ಭಾನುವಾರ, ಮೇ 16, 2021
23 °C
ಸವಿತಾ ಪ್ರಕರಣ: ತನಿಖೆಯ ಅಂತಿಮ ವರದಿ ಬಹಿರಂಗ

ಚಿಂತಾಜನಕ ಸ್ಥಿತಿ ಅರಿಯದ ಗಾಲ್‌ವೇ ಆಸ್ಪತ್ರೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ಐರ್ಲೆಂಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಚಿಕಿತ್ಸಾ ತನಿಖಾ ವರದಿಯ ಅಂತಿಮ ಕರಡನ್ನು ಶುಕ್ರವಾರ ಬಹಿರಂಗಪಡಿಸಲಾಗಿದ್ದು,  ಸವಿತಾ ತೊಂದರೆಗೆ ಸಿಕ್ಕಿಹಾಕಿಕೊಂಡ ಗಂಭೀರ ಸ್ಥಿತಿಯನ್ನು ಅರಿತು ಸೂಕ್ತ ಚಿಕಿತ್ಸಾ ಕ್ರಮಗಳನ್ನು ನಿರ್ವಹಿಸುವಲ್ಲಿ ಐರ್ಲೆಂಡ್‌ನ ಆಸ್ಪತ್ರೆ ಸಿಬ್ಬಂದಿ ವಿಫಲರಾದರು ಎಂದು ತಿಳಿಸಲಾಗಿದೆ.ಗರ್ಭಪಾತ ಕುರಿತಾದ ಕಾನೂನಿನ ಅನುಷ್ಠಾನ ವಿಷಯದಲ್ಲಿ ಗೊಂದಲ ಇರುವುದರಿಂದ ಮತ್ತೆ ಮತ್ತೆ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆಯನ್ನೂ ಈ ವರದಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಸವಿತಾ ದೇಹದಲ್ಲಿ ನಂಜು ಹೆಚ್ಚಾಗಿ ಕಾಣಿಸಿಕೊಂಡು ಹುಣ್ಣುಗಳಿಗೆ ಕಾರಣವಾಗಿದ್ದು ಬಹುಶ: ಇದೇ ಅಂಶ ಅವರ ಸಾವಿಗೆ ಕಾರಣವಾಗಿರುವ ಸಾಧ್ಯತೆಯೂ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಗರ್ಭ ಧರಿಸಿದ 17ನೇ ವಾರದಲ್ಲಿ ಸವಿತಾ ಗಾಲ್‌ವೇನಲ್ಲಿರುವ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಂಜೇರುವಿಕೆಯಿಂದ 2012ರ ಅಕ್ಟೋಬರ್ 28ರಂದು ಮೃತಪಟ್ಟಿದ್ದು ಈ ಸಂಬಂಧ ತನಿಖೆಗೆ ಆದೇಶ ನೀಡಲಾಗಿತ್ತು. ಅಪಾಯದಿಂದ ಪಾರಾಗಲು ಗರ್ಭಪಾತಕ್ಕೆ ಮನವಿ ಮಾಡಿಕೊಂಡರೂ ಕ್ಯಾಥೊಲಿಕ್ ರಾಷ್ಟ್ರವಾಗಿರುವ ಐರ್ಲೆಂಡ್ ಕಾನೂನಿನ ಅನ್ವಯ ಅಲ್ಲಿಯ ಆಸ್ಪತ್ರೆ ಸಿಬ್ಬಂದಿ ಇದಕ್ಕೆ ಅವಕಾಶ ನೀಡಲಿಲ್ಲ, ಮೇಲಾಗಿ ನೀಡಲಾದ ಚಿಕಿತ್ಸಾ ಕ್ರಮವೂ ಅಮಾನವೀಯವಾಗಿತ್ತು ಹಾಗಾಗಿಯೇ ತಮ್ಮ ಪತ್ನಿ ಸಾವನ್ನಪ್ಪಿದಳು ಎಂದು ಸವಿತಾ ಪತಿ ಪ್ರವೀಣ್ ದೂರಿದ್ದರು.ಸವಿತಾ ಸಾವಿನ ಕುರಿತು ಆಸ್ಪತ್ರೆ ಸಿಬ್ಬಂದಿ ಪ್ರತಿಪಾದಿಸುವ ಅಂಶಗಳಲ್ಲಿ ಹುರುಳಿಲ್ಲ. ಸವಿತಾಗೆ ಆ ಸಂದರ್ಭದಲ್ಲಿ ಗರ್ಭಪಾತ ಮಾಡಿದಲ್ಲಿ ತಾಯಿ ಇಲ್ಲವೆ ಹುಟ್ಟದ ಮಗುವಿಗೆ ಯಾವುದೇ ತೊಂದರೆ ಇದ್ದಿಲ್ಲ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಹಿಳೆಯ ಸ್ಥಿತಿಯನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಚಿಕಿತ್ಸೆ ಇಲ್ಲವೆ ನಿರ್ವಹಣೆ ಮಾಡುವಲ್ಲಿ ಗಾಲ್‌ವೇ ಆಸ್ಪತ್ರೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ವರದಿ ನೀಡಿದ ತಂಡದ ಮುಖ್ಯಸ್ಥ, ಆರೋಗ್ಯ ಸೇವಾ ವಿಭಾಗದ (ಎಚ್‌ಎಸ್‌ಇ) ಪ್ರಸೂತಿ ವಿಜ್ಞಾನ ತಜ್ಞ ಸರ್ ಸಬರತ್ಮಂ ಅರುಲ್‌ಕುಮಾರನ್ ತಿಳಿಸಿದ್ದಾರೆ.ಪರಿಸ್ಥಿತಿ ಗಂಭೀರವಾಗಿದ್ದರೂ ಗರ್ಭಪಾತಕ್ಕೆ ತುರ್ತು ವ್ಯವಸ್ಥೆ ಮಾಡುವಲ್ಲಿ ಸಿಬ್ಬಂದಿ ಕ್ರಮ ಕೈಗೊಳ್ಳಲಿಲ್ಲ, ನಂಜು ಹೆಚ್ಚಾಗಿದ್ದರೂ ಇದಕ್ಕಿಂತ ಮುಖ್ಯವಾಗಿ ಗರ್ಭಪಾತ ಮಾಡಿಸುವುದಕ್ಕೆ ಆಸ್ಪತ್ರೆಯವರು ಆದ್ಯತೆ ನೀಡಬೇಕಾಗಿತ್ತು ಎಂದಿದ್ದಾರೆ. `ವಾಸ್ತವತೆಯುಳ್ಳ ಅಪಾಯ' ಇದ್ದಾಗ ಮಾತ್ರ ಗರ್ಭಪಾತಕ್ಕೆ ಅವಕಾಶ ಎಂಬುದು ಈಗಿನ ಐರ್ಲೆಂಡ್‌ನ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನಾಗಿದ್ದು, ಇದು ಸಹ ಗೊಂದಲದಿಂದ ಕೂಡಿದೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಚಿಕಿತ್ಸಾ ಕ್ರಮಗಳ ಕುರಿತು ಸ್ಪಷ್ಟ ಮಾಹಿತಿ, ಮಾರ್ಗದರ್ಶಿ ಸೂತ್ರ ನೀಡುವಲ್ಲಿ ಈಗಿನ ಕಾನೂನಿನಲ್ಲೂ ತೊಂದರೆಗಳಿವೆ. ಹಾಗಾಗಿ ಸವಿತಾ ಹಾಲಪ್ಪನವರ್ ಅವರಂತಹ ಪ್ರಕರಣಗಳು ಮರುಕಳುಹಿಸುವ ಸಾಧ್ಯತೆಗಳೂ ಇವೆ ಎಂದು ಅರುಲ್‌ಕುಮಾರನ್ ಎಚ್ಚರಿಸಿದ್ದಾರೆ.ಪ್ರವೀಣ್ ವಕೀಲರ ಆಕ್ಷೇಪಲಂಡನ್ (ಪಿಟಿಐ
): ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ಐರ್ಲೆಂಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ದಂತವೈದ್ಯೆ ಸವಿತಾ ಹಾಲಪ್ಪನವರ ಪ್ರಕರಣ ಕುರಿತ ತನಿಖಾ ವರದಿಯ ಅಂತಿಮ ಕರಡನ್ನು ಕುಟುಂಬದವರಿಗೆ ತೋರಿಸದೆ ವರದಿಯನ್ನು ಬಹಿರಂಗಪಡಿಸುತ್ತಿರುವುದು ಸರಿಯಲ್ಲ ಎಂದು ಬಗ್ಗೆ ಸವಿತಾ ಅವರ ಪತಿ ಪ್ರವೀಣ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಆಂತರಿಕ ವಿಚಾರಣೆಯ ವರದಿಯ ಕರಡನ್ನು ತಮಗೆ ಅಥವಾ ತಮ್ಮ ಕಕ್ಷಿದಾರ ಪ್ರವೀಣ್ ಅವರಿಗೆ ತೋರಿಸದೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸುತ್ತಿರುವುದು ದುರದೃಷ್ಟಕರ ಮತ್ತು ಸವಿತಾ ಹಾಗೂ ಅವರ ಕುಟುಂಬದವರನ್ನು ನಿರ್ಲಕ್ಷ್ಯಿಸುವ ಮೂಲಕ ಅಗೌರವ ತೋರಿಸಲಾಗಿದೆ ಎಂದು ವಕೀಲ ಗೇರಾಲ್ಡ್ ಒಡೆನೆಲ್ ಹೇಳಿದ್ದಾರೆ.ಕಳೆದ ರಾತ್ರಿ ಇ-ಮೇಲ್ ಮೂಲಕ ಈ ವಿಚಾರವನ್ನು ತಮ್ಮ ಗಮನಕ್ಕೆ ತರಲಾಗಿದೆ' ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.