ಶುಕ್ರವಾರ, ಜನವರಿ 24, 2020
16 °C

ಜಲ ವಿದ್ಯುತ್ ಯೋಜನೆಗೆ ಅನುಮತಿ

ಜಾನೇಕೆರೆ.ಆರ್.ಪರಮೇಶ್ Updated:

ಅಕ್ಷರ ಗಾತ್ರ : | |

ಸಕಲೇಶಪುರ: `ಪಶ್ಚಿಮಘಟ್ಟದ ಯಡಕುಮೇರಿ ಹಾಗೂ ಕಾಗಿನಹರೆ ಕಾಯ್ದಿರಿಸಿದ ದಟ್ಟ ಮಳೆಕಾಡಿನಲ್ಲಿ ವನ್ಯ ಜೀವಿಗಳು ಹಾಗೂ ಅಳಿವಿನ ಅಂಚಿನಲ್ಲಿ ಯಾವುದೇ ಸಸ್ಯ, ಪ್ರಾಣಿಗಳೇ ಇಲ್ಲ. ಆದ್ದರಿಂದ ಇಲ್ಲಿ ಜಲ ವಿದ್ಯುತ್ ಯೋಜನೆ ಕೈಗೆತ್ತಿ ಕೊಳ್ಳಬಹುದು~ ಎಂದು ಅಂದಿನ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಸರ್ಕಾರಕ್ಕೆ ಶಿಫಾರಸ್ಸು ಪತ್ರ ನೀಡಿರುವುದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಾರುತಿ ಪವರ್ ಜೆನ್ (ಇಂಡಿಯಾ ) ಪ್ರೈ ಲಿ.ನವರು  2008-09ನೇ ಸಾಲಿನಲ್ಲಿ  ಜಲ ವಿದ್ಯುತ್ ಯೋಜನೆ ಆರಂಭಿಸಲು ಸಲ್ಲಿಸಿದ ಪ್ರಸ್ತಾವದಲ್ಲಿ, ಅಂದಿನ ಡಿಎಫ್‌ಒ ಆಗಿದ್ದ ಹಾಗೂ ಹಾಲಿ ಜಿಲ್ಲೆಯ ಅರಣ್ಯ ಸಂರಕ್ಷಣಾ ಧಿಕಾರಿ ನಾಗರಾಜ್ ಅವರೇ ಈ ವರದಿ ನೀಡಿರುವ ಅಧಿಕಾರಿ.ಜೀವ ವೈವಿಧ್ಯ ಹಾಗೂ ಸಸ್ಯ ವೈವಿಧ್ಯದಲ್ಲಿ ಪ್ರಪಂಚದ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪಶ್ಚಿಮಘಟ್ಟ ಕೂಡ ಒಂದು. ದೇಶದ ಜೀವ ವೈವಿಧ್ಯ ಹಾಗೂ ಸಸ್ಯ ವೈವಿಧ್ಯ ತಾಣಗಳಲ್ಲಿ ಉತ್ತರ ಹಿಮಾಲಯ ಮತ್ತು ಪಶ್ಚಿಮ ಘಟ್ಟ ಮಾತ್ರ. ಪಶ್ಚಿಮಘಟ್ಟ ವನ್ನು `ದಕ್ಷಿಣ ಭಾರತದ ನೀರಿನ ತೊಟ್ಟಿ~ ಎಂದೂ ಸಹ ಕರೆಯಲಾಗುತ್ತದೆ. ಕಾವೇರಿ, ಹೇಮಾವತಿ, ನೇತ್ರಾವತಿ, ತುಂಗಭದ್ರ, ಅಗನಾಶಿನಿ, ಭದ್ರ ಕಾಳಿ, ವರಾಹಿ ಸೇರಿದಂತೆ ಶೇ 95ಕ್ಕೂ ಹೆಚ್ಚು ನದಿಗಳು ಪಶ್ಚಿಮಘಟ್ಟ ದಲ್ಲಿಯೇ ಹುಟ್ಟಿ ಹರಿಯುತ್ತವೆ. ಪಶ್ಚಿಮಘಟ್ಟದ ಯಡಕುಮೇರಿ ಹಾಗೂ ಕಾಗಿನಹರೆ ಕಾಯ್ದಿರಿಸಿದ ದಟ್ಟ ಮಳೆಕಾಡಿನಲ್ಲಿ ಹಾಲೆ (ಅಲ್ಟೋನಿಯಾ ಸ್ಕೋಲೋರೀಸ್) ಕಾಸರ್ಕ, (ಸ್ಟ್ರಿಕ್ಟನೆಸ್ ನೆಕ್ಸೋಮಿಕಾ) ಬೋಗಿ, (ಹೋಪಿಯಾ ಪೋಂಗಾ) ಹೊಂಗೆ (ಹೊಂಗೇನಿಯಾ ಪಿನ್ನಾಟ) ಕಿರೋಲ್ ಬೋಗಿ, (ಹೋಪಿಯಾ ಫರ‌್ವಿಪ್ಲೋರಾ) ರಕ್ತದ ಮರ, ದೂಪದ ಮರ (ವೆಟೆರಿಯಾ ಇಂಡಿಕಾ) ಸಾಗವಾನಿ (ಟೆಕ್ಟೋನಾ ಗ್ರಾಂಡೀಸ್) ಕಾಡು ಶುಂಠಿ, ಕಾಡು ಸೊಪ್ಪು, ವಾಟೆ ಬಿದಿರು, ಚಕ್ರಾಣಿ, ಕಾಡು ಅಮೃತ ಬಳ್ಳಿ,  ಕಾಡು ಮಾವು, ಗುಳಿಮಾವು, ನಂದಿ, ನೇರ‌್ಲೆ, ಕರಿನೇರ‌್ಲೆ, ಹೆಬ್ಬೇವು, ಉಪ್ಪಾಗೆ, ಹೊನ್ನೇಮರ, ರಕ್ತಚಂದನ, ನೆಲ್ಲಿ, ಕೇದಿಗೆ, ರಾಮ ಪತ್ರೆ, ನಾಗಸಂಪಿಗೆ, ಕರಿಬೀಟೆ, ಹೆಬ್ಬೇವು, ದೇವಗರಿಗೆ.. ಹೀಗೆ ಸಾವಿರಾರು ಬಗೆಯ ಸಸ್ಯ ಸಂಪತ್ತು, ಔಷಧೀಯ ಗಿಡಮೂಲಿಕೆಗಳು ಇವೆ.ಅಷ್ಟೇ ಅಲ್ಲದೇ ಯಡಕುಮೇರಿ ಹಾಗೂ ಕಾಗಿನಹರೆ ಅರಣ್ಯದಲ್ಲಿ ಅಳಿವಿನ ಅಂಚಿನಲ್ಲಿ ಬರ್ಕ (ಮೌಸ್ ಡೀರ್), ಸಿಂಹ ಬಾಲದ ಸಿಂಗಳಿಕ (ಲೈಯನ್ ಟೈಲ್ಡ್ ಮಾಕಾಕ್) ಇಲ್ಲಿದೆ. ಕಾಡಾನೆಗಳು, ಹುಲಿ, ಡೈನೋಸಾರ್ ಇದ್ದ ಕಾಲದಿಂದ ಬದುಕಿದೆ ಎನ್ನಲಾದ ಮಂಗಟೆ (ಗ್ರೇಟ್ ಪೈಡ್ ಹಾರ್ನ್‌ ಬಿಲ್) ಸಿಲೋನ್‌ನ ಕಪ್ಪೆಯ ಹಕ್ಕಿ, (ಸಿಲೋನ್ ಪ್ರಾಗ್ ಮೌಸ್ ಬರ್ಡ್) ಮರನಾಯಿ, ಸೀಳು ನಾಯಿಗಳು, ಕಾಡುಕೋಣ, ಕಡವೆ ಹಾಗೂ ಇತ್ತೀಚಿನ ಸಂಶೋಧನೆಯಿಂದ ಪತ್ತೆಯಾದ ಇಂಡಿಯಾನ ಗುಂಡ್ಯಾ ಕಪ್ಪೆ  ಸೇರಿದಂತೆ ಇನ್ನೂ

ಹಲವು ವೈವಿಧ್ಯಮಯ ಜೀವಿಗಳು ಇಲ್ಲಿವೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳುತ್ತವೆ.ವರದಿ ನೀಡಿದ್ದು ಏಕೆ?

ಪ್ರಾಣಿ, ಪಕ್ಷಿ, ಕೀಟ, ಸರಿಸೃಪಗಳು, ಚಿಟ್ಟೆಗಳು, ಜಲ ಚರಗಳು ಇರುವ ಅತ್ಯಂತ ಸ್ಮೂಕ್ಷ ಪ್ರದೇಶದಲ್ಲಿ ವನ್ಯ ಜೀವಿಗಳು, ಅಳಿವಿನ ಅಂಚಿನಲ್ಲಿ ಇರುವ ಸಸ್ಯ ಹಾಗೂ ಪ್ರಾಣಿ ಸಂಕುಲಗಳು ಇಲ್ಲ ಎಂದು ಅಂದಿನ ಡಿಎಫ್‌ಒ  ವರದಿ ನೀಡಿದ್ದು ಏಕೆ ಎಂಬ ಕಾರಣ ತಿಳಿದು ಬಂದಿಲ್ಲ.ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಶಿರಾಡಿ ಘಾಟ್‌ನ ಕಾಗಿನಹರೆ ರಕ್ಷಿತ ಅರಣ್ಯದಲ್ಲಿ ಅರಣ್ಯ ಇಲಾಖೆಯ ನಾಮಫಲಕದಲ್ಲಿ `ಕಾಗಿನಹರೆ ರಕ್ಷಿತ ಅರಣ್ಯ ಪ್ರಪಂಚದ 18 ಅತಿ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಒಂದು, ಅಪರೂಪದ ವನ್ಯ ಜೀವ ರಾಶಿಗಳ ತಾಣ~ ಎಂದು ಬರೆಯಲಾಗಿದೆ. ಇಂತಹ ಇನ್ನೂ ಹಲವು ನಾಮಫಲಕಗಳಿದ್ದು, ಕೆಲವು ನಾಮಫಲಕಗಳಲ್ಲಿ ಕಾಡಾನೆ ಚಿತ್ರವಿದೆ.ಆದರೆ ಅರಣ್ಯವನ್ನು ಸಂರಕ್ಷಣೆ ಮಾಡಬೇಕಾದ ಹಿರಿಯ ಅಧಿಕಾರಿ ತಮ್ಮ ವರದಿಯಲ್ಲಿ `ಆನೆ ಕಾರಿಡಾರ್ ಇಲ್ಲ, ವನ್ಯಜೀವಿಗಳು ಇಲ್ಲ~ ಎಂದು ವರದಿ ನೀಡಿರುವುದನ್ನು ಪರಿಸರವಾದಿಗಳು ಇದೀಗ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ.

 

ಪ್ರತಿಕ್ರಿಯಿಸಿ (+)