ಶನಿವಾರ, ಮೇ 28, 2022
29 °C

ಜಯವರ್ಧನೆ ವಿರುದ್ಧ ಫಿಕ್ಸಿಂಗ್ ಆರೋಪ: ಅಲ್ಲಗಳೆದ ಲಂಕಾ ಕ್ರಿಕೆಟ್ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಾಹೇಲ ಜಯವರ್ಧನೆ ಹಾಗೂ ತಿಲಾನ್ ಸಮರವೀರ ವಿರುದ್ಧ ಉದ್ಭವಿಸಿರುವ ಮೋಸದಾಟ ಆರೋಪ ಪ್ರಕರಣವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಅಲ್ಲಗಳೆದಿದೆ.ಪಾಕಿಸ್ತಾನ ವಿರುದ್ಧ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಜಯವರ್ಧನೆ (2) ಹಾಗೂ ಸಮರವೀರ (1) ಅಲ್ಪ ಮೊತ್ತಕ್ಕೆ ಔಟ್ ಆಗಿದ್ದು ಮೋಸದಾಟದ ಆಮಿಷಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‌ವೊಂದು ಆರೋಪ ಮಾಡಿತ್ತು. ‘ಆದರೆ ಈ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಇದು ತಂಡದ ಉತ್ಸಾಹಕ್ಕೆ ಧಕ್ಕೆ ತರುವ ಪ್ರಯತ್ನ’ ಎಂದು ಎಸ್‌ಎಲ್‌ಸಿ ತಿಳಿಸಿದೆ.ಉದ್ದೇಶಪೂರ್ವಕವಾಗಿ ಜಯವರ್ಧನೆ ಕಳಪೆ ಪ್ರದರ್ಶನ ನೀಡಿರಬಹುದು ಎಂದು ಟಿವಿ ಚಾನೆಲ್‌ನ  ಕಾಮೆಂಟೇಟರ್‌ಗಳು  ಆರೋಪಿಸಿದ್ದರು. ಈ ಪಂದ್ಯದಲ್ಲಿ ಲಂಕಾ 11 ರನ್‌ಗಳಿಂದ ಸೋಲು ಕಂಡಿತ್ತು.‘ಆ ಚಾನೆಲ್ ತನ್ನ ಕಾರ್ಯಕ್ರಮವೊಂದರಲ್ಲಿ ಈ ರೀತಿ ಆರೋಪ ಮಾಡಿರುವುದು ದುರದೃಷ್ಟ ಕರ. ಇದರಿಂದ ಇಬ್ಬರು ಆಟಗಾರರ ಗೌರವಕ್ಕೆ ಧಕ್ಕೆಯಾಗಿದೆ.ಈ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಸಂಬಂಧ ನಾವು ಚಾನೆಲ್‌ನ ಅಧಿಕಾರಿಗಳೊಂದಿಗೆ ಮಾತನಾಡಲಿದ್ದೇವೆ’ ಎಂದು ಕ್ರಿಕೆಟ್ ಮಂಡಳಿ ಹೇಳಿದೆ.ಈಗಾಗಲೇ ಈ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಜಯವರ್ಧನೆ ಹೇಳಿದ್ದಾರೆ. ಈ ಘಟನೆ ಸಂಬಂಧ ಐಸಿಸಿ ಹಾಗೂ ಲಂಕಾ ಕ್ರಿಕೆಟ್ ಮಂಡಳಿ ತನಿಖೆ ನಡೆಸಲಿವೆ ಎಂಬ ವಿಷಯವನ್ನು ತಂಡದ ಮ್ಯಾನೇಜರ್ ಅನುರಾ ತೆನ್ನೆಕೂನ್ ಅಲ್ಲಗಳೆದಿದ್ದಾರೆ.‘ಮಾಹೇಲ ಹಾಗೂ ತಿಲಾನ್ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಹಾಗಾಗಿ ಈ ಬಗ್ಗೆ ಯಾವುದೇ ತನಿಖೆ ಬೇಡ. ಐಸಿಸಿ ಬಗ್ಗೆ ಹೇಳುವುದಾದರೆ ಈ ಬಗ್ಗೆ ತನಿಖೆ ನಡೆಸಲು ಅವರಿಗೆ ಹಕ್ಕಿದೆ. ಆದರೆ ಈ ಬಗ್ಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.