ಬುಧವಾರ, ಮೇ 25, 2022
31 °C

ಜನಪ್ರತಿನಿಧಿಗಳ ದುರಾಡಳಿತ: ನ್ಯಾ. ಹೆಗ್ಡೆ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರಜಾಪ್ರಭುತ್ವ ಇಂದು ಅರ್ಥ ಕಳೆದುಕೊಂಡಿದ್ದು, ಜನರಿಗಾಗಿ ಸೃಷ್ಟಿಯಾದ ಪ್ರಭುತ್ವ ಇಂದು ಜನಪ್ರತಿನಿಧಿಗಳ ದುರಾಡಳಿತದ ಪ್ರಭುತ್ವವಾಗಿ ಪರಿವರ್ತಿತವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.ನಗರದಲ್ಲಿ ಶನಿವಾರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರದಲ್ಲಿರುವ ರಾಜಕಾರಣಿಗಳ ವಿರುದ್ಧ ದೂರು ನೀಡಲು ಜನಸಾಮಾನ್ಯರು ಹೆದರುತ್ತಾರೆ. ಈ ಕಾರಣದಿಂದ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ನೀಡಬೇಕು ಎನ್ನುವುದು ನನ್ನ ಭಾವನೆ. ಆದರೆ, ಅದಕ್ಕೆ ಯಾವ ರಾಜಕಾರಣಿಯೂ ಬೆಂಬಲಿಸುವುದಿಲ್ಲ ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಿದರು.ಗ್ರಾಮೀಣ ಪ್ರದೇಶಗಳಿಗೆ ಭ್ರಷ್ಟಾಚಾರ ಹಾಗೂ ರಾಜಕೀಯ ಮಾತ್ರ ತಲುಪಿದ್ದು, ಇಂದಿಗೂ ಸಮರ್ಪಕ ಮೂಲ ಸೌಕರ್ಯ ದೊರಕದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿ ಗ್ರಾಮಗಳಿಗೂ ಇಂದು ಕೋಟ್ಯಂತರ ರೂ ಅನುದಾನ ಬರುತ್ತದೆ. ಆದರೆ, ಎಷ್ಟರಮಟ್ಟಿಗೆ ಅಭಿವೃದ್ಧಿಯಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆಡಳಿತ ನಡೆಸುವವರು ಜನಸಾಮಾನ್ಯರಿಗೆ ಸೌಲಭ್ಯ ತಲುಪಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶುದ್ಧ ಕುಡಿಯುವ ನೀರಿಗೂ ಅನೇಕ ಗ್ರಾಮಗಳಲ್ಲಿ ಪರದಾಡುವ ಸ್ಥಿತಿ ಇದೆ.ಲೋಕಾಯುಕ್ತ ಹುದ್ದೆಗೆ ನೀಡಿದ ರಾಜೀನಾಮೆ ಹಿಂದಕ್ಕೆ ಪಡೆದ ಬಗ್ಗೆ ಈಗಲೂ ನನಗೆ ಬೇಸರವಿದೆ. ಆದರೆ, ಸರ್ಕಾರ ನೀಡಿದ ಭರವಸೆ ಈಡೇರಿಸಲಿಲ್ಲ ಎಂದು ಮತ್ತೆ ಮತ್ತೆ ರಾಜೀನಾಮೆ ನೀಡಿದರೆ ಅದು ಹುಡುಗಾಟ ಆಗುತ್ತದೆ. ಅಡ್ವಾಣಿ ಮಾತಿಗೆ ಬೆಲೆ ಕೊಟ್ಟ ಕಾರಣಕ್ಕೆ ಹಲವರು ತಮ್ಮನ್ನು ಟೀಕಿಸಿದರು. ಅಡ್ವಾಣಿ ಅವರನ್ನು ತಾವು ರಾಜಕಾರಣಿ ಎಂದು ಪರಿಗಣಿಸಿಲ್ಲ. ಅವರು ನಮ್ಮ ಕುಟುಂಬದ ಒಬ್ಬರು ಸ್ನೇಹಿತರು. ಇಂದಿಗೂ ಅವರು ನನ್ನ ತಂದೆ ಸಮಾನ ಎಂದರು.ಬಿಜೆಪಿ ಬಗ್ಗೆಯಾಗಲಿ ಅಥವಾ ಇತರೆ ಪಕ್ಷಗಳ ಬಗ್ಗೆಯಾಗಲಿ ನನಗೆ ಯಾವುದೇ ಒಲವಿಲ್ಲ. ನಾಲ್ಕೂವರೆ ವರ್ಷದಲ್ಲಿ ತಾವು ಹೆಚ್ಚು ‘ಅಟ್ಯಾಕ್’ ಮಾಡಿರುವ ಪಕ್ಷ ಬಿಜೆಪಿ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಒಂದೇ ಎನ್ನುವುದು ತಮ್ಮ ಭಾವನೆ. ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತರು ನಡೆಸುವ ಹೋರಾಟ ಶೇ. 10ರಷ್ಟು ಮಾತ್ರ. ನಾಲ್ಕುವರೆ ವರ್ಷಗಳ ತಮ್ಮ ಕಾರ್ಯನಿರ್ವಹಣೆ ತೃಪ್ತಿ ತಂದಿದೆ. 2011ರಲ್ಲಿಯೇ 104 ಮಂದಿ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ಪ್ರತಿವರ್ಷ ಸರಾಸರಿ 300 ಮಂದಿಯನ್ನು ಹಿಡಿಯಲಾಗಿದೆ. ಮುಂದೆ ಬರುವ ಲೋಕಾಯುಕ್ತರೂ ಉತ್ತಮವಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಇಲ್ಲದಿದ್ದರೆ ಜನ ಸುಮ್ಮನಿರುವುದಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.