ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತನ್ಯ ತುಂಬುವ ಪ್ರಾಣಾಯಾಮ

Last Updated 19 ಜೂನ್ 2019, 16:48 IST
ಅಕ್ಷರ ಗಾತ್ರ
ADVERTISEMENT

‘ಹಸಿರೇ ಉಸಿರು’, ಉಸಿರಿದ್ದರೆ ಚಲನೆ. ಪ್ರಾಣ ಚೈತನ್ಯವಿಲ್ಲದ ಉಸಿರು ಬರಿ ಶುಷ್ಕ ಹಾಗೂ ಸಾರವಿಲ್ಲದ್ದು. ಈ ಪ್ರಾಣ ಚೈತನ್ಯಯುಕ್ತವಾದ ಉಸಿರಿಗಾಗಿ ಎಲ್ಲರೂ ಹಂಬಲಿಸುತ್ತಿದ್ದೇವೆ. ಹಗಲೆಲ್ಲ ವಾಹನಗಳ ಹೊಗೆ, ದೂಳು, ಹಾನಿಕಾರಕ ವಿಷಾನಿಲಗಳು ಬೆರೆತ ಗಾಳಿಯ ಸೇವನೆ ಒಂದೆಡೆ. ಒಲೆಯ ಮುಂದೆ ನಿತ್ಯ ಕಣ್ಣೀರಿಡುತ್ತಾ ಅನಿವಾರ್ಯವಾಗಿ ಹೊಗೆ ಸೇವಿಸುವ ಮಹಿಳೆಯರು, ನಿತ್ಯ ಬೀಡಿ, ಸಿಗರೇಟ್, ಹುಕ್ಕಾ ಸೇದುತ್ತಾ ಶ್ವಾಸವನ್ನು ಹೊಗೆಯ ಗೂಡು ಅಥವಾ ರೋಗಗಳ ತಾಣವಾಗಿ ಮಾರ್ಪಡಿಸಿಕೊಳ್ಳುತ್ತಿರುವ (ತಿಳಿದೂ ತಿಳಿದು ತಪ್ಪೆಸಗುವ) ಮಾನವ ವರ್ಗ ಇನ್ನೊಂದೆಡೆ ಇದೆ.

ಹೀಗಾಗಿ, ಉತ್ತಮ ಆರೋಗ್ಯಕ್ಕಾಗಿ ಪ್ರಾಣಾಯಾಮ ಅವಶ್ಯ. ಮಲಿನಮುಕ್ತವಾದ ಶುದ್ಧ ಗಾಳಿಯನ್ನು ಸರಳ ಮತ್ತು ಸರಾಗವಾದ ಉಸಿರಾಟ ಪ್ರಕ್ರಿಯೆ ಮೂಲಕ ಸೇವಿಸುವ ಅಗತ್ಯವಿದೆ. ಕಾರಣ ಇಷ್ಟೆ; ನಾವು ಸೇವಿಸುವ ಆಹಾರ, ನೀರು ಸೇರಿದಂತೆ ಗಾಳಿಯೂ ಮಲಿನಗೊಂಡಿದೆ.

ಮಲಿನಗೊಂಡ ಗಾಳಿಯ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರಾಣ ಚೈತನ್ಯ ಅಥವಾ ಆಮ್ಲಜನಕ ಲಭ್ಯವಾಗುವುದಿಲ್ಲ. ಬದಲಿಗೆ, ರೋಗಕಾರಕ ಅಂಶಗಳು ದೇಹವನ್ನು ಪ್ರವೇಶಿಸಿ ಅಸ್ತಮಾ, ಉಬ್ಬಸ, ಗಂಟಲು ಬೇನೆ, ತೆಲೆನೋವು, ಶೀತ, ಕೆಮ್ಮು, ನೆಗಡಿಯಂತ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಅಷ್ಟಾಂಗ ಯೋಗದಲ್ಲಿ ಪ್ರಾಣಾಯಾಮ

ಯೋಗದ ಪಿತಾಮಹ ಪತಂಜಲಿ ಅವರು ರಚಿಸಿರುವ 192 ಸೂತ್ರ(ಶ್ಲೋಕ)ಗಳ ‘ಯೋಗ ಸೂತ್ರ’ ಕೃತಿಯಲ್ಲಿ ಅಷ್ಟಾಂಗ ಯೋಗ ಕುರಿತು ವಿವರಿಸಿದ್ದಾರೆ. ಪ್ರಾಣಾಯಾಮ ಅಷ್ಟಾಂಗ ಯೋಗದ ನಾಲ್ಕನೇ ಹಂತ. ಇದು ಯೋಗ ಸಾಧನೆಯ 4ನೇ ಮೆಟ್ಟಿಲು ಎಂದೇ ಪರಿಗಣಿತವಾಗಿದೆ.

ಪತಂಜಲಿ ಹೇಳಿರುವಂತೆ ಯೋಗ ಎಂದರೆ ‘ಚಿತ್ತ ವೃತ್ತಿ ನಿರೋಧಃ’. ಇಲ್ಲಿ ಪ್ರಾಣಾಯಾಮ ಅಭ್ಯಾಸವು ಮನಸ್ಸಿನ ನಿಯಂತ್ರಣ ಅಥವಾ ಹಿಡಿತ ಸಾಧನೆಗೆ ಪೂರಕವಾಗಿದೆ. ಯೋಗ ಕೇವಲ ಆಸನಗಳ ಅಭ್ಯಾಸ, ದೈಹಿಕ ಕಸರತ್ತು ಆಗಿರದೆ ‘ಸರ್ವ ರೋಗಗಳಿಗೆ ಯೋಗ ದಿವ್ಯ ಔಷಧ’ವಾಗಿದೆ. ಪ್ರಾಣಾಯಾಮವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಪ್ರಾಣಾಯಾಮ ಎಂದರೇನು?

ಪ್ರಾಣ+ಆಯಾಮ = ಪ್ರಾಣಾಯಾಮ.
ಪ್ರಾಣ = ಜೀವ, ಚೈತನ್ಯ.
ಆಯಾಮ = ವೃದ್ಧಿಸು ಅಥವಾ ಹೆಚ್ಚಿಸು.
‘ಕ್ರಮಬದ್ಧ ಉಸಿರಾಟ ಪ್ರಕ್ರಿಯೆ ಮೂಲಕ ಚೈತನ್ಯಯುಕ್ತವಾದ ‘ಪ್ರಾಣವಾಯು’ವನ್ನು ಪಡೆದು ಮಾನವನ ಜೀವಿತಾವಧಿಯನ್ನು ಹೆಚ್ಚಿಸುವುದೇ’ ಪ್ರಾಣಾಯಾಮ.

‘ಉಚ್ಛ್ವಾಸ, ನಿಃಶ್ವಾಸ ಕ್ರಿಯೆಗಳನ್ನು ಸ್ಥಿರಾಸನದಲ್ಲಿ ಕುಳಿತು ಹದಗೊಳಿಸುವುದೇ ಪ್ರಾಣಾಯಾಮ’ ಎಂದು ಪತಂಜಲಿ ಮುನಿಯು ಯೋಗ ಸೂತ್ರದ 2ನೇ ಅಧ್ಯಾಯದಲ್ಲಿ ಹೇಳಿದ್ದಾರೆ.

ಪ್ರಾಣಾಯಾಮ ಅಭ್ಯಾಸ

ಪ್ರಾತಃ ಕಾಲ ಹಾಗೂ ಸಂಜೆ ಅಭ್ಯಾಸಕ್ಕೆ ಸೂಕ್ತ ಸಮಯ. ನಿತ್ಯ ಕರ್ಮ(ಶೌಚ) ಪೂರೈಸಿದ ಬಳಿಕ ಉಪಹಾರ, ಆಹಾರ ಸೇವನೆ ಪೂರ್ವ, ಬರಿದಾದ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಮಧ್ಯಾಹ್ನ ಆಹಾರ ಸೇವನೆಯಾದ ನಂತರ ಕನಿಷ್ಠ ಮೂರು ತಾಸುಗಳ ಬಳಿಕ ಅಭ್ಯಾಸಕ್ಕೆ ತೊಡಗಬೇಕು. ಬಿಸಿಲು ಅಥವಾ ಇತರ ಕೆಲಸಗಳಿಂದಾಗಿ ದೇಹಕ್ಕೆ ಅತಿಯಾದ ಆಯಾಸ ಆದಾಗ ಅಭ್ಯಾಸ ಮಾಡಕೂಡದು.

ಸ್ಥಳ ಆಯ್ಕೆ: ಅಭ್ಯಾಸಕ್ಕೆ ಕೂರುವ ಸ್ಥಳ ಶುಭ್ರವಾತಾವಣದಿಂದ ಕೂಡಿರಲಿ. ಶುದ್ಧ ಗಾಳಿ ಬೆಳಕು ಬರುವಂತಿರಲಿ.

ಕೂರುವ ವಿಧಾನ: ನೆಲಕ್ಕೆ ಚಾಪೆ, ಹತ್ತಿಯ ವಸ್ತ್ರ, ಕಂಬಳಿ ಹಾಸಿ ಕುಳಿತುಕೊಳ್ಳಬೇಕು. ವಜ್ರಾಸನ, ಪದ್ಮಾಸನ ಹಾಕಿ ನೇರವಾಗಿ (ಸೊಂಟ, ಬೆನ್ನು, ಕುತ್ತಿಗೆ, ತಲೆ ಒಂದೇ ನೇರಕ್ಕಿರುವಂತೆ ಸಮತೋಲನ ಕಾಯ್ದುಕೊಳ್ಳಬೇಕು) ಕುಳಿತುಕೊಳ್ಳಿ. ಇಲ್ಲವೆ ಅತ್ಯಂತ ಸರಳವಾದ ಸ್ವಸ್ತಿಕಾಸನ ಹಾಕಿ ಆರಾಮವಾಗಿ ದೇಹಕ್ಕೆ ಕಿರಿಕಿರಿ ಎನಿಸದ ರೀತಿ ಕುಳಿತುಕೊಳ್ಳಿ.

ಮೃಗಿ(ಜಿಂಕೆ) ಮುದ್ರೆ

ಪ್ರಾಣಾಯಾಮದ ಅಂಗಗಳು

ಮೂಗಿನ ಎರಡೂ ಹೊರಳೆಗಳ ಮೂಲಕ ಪ್ರಾಣಾಯಾಮ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ಹೊರಳೆಗಳನ್ನು ನಾಡಿಗಳು ಎಂದು ಹೆಸರಿಸಲಾಗಿದೆ. ಇಡಾ, ಪಿಂಗಲಾ ಹಾಗೂ ಸುಷುಮ್ನ ಎಂದು ಮೂರು ನಾಡಿ ಬಗ್ಗೆ ಹೇಳಲಾಗಿದೆ. ಎಡ ಹೊರಳೆ ಚಂದ್ರ ನಾಡಿ. ಇದು ಶೀತಕಾರಕ. ಬಲ ಹೊರಳೆ ಸೂರ್ಯ ನಾಡಿ. ಇದು ಉಷ್ಣಕಾರಕ. ಸುಷುಮ್ನ ನಾಡಿಯು ಎರಡು ನಾಡಿಗಳ ಮಧ್ಯದಲ್ಲಿ ಬೆನ್ನುಹುರಿಯಿಂದ ನೆತ್ತಿಯವರೆಗೆ ಇದೆ ಎಂದು ಸಾಧಕರು ಹೇಳಿದ್ದಾರೆ.

ಪೂರಕ = ಉಸಿರನ್ನು ಒಳಗೆ ಎಳೆದುಕೊಳ್ಳುವುದು
ರೇಚಕ = ಉಸಿರನ್ನು ಹೊರಹಾಕುವುದು
ಕುಂಬಕ = ಉಸಿರನ್ನು ನಿಲ್ಲಿಸುವುದು.

ಅಂತರ ಕುಂಬಕ: ಉಸಿರನ್ನು ಒಳಗೆ ತಡೆದು ನಿಲ್ಲಿಸುವುದು. ಬಾಹ್ಯ ಕುಂಬಕ: ಉಸಿರನ್ನು ಹೊರ ಹಾಕಿ ತಡೆದು ನಿಲ್ಲಿಸುವುದು.

ಮುದ್ರೆ: ಪ್ರಾಣಾಯಾಮ ಅಭ್ಯಾಸದಲ್ಲಿ ಮೃಗಿ(ಜಿಂಕೆ) ಮುದ್ರೆಯನ್ನು ಬಳಸಲಾಗುತ್ತದೆ. ಬಲ ಕೈನ ಮಧ್ಯ ಹಾಗೂ ಅನಾಮಿಕ ಬೆರಳು ಮತ್ತು ಹೆಬ್ಬೆರಳನ್ನು ಕೂಡಿಸಿದಾಗ ಜಿಂಕೆಯನ್ನು ಹೋಲುವ ಆಕಾರಕ್ಕೆ ಕೈ ಬರುತ್ತದೆ. ಕೈಯನ್ನು ಅಡ್ಡಲಾಗಿ ತಿರುಗಿಸಿ ಮೂಗಿನ ಹೊರಳೆಗಳ ಮೇಲೆ ತಂದಾಗ ಹೆಬ್ಬೆರಳು ಮೂಗಿನ ಬಲ ಭಾಗಕ್ಕೆ, ಇನ್ನೆರೆಡು ಬೆರಳು ಎಡ ಭಾಗಕ್ಕೆ ಬಳಕೆಯಾಗುತ್ತವೆ. ತೋರು ಬೆರಳು ಮತ್ತು ಕಿರುಬೆರಳು ಜಿಂಕೆಯ ಕೊಂಬನ್ನು ಹೋಲುವ ರೀತಿ ಇರುತ್ತವೆ.

ಬಂಧ: ಅಭ್ಯಾಸ ವೇಳೆ ಮೂಲಬಂಧ, ಜಾಲಾಂದರ ಬಂಧ, ಉಡ್ಡಿಯಾನ ಬಂಧಗಳನ್ನು ಕ್ರಮವರಿತು ಕಡ್ಡಾಯವಾಗಿ ಮಾಡಲೇಬೇಕು.

ಪ್ರಾಣಾಯಾಮದ ಪ್ರಕಾರಗಳು

* ಸುಖಪೂರಕ ಪ್ರಾಣಾಯಾಮ
* ಚಂದ್ರಾನುಲೋಮ, ಸೂರ್ಯಾನುಲೋಮ
* ನಾಡಿ ಶುದ್ಧಿ ಪ್ರಾಣಾಯಾಮ
* ನಾಡಿ ಶೋಧನ ಪ್ರಾಣಾಯಾಮ
* ಸಮವೃತ್ತಿ ಪ್ರಾಣಾಯಾಮ
* ವಿಷಮವೃತ್ತಿ ಪ್ರಾಣಾಯಾಮ
* ಉಜ್ಜಾಯೀ
* ಭ್ರಮರ, ಭ್ರಮರಿ
* ಭಸ್ತ್ರಿಕಾ ಮತ್ತು ಕಪಾಲಭಾತಿ
* ಶೀತಳಿ, ಶೀತ್ಕಾರಿ
* ಸೂರ್ಯಭೇದನ, ಚಂದ್ರಭೇದನ
* ಅನುಲೋಮ, ವಿಲೋಮ

ಎಚ್ಚರಿಕೆ ಅಗತ್ಯ: ಪ್ರಾಣಾಯಾಮವನ್ನು ಗುರುಮುಖೇನ ಅಭ್ಯಾಸ ಮಾಡಬೇಕು. ಪರಿಣತಿ ಗಳಿಸಿದ ನಂತರ ನಿತ್ಯ ಕ್ರಮವರಿತು ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ತಪ್ಪಾಗಿ ಅಭ್ಯಾಸ ಮಾಡುವುದರಿಂದ ತೊಂದರೆಗಳಾಗುವ ಸಾಧ್ಯತೆಗಳಿವೆ.

ಪ್ರಾಣಾಯಾಮ ಲಾಭಗಳೇನು?

* ಉಸಿರಾಟ ತೊಂದರೆ ನಿವಾರಣೆ.

* ರಕ್ತಶುದ್ಧಿ, ರಕ್ತ ಪರಿಚಲನೆ, ದೀರ್ಘಾಯುಷ್ಯಕ್ಕೆ ನೆರವು.
* ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.
* ರಕ್ತದ ಮೂಲಕ ಮೆದುಳಿಗೆ ಹೆಚ್ಚಿನ ಆಮ್ಲಜನಕ ಪೂರೈಸುತ್ತದೆ.
* ಅಗತ್ಯ ಆಮ್ಲಜನಕ ಲಭ್ಯವಾಗುವುದರಿಂದ ಮೆದುಳಿಗೆ ಒತ್ತಡ ಕಡಿಮೆಯಾಗಿ ವಿಶ್ರಾಂತಿ ಲಭಿಸುತ್ತದೆ. ತಲೆನೋವು ದೂರವಾಗುತ್ತದೆ.
* ಶ್ವಾಸಕೋಶ ತೊಂದರೆ, ಶ್ವಾಸ ಸಂಬಂಧಿತ ಕಾಯಿಲೆಗಳಾದ ಉಬ್ಬಸ, ಅಸ್ತಮಾ ನಿವಾರಣೆ.
* ಶ್ವಾಸಕೋಶದ ಹಿಗ್ಗುವಿಕೆಗೆ ಸಹಕಾರಿ ಇದರಿಂದ ವಿಶಾಲವಾದ ಎದೆಯ ಬೆಳವಣಿಗೆಗೆ ಸಾಧ್ಯವಾಗುತ್ತದೆ.
* ಓಟಗಾರರಿಗೆ ದೀರ್ಘವಾದ ಓಟಕ್ಕೆ ಸಹಕಾರಿ.
* ಅಶಕ್ತತೆ ನಿವಾರಿಸಿ ದೆಹಕ್ಕೆ ಚೈತನ್ಯ ತುಂಬುತ್ತದೆ.
* ಮನಸ್ಸಿನ ಮೇಲೆ ಹತೋಟಿಗೆ ಸಹಕಾರಿ.
* ನರ-ನಾಡಿಗಳು ಚೈತನ್ಯ ಪಡೆಯುತ್ತವೆ.
* ಮೆದುಳಿನ ಕಾರ್ಯ ಚುರುಕಾಗುತ್ತದೆ.
* ಓಜಸ್ಸು, ತೇಜಸ್ಸು ಹೆಚ್ಚುತ್ತದೆ.
* ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ.
* ಮನಸ್ಸು ತಿಳಿಯಾಗಿ ಶಾಂತ ಸ್ವಭಾವ ಪಡೆಯುತ್ತದೆ.
* ಧ್ಯಾನ ಮಾಡಲು ಪ್ರಾಣಾಯಾಮ ಅಡಿಪಾಯ ಹಾಕುತ್ತದೆ.
* ಮೂತ್ರಪಿಂಡ, ಜಠರ, ಗುಲ್ಮ, ಕರುಳು ದೋಷ ನಿವಾರಣೆ.
* ರಕ್ತ ನಂಜು ತಡೆ, ವೀರ್ಯಶಕ್ತಿ ವೃದ್ಧಿ, ಇನ್ ಸೋಮಿಯಾ ರೋಗಗಳ ತಡೆ, ಜ್ವರ, ರಕ್ತದೊತ್ತಡ ನಿವಾರಣೆ ಸೇರಿದಂತೆ ಹಲವು ಕಾಯಿಲೆಗಳಿಂದ ದೂರವಿರಲು ಸಹಕಾರಿ.

ಮಹಿಳೆಯರಿಗೆ ಸಲಹೆ

* ಪುರುಷ ಹಾಗೂ ಮಹಿಳೆಯರು ತಾರತಮ್ಯ ಇಲ್ಲದೆ ಪ್ರಾಣಾಯಾಮ ಅಭ್ಯಾಸ ಮಾಡಬಹುದು.

* ಮಹಿಳೆಯರು ಗರ್ಭಧರಿಸಿದಾಗ ಕಪಾಲಭಾತಿ, ಭಸ್ತ್ರಿಕಾ ಪ್ರಾಣಾಯಾಮ ಹಾಗೂ ವಿಷಮವೃತ್ತಿ, ಅಂತರ ಕುಂಬಕ, ಉಡ್ಡಿಯಾನ ಸಹಿತ ಬಾಹ್ಯ ಕುಂಬಕ ಪ್ರಾಣಾಯಾಮಗಳ ಅಭ್ಯಾಸ ಮಾಡಕೂಡದು. ಉಳಿದಂತೆ ದೇಹದ ಸಾಮರ್ಥ್ಯ ಅರಿತು ಅಭ್ಯಾಸ ಮಾಡಬಹುದು.

* ಹೆರಿಗೆಯಾದ ನಂತರ ಒಂದು ತಿಂಗಳು ಪ್ರಾಣಾಯಾಮ ಅಭ್ಯಾಸ ಬೇಡ.

* ಮಾಸಿಕ ಋತು ಸ್ರಾವ ಆದಾಗ ಅಭ್ಯಾಸ ನಡೆಸಬಹುದು. ಉತ್ತಮ ಲಾಭವೂ ಲಭ್ಯವಾಗುತ್ತದೆ. ಈ ವೇಳೆ ಉಡ್ಡಿಯಾನ ಬಂಧ ಬೇಡ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT