ಗಾಳಿಯಲ್ಲಿ ಹಾರಿ, ಹರಡಿ ಕೆನ್ನೆಗೆ ಮುತ್ತಿಕ್ಕಿದ ಕೂದಲು. ಜೋಡಿ ಬೊಗಸೆಗಳು ಕಾಣದಂತೆ ಮುಚ್ಚಿದ್ದ ತಂಪು ಕನ್ನಡಕ. ಲಿಪ್ಸ್ಟಿಕ್ ರಂಗಿನ ತುಟಿಯಲ್ಲಿ ಬಂದಿಯಾಗಲಾರೇ ಎಂಬಂತಿರುವ ನಗು. ಬಾಯ್ಫ್ರೆಂಡ್ ಭುಜಕ್ಕೆ ಒರಗಿದವಳಿಗೆ ಕೊಹ್ಲಿಯ ಹಾಫ್ ಸೆಂಚುರಿ ಚಿಂತೆ.

ಆ...ಯಾ...ಯಸ್...ಸಿಕ್ಸರ್...! ಫೋರ್..! ಪಕ್ಕ ಕುಳಿತಿದ್ದ ಗೆಳೆಯ ಮಂಕಾಗುವಂತೆ ತುಟಿಯಲ್ಲಿ ಎರಡು ಬೆರಳಿಟ್ಟು ಸೀಟಿ ಊದಿದ್ದೇ ಊದಿದ್ದು. ಮರುದಿನ ಕಾಲೇಜಲ್ಲೂ ಅದೇ ಗುಂಗು...ಚರ್ಚೆ.

ಈ ಸಲ ರಾಯಲ್ ಚಾಲೆಂಜರ್ರೇ ಗೆಲ್ಲೋದು. ಗೇಲ್, ಕೊಹ್ಲಿ ಇದ್ದ ಮೇಲೆ ಕೇಳಬೇಕಾ..ಒಬ್ಬಳೆಂದಳು. ವೆಟೋರಿ ನಗು ನೋಡಿದೆಯಾ...ಎಂಥ ಡೀಸೆಂಟ್ ಅಲ್ವಾ... ಮತ್ತೊಬ್ಬಳ ಉದ್ಗಾರ.

ಹೌದೌದು, ಐಪಿಎಲ್ 5ನೇ ಅವತರಣಿಕೆಯ ಸಂಭ್ರಮ ಕಾಲೇಜು ರೀಡಿಂಗ್ ರೂಮ್ನಲ್ಲಿ, ಕ್ಯಾಂಟೀನ್ಗಳಲ್ಲಿ ಕಾಣಿಸತೊಡಗಿದೆ. ಪರೀಕ್ಷೆಯ ಬಿಸಿಯನ್ನು ಕೂಲ್ ಮಾಡುವಂತಿದೆ ಈ ಐಪಿಎಲ್ ಕ್ರೇಜ್.

ದಶಕದ ಹಿಂದೆ ಕ್ರಿಕೆಟ್ ಅಂದರೆ ಟಿವಿ ಮುಂದೆ ಕೂರುತ್ತಿದ್ದ, ಕಾಮೆಂಟರಿ ಕೇಳುತ್ತಿದ್ದ ಹುಡುಗರು ಮಾತ್ರ ಕಾಣುತ್ತಿದ್ದರು. ಕಚೇರಿಗಳಲ್ಲಿ, ಕಾಲೇಜುಗಳಲ್ಲಿ ಸ್ಕೋರ್ ವಿವರಕ್ಕೆ ಕಿವಿಯಾಗುತ್ತಿದ್ದರು. ಆದರೆ, ಐಪಿಎಲ್ ಎಂಬ ಚುಟುಕು ಕ್ರಿಕೆಟ್ ಮಾತ್ರ ಲಿಂಗದ ಹಂಗೆನಗಿಲ್ಲ ಎಂಬಂತೆ ಎಲ್ಲವನ್ನೂ ಗುಡಿಸಿ ಹಾಕಿದೆ. ಐಪಿಎಲ್ ಮ್ಯಾಚ್ ನಡೆದಾಗಲೆಲ್ಲ ಕ್ರೀಡಾಂಗಣದೊಳಗೆ ಬಣ್ಣದ ಚಿತ್ತಾರ ಬರೆದಂತೆ ಲಲನೆಯರು ಕಾಣಿಸಿಕೊಳ್ಳುತ್ತಾರೆ.

ಮೆಚ್ಚಿನ ಬ್ಯಾಟ್ಸ್ಮನ್ ಸಿಕ್ಸರ್, ಫೋರ್ ಹೊಡೆದರೆ, ಬೌಲರ್ ವಿಕೆಟ್ ಪಡೆದರೆ ಕಿವಿಯಲ್ಲಿ ಗಾಳಿ ಹೊಕ್ಕವರಂತೆ `ಮೆಕ್ಸಿಕನ್ ಅಲೆ~ ಎಬ್ಬಿಸುತ್ತಾರೆ.

ಕೆನ್ನೆಯ ಮೇಲೆ ನೆಚ್ಚಿನ ತಂಡದ ಧ್ವಜದ ಟಾಟೂ. ತಂಡದ ಯೂನಿಫಾರಂ ಹೋಲುವ ಡ್ರೆಸ್, ಅದಕ್ಕೊಪ್ಪುವ ಕೇಶಾಲಂಕಾರ. ಇದು ಬರಿ ಆಟವಲ್ಲೋ ಅಣ್ಣಾ...! ಆಟಕ್ಕಿಂತ ಹೆಚ್ಚಾಗಿ ಮನರಂಜನೆ. ಅದನ್ನೂ ಮೀರಿಸುವ ಫ್ಯಾಷನ್ ಅಂಗಣ. ಸ್ವಲ್ವ ಗಮನವಿಟ್ಟು ನೋಡಿದರೂ ಸಾಕು. ಟ್ವೆಂಟಿ-20 ಕ್ರಿಕೆಟ್ನ ಈ ಸೆಳೆತ ಕ್ರೀಡೆಗಾಗಿ ಅಲ್ಲ. ಅಲ್ಲಿರುವ ಗ್ಲಾಮರ್ಗಾಗಿ ಎಂಬುದು ಅರಿವಾಗುತ್ತದೆ.

ಬರೀ ಕಾಲೇಜು ಯುವತಿಯರಷ್ಟೇ ಅಲ್ಲ. ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಮಹಿಳೆಯರನ್ನೂ ಈ ಕ್ರಿಕೆಟ್ ಇದೇ ಪ್ರಮಾಣದಲ್ಲಿ ಆಕರ್ಷಿಸುತ್ತಿದೆ. ಡರ್ಬಿ ನಡೆದಾಗ `ಟರ್ಫ್ ಕ್ಲಬ್~ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೈ ಸೊಸೈಟಿ ಲೇಡಿಯರು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ಐಪಿಎಲ್ನ ಮೊದ, ಮೊದಲ ಆವೃತ್ತಿಗಳಲ್ಲಿ ನಗರ ಪ್ರದೇಶಗಳಲ್ಲಿ ಹಿಂದಿ ಟಿವಿ ಧಾರಾವಾಹಿಗಳ `ಟಿಆರ್ಪಿ~ ಗಣನೀಯವಾಗಿ ಕುಸಿದಿತ್ತು. ಐಪಿಎಲ್ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ಹಿಂಜರಿದ ಸಂದರ್ಭಗಳು ಉಂಟು.

ಐಪಿಎಲ್ ಆರಂಭವಾದಾಗ ಕ್ರೀಡೆಯ ಚೌಕಟ್ಟಿನಲ್ಲಿ ಮನರಂಜನೆಯ ಹೂರಣ ಇಟ್ಟುಕೊಂಡು ಜನ್ಮತಾಳಿತ್ತು. ಬಹುಬೇಗ ಮುಗಿಯುವ ಪಂದ್ಯ, ರೋಚಕತೆ, ರನ್ಗಳ ಅಬ್ಬರ, ಸಾಲು, ಸಾಲು ವಿಕೆಟ್ಗಳ ಪತನ...ಚಿಯರ್ ಗರ್ಲ್ಸ್ ಕುಣಿತ, ಕ್ರೀಡಾಂಗಣದಲ್ಲಿ ಲೈವ್ ಕಾಮೆಂಟರಿಗೆ ಚಂದದ ಹುಡುಗಿಯರು.

ಹುಚ್ಚುಕೋಡಿ ಮನಸ್ಸು ಹಿಡಿದಿಡಲು ಇಷ್ಟು ಸಾಕಿತ್ತು.ಆದರೆ, ತಂಡಗಳಲ್ಲಿ ಹಣ ತೊಡಗಿಸಿದ ಬಾಲಿವುಡ್ ತಾರೆಯರಿಂದಾಗಿ ಈ ಚುಟುಕು ಕ್ರಿಕೆಟ್ಗೆ ಮತ್ತಷ್ಟು ತಾರಾಮೌಲ್ಯ, ಗ್ಲಾಮರ್ ಬಂತು. ಇದೂ ಸಾಲದೆಂಬಂತೆ ಕ್ರಿಕೆಟ್ ಆಟಗಾರರ ಸುಂದರಿ ಪತ್ನಿಯರು ಕ್ರೀಡಾಂಗಣಗಳಲ್ಲಿ ಕಾಣಿಸಿಕೊಳ್ಳತೊಡಗಿದರು.

ಪಂದ್ಯ ಗೆದ್ದ ರಾತ್ರಿಗಳಲ್ಲಿ ಪಾರ್ಟಿ, ಕ್ರಿಕೆಟಿಗರಿಗೆ ವಿಶೇಷ ರ್ಯಾಂಪ್ ಶೋ ನಡೆಯತೊಡಗಿದವು. ಚಿತ್ರನಟಿಯರು, ಕ್ರಿಕೆಟ್ ಆಟಗಾರರ ಪ್ರಣಯದಾಟದ ಸುದ್ದಿಗಳು ಗಾಸಿಪ್ ಕಾಲಂಗಳಲ್ಲಿ ಇಣುಕತೊಡಗಿದವು.

ಕಳೆದ ಋತುವಿನಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಅಂತಿಮ ಪಂದ್ಯದಲ್ಲಿ ಚಾಲೆಂಜರ್ಸ್ ಮಾಲೀಕ ಸಿದ್ಧಾರ್ಥ ಮಲ್ಯ ಹಾಗೂ ನಟಿ ದೀಪಿಕಾ ಪಡುಕೋಣೆ ನಡುವಿನ ಚೆಲ್ಲಾಟ ಆಟಕ್ಕಿಂತ ಹೆಚ್ಚು ಸುದ್ದಿ ಮಾಡಿದ್ದು ಸುಳ್ಳಲ್ಲ. ಕೋಟ್ಯಂತರ ಜನ ವೀಕ್ಷಿಸುತ್ತಿದ್ದಾಗಲೇ ಈ ಜೋಡಿ ಕ್ಯಾಮೆರಾ ಮುಂದೆ ಬಿಗಿದಪ್ಪಿ ಚುಂಬಿಸಿಕೊಂಡಿತ್ತು. ಈಗ ಇಬ್ಬರದ್ದೂ ಮುರಿದ ಮನಸು.

ಐಪಿಎಲ್ ಎಂಬ ಚುಟುಕು ಕ್ರಿಕೆಟ್ನ ಗ್ಲಾಮರ್ ಮೂಲ ಕೆದಕಿದರೆ ನೆನಪಾಗುವುದು ಒಂಬತ್ತು ವರ್ಷಗಳ ಹಿಂದೆ (2003) ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ವಿಶ್ವಕಪ್. ಆ ವಿಶ್ವಕಪ್ನ ಟಿವಿ ಪ್ರಸಾರದ ಹಕ್ಕನ್ನು ಮನರಂಜನಾ ವಾಹಿನಿ `ಸೋನಿ ಎಂಟರ್ಟೈನ್ಮೆಂಟ್~ ಪಡೆದಾಗಲೇ ಕ್ರಿಕೆಟ್ ಹೊರಳು ಹಾದಿ ಹಿಡಿದಿತ್ತು.

ಆಗ ವೀಕ್ಷಕ ವಿವರಣೆ ನೀಡಲು ಕ್ರಿಕೆಟ್ ತಜ್ಞರ ಜತೆ ಆಟದ ಗಂಧಗಾಳಿಯೂ ಇಲ್ಲದ ಮಂದಿರಾ ಬೇಡಿಯಂತಹ ಗ್ಲಾಮರ್ ಗೊಂಬೆಗಳನ್ನು ಕ್ಯಾಮೆರಾ ಮುಂದೆ ತಂದು ಕೂರಿಸಲಾಯಿತು. ಆನಂತರದ ಕ್ರಿಕೆಟ್ ಪಂದ್ಯಗಳಲ್ಲೂ ಟಿವಿ ವಾಹಿನಿಗಳು ಇದೇ ಸೂತ್ರಕ್ಕೆ ಜೋತುಬಿದ್ದವು.

ವೀಕ್ಷಕ ವಿವರಣೆ, ಪಂದ್ಯದ ನಂತರದ ವಿಶ್ಲೇಷಣೆ, ಕ್ರೀಡಾಂಗಣದಲ್ಲಿ ಆಟಗಾರರ ಮುಂದೆ ಮೈಕ್ ಹಿಡಿಯಲು, ಪ್ರೇಕ್ಷಕರನ್ನು ಮಾತನಾಡಿಸಲು ರೂಪದರ್ಶಿಗಳನ್ನು ನಿಯೋಜಿಸಲಾಯಿತು. ಹಾಗೇ ಆರಂಭವಾಗಿದ್ದು ಕ್ರಿಕೆಟ್ ಮತ್ತು ಮನರಂಜನೆಯ ಯುಗಳಗೀತೆ.

ಈಗ ಐಪಿಎಲ್ ಎಂಬುದು ಬರಿ ಕ್ರಿಕೆಟ್ ಆಗಿ ಉಳಿದಿಲ್ಲ. ಅದೀಗ ಲೈಫ್ಸ್ಟೈಲ್ ಇವೆಂಟ್. ಜೀವನಶೈಲಿ, ಸಾಮಾಜಿಕ ಸ್ಥಾನಮಾನ ನಿರ್ಧರಿಸುವ ಕ್ರೀಡೆ. ಆದರೆ, ಈ ಕ್ರೇಜ್ ಬಹುಪಾಲು ನಗರಕ್ಕೆ ಮಾತ್ರ ಸೀಮಿತ ಎಂಬುದೊಂದು ಸಮಾಧಾನದ ಸಂಗತಿ.

ಟೀಕಾಕಾರರು ಏನೇ ಹೇಳಲಿ, ಭಾರತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಯುವಜನರನ್ನು, ಲಲನಾಮಣಿಗಳನ್ನು ಸೆಳೆದ `ಸ್ಪೋರ್ಟ್ಸ್ ಇವೆಂಟ್~ ಮತ್ತೊಂದಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.