆ(ಎಎಸ್‌ಆರ್‌ಬಿ) ನಡೆಸಿದ ಲಿಖಿತ  ಹಾಗೂ ಮೌಖಿಕ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯದ ಒಟ್ಟು 8 ವಿದ್ಯಾರ್ಥಿಗಳು ತೇರ್ಗಡೆಗೊಂಡು ಕಿರಿಯ ವಿಜ್ಞಾನಿಗಳಾಗಿ ನೇಮಕವಾಗಿದ್ದಾರೆ.‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಶ್ವ­ವಿದ್ಯಾಲಯದ ಕುಲಪತಿ ಡಾ.ಎಸ್‌.ಬಿ.ದಂಡಿನ್‌, ‘ಪ್ರತಿ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದು­ಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಒಟ್ಟು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕೇವಲ ಶೇ 15ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ದೊರೆಯುತ್ತಿದೆ. ಕಾರಣ ಪ್ರತಿ ಜಿಲ್ಲೆಯಲ್ಲೂ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಮನವಿ ಮಾಡಿದರು.ಕಟ್ಟಡಗಳು: ಉದ್ಯಾನಗಿರಿಯ ವಿಶ್ವ­ವಿದ್ಯಾ­ಲಯದ ಆವರಣದಲ್ಲಿ ಈಗಾಗಲೇ ನಾಲ್ಕು ವಿಭಾ­ಗೀಯ ಕಟ್ಟಡಗಳು, ಬೀಜ ಸಂಸ್ಕರಣಾ ಕೇಂದ್ರ, ಬೀಜ ಪರೀಕ್ಷಾ ಪ್ರಯೋಗಶಾಲೆ, ಈರುಳ್ಳಿ ಸಂಗ್ರಹಣಾ ಕಟ್ಟಡ, ವಿದ್ಯಾರ್ಥಿ ಮತ್ತು ವಿದ್ಯಾ­ರ್ಥಿನಿಯರ ವಸತಿನಿಲಯದ ಕಟ್ಟಡ, ಆರ್‌ಕೆ­ವಿವೈ ಕಟ್ಟಡದ ಮೇಲೆ ಮೊದಲನೇ ಮಹಡಿ, ಸಂಗ್ರಹಣಾ ಗೋದಾಮು ಕಟ್ಟಡ, ಆಟದ ಮೈದಾನ, ಕಂಪೌಂಡ್‌ ನಿರ್ಮಾಣ­ವಾಗಿದೆ. ₨ 30.90 ಕೋಟಿ ವೆಚ್ಚದಲ್ಲಿ ವಿಶ್ವ­ವಿದ್ಯಾಲಯದ ಮುಖ್ಯ ಆಡಳಿತ ಭವನ ನಿರ್ಮಾಣ ಪ್ರಗತಿಯಲ್ಲಿದೆ. ವಿಶ್ವವಿದ್ಯಾಲಯ ನಾಡಿನ ವಿದ್ಯಾರ್ಥಿಗಳ ಮತ್ತು ರೈತಾಪಿ ಜನರ ಆಶೋತ್ತರ ಈಡೇರಿಸುವ ನಿರಂತರ ಪ್ರಯತ್ನ ಮಾಡುತ್ತಾ ಪ್ರಗತಿಯತ್ತ ದಾಪುಗಾಲಿಡತೊಡಗಿದೆ.

ಪ್ರತಿಕ್ರಿಯಿಸಿ (+)