ಭಾನುವಾರ, ಜನವರಿ 26, 2020
21 °C

ಜಾಗೃತ ವೀರಭದ್ರೇಶ್ವರನ ಜಾತ್ರೆ ಇಂದು

–ಎಂ.ಬಸವರಾಜಯ್ಯ. Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ವೀರಶೈವ ಧರ್ಮದಲ್ಲಿ ಶಿವನಿಗೆ ಕೊಡುವಷ್ಟು ಪ್ರಮುಖವಾದ ಸ್ಥಾನ ವೀರಭದ್ರ ದೇವರಿಗಿದೆ. ಬಳ್ಳಾರಿ ಜಿಲ್ಲೆ ವೀರಭದ್ರ ದೇವಸ್ಥಾನ­ಗಳ ತವರುಭೂಮಿ. ಹಂಪೆಯ ಉದ್ಧಾನ ವೀರಭದ್ರ, ಹೊಸಪೇಟೆಯ ಕಣವಿ ವೀರಭದ್ರ, ಸಣ್ಣಕ್ಕಿ ವೀರಭದ್ರ, ದರೋಜಿ ಕೋಡಿ ವೀರಭದ್ರ, ಕುರು­ಗೋಡಿನ ಪಂಚಮುಖಿ ವೀರಭದ್ರ, ಕಮ್ಮರಚೇಡು ವೀರಭದ್ರ, ದರೂರು ವೀರಭದ್ರ ಮತ್ತು ಸಿರುಗುಪ್ಪ ತಾಲ್ಲೂಕಿನ ಹಳೇಕೋಟೆಯ ವೀರಭದ್ರ ದೇವರು ಈ ಭಾಗದಲ್ಲಿ ಪ್ರಖ್ಯಾತಿ ಹೊಂದಿದ್ದು, ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದ್ದಾನೆ.ವಿಜಯನಗರ ಸಾಮ್ರಾಜ್ಯದ ತೆಂಕಣ ದಿಕ್ಕಿನಲ್ಲಿರುವ ಶಿಥಿಲಗೊಂಡ ಹಳೇ­ಕೋಟೆ, ಕೋಟೆ ಕೊತ್ತಲಗಳ ಕೆಳಗೆ ಮೈದಾಳಿ ಸಿರುಗುಪ್ಪ ತಾಲ್ಲೂಕಿನಲ್ಲಿರುವ ದೊಡ್ಡ ಹಳ್ಳಿಯೇ ಹಳೇಕೋಟೆ. ಈ ದೇವಸ್ಥಾನ ಸ್ಥಾಪನೆ ಬಗ್ಗೆ ಖಚಿತ ಮಾಹಿತಿಯೂ ಇಲ್ಲ. ಇಲ್ಲಿಯ ಹೊಲಗಳಲ್ಲಿ ಬಿದ್ದಿರುವ ವೀರಗಲ್ಲುಗಳ ಮಾಹಿತಿ ಪ್ರಕಾರ ಮೀಸೆಯಿರುವ ಶಿಲ್ಪಗಳು ವಿಜಯನಗರ ಕಾಲದವು ಎಂಬುದು ಸಂಶೋಧಕರ ಅಭಿಪ್ರಾಯ.

ಈ ದೇವಸ್ಥಾನದ ಮುಖ್ಯ ಬಾಗಿಲ ಮೇಲೆ ಗಜಲಕ್ಷ್ಮಿ ಇರುವುದರಿಂದ ಇದು ಹೆಣ್ಣು ದೇವತೆಯ ದೇವಸ್ಥಾನ­ವಾಗಿದ್ದು, ಕಾಲಾಂತರದಲ್ಲಿ ವೀರಭದ್ರ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ ಎಂಬುದು ಹಿರಿಯರ ಮಾತು.ಮೂಲತಃ  ವೀರಭದ್ರ ಇಲ್ಲಿ ನೆಲೆ ನಿಲ್ಲಲು ನೆಲವಿತ್ತ ಸ್ಥಳದೇವಿ ಯಲ್ಲಮ್ಮ­ದೇವಿ ಎಂತಲೂ, ಬಲವಿತ್ತ ಬಲದೇವತೆ ವರಭದ್ರಕಾಳಿ ಪ್ರೇಮವಲ್ಲಭೆ­ಯಾಗಿ­ದ್ದಾಳೆ ಎಂದು ಹಿರಿಯರಿಂದ ಕಿರಿಯರಿಗೆ ಇತಿಹಾಸ ಕಥೆಯಾಗಿ ಬಂದಿದೆ. ಪ್ರತಿ ಮಂಗಳವಾರ ಯಲ್ಲಮ್ಮ­ದೇವಿಗೆ ಪಲ್ಲಕ್ಕಿ ಉತ್ಸವ ನಡೆಯುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಸಮಿತಿಯ ಮುಖಂಡ ಮಲ್ಲಿಕಾರ್ಜು­ನಸ್ವಾಮಿ ನಿತ್ಯ ನಡೆಯುವ ಪೂಜಾ­ಕಾರ್ಯಗಳ ಬಗ್ಗೆ ತಿಳಿಸಿ, ಬೃಹತ್‌ ಕಲ್ಲುಗಳಿಂದ ನಿರ್ಮಿತವಾದ ಈ ದೇವಸ್ಥಾನ ಸುಂದರ ಕೆತ್ತನೆಗಳಿಂದ ಆಕರ್ಷಣೀಯವಾಗಿದೆ ಎನ್ನುವರು.ದಕ್ಷಯಜ್ಞನ ನಾಶದ ಸಂಕೇತವಾಗಿ ಇಲ್ಲಿ ಪ್ರತಿ ವರ್ಷ ಮಾರ್ಗಶಿರ ಶುದ್ಧ ದಶಮಿ ರೇವತಿ ನಕ್ಷತ್ರದ ಶುಭಗಳಿ­ಗೆಯಲ್ಲಿ ಜರುಗುವ ಅಗ್ಗಿ ಪುಟಾರಾಧನೆ­ಯಲ್ಲಿ ಸಹಸ್ರಾರು ಹರಕೆ ಹೊತ್ತ ಭಕ್ತರು ಬಾಣಂತಿ ಮತ್ತು ಮಗುವಿನಿಂದ ಹಿಡಿದು ವಯೋವೃದ್ಧರು ಸಹ ವೀರಾವೇಶದಿಂದ ಕೆಂಡ ತುಳಿಯುವ ಸಂಪ್ರದಾಯ ಇನ್ನೂ ಮುಂದುವರೆದಿದೆ ಎಂದು ಗ್ರಾಮದ ಹಿರಿಯ ಎಚ್‌.ಎಂ.­ವೀರಭದ್ರಶರ್ಮಾ ಹೇಳುವರು.ಕೆಂಡ ಹಾಯ್ದ ನಂತರ ಬೆಳಗಿನ ಜಾವ 6 ಗಂಟೆಗೆ ನಡೆಯುವ ವೀರಭದ್ರ ರಥೋತ್ಸವದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಬಂದ ಭಕ್ತ ಸಮೂಹ ಸಡಗರ ಸಂಭ್ರಮದಿಂದ ಈ ರಥೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಶಿವಾರೆಡ್ಡಿಗೌಡ ತಿಳಿಸಿದ್ದಾರೆ.ಈ ಉತ್ಸವದಲ್ಲಿ ಊರಿನ ತಳವಾರ ಜನಾಂಗದ ಸೇವೆ ಸ್ಮರಣೀಯ ಹಾಗೂ ಮೀಸಲು ಸೇವೆಯಾಗಿದೆ. ಊರಿನಲ್ಲಿ ಅನೇಕ ಜಾತಿ, ಮತ, ಪಂಥಗಳಿದ್ದರೂ ಅನೇಕತೆಗಳಲ್ಲಿ ಏಕತೆ ರೂಪಿಸಿಕೊಂಡು  ಸಹಬಾಳ್ವೆಯೊಂದಿಗೆ  ಊರಿನ ನೆಮ್ಮದಿ–ಶಾಂತಿಗೆ ಕಾರಣೀಭೂತರಾ­ಗಿದ್ದಾರೆ ಎಂದು ಯುವಕ ಬಿ.ಕೆ.ರಘು ತಮ್ಮೂರ ಜಾತ್ರೆಯ ವಿಶೇಷತೆಯನ್ನು ನೆನೆಯುತ್ತಾರೆ.ಈ ಊರಿನ ವಿಶೇಷವೆಂದರೆ ಎಲ್ಲ ಜನಾಂಗದವರು ತಮ್ಮ ಮಕ್ಕಳ ಹೆಸರನ್ನು ವೀರಭದ್ರ, ವೀರಮ್ಮ, ವೀರೇಶ, ಶರಭ ಹೀಗೆ ಮನೆ ಮನೆಗಳಲ್ಲಿ ಜೋಗುಳ ಹಾಡಿ ವೀರಭದ್ರ ದೇವರ ಹೆಸರಿಟ್ಟು ಕರೆಯುತ್ತಾರೆ ಎನ್ನುತ್ತಾರೆ ಗ್ರಾಮದ ಗುರುಸಿದ್ದನಗೌಡ. ಡಿಸೆಂಬರ್‌ 11ರಂದು ಬ್ರಾಹ್ಮೀ ಮುಹೂರ್ತದ ರೇವತಿ ನಕ್ಷತ್ರದ ಶುಭಗಳಿಗೆಯಲ್ಲಿ ಅಗ್ನಿಕುಂಡ ಹಾಗೂ 12ರಂದು ಸೂರ್ಯೋದಯಕ್ಕೆ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ.

–ಎಂ.ಬಸವರಾಜಯ್ಯ.

ಪ್ರತಿಕ್ರಿಯಿಸಿ (+)