ಶುಕ್ರವಾರ, ಆಗಸ್ಟ್ 6, 2021
25 °C

ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನಗರದಲ್ಲಿ ಉತ್ಪನ್ನವಾಗುವ ಘನತ್ಯಾಜ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ನಿಟ್ಟನಲ್ಲಿ ಯೋಜನೆ ಸಿದ್ಧಗೊಳ್ಳುತ್ತಿದ್ದು ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದೆ ಎಂದು ನಗರಸಭಾ ಅಧ್ಯಕ್ಷ ಕಿರಣ್‌ಕುಮಾರ್‌ ಇಲ್ಲಿ ಹೇಳಿದರು.`ಘನತ್ಯಾಜ್ಯಗಳ ಪ್ರಾಥಮಿಕ ವಿಲೇವಾರಿಗಾಗಿ `ಗ್ರೀನ್‌ ಲೀಫ್‌~ ಪ್ರಶಸ್ತಿ ಪಡೆದಿರುವ ನಗರಸಭೆಯನ್ನು ಶನಿವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಭಿನಂದಿಸಿದ ಬಳಿಕ ಅವರು ಮಾತನಾಡಿದರು.`ನಗರಸಭೆ ಶೇ 100ರಷ್ಟು ತ್ಯಾಜ್ಯ ವಿಲೇವಾರಿಯಲ್ಲಿ ಸಾಧನೆ ಮಾಡಿದೆ ಎಂದೇನೂ ನಾವು ಅಂದುಕೊಂಡಿಲ್ಲ. ಆದರೆ ಆ ನಿಟ್ಟಿನಲ್ಲಿ ನಾವು ಸಮರ್ಥವಾಗಿ ಮುಂದುವರಿದಿದ್ದೇವೆ. ಈಗಾಗಲೇ ನಾವು ಕೆಲವು ವಾರ್ಡ್‌ಗಳಲ್ಲಿ ಮನೆ ಮನೆಗಳಲ್ಲಿನ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದೇವೆ. 10 ಘಟಕಗಳ ಮೂಲಕ ಸ್ವಯಂಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇನ್ನುಳಿದಂತೆ ಶೇ 100ರಷ್ಟು ತ್ಯಾಜ್ಯ ನಿರ್ವಹಣೆ ಮಾಡಲು ಸಾರ್ವಜನಿಕರ ಸಹಕಾರ ಸಿಗುತ್ತಿಲ್ಲ. ಅಲ್ಲದೇ ಸಿಬ್ಬಂದಿ ಕೊರತೆ ಇದೆ~ ಎಂದರು.`ನಗರಸಭೆ ಪ್ರಶಸ್ತಿ ಪಡೆದರೂ ಹೊಸ ವಾರ್ಡ್‌ಗಳಲ್ಲಿ ಈವರಗೊ ಸಮರ್ಥವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಹಳೆ ವಾರ್ಡ್‌ಗಳಲ್ಲಿ ಮಾತ್ರವೇ ತ್ಯಾಜ್ಯ ವಿಲೇವಾರಿ ನಡೆದಿದೆ. ಬಹಳಷ್ಟು ಕಡೆಗಳಲ್ಲಿ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ~ ಎಂದು ವಿರೋಧಪಕ್ಷದ ಸದಸ್ಯ ಜಯಾನಂದ ಅವರು ನಗರಸಭೆ ಅಧ್ಯಕ್ಷರನ್ನು ತುಸು ಲೇವಡಿ ಮಾಡಿದರು. ಅದಕ್ಕೆ ಪ್ರತಿಯಾಗಿ ಅಧ್ಯಕ್ಷರು ಈ ಉತ್ತರ ನೀಡಿದರು.ಹೆದ್ದಾರಿ ಕಾಮಗಾರಿ ಜಲಾವೃತ ಸಂಭವ:  ಮುಂದಿನ ತಿಂಗಳಿನ ಅಂತ್ಯದಲ್ಲಿ ಮಳೆಗಾಲ ಆರಂಭವಾಗುತ್ತದೆ. ನಗರದ ಕೆಲವು ಕಡೆಗಳಲ್ಲಿ ಚರಂಡಿಗಳಲ್ಲಿ ಹೂಳೆತ್ತುವ ಕಾಮಗಾರಿ ಇನ್ನಷ್ಟು ಚುರುಕಾಗಿ ನಡೆಯಬೇಕು. ತೋಡುಗಳಲ್ಲಿನ ತ್ಯಾಜ್ಯಗಳನ್ನು ಸರಿಯಾಗಿ ತೆಗೆಯದೇ ಇದ್ದಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗಲಿದೆ ಎಂದು ಕೆಲವು ಸದಸ್ಯರು ಆತಂಕ ವ್ಯಕ್ತಪಡಿಸಿದರು.ಅದಕ್ಕೆ ಉತ್ತರಿಸಿದ ಕಿರಣ್‌ ಕುಮಾರ್‌, ಈಗಾಗಲೇ ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅಲ್ಲಿ ಹೂಳೆತ್ತುವ ಕೆಲಸ ಪ್ರಾರಂಭವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಆ ಪರಿಸರದಲ್ಲಿನ ತೋಡುಗಳಲ್ಲಿ ಮಣ್ಣುತುಂಬಲಾಗಿದೆ. ಅಲ್ಲಿನ ಹೂಳುಗಳನ್ನು ತೆಗೆಯದೇ ಇದ್ದಲ್ಲಿ ಈ ವರ್ಷದ ಮಳೆಗಾಲದಲ್ಲಿ ಖಂಡಿತವಾಗಿಯೂ ಕೃತಕ ನೆರೆ ಸೃಷ್ಟಿಯಾಗಲಿದೆ ಎಂಬುದನ್ನು ಜಿಲ್ಲಾಧಿಕಾರಿ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.ಮೇ 3 ರಿಂದ ಅನಧಿಕೃತ ಜಾಹೀರಾತು ಫಲಕ ತೆರವು: ನಗರದಲ್ಲಿ ಎಲ್ಲೆಂದರಲ್ಲಿ ಅಧಿಕೃತ ಜಾಹೀರಾತು ಫಲಕಗಳು ತಲೆ ಎತ್ತಿವೆ. ಅವುಗಳನ್ನು ನಿವಾರಣೆ ಮಾಡದ ಹೊರತೂ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಕೂಡಲೇ ಆ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯ ಮಹೇಶ್‌ ಠಾಕೂರ್‌ ಆಗ್ರಹಿಸಿದರು.ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಈ ಬಗ್ಗೆ ಸೋಮವಾರ ಸಭೆ ಮಾಡಲಾಗುತ್ತಿದ್ದು ಆ ಸಭೆಯಲ್ಲಿ ಜಾಹೀರಾತು ಫಲಕ ಹೊಂದಿರುವವರನ್ನು ಕರೆಯಲಾಗಿದೆ. ಯಾರ ಬಳಿ ನಗರಸಭೆ ನೀಡಿದ ಅಧಿಕೃತ ಸಂಖ್ಯೆ, ಅನುಮತಿ ಪತ್ರ, ಕಾಲಕಾಲಕ್ಕೆ ಶುಲ್ಕ ಪಾವತಿ ದಾಖಲೆ ಇದೆಯೋ ಅಂತಹ ಫಲಕಗಳನ್ನು ಮಾತ್ರವೇ ಇಟ್ಟು ಉಳಿದವುಗಳನ್ನು ತೆಗೆದು ಹಾಕಲಾಗುವುದು. ಎಷ್ಟೇ ಪ್ರಭಾವಿಗಳು ಅಡ್ಡಿಪಡಿಸಿದರೂ ಅದದರಲ್ಲಿ ಯಾವುದೇ ಮುಲಾಜಿಗೆ ಬೀಳದೇ ಕೆಲಸ ಮಾಡಲಾಗುವುದು ಎಂದರು. ಆಯುಕ್ತ ಗೋಕುಲದಾಸ್‌ ನಾಯಕ್‌ ಹಾಗೂ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.