ಭಾನುವಾರ, ಜನವರಿ 19, 2020
20 °C
ಕ್ರಿಸ್‌ಮಸ್‌ ಹಬ್ಬಕ್ಕಾಗಿ ಸಿಂಗಾರಗೊಂಡ ಚರ್ಚ್ ಗಳು

ಚರ್ಚ್‌ಗಳಲ್ಲಿ ಜೀವಕಳೆ; ಜನರಲ್ಲಿ ಉತ್ಸಾಹದ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕ್ರಿಸ್‌ಮಸ್‌ ಹಬ್ಬಕ್ಕೆ ಇಡೀ ನಗರ ಸಜ್ಜುಗೊಂಡಿದೆ. ಮನೆ–ಕಚೇರಿ–ಚರ್ಚ್‌ಗಳು ಜೀವ ಕಳೆ ತುಂಬಿಕೊಂಡಿವೆ. ಇಡೀ ವಾತಾವರಣದಲ್ಲಿ ಹೊಸತನ ಕಾಣಿಸಿಕೊಂಡಿದೆ.ಕ್ರಿಸ್ತನ ಸಂದೇಶ ಹೊತ್ತ ಶುಭಾಶಯದ ವಿಶೇಷ ಕಾರ್ಡ್‌ಗಳು ಈಗಾಗಲೇ ವಿನಿಮಯವಾಗಿವೆ. ಮನೆಯಲ್ಲೇ ತಯಾರಿಸಿದ ವಿವಿಧ ಸ್ವಾದಿಷ್ಟದ ಕೇಕ್‌ಗಳು ಸ್ನೇಹಿತರನ್ನು ತಲುಪಿವೆ. ಎಲ್ಲೆಡೆ ಯೇಸುವಿನ ಕುರಿತಾದ ಹಾಡುಗಳು ಮಾರ್ದನಿಸುತ್ತಿವೆ. ಯೇಸುವಿನ ಜನನ ವೃತ್ತಾಂತ ತಿಳಿಸುವ ನೃತ್ಯರೂಪಕಗಳು ಪ್ರದರ್ಶನಗೊಳ್ಳುತ್ತಿವೆ.ಕ್ರಿಸ್‌ಮಸ್‌ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿ ಸಿದ್ಧತೆಗಳು ಆರಂಭಗೊಳ್ಳುತ್ತವೆ. ಕ್ರಿಸ್ತನ ಸಂದೇಶ ಸಾರುವ ಹಾಡುಗಳನ್ನು ಯುವಕರು–ಯುವತಿಯರು ತಂಡೋಪತಂಡವಾಗಿ ಮನೆ–ಮನೆಗೆ ತೆರಳಿ ಹಾಡುವುದರಿಂದ ಹಬ್ಬ ವಿಧ್ಯುಕ್ತವಾಗಿ ಚಾಲನೆ ಪಡೆದುಕೊಳ್ಳುತ್ತದೆ. ಈ ಹಾಡುಗಳೆಲ್ಲವೂ ಶಾಂತಿ ಮಂತ್ರ ಪಠಿಸುತ್ತವೆ ಎಂಬುದು ಬಹಳ ಮುಖ್ಯವಾದದ್ದು. ಹಬ್ಬದ ಸಂತಸವನ್ನು ಅಭಿವ್ಯಕ್ತಿಗೊಳಿಸುವ ಮತ್ತೊಂದು ಮಾರ್ಗ ಗ್ರೀಟಿಂಗ್‌ ಕಾರ್ಡ್ ಕಳುಹಿಸುವುದು.ಹಬ್ಬ ಹತ್ತಿರ ಬರುತ್ತಿದ್ದಂತೆ ಚರ್ಚ್, ಮನೆ, ಕೆಲವು ಕಚೇರಿಗಳಲ್ಲಿ ಗೋದಲಿ ನಿರ್ಮಿಸಲಾಗುತ್ತದೆ. ಯೇಸುವಿನ ಜನ್ಮ ವೃತ್ತಾಂತವನ್ನು ತಿಳಿಸುವ ಮಾದರಿಯನ್ನು ಗೊಂಬೆಗಳ ಮೂಲಕ ರೂಪಿಸಿ, ಹಬ್ಬಕ್ಕೆ ಕಳೆಕಟ್ಟಲಾಗುತ್ತದೆ. ಬಹಳಷ್ಟು ಕಲಾತ್ಮಕವಾಗಿ ರೂಪಿಸುವ ಗೋದಲಿಗಳು ಒಂದಕ್ಕಿಂತ ಒಂದು ಕಣ್ಮನ ಸೆಳೆಯುತ್ತವೆ. ಇದರ ಜತೆಗೆ ಕ್ರಿಸ್‌ಮಸ್‌ ನಕ್ಷತ್ರ, ವೃಕ್ಷಗಳು ಇನ್ನಷ್ಟು ಮೆರುಗು ನೀಡುತ್ತವೆ. ಮನೆಯಲ್ಲಿ ಸಿಹಿ ತಿಂಡಿ ಮಾಡಿ, ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಜತೆಗೆ ಮನೆಗೆ ಬಂದ ಅತಿಥಿಗಳಿಗೆ ಸಿಹಿತಿಂಡಿಯ ಸತ್ಕಾರ ನೀಡಲಾಗುತ್ತದೆ.ಡಿ.24ರಂದು ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪೂಜೆಗಳು ಆರಂಭಗೊಳ್ಳುತ್ತವೆ. ಡಿ.25ರಂದು ಮುಂಜಾನೆ ಮತ್ತು ಸಂಜೆ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ. ಅದೇ ದಿನ ಸಂಜೆ ಆಯಾ ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ವಿಶೇಷವಾಗಿ ಹಾಡುಗಾರಿಕೆ ಇರುತ್ತದೆ.ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಈ ಮೂರು ಜಿಲ್ಲೆಗೆ ಶಿವಮೊಗ್ಗ ಧರ್ಮಕ್ಷೇತ್ರವೇ ಕೇಂದ್ರ. ಶಿವಮೊಗ್ಗದಲ್ಲಿ ಲ್ಯಾಟಿನ್‌ ರೋಮನ್‌ ಕ್ಯಾಥೋಲಿಕ್‌ ಚರ್ಚ್ ನಾಲ್ಕು ಇವೆ.  ಶರಾವತಿನಗರದ ಯೇಸು ಬಾಲರ ದೇವಾಲಯ, ಶಾಂತಿನಗರ (ರಾಗಿಗುಡ್ಡ) ಸಂತ ಅಂತೋಣಿಯವರ ದೇವಾಲಯ, ಬಿ.ಎಚ್.ರಸ್ತೆಯಲ್ಲಿರುವ ಪ್ರಧಾನ ಪವಿತ್ರ ಹೃದಯ ಚರ್ಚ್, ಗೋಪಾಳದಲ್ಲಿರುವ ಯೇಸು ಭವನ ಹಬ್ಬಕ್ಕಾಗಿ ಸಜ್ಜುಗೊಂಡಿವೆ.ನಗರದಲ್ಲಿ ಪ್ರೊಟಸ್ಟಂಟ್‌  ಚರ್ಚ್‌ಗಳು ಸಾಕಷ್ಟಿದ್ದು, ಪ್ರಮುಖವಾಗಿ ಶಿವಪ್ಪನಾಯಕ ವೃತ್ತದಲ್ಲಿರುವ ಸೆಂಟ್‌ ಥಾಮಸ್‌ ಚರ್ಚ್‌ ಹಬ್ಬಕ್ಕಾಗಿ ವಿಶೇಷವಾಗಿ ಸಡಗರಗೊಂಡಿವೆ.18,000 ಚದರ ಅಡಿಯ ವಿಶಾಲ ಪ್ರಾರ್ಥನಾ ಮಂದಿರ ಹೊಂದಿರುವ ಬಿ.ಎಚ್.ರಸ್ತೆಯ ಪ್ರಧಾನ ಪವಿತ್ರ ಹೃದಯ ಚರ್ಚ್ ಹಲವು ವಿಶೇಷತೆಗಳನ್ನು ಹೊಂದಿದೆ. 1806ರಲ್ಲಿ ಫ್ರಾನ್ಸ್‌ನಲ್ಲಿ ತಯಾರಾದ ದೊಡ್ಡಗಂಟೆ ಇದೆ. ಯೇಸುವಿನ ಜೀವನದ ಹಲವು ಸ್ಮರಣೀಯ ಘಟನೆಗಳ ಚಿತ್ರಗಳಿವೆ.ಜನನಕ್ರೈಸ್ತ ಸಮುದಾಯ ವಿಶ್ವದಾದ್ಯಂತ ಕ್ರಿಸ್ತ ಜನನ

ಹಬ್ಬ ಆಚರಿಸುವಾಗ ಹಾಡುವ ಒಂದು ಗೀತೆ ಇದೆ. ಆ ಗೀತೆ ಹೀಗಿದೆ ‘ದಿವ್ಯ ಜ್ಯೋತಿ ಮಿಂಚಿತು, ಕ್ರೆಸ್ತ ಜನನ ಸಾರಿತು’ ಈ ಹಾಡು ಕ್ರಿಸ್ತ ಜನನ ಸಾರಿತು ಎಂದು ಹಾಡುತ್ತೇ ಹೊರತು, ಕ್ರಿಸ್ತ ಜಯಂತಿ ಸಾರಿತು ಎಂಬುದಾಗಿ ತಿಳಿಸುವುದಿಲ್ಲ.ಕ್ರಿಸ್ತ ಜನನಕ್ಕೆ ಒಂದು ನಿರ್ದಿಷ್ಟವಾದ ಅರ್ಥವಿದೆ. ನಾನು ಒಬ್ಬ ಕ್ರೈಸ್ತನಾಗಿ, ಯೇಸುವಿನ ಅನುಯಾಯಿಯಾಗಿ, ಕ್ರೈಸ್ತ ಧರ್ಮದ ಸದಸ್ಯನಾಗಿ ಎಷ್ಟೋ ಕ್ರಿಸ್ತ ಜಯಂತಿಗಳನ್ನು ಆಚರಿಸಿದ್ದೇನೆ. ಆದರೆ, ನಿಧಾನವಾಗಿ ಕ್ರೈಸ್ತ ಜೀವನದ, ಕ್ರೈಸ್ತ ಧರ್ಮದ ಹಾಗೂ ಕ್ರೈಸ್ತ ಧರ್ಮಗ್ರಂಥದ ಸ್ವಲ್ಪ ಆಳವಾದ ಚಿಂತನೆ ನಡೆಸಿದಾಗ ಕಂಡು ಒಂದು ಸತ್ಯ ಕ್ರಿಸ್ತ ಜಯಂತಿ ತಪ್ಪು ಭಾವನೆ, ‘ಕ್ರಿಸ್ತ ಜನನ’ ಸಮರ್ಪಕವಾದ ಭಾವನೆ ಎಂಬ ಅರಿವು ಉಂಟಾಯಿತು.ಬೈಬಲ್‌ ಗ್ರಂಥದ ದೀರ್ಘ ಅಧ್ಯಯನ ಮಾಡಿದಾಗ ಕ್ರಿಸ್ತನು ಹುಲು ಮಾನವನಲ್ಲ ಎಂಬ ಪ್ರಜ್ಞೆ, ಅರಿವು ನಮ್ಮಲ್ಲಿ ಮೂಡುತ್ತದೆ. ಕ್ರಿಸ್ತಪೂರ್ವ ಹಾಗೂ ಕ್ರಿಸ್ತಶಕದ ಮೂಲಕ ಆತನ ಜನನವನ್ನು ನಾವು ಒಪ್ಪಿಕೊಳ್ಳುತ್ತೇವೆ. ಕ್ರಿಸ್ತರು ಡಿ.25ರಂದು ಜನಿಸಿದರು ಎಂದು ಬೈಬಲ್ ಧರ್ಮಗ್ರಂಥ ಹೇಳುತ್ತಿಲ್ಲ. ಆದರೆ, ಆತನ ಜನನಕ್ಕೆ ಸಂಭವಿಸಿದ್ದು ಚರಿತ್ರಾರ್ಹ ಘಟನೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಈ ಘಟನೆಯನ್ನು ಕೆಲವು ಶತಮಾನಗಳಿಂದ ಕ್ರಿಸ್ತ ಜನನದ ದಿನವಾಗಿ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ.-ಮಾರ್ಕ್ ಪ್ಯಾಟ್ರಿಕ್‌ ಡಿ ಸಿಲ್ವಾ

ಪ್ರತಿಕ್ರಿಯಿಸಿ (+)