ಶನಿವಾರ, ಏಪ್ರಿಲ್ 17, 2021
23 °C

ಚಿನ್ನದೊಂದಿಗೆ ಗಿರವಿ ಅಂಗಡಿ ಮಾಲೀಕ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನರು ಅಡವಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳೊಂದಿಗೆ ಗಿರವಿ ಅಂಗಡಿ ಮಾಲೀಕನೊಬ್ಬ ಪರಾರಿಯಾಗಿರುವ ಘಟನೆ ನಂದಿನಿ ಲೇಔಟ್‌ನ ರವಿ ಬಡಾವಣೆಯಲ್ಲಿ ನಡೆದಿದೆ.ಈ ಬಗ್ಗೆ ಸಾರ್ವಜನಿಕರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೈಮಾರುತಿ ನಗರದ ರವಿ ಬಡಾವಣೆಯಲ್ಲಿ ಗಿರವಿ ಅಂಗಡಿ ಇಟ್ಟುಕೊಂಡಿದ್ದ ಓಂ ಪ್ರಕಾಶ್ ಎಂಬಾತ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಓಂಪ್ರಕಾಶ್ ಸುಮಾರು 40  ಮಂದಿಯ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.‘ಒಬ್ಬರು ಮಾತ್ರ ಈ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ವಂಚನೆಗೊಳಗಾದವರಿಗೆ ದೂರು ನೀಡುವಂತೆ ಸೂಚಿಸಲಾಗಿತ್ತು. ಆದರೆ ಈ ವರೆಗೆ ನಾಲ್ಕು ಮಂದಿ ಮಾತ್ರ ಒಡವೆ ಅಡವಿಟ್ಟಿದ್ದಕ್ಕೆ ದಾಖಲೆಗಳನ್ನು ನೀಡಿದ್ದಾರೆ.ಆದ್ದರಿಂದ ಆತ ಎಷ್ಟು ಜನರಿಗೆ ವಂಚನೆ ಮಾಡಿದ್ದಾನೆ ಎಂದು ನಿಖರವಾಗಿ ಗೊತ್ತಾಗಿಲ್ಲ. ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌ಐ ಕೆಂಪರಾಜು ತಿಳಿಸಿದ್ದಾರೆ.ಚೆಕ್‌ಬೌನ್ಸ್: ಬಂಧನ

ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವೈ.ಆರ್.ರಾಮಮೂರ್ತಿ ಎಂಬುವರನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿ ಅವರ ವಿರುದ್ಧ ಚಾಂದ್‌ಪಾಷಾ, ಗೋಪಾಲ್ ಮತ್ತು ರಘುನಾಥ್ ಎಂಬುವರು ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ಅವರ ಬಂಧನಕ್ಕೆ ವಾರೆಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಜಾಮೀನಿನ ಆಧಾರದಲ್ಲಿ ಅವರನ್ನು ಬಿಡುಗಡೆಗೊಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.ಬಂಧನ

ಮೊಬೈಲ್‌ಗಳ ನಕಲಿ ಬ್ಯಾಟರಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರಾಜಸ್ತಾನ ಮೂಲದ ಲಕ್ಷ್ಮಣ್‌ಸಿಂಗ್ (38) ಎಂಬಾತನನ್ನು ಹಲಸೂರುಗೇಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಿವಿಧ ನಮೂನೆಯ 3,450 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆತ ಚೀನಾದಿಂದ ನಕಲಿ ಬ್ಯಾಟರಿಗಳನ್ನು ತಂದು ಸಿಟಿ ಮಾರುಕಟ್ಟೆ ಸಮೀಪದ ಕುಂಬಾರ ಪೇಟೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಆತ ಕುಂಬಾರ ಪೇಟೆ ಎನ್.ಎಂ.ರಸ್ತೆಯ ಮನೆಯೊಂದರಲ್ಲಿ ಬ್ಯಾಟರಿಗಳನ್ನು ದಾಸ್ತಾನು ಮಾಡಿದ್ದ. ಈ ಬಗ್ಗೆ ಮಾಹಿತಿ ಪಡೆದು ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ಕಳಪೆ ಗುಣಮಟ್ಟದ ಆ ಬ್ಯಾಟರಿಗಳು ಸಿಡಿಯುವ ಸಾಧ್ಯತೆ ಸಹ ಇತ್ತು. ಆತ ಅವುಗಳನ್ನು ನಗರದಲ್ಲಿ ಯಾರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.