ಬುಧವಾರ, ಏಪ್ರಿಲ್ 21, 2021
25 °C

ಜನರ ಎತ್ತಂಗಡಿಗೆ ನೂರೆಂಟು ದಾರಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕ್ಸಲರ ಜಾಡು ಹಿಡಿದು...4

ಮೈಸೂರು: ಪಶ್ಚಿಮಘಟ್ಟ ಪ್ರದೇಶದ ಕಾಡಂಚಿನ ಗ್ರಾಮಗಳನ್ನು ಎತ್ತಂಗಡಿ ಮಾಡುವುದಕ್ಕೆ ಹಲವಾರು ಕಾರಣಗಳು ಸಿಗುತ್ತವೆ.ರಾಷ್ಟ್ರೀಯ ಉದ್ಯಾನ, ಹುಲಿ ರಕ್ಷಣೆ ಯೋಜನೆ, ಬಗರ್‌ಹುಕುಂ, ಮೀಸಲು ಅರಣ್ಯ, ರಕ್ಷಿತ ಅರಣ್ಯ, ಪಶ್ಚಿಮಘಟ್ಟ ಯೋಜನೆ, ಆನೆ ಕಾರಿಡಾರ್, ಇನಾಂ (ದೇವರ) ಭೂಮಿ ವಿವಾದ ಹೀಗೆ ಜನರನ್ನು ಒಕ್ಕಲೆಬ್ಬಿಸಲು ಹಲವಾರು ಕಾರಣಗಳು ಇವೆ. ಆದರೆ ತಲೆತಲಾಂತರದಿಂದ ಜನರು ಬದುಕಿಕೊಂಡು ಬಂದ ಸ್ಥಳದಲ್ಲಿಯೇ ಅವರನ್ನು ಉಳಿಸಲು ಒಂದೇ ಒಂದು ಯೋಜನೆಯೂ ಇಲ್ಲ.-ಇದು ನಕ್ಸಲ್ ಪ್ರಭಾವವಿರುವ ಬಹುತೇಕ ಗ್ರಾಮಗಳ ಜನರ ಅಭಿಪ್ರಾಯ. ನಕ್ಸಲ್ ಹೋರಾಟದ ಬಗ್ಗೆ ಇಲ್ಲಿನ ಜನರು ಮನಬಿಚ್ಚಿ ಮಾತನಾಡುತ್ತಾರೆ. ಆದರೆ ತಮ್ಮ ಹೆಸರನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ನಕ್ಸಲ್ ಹೋರಾಟದ ಬಗ್ಗೆ ಮಾತನಾಡುವ ಜನ ಚಿಕ್ಕಮಗಳೂರು, ಕಳಸ, ಶೃಂಗೇರಿ, ಆಗುಂಬೆ ಮುಂತಾದ ಕಡೆ ಸಿಗುತ್ತಾರೆ.ಹೀಗೆ ಚಿಕ್ಕಮಗಳೂರಿನಲ್ಲಿ ನನಗೆ ಸಿಕ್ಕ ಒಬ್ಬರು `ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಆದಿವಾಸಿ ಕುಟುಂಬಗಳನ್ನು ಎತ್ತಂಗಡಿ ಮಾಡುವುದರ ವಿರುದ್ಧ 2000-2001ರಲ್ಲಿ ಆರಂಭವಾದ ನಕ್ಸಲ್ ಹೋರಾಟ ಇನ್ನೂ ಮುಂದುವರಿದಿದೆ. ಅವರ ಬೇಡಿಕೆಗಳಲ್ಲಿ ತೆಗೆದು ಹಾಕುವಂತಹದ್ದು ಏನಿದೆ? ಆದಿವಾಸಿಗಳನ್ನು ಎತ್ತಂಗಡಿ ಮಾಡಬೇಡಿ, ಅವರಿಗೆ ಹಕ್ಕುಪತ್ರಗಳನ್ನು ನೀಡಿ, ಮೂಲಸೌಲಭ್ಯ ಕಲ್ಪಿಸಿ, ರಾಷ್ಟ್ರೀಯ ಉದ್ಯಾನವನ್ನು ರದ್ದು ಮಾಡಿ, ಇಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅವಕಾಶ ನೀಡಬೇಡಿ, ಗಣಿಗಾರಿಕೆ ನಡೆಸಬೇಡಿ. ಗಣಿಗಾರಿಕೆಯಿಂದ ಪಶ್ಚಿಮ ಘಟ್ಟದ ನದಿ ಮೂಲಗಳು ಬತ್ತಿ ಹೋಗುತ್ತವೆ ಎಂದು ಹೇಳಿ ಹೋರಾಟ ನಡೆಸಿದರೆ ನಕ್ಸಲ್ ಪಟ್ಟ ಕಟ್ಟಿ ಬಿಡುತ್ತಾರೆ. ಇದು ಸರೀನಾ?~ ಎಂದು ಪ್ರಶ್ನೆ ಮಾಡುತ್ತಾರೆ.ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಕಳೆದ ಒಂದು ದಶಕದಲ್ಲಿ ಸಾಕಷ್ಟು ಹಣ ನೀಡಿದೆ. ಆದರೆ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸರಿಯಾಗಿ ಆಗಿಲ್ಲ. ಕಳಸ ಭಾಗದಲ್ಲಿ ಇನ್ನೂ ಸರಿಯಾದ ರಸ್ತೆ ಇಲ್ಲ. ವಿದ್ಯುತ್ ಸೌಲಭ್ಯ ಇಲ್ಲ. ಮಳೆಗಾಲದಲ್ಲಿ ವಿಪರೀತ ಮಳೆಯಾದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆಶ್ರಯ ಮತ್ತು ಇತರ ವಸತಿ ಯೋಜನೆಗಳ ಮೂಲಕ ಮನೆಗಳನ್ನು ನೀಡುವಾಗ ತಾರತಮ್ಯ ಇದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗೆ ಇನ್ನೂ ಸುಮಾರು ಎರಡು ಸಾವಿರ ಆದಿವಾಸಿ ಕುಟುಂಬಗಳು ಇವೆ. ಅವರಿಗೆ ಸೂಕ್ತ ಸೌಲಭ್ಯ ನೀಡಿಲ್ಲ.ನನ್ನ ಜೊತೆ ಮಾತನಾಡುತ್ತಿದ್ದವರು ನಕ್ಸಲೀಯರಲ್ಲ. ಅವರ ಬೆಂಬಲಿಗರೂ ಅಲ್ಲ. ಆದರೆ ಅವರಿಗೆ ರಾಜ್ಯ ಸರ್ಕಾರ ನಕ್ಸಲರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ವಿಪರೀತ ಸಿಟ್ಟಿದೆ. ನಕ್ಸಲರು ನಡೆಸುತ್ತಿರುವ ಹಿಂಸೆಯ ಬಗ್ಗೆಯೂ ಆಕ್ರೋಶವಿದೆ. ನಕ್ಸಲರ ಹಾವಳಿ ಹೆಚ್ಚಾಗಲು ಸರ್ಕಾರದ ಧೋರಣೆಯೇ ಕಾರಣ ಎಂಬ ಭಾವನೆ ಇದೆ.`ಕಳೆದ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆದ ಸಂದರ್ಭದಲ್ಲಿ ಚುನಾವಣೆ ಬಹಿಷ್ಕರಿಸುವಂತೆ ನಕ್ಸಲರು ಕರೆ ನೀಡಿದರು. ಇದನ್ನೇ ನೆಪ ಮಾಡಿಕೊಂಡು ಪೊಲೀಸರು 13 ಆದಿವಾಸಿಗಳನ್ನು ಬಂಧಿಸಿದರು. ಈ ಆದಿವಾಸಿ ಮತ್ತು ಕೆಲವು ದಲಿತರಿಗೂ ನಕ್ಸಲ್ ಚಳವಳಿಗೂ ಯಾವುದೇ ಸಂಬಂಧ ಇರಲಿಲ್ಲ. ಆದರೂ ಅವರು ಬಂಧನಕ್ಕೆ ಒಳಗಾದರು. ಪೊಲೀಸ್ ದೌರ್ಜನ್ಯಕ್ಕೂ ಒಳಗಾದರು. ಹೀಗೆ ಮಾಡಿದರೆ ಪೊಲೀಸರ ಬಗ್ಗೆ ಹೇಗೆ ವಿಶ್ವಾಸ ಬರುತ್ತದೆ~ ಎಂದು ಅವರು ಪ್ರಶ್ನೆ ಮಾಡುತ್ತಾರೆ.ನಕ್ಸಲ್ ಎಂಬ ಹಣೆಪಟ್ಟಿ ಹಚ್ಚಿಕೊಂಡು ಹಲವಾರು ಮಂದಿ ಈಗಲೂ ಜೈಲಿನಲ್ಲಿ ಇದ್ದಾರೆ. ಒಂದು ಪ್ರಕರಣದಲ್ಲಿ ಅವರ ಬಿಡುಗಡೆಯಾದರೆ ಇನ್ನೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗುತ್ತದೆ. ವಿಚಾರಣೆ ಮುಗಿಯುವುದೇ ಇಲ್ಲ. ಅಲ್ಲದೆ ಈಗಾಗಲೇ ನಕ್ಸಲ್ ಎಂಬ ಹಣೆಪಟ್ಟಿ ಹಚ್ಚಿಕೊಂಡು ಬಿಡುಗಡೆಯಾಗಿ ಸಮಾಜದಲ್ಲಿ ಬದುಕಲು ಪ್ರಯತ್ನಿಸುವ ಮಂದಿಯೂ ಸಾಕಷ್ಟಿದ್ದಾರೆ. ಅವರಿಗೆ ಸಮಾಜದಲ್ಲಿ ಬದುಕಲು ಸೂಕ್ತ ವಾತಾವರಣ ಇಲ್ಲ.`ನ್ಯಾಯಾಲಯದ ವಿಚಾರಣೆ ನಡೆದು `ಇವರು ನಕ್ಸಲರಲ್ಲ~ ಎಂದು ಬಿಡುಗಡೆಯಾದವರನ್ನು ಕರೆದು ತಂದು `ಈ ನಕ್ಸಲರು ಶರಣಾಗಿದ್ದಾರೆ~ ಎಂದು ಹೇಳಿ ಅವರಿಗೆ ಪರಿಹಾರದ ಹಣ ವಿತರಣೆ ಮಾಡಿದ ಉದಾಹರಣೆಗಳೂ ಇವೆ. ನಂತರ ಕೆಲವರು `ನಮ್ಮನ್ನು ಮೀಟಿಂಗ್ ಇದೆ ಎಂದು ಕರೆದುಕೊಂಡು ಬಂದು ನಕ್ಸಲ್ ಪ್ಯಾಕೇಜ್‌ನಲ್ಲಿ ಶರಣಾಗತಿ~ ಎಂದು ಬರೆಸಿದರು ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

 

ನಕ್ಸಲ್ ಶರಣಾಗತಿ ಪ್ಯಾಕೇಜ್ ಈ ರೀತಿ ದುರುಪಯೋಗವಾಗುತ್ತಿದೆ. ಇದನ್ನು ತಡೆಯುವ ಕೆಲಸವನ್ನೂ ಸರ್ಕಾರ ಮಾಡುತ್ತಿಲ್ಲ. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗಿ ಎಂದು ಸರ್ಕಾರ ಹೇಳುತ್ತದೆ. ಈಗ `ಶರಣಾದ~ ನಕ್ಸಲರು ಯಾವ ಶಸ್ತ್ರ ವಾಪಸು ಕೊಟ್ಟಿದ್ದಾರೆ. ಎಷ್ಟು ಕೊಟ್ಟಿದ್ದಾರೆ. ಅದನ್ನು ಎಲ್ಲಿ ಇಡಲಾಗಿದೆ ಹೇಳಿ ಸ್ವಾಮಿ~ ಎಂದು ಅವರು ಕೇಳುತ್ತಾರೆ.`ನಾನು ನಕ್ಸಲೀಯರ ಪರ ಮಾತನಾಡುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಆದರೆ ನಕ್ಸಲೀಯರ ಪ್ರಭಾವವನ್ನು ಕಡಿಮೆ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳು ಸರಿಯಾಗಿಲ್ಲ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಈ ಕೆಲಸ ಮಾಡಲು ಸಾಧ್ಯವಿಲ್ಲ.

 

ಜನರ ಬಗ್ಗೆ ಕಾಳಜಿ ಇರುವ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಿಸಿ ಅವರ ಮೂಲಕ ಕೆಲಸ ಮಾಡಿಸಬೇಕು. ಅವರನ್ನು ಯಾವುದೇ ಕಾರಣಕ್ಕೂ 5 ವರ್ಷದವರೆಗೆ ವರ್ಗಾವಣೆ ಮಾಡಬಾರದು. ಈ ಅಧಿಕಾರಿಗಳು ಜನರ ನಡುವೆಯೇ ಇದ್ದು ಕೆಲಸ ಮಾಡಿದರೆ ನಕ್ಸಲರನ್ನು ಓಡಿಸಲು ಕೋವಿ ಬೇಕಾಗುವುದಿಲ್ಲ. ಗುಂಡಿನ ಶಬ್ದ ಕೇಳುವುದಿಲ್ಲ~ ಎಂದು ಅವರು ಮಾತು ಮುಗಿಸಿದರು.

 (ನಾಳಿನ ಸಂಚಿಕೆಯಲ್ಲಿ ಭಾಗ-5)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.