ಸೋಮವಾರ, ಏಪ್ರಿಲ್ 19, 2021
31 °C

ಜಪಾನ್ ಅಣುಸ್ಥಾವರದ ವಿಕಿರಣ ಭಾರತ ತಲುಪದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಜಪಾನಿನ ಅಣುಸ್ಥಾವರ ಸೂಸುತ್ತಿರುವ ವಿಕಿರಣ ಭಾರತದ ಕರಾವಳಿ ತೀರವನ್ನು ತಲುಪುವ ಸಾಧ್ಯತೆ  ಇಲ್ಲ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

ಜಪಾನಿನ ವಿಕಿರಣ ಗೋಡೆಯಂತೆ ನಿಂತಿರುವ ಹಿಮಾಲಯ ಪರ್ವತ ಪ್ರದೇಶವನ್ನು ದಾಟಿಕೊಂಡು ಗಾಳಿಯ ಮೂಲಕ ಭಾರತವನ್ನು ಪ್ರವೇಶಿಸುವ ಸಾಧ್ಯತೆ ಇಲ್ಲ. ಹಾಗೆ ನೋಡಿದರೆ, 1986ರಲ್ಲಿ ಉಕ್ರೇನಿನ ಚೆರ್ನೋಬಿಲ್‌ನಲ್ಲಿ ಪರಮಾಣು ಅವಘಡ ಸಂಭವಿಸಿದ ಸಂದರ್ಭಕ್ಕೆ ಹೋಲಿಸಿದರೆ ಈಗ ನಮಗೆ ಅಪಾಯ ಸಾಧ್ಯತೆ ಏನೇನೂ ಇಲ್ಲ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್) ಪ್ರೊಫೆಸರ್ ಸಿ.ಎಸ್.ಬಾಲ್ ಹೇಳಿದ್ದಾರೆ.

ಸದ್ಯ ವಿಕಿರಣ ಪ್ರಮಾಣ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಷ್ಟು ಇಲ್ಲ. ಸಾಮಾನ್ಯವಾಗಿ ನಾವೆಲ್ಲರೂ ವೈದ್ಯಕೀಯ ಎಕ್ಸ್‌ರೇ ತೆಗೆಸಿಕೊಳ್ಳುವಾಗ ಸಣ್ಣ ಪ್ರಮಾಣದ ವಿಕಿರಣ ಸ್ಪರ್ಶಕ್ಕೆ ಒಳಗಾಗುತ್ತೇವೆ. ನಿರ್ದಿಷ್ಟ ಪ್ರಮಾಣದ ವಿಕಿರಣ ಸ್ಪರ್ಶವನ್ನು ತಾಳಿಕೊಳ್ಳುವ ಶಕ್ತಿ ಮನುಷ್ಯರಿಗೆ ಸಹಜವಾಗಿಯೇ ಇದೆ ಎಂಬುದು ಆಸ್ಪತ್ರೆಯ ಪರಮಾಣು ಔಷಧ ವಿಭಾಗದ ಇಷಿತಾ ಸೆನ್ ಅವರ ವಿವರಣೆ.

ವಿಕಿರಣಯುಕ್ತ ಗಾಳಿಯನ್ನು ಉಸಿರಾಡಿದರೆ ವಾಂತಿ, ತಲೆಸುತ್ತುವಿಕೆ, ತಲೆ ತಿರುಗುವುದು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಅಣುಸ್ಥಾವರದಿಂದ 16 ಕಿ.ಮೀ. ವ್ಯಾಪ್ತಿಯೊಳಗಿನವರಿಗೆ ಮಾತ್ರ ಇದು ಕಾಣಿಸಿಕೊಳ್ಳುತ್ತದೆ ಎಂದೂ ಅವರು ಹೇಳುತ್ತಾರೆ.

ಚೆರ್ನೋಬಿಲ್ ದುರಂತದಲ್ಲಿ 4000 ಜನ ಮೃತಪಟ್ಟು ಸಾವಿರಾರು ಜನ ಕ್ಯಾನ್ಸರ್ ಸೇರಿದಂತೆ ಹಲವಾರು ಅಡ್ಡಪರಿಣಾಮಗಳಿಗೆ ತುತ್ತಾಗಿದ್ದರು. ಈ ಅವಘಡದ ವೇಳೆ ರಿಯಾಕ್ಟರಿನ ಲೋಹದ ಪಾತ್ರೆಯೇ ನಾಪತ್ತೆಯಾಗಿತ್ತಾದ್ದರಿಂದ  ಪರಿಸರ ಹಾಗೂ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಿತ್ತು. ಈಗ ಜಪಾನ್ ಸಂಕಷ್ಟದಲ್ಲಿದೆಯಾದರೂ ಅದನ್ನು ಚೆರ್ನೋಬಿಲ್ ದುರಂತದ ತೀವ್ರತೆಗೆ ಹೋಲಿಸಲಾಗದು ಎಂದಿದ್ದಾರೆ.

ಆದರೆ ಇದೇ ವೇಳೆ ಧ್ವಂಸಗೊಂಡ ರಿಯಾಕ್ಟರುಗಳ ಸೀಸಿಯಂ ಕಣಗಳನ್ನು ಹೊರಚೆಲ್ಲುತ್ತಿರುವ ಬಗ್ಗೆ ಅವರು ಭೀತಿ ವ್ಯಕ್ತಪಡಿಸಿದ್ದಾರೆ. ಭಾರವಾದ ಈ ಕಣಗಳು ದೇಹದೊಳಗಿನ ವಿವಿಧ ಭಾಗಗಳಲ್ಲಿ ಸಂಗ್ರಹಗೊಂಡು ಅಪಾಯ ತಂದೊಡ್ಡಬಲ್ಲವು. ಆದರೆ ದೊಡ್ಡದಾದ ಹಾಗೂ ಭಾರವಾದ ಈ ಕಣಗಳು ಭಾರತ ಸೇರಿದಂತೆ ಯಾವುದೇ ಏಷ್ಯಾದ ರಾಷ್ಟ್ರವನ್ನು ಒಳಹೊಕ್ಕುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.