ಸೋಮವಾರ, ಜೂಲೈ 13, 2020
29 °C

ಜಲಹುಂಡಿ ದೇವರಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ತೊಡಿಕಾನ ಸಮೀಪದ ‘ದೇವರ ಗುಂಡಿ’ ವರ್ಷ ಪೂರ್ತಿ ಜಲಧಾರೆ ಧುಮ್ಮಿಕ್ಕುವ ಜಲಪಾತ.

ಸುಳ್ಯದಿಂದ ತೊಡಿಕಾನಕ್ಕೆ ಖಾಸಗಿ ಬಸ್ಸುಗಳ ಸಂಚಾರವಿದೆ. ಬಸ್ಸಲ್ಲಿ 45 ನಿಮಿಷದ ಪ್ರಯಾಣ. ಸ್ವಂತ ವಾಹನವಿದ್ದರೆ ಅರ್ಧ ತಾಸು ಸಾಕು. ಸುಳ್ಯದಿಂದ ‘ಸುಳ್ಯ-ಮಡಿಕೇರಿ ರಸ್ತೆಯಲ್ಲಿ ಹನ್ನೊಂದು ಕಿ.ಮೀ. ಸಾಗಿದರೆ ಅರಂತೋಡು ಎಂಬಲ್ಲಿ ಮಲ್ಲಿಕಾರ್ಜುನ ದೇವಾಲಯ ಸಿಗುತ್ತದೆ. ಈ ದೇಗುಲ ದ್ವಾರದ ಮೂಲಕ ತೊಡಿಕಾನ-ಪಟ್ಟಿ ರಸ್ತೆಯಲ್ಲಿ 6 ಕಿ.ಮೀ. ಪ್ರಯಾಣಿಸಿದರೆ ತೊಡಿಕಾನದ ಮಲ್ಲಿಕಾರ್ಜುನ ದೇವಾಲಯ ಸಿಗುತ್ತದೆ.  ಇಲ್ಲಿಂದ ತೊಡಿಕಾನ-ಪಟ್ಟಿ-ಭಾಗಮಂಡಲ ಕಚ್ಚಾ ರಸ್ತೆಯಲ್ಲಿ ಹೋಗಬೇಕು. ಪಾದಯಾತ್ರೆ ಅನಿವಾರ್ಯ. ಜೀಪು ಬಿಟ್ಟರೆ ಇತರ ವಾಹನಗಳು ಈ ರಸ್ತೆಯಲ್ಲಿ ಹೋಗುವುದಿಲ್ಲ. ರಸ್ತೆ ಬದಿಯಲ್ಲಿನ ಅಳವಾದ ಕಂದಕಗಳು ಭಯ ಹುಟ್ಟಿಸುತ್ತವೆ. ಮುಂದೆ ಮುಂದೆ ಸಾಗುತ್ತಿದಂತೆ ಚಿಕ್ಕ ಪುಟ್ಟ ತೊರೆಗಳು ಮನಸ್ಸಿಗೆ ಆಹ್ಲಾದ ತರುತ್ತದೆ.ದಾರಿಯುದ್ದಕ್ಕೂ ಹಸಿರು ಬೆಟ್ಟ ಗುಡ್ಡಗಳು, ಅಡಿಕೆ-ತೆಂಗಿನ ತೋಟಗಳಳನ್ನು ಕಾಣಬಹುದು. ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ ದಾರಿಯ ದಣಿವನ್ನು ಕಳೆಯುತ್ತವೆ. ಮುಂದೆ ಮುಂದೆ ಸಾಗಿದರೆ ಜೀರುಂಡೆಗಳ ಕೂಗು! ಜಿಗಣೆಗಳ ಕಾಟವೂ ಆರಂಭವಾಗುತ್ತದೆ. ಇದಕ್ಕೆಲ್ಲ ಸಿದ್ಧರಾಗಿಯೇ ಹೆಜ್ಜೆ ಹಾಕಬೇಕು.ಮಲ್ಲಿಕಾರ್ಜುನ ದೇವಾಲಯದಿಂದ 1800 ಮೀಟರ್ ದೂರ ಸಾಗಿದಾಗ ಬಲ ಭಾಗದಲ್ಲಿ ಖಾಸಗಿ ಅಡಿಕೆ ತೋಟ ಕಾಣಸಿಗುತ್ತದೆ. ಈ ಅಡಿಕೆ ತೋಟದಲ್ಲಿ ಸುಮಾರು 100 ಮೀಟರ್ ಹೆಜ್ಜೆ ಹಾಕಿದರೆ ದೇವರ ಗುಂಡಿ ಜಲಪಾತ ದರ್ಶನ. ಸುಮಾರು 60 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯದು.ಜಲಪಾತ ನೋಡುತ್ತ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರೆ ನೀರಿನ ಮುತ್ತಿನ ಹನಿಗಳು ನಿಮ್ಮನ್ನು ಮುತ್ತಿಕ್ಕುತ್ತವೆ. ಹುಚ್ಚು ಉತ್ಸಾಹದಲ್ಲಿ ಗುಂಡಿಗೆ ಇಳಿದರೆ ಅಪಾಯ. ಗುಂಡಿಗಿಳಿದ ಕೆಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.ತೊಡಿಕಾನ ದೇವಾಲಯದಲ್ಲಿ ಊಟೋಪಚಾರದ ವ್ಯವಸ್ಥೆ ಇದೆ. ಗುಂಪಾಗಿ ಬರುವುದಾದರೆ, ಮೊದಲೇ ತಿಳಿಸಬೇಕು. ಮಲ್ಲಿಕಾರ್ಜುನ ದೇವಾಲಯದ ದೂರವಾಣಿ ಸಂಖ್ಯೆ: 08257- 287242

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.