ಶುಕ್ರವಾರ, ಮೇ 14, 2021
21 °C

ಜಾತಿಗಳ ಹುಡುಕಾಟ ಹಾಗೂ ಮೀಸಲಾತಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನ ಸಂದರ್ಭದಲ್ಲಿ ನಾಲ್ಕು ಪ್ರಮುಖವಾದ ಚರ್ಚೆಗಳು ನಡೆಯುತ್ತಿವೆ: ಅಲ್ಪ ಸಂಖ್ಯಾತರಲ್ಲಿ ಅದರಲ್ಲೂ ಮುಸ್ಲಿಮರಲ್ಲಿ ಜಾತಿಯ ನೆನೆಪುಗಳಿಲ್ಲದ ಸಂದರ್ಭದಲ್ಲಿ ಜಾತಿಗಳನ್ನು ಹೇಗೆ ನಿರ್ಮಿಸಬೇಕು ಎಂಬುದು. ಎರಡನೆಯದಾಗಿ ಅವರಲ್ಲಿರುವ ಜಾತಿಗಳನ್ನು ಗುರುತಿಸಬೇಕೆ? ಮುಸ್ಲಿಮರಿಗೆ  ಹಿಂದುಳಿದ ವರ್ಗದೊಳಗೆ ಮೀಸಲಾತಿ ನೀಡಬೇಕೆ? ಅಥವಾ ಅವರಿಗೆ ಪ್ರತ್ಯೇಕವಾಗಿ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬೇಕೆ ಎಂಬುದು.

ಈ ಚರ್ಚೆಗಳು ಆರಂಭಗೊಂಡದ್ದು ಸಾಚಾರ್ ವರದಿ ನಂತರ. ಪ್ರಾರಂಭದಲ್ಲಿ ಈ ಚರ್ಚೆ ಅಲ್ಪ ಸಂಖ್ಯಾತರ `ಅಭಿವೃದ್ಧಿ ಕೊರತೆ~ ರಾಜಕಾರಣ, ವ್ಯವಸ್ಥೆಯ ತಾರತಮ್ಯತೆಯ ಸುತ್ತ ಕೇಂದ್ರೀಕೃತವಾಗಿತ್ತು. ಇದೇ ಸಂದರ್ಭದಲ್ಲಿ ಸಾಚಾರ್ ವರದಿ ಎತ್ತಿ ತೋರಿಸಿದ ಮೂರು ಜಾತಿಗಳ ಕುರಿತು ಗಂಭೀರವಾದ ಚರ್ಚೆಗಳು ನಡೆಯಲೇ ಇಲ್ಲ. ಯಾವಾಗ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆ ಹಿಂದುಳಿದ ವರ್ಗದ ಕೋಟಾದೊಳಗೆ ಶೇಕಡಾ 4.5ರಷ್ಟನ್ನು ನಿಗದಿ ಮಾಡಿತೋ ಆಗ ಜಾತಿಗಳ ಹುಡುಕಾಟದ ಪ್ರಶ್ನೆ ಹುಟ್ಟಿಕೊಂಡಿತು. ಅಲ್ಲದೆ ಜಾತಿಗಳ ನೆನೆಪುಗಳಿಲ್ಲದ ಸಂದರ್ಭದಲ್ಲಿ  ಜಾತಿಗಳನ್ನು ಹೇಗೆ ನಿರ್ಮಿಸಬಹುದು ಎಂಬ ಕುತೂಹಲಕಾರಿ ಪ್ರಶ್ನೆ ಕೂಡ ಉದ್ಭವಿಸಿತು. ಎರಡನೆಯದಾಗಿ ಜಾತಿಗಳನ್ನು ರಾಜಕೀಯ ಅಥವಾ ಸಾಮಾಜಿಕ ಕಾರಣಗಳಿಗಾಗಿ ನಿರ್ಮಿಸಬೇಕೆ ಎಂಬ ಗೊಂದಲ ಕೂಡ ಹುಟ್ಟಿಕೊಂಡಿತ್ತು. ಅಷ್ಟು ಮಾತ್ರವಲ್ಲದೆ ಚರ್ಚೆಗಳು `ಗುರುತಿಸುವಿಕೆ ರಾಜಕಾರಣ~ವನ್ನು ಒಳಗೊಳ್ಳುತ್ತ ಹೋಯಿತು. ಈ ಗುರುತಿಸುವಿಕೆಗೆ ಮೀಸಲಾತಿ ಅವಶ್ಯಕವೆಂಬ ತೀರ್ಮಾನಕ್ಕೂ ಬರಲಾಯಿತು.

ಅಲ್ವ ಸಂಖ್ಯಾತರಲ್ಲಿ ಜಾತಿಗಳಿಲ್ಲ ಎಂಬ ವಾದಕ್ಕೆ ಮೂರು ಕಾರಣಗಳನ್ನು ನೀಡಲಾಗುತ್ತದೆ: ಧರ್ಮ `ಕಬೀಲಾ~  `ಖೋಮ್~ಗಳನ್ನು ಒಪ್ಪಿಕೊಳ್ಳುತ್ತದೆಯೇ ಹೊರತು ಜಾತಿಗಳನ್ನಲ್ಲ. ಎರಡನೆಯದಾಗಿ ಧರ್ಮದ ಅಂತಿಮ ಗುರಿ   `ಮುಸ್ಲಿಂ ಉಮ್ಮಾ~ಗಳನ್ನು ನಿರ್ಮಿಸುವುದೇ ಹೊರತು ಜಾತಿಗಳನ್ನಲ್ಲ. ಮೂರನೆಯದಾಗಿ ಹೊಸ ಅಸ್ಮಿತೆ ಸಂದರ್ಭದಲ್ಲಿ ಪೂರ್ವದ ಪರಂಪರೆ, ಇತಿಹಾಸದ ನೆನಪುಗಳನ್ನು ಕಳೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಇವೆಲ್ಲಾ ಕಾರಣಕ್ಕಾಗಿ  ಮುಸ್ಲಿಮರಲ್ಲಿ ಜಾತಿಗಳ ಪರಂಪರೆ ಹಾಗೂ ಜಾತಿಯ ನೆನಪುಗಳಿಲ್ಲ ಎಂಬ ತೀರ್ಮಾನಕ್ಕೆ ಕೂಡಲೇ ಬರಲಾಗುತ್ತದೆ.

ಇದರರ್ಥ ಮುಸ್ಲಿಮರಲ್ಲಿ ಜಾತಿಯ ಹುಡುಕಾಟ  ಹಾಗೂ ಚರ್ಚೆ ಇರಲಿಲ್ಲವೆಂದಲ್ಲ. ಈ ಚರ್ಚೆಯ ಸಂದರ್ಭದಲ್ಲಿ ಎರಡು ಅಂಶಗಳು ನಮಗೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತವೆ; ಒಂದೆಡೆ  ಗ್ರಂಥ, ಸಂಪ್ರದಾಯ ಹಾಗೂ ಶಾಸ್ತ್ರಬದ್ಧ ಧರ್ಮ. ಮತ್ತೊಂದೆಡೆ ಸ್ಥಾನೀಯ ಪರಂಪರೆ, ನಂಬಿಕೆ, ಸಾಮಾಜಿಕ ಸಂಬಂಧ ಹಾಗೂ ಪರಂಪರೆಗಳನ್ನೊಳಗೊಂಡ ಸಮುದಾಯ. ಜಾತಿಯ ಕುರಿತು  ಮೊತ್ತ ಮೊದಲ ಬಾರಿಗೆ ಬೆಳಕು ಚೆಲ್ಲಿದ್ದು 14ನೇ ಶತಮಾನದಲ್ಲಿ ಮಹಮ್ಮದ್ ಬಿನ್ ತುಘಲಕ್‌ನ ದರ್ಬಾರಿನಲ್ಲಿದ್ದ ಇಸ್ಲಾಮಿಕ್ ಪಂಡಿತ ಜಿಯಾವುದ್ದೀನ್ ಬರನಿ. ಅವನ `ಫತ್ವ-ಇ ಜಹಂಗದಾರಿ~ ಜಾತಿಗಳನ್ನು ಪುಷ್ಟೀಕರಿಸಿತ್ತು. ಅವನು ಮೇಲ್ಜಾತಿಗಳಾದ ಅಶ್ರಫ್ ಪರವಾಗಿ ನಿಂತವನು ಹಾಗೂ  ಕೆಳಜಾತಿಗಳಾದ ಅಜ್ಲಫ್‌ಗಳನ್ನು ಜ್ಞಾನದ ಪರಿಧಿಯಿಂದ ಹೊರಗಿಡಬೇಕೆಂದು ವಾದಿಸುತ್ತಾನೆ.

ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಅನಿವಾರ್ಯ; ಮುಸ್ಲಿಮರಲ್ಲಿ ಕಟ್ಟುನಿಟ್ಟಾಗಿರುವ ಜಾತಿ ವ್ಯವಸ್ಥೆ ಹಾಗೂ ಜಾತಿ ಪ್ರಜ್ಞೆ ಇದೆಯೇ? ಅಥವಾ ಶಿಥಿಲಗೊಂಡಿರುವ ಚೌಕಟ್ಟುಗಳಿವೆ? ಜಾತಿಯ ಕುರಿತಂತೆ ವಿಸ್ಮೃತಿ ಅಥವಾ ನೆನಪುಗಳಿಲ್ಲದ ಸಂದರ್ಭದಲ್ಲಿ ಜಾತಿ ಪ್ರಮುಖವಾಗುವುದೇ ಇಲ್ಲ. ಅಲ್ಲಿ ಜಾತಿ ತೆಳು ಪದರವಾಗಿ ಹರಡಿರುತ್ತದೆ. ಉಳಿದ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯ ಗಟ್ಟಿತನವನ್ನು ಹಾಗೂ ಪ್ರಜ್ಞೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅಲ್ವಸಂಖ್ಯಾತರಲ್ಲಿ ಮೂರು  ಪ್ರಮುಖವಾದ ಜಾತಿಗಳಿವೆ. ಮೊದಲನೆಯದಾಗಿ, ಮೇಲ್ಜಾತಿಗೆ ಸೇರಿದ ಅಶ್ರಫ್‌ಗಳಿದ್ದಾರೆ. ಇದರಲ್ಲಿ ಶೇಖ್, ಸೈಯದ್, ಮೊಘಲ್ ಹಾಗೂ ಪಠಾಣ್ ಎಂಬ ನಾಲ್ಕು ಜಾತಿಗಳನ್ನು ಸೇರಿಸಬಹುದು. ಇವರಲ್ಲಿಯೂ ಶ್ರೇಣಿಕೃತ ವ್ಯವಸ್ಥೆ ಇದೆ. ಇವರಲ್ಲಿ ಸೈಯ್ಯದ್ ಜಾತಿಗಳು ತಮ್ಮನ್ನು ತಾವು ಅತಿ ಶ್ರೇಷ್ಠ ಜಾತಿಗೆ ಸೇರಿದವರು  ಅಥವಾ  `ಊಂಚಿ ಝಾತ್~ ಎಂದು ಕರೆದುಕೊಳ್ಳುತ್ತಾರೆ. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ಸೈಯ್ಯದ್ ಜಾತಿ ನಂತರ ಶೇಖ್, ಮೊಘಲ್ ಹಾಗೂ ಪಠಾಣರು ಬರುತ್ತಾರೆ.

ಅಶ್ರಫೇತರಲ್ಲಿ ಅರ್ಜಲ್ಸ್ ಹಾಗೂ ಅಜ್ಲಫ್‌ಗಳು- ಹಿಂದೂ ಧರ್ಮದಿಂದ ಮತಾಂತರಗೊಂಡ ಹಿಂದುಳಿದ ವರ್ಗಗಳ ಜನರು ಹಾಗೂ ದಲಿತರನ್ನು ಗುರುತಿಸಬಹುದು. ಇಲ್ಲಿಯೂ ಶ್ರೇಣಿಕೃತ ವ್ಯವಸ್ಥೆ ಇದೆ. ವಿಚಿತ್ರವೆಂದರೆ ಮತಾಂತರ ಪೂರ್ವದ ಗೋತ್ರ ಪದ್ಧತಿ ಇಂದಿಗೂ ಈ ವರ್ಗಗಳಲ್ಲಿ ಚಾಲ್ತಿಯಲ್ಲಿದೆ. ಇವತ್ತಿಗೂ ಸ್ವಗೋತ್ರ ಮದುವೆ ನಿಷಿದ್ಧ.

ಗೋತ್ರ ಪದ್ಧತಿಯೊಂದಿಗೆ ಹುಟ್ಟಿಕೊಂಡದ್ದು ಜಾತಿ ಪಂಚಾಯತಿಗಳು. ಸರ್ಕಾರಿ ಪಂಚಾಯತಿಗಳಿಂತಲೂ ಅತ್ಯಂತ ಶಕ್ತಿಶಾಲಿಯಾಗಿರುವ ಹಾಗೂ ಪರ್ಯಾಯ ಸಂಸ್ಥೆಗಳೆಂದರೆ ಜಾತಿ ಪಂಚಾಯತ್‌ಗಳು. ಪ್ರತಿಯೊಂದು ಜಾತಿ ತನ್ನ ಜಾತಿ ಪಂಚಾಯತಿಗಳ ಮೂಲಕ ಸಮುದಾಯವನ್ನು  ನಿಯಂತ್ರಣದಲ್ಲಿಡುತ್ತದೆ. ಜಾತಿ ಪಂಚಾಯತಿ ಅಶ್ರಫೇತರಲ್ಲಿ ಅದರಲ್ಲೂ ಹಿಂದುಳಿದ ವರ್ಗಗಳಲ್ಲಿ ದಟ್ಟವಾಗಿದೆ. ಈ ಜಾತಿ ಪಂಚಾಯತ್‌ಗಳು ಅಂತರ್ ಜಾತಿಯ ಸಂಬಂಧಗಳನ್ನು, ಗೋತ್ರದ ಸಮಸ್ಯೆಗಳನ್ನು ,ವಿವಿಧ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ. ದುರಂತವೆಂದರೆ ಈ ಜಾತಿ ಪಂಚಾಯತ್‌ಗಳ ತೀರ್ಮಾನವೇ ಅಂತಿಮ.  ಇದು ಅದರ ಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಈ ಶ್ರೇಣಿಕೃತ ವ್ಯವಸ್ಥೆಯ ಒಂದು ಪ್ರಮುಖ ಅಂಶವೆಂದರೆ ಮಡಿ-ಮೈಲಿಗೆ. ಉತ್ತರ ಪ್ರದೇಶದಲ್ಲಿ ಮಿರಾಸಿಗಳು (ಹಾಡುಗಾರರು) ನಾಯಿಸ್ (ಕ್ಷೌರಿಕ) ಜಾತಿಗಿಂತ ಮೇಲ್ಜಾತಿಯರೆಂದು ವಾದಿಸುತ್ತಾರೆ. ಅದೇ ರೀತಿ ಧೋಬಿ, ಹಲಾಲ್ಕೋರ್, ಕಾಟಿ ಎಂಬುದು ಕೂಡ ಒಂದು ಅಶುದ್ಧ ಕಸುಬು ಎಂಬ ಪರಿಕಲ್ಪನೆ ಇದೆ. ಒಂದಂತೂ ಸ್ವಷ್ಟ:  ಮುಸ್ಲಿಮರಲ್ಲಿ ಈಗಲೂ ಕೆಲವು ಜಾತಿಗಳು ಮತಾಂತರ ಪೂರ್ವ ಕಸುಬುಗಳಾದ ಮಲ ಹೊರುವ ಪದ್ಧತಿ, ಸತ್ತ ಜಾನುವಾರುಗಳನ್ನು ಸುಲಿಯುವ ಕಸಬು, ಸ್ಮಶಾನದಲ್ಲಿ ಹೆಣಗಳನ್ನು ಹೂಳುವ ಕಸುಬುಗಳನ್ನು ಉಳಿಸಿರುವುದು ಅಷ್ಟೇ ವಾಸ್ತವ. ದಲಿತ ಮುಸ್ಲಿಮರಿಗಾಗಿಯೇ ಸೀಮಿತಗೊಂಡ ಮಸೀದಿಗಳಿವೆ,, ಸ್ಮಶಾನಗಳಿವೆ. ಈ ಜಾತಿಗಳು ಅಶ್ರಫ್‌ರವರನ್ನು ಮುಟ್ಟಬಾರದೆಂಬ ಸಾಮಾಜಿಕ ನಿರ್ಬಂಧನೆಗಳು ಈಗಲೂ ಚಾಲ್ತಿಯಲ್ಲಿವೆ. ವಿಚಿತ್ರವೆಂದರೆ ಈ ಮಡಿ-ಮೈಲಿಗೆಗಳಲ್ಲಿ ವ್ಯಕ್ತಿ ಮಾತ್ರ ಹೊಣೆಗಾರನಾಗುತ್ತಾನೆ  ಹೊರತು ಇಡೀ ಸಮುದಾಯವಲ್ಲ. ಆದಕಾರಣ ದಲಿತ- ಮುಸ್ಲಿಂ ಹಾಗೂ ಮೇಲ್ಜಾತಿಯ ಮುಸ್ಲಿಮರ ನಡುವೆ ಭೀಕರವಾದ ಘರ್ಷಣೆಯ ನಿದರ್ಶನಗಳು ದೊರೆಯುವುದಿಲ್ಲ. ಚಿಕ್ಕ ಪುಟ್ಟ ತಿಕ್ಕಾಟಗಳು ಮಾತ್ರ ಕಂಡು ಬರುತ್ತವೆ.

ಜಾತಿ ಸಂಖ್ಯೆಗಳ ರಾಜಕಾರಣ ಇವತ್ತಿಗೂ ಮುಗಿಯದ ಅಧ್ಯಾಯ. ದಲಿತ-ಮುಸ್ಲಿಂ ಹಾಗೂ  ಮುಸ್ಲಿಂ ಹಿಂದುಳಿದ ವರ್ಗಗಳ  ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತ ಹೋಗುತ್ತದೆ. ಪಂಜಾಬ್‌ನಲ್ಲಿ 9 ಜಾತಿಗಳನ್ನು ಹಿಂದುಳಿದ ವರ್ಗಗಳೆಂದು ಗುರುತಿಸಿದರೆ,  ಮಧ್ಯಪ್ರದೇಶದಲ್ಲಿ 37, ಹರಿಯಾಣದಲ್ಲಿ  7, ಗುಜರಾತ್‌ನಲ್ಲಿ 34, ಬಿಹಾರ್‌ನಲ್ಲಿ 31, ಉತ್ತರ ಪ್ರದೇಶದಲ್ಲಿ 40, ಪಶ್ಚಿಮ ಬಂಗಾಲದಲ್ಲಿ  54 ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.  ಹಿಂದುಳಿದ ವರ್ಗಗಳ ಪಟ್ಟಿ ಕೇಂದ್ರ ಸರ್ಕಾರದ ಪಟ್ಟಿಯೂ ಹೌದು. ಬಹಳಷ್ಟು ಹಿಂದುಳಿದ ವರ್ಗಗಳು ರಾಜ್ಯದ ಪಟ್ಟಿಯಲ್ಲಿದ್ದರೂ  ಕೇಂದ್ರದ ಪಟ್ಟಿಯೊಳಗೆ ಸೇರಿಲ್ಲ. ವಾಸ್ತವವಾಗಿ ಇಲ್ಲೊಂದು ಸಮಸ್ಯೆ ಇದೆ. ಆ ಸಮಸ್ಯೆ ಮಂಡಲ್ ಆಯೋಗದ ಕಾಲದಿಂದಲೇ ಆರಂಭಗೊಂಡಿತ್ತು. ಮಂಡಲ್ ಆಯೋಗ ಹಿಂದುಳಿದ ವರ್ಗ ಹಾಗೂ ದಲಿತ-ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದ್ದು ಸಮಸ್ಯೆಗೆ ಕಾರಣವಾಯಿತು. ಅದರಿಂದಾಗಿ ದಲಿತ-ಮುಸ್ಲಿಮರ  ನಿಖರವಾದ ಪಟ್ಟಿ ದೊರೆಯುವುದೇ ಇಲ್ಲ. ಇದರ ಫಲಶ್ರುತಿ ಎಂದರೆ ದಲಿತ ಮುಸ್ಲಿಂ ಪಟ್ಟಿಯಲ್ಲಿ ಜಾತಿಗಳನ್ನು ಸೇರಿಸಲು ಜಾತಿಗಳ ಕಸರತ್ತು. ಇದು ಐಡೆಂಟಿಟಿ ರಾಜಕಾರಣದ ಒಂದು ಭಾಗ. ಹರಿಯಾಣದ ಮಿಯೋಗಳು ತಮ್ಮನ್ನು ಪರಿಶಿಷ್ಟ ಪಂಗಡದೊಳಗೆ ಸೇರಿಸಲು ಯತ್ನಿಸುತ್ತಿರುವುದನ್ನು ಇಲ್ಲಿ ದಾಖಲಿಸಬೇಕು.  

ಜಾತಿಯ ವಿಷಯ ಈಗ ಸಂಘಟಿತವಾದ ಹೋರಾಟದ ರೂಪವನ್ನು ಪಡೆಯುತ್ತಿದೆ. ಈ ಹೋರಾಟಗಳು ಮೀಸಲಾತಿಯೊಂದಿಗೆ ಜಾತಿಗಳಾದ ನಾರ್, ಬಕ್ಕೋ, ಬಟಿಯಾರ, ಕುಂಜ್ರ,ಧುನಿಯ, ಕಲಾಲ್, ದಫಾಲಿ, ಹಲಾಲ್ಕೋರ್, ಧೋಬಿ ಲಾಲ್ಬೆಗಿ, ಗೋರ್ಕಣ್, ಮೀರ್ಶಿಕರ್, ಚೀಕ್, ರಂಘ್, ದರ್ಜಿ, ಮೋಚಿ,  ಇತ್ಯಾದಿಗಳನ್ನು ಪರಿಶಿಷ್ಟ ಜಾತಿಯೊಳಗೆ ಸೇರಿಸಲು ಪ್ರಯತ್ನ ನಡೆಯುತ್ತಿದೆ. ವಾಸ್ತವವಾಗಿ 1950ರಲ್ಲಿ ರಾಷ್ಟ್ರಪತಿಯವರು ಹೊರಟಿಸಿದ ಆದೇಶದ ಪ್ರಕಾರ ಈ ಜಾತಿಗಳನ್ನು ಪರಿಶಿಷ್ಟ ಜಾತಿಯ  ಪಟ್ಟಿಯಿಂದ ಧರ್ಮದ ಕಾರಣಕ್ಕಾಗಿ ಹೊರಗಿಟ್ಟಿತ್ತು. ಈ ವರ್ಗಗಳು 1935ರ ಸುಮಾರಿಗೆ ಸರ್ಕಾರದ  `ಅತ್ಯಂತ ಹಿಂದುಳಿದ ವರ್ಗ~ಗಳ ಪಟ್ಟಿಯಲ್ಲಿ ಸೇರಿದ್ದವು. 1950ರ ಆದೇಶ ಅವರನ್ನು ಈ ರೀತಿಯ ಪಟ್ಟಿಯಿಂದ ಹೊರಗಿಟ್ಟಿತು. ಇವತ್ತು ಮುಸ್ಲಿಮರಲ್ಲಿ ಕಡಿಮೆಯೆಂದರೆ 35 ದಲಿತ ಜಾತಿಗಳಿರುವುದನ್ನು ಕುಮಾರ್ ಸುರೇಶ್ ಸಿಂಘ್ ಸಮಿತಿ ಈಗಾಗಲೇ ಉಲ್ಲೇಖಿಸಿದೆ. ಅಲ್ಲದೆ ಮತಾಂತರ ಪೂರ್ವದ ಕಸುಬುಗಳನ್ನು ಮಾಡುತ್ತಿರುವುದನ್ನು ಅದು ಸ್ವಷ್ಟವಾಗಿ ಉಲ್ಲೇಖಿಸಿದೆ.

ಈ ಎಲ್ಲಾ ಅಂಶಗಳು ಇನ್ನೊಂದು ಚರ್ಚೆಗೆ ದಾರಿ ಮಾಡಿ ಕೊಡುತ್ತಿದೆ; ಮುಸ್ಲಿಮರಿಗೆ ಧರ್ಮಧಾರಿತವಾಗಿ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆ? ಅಥವಾ ಸಮಾಜೋ-ಆರ್ಥಿಕ ವರ್ಗವಾಗಿ ಗುರುತಿಸಿ ಮೀಸಲಾತಿಯನ್ನು ನೀಡಬೇಕೆ? ಅಥವಾ ಸಮುದಾಯವನ್ನು ಎರಡು ಪ್ರವರ್ಗಗಳಾಗಿ ವಿಭಜಿಸಿ ಕರ್ನಾಟಕ ಮಾದರಿಯಂತೆ ವಿವಿಧ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಗುರುತಿಸಬೇಕೆ? ಭಾರತದಲ್ಲಿ ಧರ್ಮಧಾರಿತವಾದ ಮೀಸಲಾತಿ ಇಲ್ಲ. ಇದು ವಾಸ್ತವ. ಆದರೂ 1956ರಲ್ಲಿ ಸಿಖ್ ದಲಿತರಿಗೆ ಮೀಸಲಾತಿ ನೀಡಲಾಯಿತು. ಅದೇ ರೀತಿ ನವ ಬೌದ್ಧರಿಗೆ 1990ರಲ್ಲಿ ಮೀಸಲಾತಿಯನ್ನು  ನೀಡಲಾಯಿತು. ಇವೆರಡು ಸಂದರ್ಭಗಳಲ್ಲಿ ನವ ಬೌದ್ಧರನ್ನು ಹಾಗೂ ಸಿಖ್ ಧರ್ಮವನ್ನು ಹಿಂದೂ ಧರ್ಮದ ಭಾಗವಾಗಿ ನೋಡಲಾಯಿತು. ಮೀಸಲಾತಿಗೆ ಕರ್ನಾಟಕ ಯಾಕೆ ಮಾದರಿ ಆಗಬಾರದೆಂಬ ವಾದವೂ ಬೆಳೆಯುತ್ತಿದೆ. ಅದೇ ಸಂದರ್ಭದಲ್ಲಿ ಶೇಕಡಾವಾರು ಮೀಸಲಾತಿ ಕುರಿತು ಜಿಜ್ಞಾಸೆ ಇದೆ. ಒಂದೆಡೆ ಮುಸ್ಲಿಮರ ಮೀಸಲಾತಿ ಶೇಕಡಾ 4.5 ರಿಂದ ಶೇಕಡಾ 10 ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇನ್ನು ಕೆಲವೆಡೆ ಮೀಸಲಾತಿಯ ಬೇಡಿಕೆ ಪ್ರಮಾಣ ಜನಸಂಖ್ಯೆ ಆಧಾರಿತವಾಗಿ ಇರಬೇಕೆಂಬ ಬೇಡಿಕೆಗಳೂ ಇದೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಬೇರೆ ಬೇರೆ ಪ್ರಮಾಣದ ಮೀಸಲಾತಿ ಇರಬೇಕೆಂಬ ವಾದವೂ ಬೆಳೆಯುತ್ತಿದೆ. 

ಇವೆಲ್ಲಕ್ಕಿಂತಲೂ ಮುಖ್ಯವಾಗಿರುವುದು ಜಾತಿಗಳ ನೆನೆಪುಗಳಿಲ್ಲದವರಲ್ಲಿ ಜಾತಿಗಳ ನೆನಪುಗಳನ್ನು ಹೇಗೆ ಪುನರ್‌ಮನನ ಮಾಡುವುದು? ಜಾತಿಗಳ ನೆನಪುಗಳನ್ನು ಯಾವ ತಲೆಮಾರಿನಿಂದ ಹಾಗೂ ಯಾವ ಆಧಾರದ ಮೇಲೆ ಆರಂಭಿಸಬೇಕು? ಜಾತಿಗಳನ್ನು ತತ್‌ಕ್ಷಣದ ತಲೆಮಾರಿನ ಕಸಬುಗಳಿಂದ ಸೃಷ್ಟಿಸಬೇಕೆ? ಅಥವಾ ಇತಿಹಾಸವನ್ನು ಕೆದಕಿ ಸೃಷ್ಟಿಸಬೇಕೇ? ಇತ್ಯಾದಿ ಗೊಂದಲಗಳು ಸಾಕಷ್ಟಿವೆ. ಆದರೆ ಜಾತಿಗಳನ್ನು ಸಾಮಾಜಿಕ ಕಾರಣಗಳಿಗಿಂತಲೂ ರಾಜಕೀಯ ಕಾರಣಗಳಿಗಾಗಿ ನಿರ್ಮಿಸಬೇಕೆಂಬ ವಾದ ಬಹಳ ಗಟ್ಟಿಯಾಗುತ್ತಿದೆ. ಯಾಕೆಂದರೆ ಐಡೆಂಟಿಟಿ ರಾಜಕೀಯದಲ್ಲಿ  ಗುರುತಿಸುವಿಕೆ ಅಂಶ ಬಹಳ ಮುಖ್ಯ ಹಾಗೂ ಇಂದಿನ ಅವಶ್ಯಕತೆಗಳಲ್ಲಿ ಒಂದು. ಇಲ್ಲದಿದ್ದರೆ ಸಮುದಾಯಗಳು ಮತ್ತೆ ಮತ್ತೆ ಅಂಚಿಗೆ ತಳ್ಳುವ ಸಾಧ್ಯತೆಗಳು ತೀರಾ ಹೆಚ್ಚು. ಆದಕಾರಣ ಜಾತಿಗಳ ವಿಸ್ಮೃತಿಗಳ ನಡುವೆ ಜಾತಿಗಳ ಹುಡುಕಾಟ ಹಾಗೂ ನಿರ್ಮಿತಿ ಅನಿವಾರ್ಯವಾಗುತ್ತಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in )

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.