ಗುರುವಾರ , ಮೇ 6, 2021
27 °C

ಜನರ ಮನದ ನವಾಬ್

ಡಿ.ಗರುಡ Updated:

ಅಕ್ಷರ ಗಾತ್ರ : | |

`ಟೈಗರ್~ ಮನ್ಸೂರ್ ಅಲಿ ಖಾನ್ ಪಟೌಡಿ, ಭಾರತ ಕ್ರಿಕೆಟ್ ಕ್ಷೇತ್ರ ಕಂಡ `ಶ್ರೇಷ್ಠ ನಾಯಕ~. ಕ್ರೀಡಾ ಜೀವನದಲ್ಲಿ ಮಾಡಿದ ಸಾಧನೆಯೂ ಹಿರಿದು.ಆಟದ ತಾಕತ್ತು ಏನೆಂದು ನೋಡಿದವರಿಗೆ ಗೊತ್ತು. ಆದರೆ ಆಟದ ಅಂಗಳದ ಹೊರಗೆ ಮಾತ್ರ ನೋಡಿದ ನಮ್ಮ ತಲೆಮಾರಿನವರಿಗೆ ಅವರ ಸ್ನೇಹಪರ ಗುಣ ಮಾತ್ರ ಗೊತ್ತು. ಅದೇ ಮಹತ್ವದ್ದು.ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ದೌಲತ್ತಿನ ಬಲವಿದ್ದರೂ ಬಿಗುಮಾನವಂತೂ ಒಂದಿಷ್ಟೂ ಇರಲಿಲ್ಲ. ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುತ್ತ ಜನರ ಮನದ `ನವಾಬ್~ ಎನಿಸಿದ್ದರು. ಆಟದ ಅಂಗಳದಾಚೆಗೂ ಹೊಳೆದ ಕ್ರಿಕೆಟಿಗ ಪಟೌಡಿ ಕುರಿತು ಒಂದಿಷ್ಟು ವಿಶೇಷಗಳನ್ನು ಪದಗಳ ಸಾಲಿನಲ್ಲಿ ಜೋಡಿಸಿಡಲು ಇಲ್ಲಿ ಪ್ರಯತ್ನ ಮಾಡಲಾಗಿದೆ.ಮನಗೆದ್ದ ನವಾಬ್: ಹರಿಯಾಣ ರಾಜ್ಯದ ಗುಡಗಾಂವ್ ಜಿಲ್ಲೆಯ ಪಟೌಡಿ ಇದು ಮನ್ಸೂರ್ ಅಲಿ ಅವರ ಪೂರ್ವಜರ ನೆಲೆ. ಅದೇ ಪ್ರಾಂತ್ಯದ ಒಂಬತ್ತನೇ ಹಾಗೂ ಕೊನೆಯ ನವಾಬ ಕೂಡ ಎನಿಸಿಕೊಂಡರು.

 

1971ರಲ್ಲಿ ಹೊಸ ಕಾನೂನು ಬಂದು ಎಲ್ಲ ರಾಜಪದವಿಗಳು ಅಳಿದು ಹೋದವು. ಆದರೆ ಇವರು ಮಾತ್ರ `ಜನರ ಮನದ ನವಾಬ್~ ಆಗಿಯೇ ಉಳಿದರು. ತಮ್ಮ ಪೂರ್ವಿಕರ ನೆಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ಮೂಲಕ ಮೆಚ್ಚುಗೆ ಗಳಿಸಿದರು. `ಟೈಗರ್~ ಆಗಾಗ ತಮ್ಮ ಕುಟುಂಬದೊಂದಿಗೆ ಬಂದು ಪಟೌಡಿಯ ಹವೇಲಿಯಲ್ಲಿ ತಂಗುತ್ತಿದ್ದರು.ನವಾಬ್‌ಗಿರಿ ಇಲ್ಲದಿದ್ದರೂ `ನವಾಬ್ ಕಾ ಶಾನ್ ಥಾ~ ಎಂದು ಪಟೌಡಿ ಜನರು ತಮ್ಮೂರಿನ ಹೆಮ್ಮೆಯ ಕ್ರಿಕೆಟಿಗನ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಹೇಳಿದ ಮಾತು ಮನತಟ್ಟಿತು. ಖ್ಯಾತಿಯ ಎತ್ತರಕ್ಕೆ ಏರಿದರೂ ತಮ್ಮೂರಿನವರಿಗಾಗಿ ಮಿಡಿದ ಹೃದಯದ ಸ್ಮರಣೆ ಇದೆಂದು ಹೇಳಬಹುದು.ನೆನಪಿನಲ್ಲುಳಿದ ರೂಪದರ್ಶಿ: ಪಟೌಡಿ ಪ್ರಭಾವಿ ಕ್ರಿಕೆಟಿಗ. ಆದರೆ 1975ರ ನಂತರದ ತಲೆಮಾರಿನವರ ಮನಸ್ಸಿನಲ್ಲಿ ಆಳವಾಗಿ ಇಳಿದಿದ್ದು ಒಬ್ಬ ರೂಪದರ್ಶಿಯಾಗಿದೆ.ಹೌದು; ಅವರು ಡಿಗ್ಜಾಮ್ ಜಾಹೀರಾತಿನಲ್ಲಿ ಅದೆಷ್ಟೊಂದು ವರ್ಷಗಳ ಕಾಲ ಟೆಲಿವಿಷನ್ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು. ವಿಶಿಷ್ಟವಾದ ಗತ್ತಿನೊಂದಿಗೆ ಮುಗುಳುನಗೆ ಬೀರುತ್ತಿದ್ದ ಅವರು ಇತ್ತೀಚೆಗೆ `ಗೋಲ್ಡ್ ಕಾಫಿ~ ಜಾಹೀರಾತಿನಲ್ಲಿಯೂ ಗಮನ ಸೆಳೆದಿದ್ದರು.ಒಳ್ಳೆಯ ತಂದೆ: ಕ್ರಿಕೆಟ್ ಕ್ಷೇತ್ರದಲ್ಲಿ ತಾವು ಖ್ಯಾತಿ ಗಳಿಸಿದ್ದರೂ ತಮ್ಮ ಮಗ ಸೈಫ್ ಅಲಿ ಖಾನ್ ಕೂಡ ಕ್ರಿಕೆಟಿಗನೇ ಆಗಬೇಕೆಂದು ಪಟೌಡಿ ಬಯಸಲಿಲ್ಲ. ಮಕ್ಕಳು ಇಷ್ಟವಾದ ವೃತ್ತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಿದರು. ಸೈಫ್ ಹಾಗೂ ಸೋಹಾ ತಮ್ಮ ತಾಯಿಯಂತೆ ಸಿನಿಮಾ ರಂಗವನ್ನು ಆಯ್ಕೆ ಮಾಡಿಕೊಂಡರು.ಕೊನೆಯ ಮಗಳು ಸಬಾ ಆಭರಣ ವಿನ್ಯಾಸಕಿಯಾದರು. ಸುಮಾರು ಐದು ವರ್ಷಗಳ ಹಿಂದೆ ಮೊಹಾಲಿಯಲ್ಲಿ ತಮ್ಮ ಮಕ್ಕಳ ಕುರಿತು ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಟೈಗರ್ `ಮನಸ್ಸು ಒಪ್ಪುವ ವೃತ್ತಿ ಹಾಗೂ ಪ್ರವೃತ್ತಿಯೇ ಸೂಕ್ತ. ಈ ವಿಷಯದಲ್ಲಿ ನನ್ನ ಮಕ್ಕಳಿಗೆ ಆಯ್ಕೆಗೆ ಮುಕ್ತ ಅವಕಾಶ ನೀಡಿದ್ದೇನೆ~ ಎಂದಿದ್ದರು. ಮಕ್ಕಳ ಮೇಲೆ ತಮ್ಮ ಆಸಕ್ತಿಯ ವಿಷಯಗಳನ್ನು ಹೇರದ ಅವರು `ಒಳ್ಳೆಯ ತಂದೆ~ ಎನಿಸಿಕೊಂಡರು.ಬಾಲಿವುಡ್ ಸ್ನೇಹ: ತಮ್ಮ ಪತ್ನಿ ಶರ್ಮಿಳಾ ಸಿನಿಮಾ ತಾರೆ ಆಗಿದ್ದರಿಂದ ಸಹಜವಾಗಿಯೇ ಬಾಲಿವುಡ್ ಜನರ ಸಂಪರ್ಕ ಮನ್ಸೂರ್ ಅಲಿ ಅವರಿಗೆ ಇತ್ತು. ಆದರೆ ಇದು ಕೇವಲ ರಜತ ಪರದೆಯಲ್ಲಿ ಮಿಂಚುವ ನಟಿಯ ಪತಿ ಎನ್ನುವ ಕಾರಣಕ್ಕಾಗಿ ಅಲ್ಲ.

 

ಕ್ರಿಕೆಟಿಗರಾಗಿ ಅವರು ಹೊಂದಿದ್ದ ಖ್ಯಾತಿಯಿಂದ. ಬಾಲಿವುಡ್ ಜನರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ `ಟೈಗರ್~ ಇದ್ದರೆ ವಿಶಿಷ್ಟ ಕಳೆ! ಇದರಿಂದಾಗಿಯೇ ಹೆಚ್ಚಿನ ಸಿನಿಮಾ ಸಮಾರಂಭಗಳಿಗೆ ಪಟೌಡಿಗೆ ವಿಶೇಷ ಆಹ್ವಾನ ಇರುತ್ತಿತ್ತು.ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಖ್ಯಾತ ನಿರ್ದೇಶಕ ಮನಮೋಹನ್ ದೇಸಾಯಿ ಅವರಂಥ ಹಳಬರು ಮಾತ್ರವಲ್ಲ ಹೊಸ ತಲೆಮಾರಿನ ನಿರ್ದೇಶಕರಾದ ನಾಗೇಶ್ ಕುಕುನೂರ್ ಹಾಗೂ ಮಧುರ್ ಭಂಡಾರ್ಕರ್ ಕೂಡ `ಚುಂಬಕದಂತೆ ಸೆಳೆಯುವ ವ್ಯಕ್ತಿತ್ವ~ದ ಮಾಜಿ ಕ್ರಿಕೆಟಿಗ ಇದ್ದರೆ ಬಾಲಿವುಡ್ ಪಾರ್ಟಿಗಳ ಮೌಲ್ಯ ಹೇಗೆ ಹೆಚ್ಚುತಿತ್ತು ಎನ್ನುವುದನ್ನು ಸ್ಮರಿಸುತ್ತಾರೆ. `ಸಮಯಪ್ರಜ್ಞೆಯುಳ್ಳ ಮಾತುಗಾರಿಕೆಯೇ ಅಪಾರ ಸ್ನೇಹಿತರನ್ನು ಗಳಿಸಲು ಕಾರಣ~ ಎಂದು ಪಟೌಡಿ ಗುಣವನ್ನು ಬಚ್ಚನ್ ಕೂಡ ಕೊಂಡಾಡಿದ್ದಾರೆ.ಸಂಭ್ರಮವಿಲ್ಲದ ಜನ್ಮದಿನ: ಮನ್ಸೂರ್ ಅಲಿ ಖಾನ್ ಪಟೌಡಿ ಜನಿಸಿದ್ದು 5ನೇ ಜನವರಿ 1941ರಲ್ಲಿ. ಅವರ ಹನ್ನೊಂದನೇ ಹುಟ್ಟುಹಬ್ಬದ ದಿನದಂದೇ ತಂದೆ ಇಫ್ತಿಕಾರ್ ಅಲಿ ಖಾನ್ ಪಟೌಡಿ (5ನೇ ಜನವರಿ 1952) ನಿಧನರಾದರು.ಇದೇ ಕಾರಣಕ್ಕಾಗಿ ಆನಂತರದಿಂದ ಮನ್ಸೂರ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿಲ್ಲ. ಗೆಳೆಯರ ಹಾಗೂ ಅಭಿಮಾನಿಗಳ ಒತ್ತಡವಿದ್ದರೂ ಅವರೆಂದೂ ಆ ದಿನವನ್ನು ಔತಣಕೂಟ ಆಯೋಜಿಸುವ ಮೂಲಕ ಕಳೆಯಲಿಲ್ಲ.ತಮ್ಮ ತಂದೆಯ ಸಾವಿನ ನಂತರ ಅವರು 59 ಜನ್ಮದಿನಗಳನ್ನು ಆಚರಿಸಿಕೊಳ್ಳಲಿಲ್ಲ. `ವಾಲಿದ್ ಸಾಬ್ (ಹಿರಿಯರ) ನೆನಪಿನಲ್ಲಿ ಈ ದಿನವನ್ನು ಕಳೆಯಲು ಬಯಸುತ್ತೇನೆ~ ಎಂದು ಅವರೇ ಒಮ್ಮೆ ಹೇಳಿಕೊಂಡಿದ್ದನ್ನು ಸ್ಮರಿಸಬಹುದು.ಬೇಟೆ ಹವ್ಯಾಸ: ನವಾಬರ ಕುಟುಂಬದವರಾದ್ದರಿಂದ ಬೇಟೆ ಆಡುವ ಹವ್ಯಾಸ ಸಹಜವೆನಿಸಿತ್ತು. ವಿದೇಶ ಪ್ರವಾಸಕ್ಕೆ ಹೋದಾಗಲು ಕೂಡ ಪಟೌಡಿ ಅಲ್ಲಿಯೂ ತುಪಾಕಿ ಹಿಡಿದುಕೊಂಡು ಕಾಡಿಗೆ ಹೋಗುತ್ತಿದ್ದರು.1962ರ ಏಪ್ರಿಲ್‌ನಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್ ಸರಣಿ ಆಡಲು ಭಾರತ ತಂಡ ಹೋಗಿತ್ತು. ಆಗ ತಂಡಕ್ಕೆ `ಟೈಗರ್~ ನಾಯಕತ್ವ. ಪಂದ್ಯಗಳ ನಡುವೆ ಬಿಡುವು ಇದ್ದಾಗ ಒಮ್ಮೆ ಕಾಡಿಗೆ ಹೋಗಿ ಪ್ರಾಣಿಯೊಂದನ್ನು ಬೇಟೆ ಆಡಿದರು.ಆಗಲೇ ಅವರಿಗೆ ಸಹ ಆಟಗಾರರೊಂದಿಗೆ ಕೀಟಲೆ ಮಾಡುವ ಯೋಚನೆಯೂ ಹೊಳೆಯಿತು. ಆಗ ತಾವು ಬೇಟೆಯಾಡಿದ್ದ ಪ್ರಾಣಿಯನ್ನು ಬಟ್ಟೆಯಲ್ಲಿ ಸುತ್ತಿ ಸಹ ಆಟಗಾರನ ಪಕ್ಕದಲ್ಲಿ ಹಾಕಿದರು.ಎಚ್ಚೆತ್ತ ಆ ಆಟಗಾರ ಬೆಚ್ಚಿಬಿದ್ದಾಗ ಅಲ್ಲಿ ನಗೆಯ ಹೊಳೆ ಹರಿದಿತ್ತು. ಆದರೆ ಬೇಟೆ ಆಡುವ ಹವ್ಯಾಸವು ಇಂಥ ಸಂತಸವನ್ನು ನೀಡಿದ್ದರ ಜೊತೆಗೆ ಪಟೌಡಿ ಜೀವನದಲ್ಲಿ ಬಿರುಗಾಳಿಯನ್ನು ಕೂಡ ಎಬ್ಬಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ.ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪದ ಮೇಲೆ ಅವರು 2005ರಲ್ಲಿ ಬಂಧನಕ್ಕೊಳಗಾಗಿ ಎರಡು ದಿನ ಜೈಲಿನಲ್ಲಿ ಕಳೆಯಬೇಕಾಗಿತ್ತು.

                          

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.