ಮಂಗಳವಾರ, ಜೂನ್ 15, 2021
21 °C

ಜಪಾನ್ ರಕ್ಕಸ ಸುನಾಮಿಗೆ ಒಂದು ವರ್ಷ: ರಾಷ್ಟ್ರ ಪುನರ್‌ನಿರ್ಮಾಣ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಡಾಯ್/ ಟೋಕಿಯೊ (ಪಿಟಿಐ): ಪ್ರಳಯಕಾರಿ ಭೂಕಂಪ ಹಾಗೂ ಸುನಾಮಿ ಸಂಭವಿಸಿದ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜಪಾನ್ ರಾಷ್ಟ್ರದಾದ್ಯಂತ ಭಾನುವಾರ ಮೌನಾಚರಣೆ ನಡೆಸಿ, ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ರಾಷ್ಟ್ರ ಪುನರ್‌ನಿರ್ಮಾಣದ ಸಂಕಲ್ಪ ಮಾಡಲಾಯಿತು.

ಮಧ್ಯಾಹ್ನ 2.46ಕ್ಕೆ ಸರಿಯಾಗಿ (ಒಂದು ವರ್ಷದ ಹಿಂದೆ ವಿಧ್ವಂಸಕ ಭೂಕಂಪ ಸಂಭವಿಸಿದ ಸಮಯ) ರಾಷ್ಟ್ರದಾದ್ಯಂತ ಮೌನಾಚರಣೆ ಮಾಡಲಾಯಿತು. ಭೂಕಂಪ ಹಾಗೂ ಸುನಾಮಿಯಿಂದ ತೀವ್ರ ಹಾನಿಗೀಡಾದ ಈಶಾನ್ಯ ಭಾಗದ ಇವಾಟೆ, ಮಿಯಾಗಿ ಮತ್ತು ಫುಕುಷಿಮಾ ಪ್ರಾಂತ್ಯಗಳಲ್ಲಿ ವಿಶೇಷ ಸ್ಮರಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಟೋಕಿಯೋದ ರಾಷ್ಟ್ರೀಯ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಮುಖ ಕಾರ್ಯಕ್ರಮದಲ್ಲಿ ಚಕ್ರವರ್ತಿ ಅಕಿಹಿಟೊ ಮತ್ತು ಪ್ರಧಾನಿ ಯೊಶಿಹಿಕೊ ಪಾಲ್ಗೊಂಡಿದ್ದರು. ದುರಂತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿ ಇಲ್ಲಿನ ಸ್ತಂಭವನ್ನು ಬಿಳಿ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಕಪ್ಪು ಬಣ್ಣದ ಉಡುಪು ಧರಿಸಿದ್ದ 1200 ಜನ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುನಾಮಿಗೆ ಮುನ್ನ ತಾವು ಮನೆ ಹೊಂದಿದ್ದ ಜಾಗಕ್ಕೆ ತೆರಳಿದ ಕೆಲವರು ಅಲ್ಲಿಗೆ ತೆರಳಿ ಹೂಗುಚ್ಛಗಳನ್ನು ಅರ್ಪಿಸಿದರು. ಕೆಲವೆಡೆ ಮಧ್ಯಾಹ್ನ 2.46ಕ್ಕೆ ಸರಿಯಾಗಿ ಸೈರನ್‌ಗಳು ಮೊಳಗಿದವು.

ನಿಷ್ಕ್ರಿಯಗೊಂಡಿರುವ ಫುಕುಷಿಮಾ ಸ್ಥಾವರದ ಬಳಿ ಜಮಾಯಿಸಿದ ಸಾವಿರಾರು ಜನರು ಜಾಥಾ ನಡೆಸಿ, ರಾಷ್ಟ್ರದಲ್ಲಿ ಪರಮಾಣು ಇಂಧನ ಉತ್ಪಾದನೆಯನ್ನು ನಿಲ್ಲಿಸಲು ಹಾಗೂ ದುರಂತದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಒತ್ತಾಯಿಸಿದರು.

ಫುಕುಷಿಮಾ ಪರಮಾಣು ಸ್ಥಾವರದ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಸ್ಥಾವರ ನಿರ್ವಹಣೆಯ ಹೊಣೆ ಹೊತ್ತಿದ್ದ ಟೋಕಿಯೊ ವಿದ್ಯುತ್ ಕಂಪೆನಿಯ ಅಧ್ಯಕ್ಷ ತೋಶಿಯೊ ನಿಶಿಜಾವಾ, ಅವಘಡಕ್ಕಾಗಿ ಮತ್ತೊಮ್ಮೆ ಜನರ ಕ್ಷಮೆ ಯಾಚಿಸಿದರು. ನಿಷ್ಕ್ರಿಯ ಸ್ಥಾವರವನ್ನು ನಿಯಂತ್ರಣದಲ್ಲಿಡಲು ನಿರಂತರವಾಗಿ ಪ್ರಯತ್ನ ಮುಂದುವರಿಸಲಾಗುವುದು ಎಂದರು.

ಇದಕ್ಕೆ ಮುನ್ನ ಡಿಸೆಂಬರ್‌ನಲ್ಲಿ ಸರ್ಕಾರ ಸ್ಪಷ್ಟನೆ ನೀಡಿ, ನಿಷ್ಕ್ರಿಯ ಸ್ಥಾವರವನ್ನು ಸ್ವಚ್ಛಗೊಳಿಸಲು ಹಾಗೂ ಸ್ಥಾವರದ  ವಿವಿಧ ಭಾಗಗಳನ್ನು ಕಳಚಿ ಬೇರೆಡೆಗೆ ಸಾಗಿಸಲು ಅಪಾರ ವೆಚ್ಚವಾಗುವ ಜತೆಗೆ ನೂತನ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ಹೇಳಿತ್ತು.

ಈ ದುರಂತದಿಂದಾಗಿ ಸುಮಾರು 16000 ಜನ ಸಾವಿಗೀಡಾಗಿ, 3000 ಜನ ಇನ್ನೂ ನಾಪತ್ತೆಯಾದವರ ಪಟ್ಟಿಯಲ್ಲಿದ್ದಾರೆ. ಸುನಾಮಿಯಿಂದ ಎದ್ದ ದೈತ್ಯಾಕಾರದ ಅಲೆಗಳಿಗೆ ಸಿಲುಕಿ ಕಾರುಗಳು, ಹಡಗುಗಳು, ಕಟ್ಟಡಗಳು ಮತ್ತಿತರ ಸಾಮಾನು ಸರಂಜಾಮುಗಳು ಧ್ವಂಸಗೊಂಡಿದ್ದವು.

ಫುಕುಷಿಮಾ ಸ್ಥಾವರ ವಿಕಿರಣ ಸೂಸುತ್ತಿರುವುದರಿಂದ ಸುತ್ತಮುತ್ತ ನೆಲೆಸಿದ್ದ ಹತ್ತಾರು ಸಾವಿರ ಜನ ಮನೆ ಮಠ ಹಾಗೂ ತಾವು ಮಾಡುತ್ತಿದ್ದ ವ್ಯಾಪಾರ ವಹಿವಾಟುಗಳನ್ನು ತೊರೆದು ಇನ್ನೂ ಅತಂತ್ರರಾಗಿ ಬದುಕುತ್ತಿದ್ದಾರೆ. 300 ಶತಕೋಟಿ ಡಾಲರ್‌ಗಳಷ್ಟು ನಷ್ಟಕ್ಕೆ ಕಾರಣವಾದ ಈ ದುರಂತವು, ಎರಡನೇ ಮಹಾಯುದ್ಧದ ನಂತರ ಜಪಾನ್ ರಾಷ್ಟ್ರಕ್ಕೆ ಪುನರ್‌ನಿರ್ಮಾಣದ ಅತಿ ದೊಡ್ಡ ಸವಾಲನ್ನು ತಂದೊಡ್ಡಿದೆ.  ಈ ದುರಂತದಿಂದಾಗಿ  3.30 ಲಕ್ಷ ಜನ ಇನ್ನೂ ಮನೆ ಇಲ್ಲದೆ ಸಂತ್ರಸ್ತರಾಗಿ ದಿನಗಳನ್ನು ದೂಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.