ಸೋಮವಾರ, ಮಾರ್ಚ್ 1, 2021
25 °C
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಿರುಪಾಧೀಶ ಶ್ರೀ ಉವಾಚ

ಜನಹಿತ ಸಾಹಿತ್ಯ ರಚನೆ ಇಂದಿನ ಅಗತ್ಯ

ಬಸವರಾಜ್‌ ಸಂಪಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಹಿತ ಸಾಹಿತ್ಯ ರಚನೆ ಇಂದಿನ ಅಗತ್ಯ

ಬಾಗಲಕೋಟೆ: ‘ಭಾರತೀಯ ಪರಂಪ­ರೆಗೆ ಧಕ್ಕೆಯಾಗ­ದಂತಹ ಮತ್ತು ಜನಹಿತ ಸಾಹಿತ್ಯ ರಚನೆ ಇಂದಿನ ಅಗ­ತ್ಯ­ವಾಗಿದೆ’ ಎಂದು ಜಮಖಂಡಿ ತಾಲ್ಲೂ­ಕಿನ ಮರೇಗುದ್ದಿಯ ಅಡವಿ ಸಿದ್ಧೇಶ್ವರ ಮಠದ ನಿರುಪಾ­ಧೀಶ ಶ್ರೀಗಳು ಅಭಿಪ್ರಾಯಪಟ್ಟರು.ಮುಧೋಳದಲ್ಲಿ ಇದೇ 22 ಮತ್ತು 23ರಂದು ನಡೆಯಲಿರುವ ಬಾಗಲಕೋಟೆ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಶುಕ್ರವಾರ ವಿಶೇಷ ಸಂದರ್ಶನ ನೀಡಿದ ಶ್ರೀಗಳು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಧಾರ್ಮಿಕ ವಿಚಾರಗಳ ಕುರಿತು ಹಂಚಿಕೊಂಡ ವಿಚಾರ ಲಹರಿ ಇಂತಿದೆ.ಸಾಹಿತ್ಯ:  ‘ಜನರ ಮಾನಸಿಕ ಉದಯಕ್ಕೆ ಸ್ಪಂದಿಸುವಂತಹ ಸಾಹಿತ್ಯ ಕೃಷಿ ಅಗತ್ಯವಾಗಿದೆ, ಸಾಹಿತ್ಯ ಸಮಾಜವನ್ನು ಒಂದುಗೂಡಿಸಬೇಕೇ ಹೊರತು ವಿಘಟಿಸುವಂತಿರಬಾರದು, ಯುವ ಜನತೆ ಹೆಚ್ಚು ಹೆಚ್ಚು ಸಾಹಿತ್ಯ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು’

ಮಾತೃ ಭಾಷೆ: ‘ಪರಭಾಷೆಗಿಂತ ಮಾತೃಭಾಷೆ­ಯಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ದೊರೆಯು­ವಂತಾ­ಗಬೇಕು, ಮನುಷ್ಯ­ನಿಗೆ ನೋವಾದಾಗ ತಕ್ಷಣ ಬಾಯಿ­ಯಿಂದ ಹೊರಡುವುದು ಅವ್ವಾ, ಅಪ್ಪಾ ಎಂಬ ಪದಗಳೇ ಹೊರತು ಡ್ಯಾಡಿ, ಮಮ್ಮಿ ಅಲ್ಲ. ಮಾತೃ ಭಾಷೆಗೆ ಇರುವ ಅಂತಃಕರಣ ಪರಭಾಷೆಗೆ ಇಲ್ಲ’‘ಇಂದು ಹಳ್ಳಿಗಳಲ್ಲೂ ಕನ್ನಡ ಕಣ್ಮರೆ­ಯಾಗುತ್ತಿರುವುದು ವಿಷಾದನೀಯ, ಹಳ್ಳಿ ಜನರೂ ಕನ್ನಡದ ಬದಲು ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾ­ಗುತ್ತಿದ್ದಾರೆ. ಜನರಲ್ಲಿ ವ್ಯಾಪಾರಿ ಮನೋಭಾವ ಹೆಚ್ಚಾಗುತ­್ತಿರುವು­ದರಿಂದ ಇಂಗ್ಲಿಷ್‌ ವ್ಯಾಮೋಹ ತನ್ನಷ್ಟಕ್ಕೆ ತಾನೇ ಹೆಚ್ಚುತ್ತಿದೆ.ಈ ಸಂದರ್ಭದಲ್ಲಿ ಪ್ರತಿಯೊಬ್ಬ ತಂದೆ–ತಾಯಿ ತಮ್ಮ ಮಕ್ಕಳಿಗೆ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ನೀಡಲು ಆದ್ಯತೆ ನೀಡಬೇಕು’

‘ನಾಡಿನ ಪ್ರಜಾ ಪ್ರತಿನಿಧಿಗಳು ಕನ್ನಡ ನಾಡು–ನುಡಿ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದು ಅವರ ಕರ್ತವ್ಯ, ಈ ನಿಟ್ಟಿನಲ್ಲಿ ನಿಷ್ಠೂರ ವ್ಯಕ್ತಪಡಿಸಬೇಕು’ಧಾರ್ಮಿಕತೆ: ‘ಸಮಾಜದಲ್ಲಿ ಬಸವತತ್ವಕ್ಕೆ ಆದ್ಯತೆ ಕಡಿಮೆ­ಯಾಗು­ತ್ತಿದೆ, ಜಾತಿ ಹೆಸರಲ್ಲಿ ಸಮಾಜದ ಇಬ್ಭಾಗ ಅತಿಯಾಗುತ್ತಿದೆ. ಜಾತಿಗೆ ಪ್ರೋತ್ಸಾಹ ಹೆಚ್ಚಾಗಿದೆ. ಇದರಿಂದ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಧಕ್ಕೆ­ಯಾಗುತ್ತಿದೆ. ಪ್ರತಿಯೊಬ್ಬರಲ್ಲೂ ಭಾರತ, ಭಾರತೀಯ ಭಾವನೆ ಮೂಡ­ಬೇಕಿದೆ. ಧಾರ್ಮಿಕ ಆಚರಣೆ, ಪ್ರವಚನ ಎಂಬುದು ಇಂದು ಜನರಿಗೆ ಷೋಕಿ ವಸ್ತುವಿನಂತಾಗಿದೆ. ಹಗಲು ಪ್ರವಚನ ಕೇಳಿ ಸಂಜೆ ಬಾರ್‌ನಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಅಧಿಕವಾಗಿದೆ’ಯುವ ಜನತೆ: ‘ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಬಿಡಬೇಕು. ನಾಡು, ನುಡಿ, ಸಂಸ್ಕೃತಿ ಉಳಿಸಲು ಶ್ರಮಿಸಬೇಕು, ಯುವ­ಜನರಿಗೆ ಅಗತ್ಯ ಮಾರ್ಗದರ್ಶನ­ವನ್ನು ಪೋಷಕರು ನೀಡಬೇಕು’‘ಮೊಬೈಲ್‌, ಇಂಟರ್‌ನೆಟ್‌, ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಯುವ ಜನತೆಯಲ್ಲಿ ನೈತಿಕತೆ ಮರೆಯಾಗುತ್ತಿದೆ. ಪಾಲಕರ ಮಾತು ಕೇಳದಂಥ ಮಕ್ಕಳ ಸಂಖ್ಯೆ ಅಧಿಕವಾಗುತ್ತಿದೆ’ಕೃಷಿ: ‘ಸಾವಯವ ಕೃಷಿ ಉತ್ಪನ್ನ ಜೀವಕ್ಕೆ ಹಿತ ನೀಡುತ್ತದೆ. ರಾಸಾಯನಿಕ ಗೊಬ್ಬರ, ಔಷಧಿ ಬಳಸಿ ಬೆಳೆಸಿದ ಉತ್ಪನ್ನ ಆರೋಗ್ಯಕ್ಕೆ ಅಹಿತಕರ­ವಾದ ಕಾರಣ ಕೃಷಿಕರು ಸಾವಯವ ಕೃಷಿಗೆ ಆದ್ಯತೆ ನೀಡಬೇಕಿದೆ. ಕೃಷಿ ಚಟುವಟಿಕೆಯಲ್ಲಿ ಎಚ್ಚರಿಕೆಯಿಂದ ನೀರು ಬಳಸುವತ್ತ ರೈತರು ಗಮನಹರಿಸಬೇಕಿದೆ’ಸಮ್ಮೇಳನಾಧ್ಯಕ್ಷರಾಗಿ: ‘ನನ್ನ ಹುಟ್ಟು, ಬೆಳವಣಿಗೆ, ವಿದ್ಯಾಭ್ಯಾಸ, ಸಾಹಿತ್ಯ ರಚನೆ ಎಲ್ಲವೂ ಆಗಿರುವುದು ಮುಧೋಳದ ಮಣ್ಣಿನಲ್ಲಿ. ಇದೀಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿರುವುದು ನನಗಿಂತ ಈ ಭಾಗದ ಜನತೆಗೆ ಹೆಚ್ಚು ಸಂತಸ ತಂದಿದೆ’ಉಪಾಧಿಗಳಿಲ್ಲದ ನಿರುಪಾಧೀಶ್ವರ

ಬಾಗಲಕೋಟೆ:
ಅದು 1958 ನೇ ಇಸ್ವಿ ಇರಬ­ಹುದು, ಮುಧೋಳದ ಕಿಂಗ್‌ಜಾರ್ಜ್‌ ಪ್ರೌಢ­ಶಾಲೆಯ ಹಿಂದಿ ಶಿಕ್ಷಕರಾಗಿದ್ದ ಕಡ್ಲಾಸಕರ ಅವರು ‘ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಏನು ಮಾಡು­ವಿರಿ?’ ಎಂಬ ವಿಷಯ ಕುರಿತು ನಿಮ್ಮ ತಂದೆಯವರಿಗೆ ಪತ್ರ ಬರೆಯಿರಿ ಎಂದು ತಮ್ಮ ವಿದ್ಯಾರ್ಥಿಗಳಿಗೆ ಗೃಹ ಕೆಲಸ (ಹೋಂ ವರ್ಕ್‌) ನೀಡುತ್ತಾರೆ.

ಮರುದಿನ ತರಗತಿಯಲ್ಲಿ ವಿದ್ಯಾರ್ಥಿಗಳ ಪತ್ರ­ಲೇಖನ­ವನ್ನು ಶಿಕ್ಷಕರು ಪರಿಶೀಲಿಸಿದಾಗ, ಅದರಲ್ಲಿ ಒಬ್ಬ ವಿದ್ಯಾರ್ಥಿ ‘ಎಸ್‌ಎಸ್‌ಎಲ್‌ಸಿ ಬಳಿಕ ನಾನು ಮಠದ ಸ್ವಾಮಿ ಆಗಬೇಕೆಂದಿದ್ದೇನೆ’ ಎಂದು ಬರೆದಿರುವುದು ನಗುವಿಗೆ ಕಾರಣವಾಯಿತು. ಅಷ್ಟೇ ಅಲ್ಲ ಅದು ನಿಜವೂ ಆಯಿತು.ಹೌದು, ಅಂದು ಪತ್ರ ಮುಖೇನ ಸ್ವಾಮೀಜಿ­ಯಾಗುವುದಾಗಿ ಬಯಕೆ ವ್ಯಕ್ತಪಡಿಸಿದವರೇ ಇಂದು ನಡೆಯುತ್ತಿರುವ ಬಾಗಲಕೋಟೆ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮರೆಗುದ್ದಿ ಅಡವಿ ಸಿದ್ಧೇಶ್ವರ ಮಠದ ನಿರುಪಾಧೀಶರು.ಜಮಖಂಡಿ ತಾಲ್ಲೂಕಿನ ಮರೆಗುದ್ದಿ ಗ್ರಾಮದ ಶಿವಲಿಂಗಯ್ಯ ಮತ್ತು ನೀಲಮ್ಮ ದಂಪತಿಗೆ ಪುತ್ರನಾಗಿ 1942ರಲ್ಲಿ ನಿರುಪಾಧೀಶ್ವರರು ಜನಿಸಿದರು.  ಕಾಶಿಯ ಜಂಗಮವಾಡಿ ಮಠದ ಶ್ರೀ ವಿಶ್ವಾರಾಧ್ಯ ಗುರುಕುಲದಲ್ಲಿ ಕಲಿತರು. 1965ರಲ್ಲಿ ಅಡವಿ ಸಿದ್ಧೇಶ್ವರ ಮಠದ ಉತ್ತರಾಧಿಕಾರಿಯಾದರು.ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯ ಕ್ಷೇತ್ರಕ್ಕೂ ನಿರುಪಾಧೀಶ್ವರ ಸ್ವಾಮಿಗಳು ಅಮೂಲ್ಯ ಕೊಡುಗೆ ನೀಡಿದ್ದಾರೆ.ಕೃತಿಗಳು: ‘ರಸಗೀತ’ ಹಿಂದಿಯಲ್ಲಿ ರಚಿತವಾಗಿ­ರುವ ಖಂಡಕಾವ್ಯ, ‘ಶ್ರೀ ಮಡಿವಾಳೇಶ್ವರ ಚರಿತ್ರೆ’ ಎಂಬ ಪುರಾಣವನ್ನು ರಚಿಸಿದ್ದಾರೆ. ಚಿನ್ಮೂರ್ತಿ (ತ್ರಿಪದಿಗಳು), ಸಪ್ತತೀರ್ಥ (ಹಿಂದಿ ಕಥೆಗಳು), ಗಣೇಶ ಪುರಾಣ( ಭಾಮಿನಿ ಷಟ್ಪದಿ), ಶ್ರೀಗುರು ಗುರು­ಪಾದೇಶ್ವರ ಚಿದ್ವಿಲಾಸ, ವಚನ ಶತಕ, ವಚನಾಂಕುರ (ಭಾಗ 1, 2 ಮತ್ತು 3), ವಚನ ಪಲ್ಲವಿ (ಭಾಗ 1, 2 ಮತ್ತು 3), ಅಡವಿಸಿದ್ಧನ ಅಂಚೆ,  ವಚನ ತೋರಣ ಭಾಗ–1 ಇವುಗಳು ನಿರುಪಾಧೀಶರ ಪ್ರಮುಖ ಕೃತಿಗಳಾಗಿವೆ.ಮರೇಗುದ್ದಿಯಂತಹ ಗ್ರಾಮೀಣ ಪರಿಸರ­ದಲ್ಲಿದ್ದು, ಮೌನಲೋಕದ ಮಹಾ ತಪಸ್ವಿಯಂತೆ ಸಾಹಿತ್ಯ, ಶಿಕ್ಷಣ, ಧರ್ಮ, ಸಂಸ್ಕೃತಿಗಳ ಪರಿಮಳ­ವನ್ನು ನಾಡಿನಾದ್ಯಂತ ಶ್ರೀಗಳು ಬೀರುತ್ತಿದ್ದಾರೆ.ಶ್ರೀಗಳ ಜೀವನ–ಸಾಹಿತ್ಯ ಕೃಷಿ ಕುರಿತು ಮಲ್ಲಿಕಾರ್ಜುನ ಯಳವಾರ ಅವರು ‘ಜಲದೊಳಗೊಳ ಕಿಚ್ಚು’ ಎಂಬ ಪುಸ್ತಕ ಹೊರ ತಂದಿದ್ದಾರೆ. ಡಾ.ಬಿ.ಕೆ.ಹಿರೇಮಠ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಡಾ. ಅಶೋಕ ನರೋಡೆ ಮತ್ತು ಡಾ. ವಿಜಯಕುಮಾರ ಕಟಗಿಹಳ್ಳಿಮಠ ಸಂಪಾದಕತ್ವದಲ್ಲಿ ‘ನಿರುಪಾದಿ’ ಎಂಬ ಅಭಿನಂದ ಗ್ರಂಥ ಪ್ರಕಟವಾಗಿದೆ.ಪ್ರಶಸ್ತಿ–ಪುರಸ್ಕಾರ

1970ರಲ್ಲಿ ‘ಹಿಂದಿ ರತ್ನ’ ಚಿನ್ನದ ಪದಕ, 1971ರಲ್ಲಿ  ಪ್ರಯಾಗದ ‘ಸಾಹಿತ್ಯ ರತ್ನ’ ಪ್ರಶಸ್ತಿ,  1973ರಲ್ಲಿ ‘ರಸಗೀತ’ ಗ್ರಂಥಕ್ಕೆ ಆಗ್ರಾದ ವಿಶ್ವಭಾರತಿ ವಿದ್ಯಾಪೀಠದಿಂದ ‘ವಿದ್ಯಾಲಂಕಾರ’ ಪ್ರಶಸ್ತಿ,  2003 ರಲ್ಲಿ ‘ಚಿನ್ಮಯ ಜ್ಞಾನಿ ಚನ್ನಬಸವ ವಿಜಯ‘ ಗ್ರಂಥಕ್ಕೆ ಕಸಾಪದಿಂದ ‘ರತ್ನಾಕರವರ್ಣಿ –ಮುದ್ದಣ್ಣ’ ದತ್ತಿ ನಿಧಿ ಪ್ರಶಸ್ತಿ,  2005ರಲ್ಲಿ ಅಥಣಿಯ ಮೋರಟಗಿ ಮಠದಿಂದ ‘ಬಸವಭೂಷಣ’ ಪ್ರಶಸ್ತಿ ಲಭಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.