ಶನಿವಾರ, ಜನವರಿ 18, 2020
26 °C
ನೇಪಥ್ಯಕ್ಕೆ ಸರಿದ ಯೆಂಡ್ಕುಡ್ಕ ರತ್ನನ ಜನಕನ ನೆನಪು

ಜಿ.ಪಿ.ರಾಜರತ್ನಂ ಮರೆತ ರಾಮನಗರದ ಜನತೆ

ಪ್ರಜಾವಾಣಿ ವಾರ್ತೆ/ –ಎಸ್. ರುದ್ರೇಶ್ವರ Updated:

ಅಕ್ಷರ ಗಾತ್ರ : | |

ರಾಮನಗರ: ಕನ್ನಡದ ಸುಪ್ರಸಿದ್ಧ ಸಾಹಿತಿ ಡಾ.ಜಿ.ಪಿ. ರಾಜರತ್ನಂ ಅವರ ಹೆಸರಿನಲ್ಲಿ ನಗರದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕು ಎಂದು ಸ್ಥಳೀಯ ಕನ್ನಡಾಭಿಮಾನಿಗಳು ಒತ್ತಾಯಿಸಿದ್ದಾರೆ.

ಜಿ.ಪಿ.ರಾಜರತ್ನಂ ಅವರು ಜನಿಸಿ ಗುರವಾರಕ್ಕೆ (ಡಿ.5)105 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಲಾಗಿದೆ.ರಾಜರತ್ನಂ ಅವರು ಇಂದಿನ ರಾಮನಗರದಲ್ಲಿ ಡಿಸೆಂಬರ್ 5ರಂದು 1908ರಲ್ಲಿ ಜನಿಸಿದರು. ರಾಮನಗರವನ್ನು ಅಂದು ‘ಕ್ಲೋಸ್‌ ಪೇಟೆ’ ಎಂದು ಕರೆಯಲಾಗುತ್ತಿತ್ತು. ಕನ್ನಡದ ಅಪೂರ್ವ ಸಾಹಿತಿ ಎಂದೇ ಪರಿಗಣಿಸಲಾಗುವ ರಾಜರತ್ನಂ ಅವರು ಇದೇ ರಾಮನಗರದಲ್ಲಿ ಜನಿಸಿದ್ದರು ಎಂದು ಸ್ಮರಿಸುವಂತಹ ಒಂದೇ ಒಂದು ಕುರುಹೂ ಇಲ್ಲಿಲ್ಲ.ಇಲ್ಲಿನ ಛತ್ರದ ಬೀದಿಯಲ್ಲಿರುವ 'ಜಿ.ಪಿ. ರಾಜರತ್ನಂ ವೃತ್ತ' ಎಂಬ ಬರಹವಿರುವ ಧ್ವಜಸ್ತಂಭ ಮಾತ್ರ ಇವರನ್ನು ಎಲ್ಲೋ ಒಂದು ಎಳೆಯಲ್ಲಿ ನೆನಪಿಸುತ್ತದೆ. ಇದನ್ನು ಹೊರತುಪಡಿಸಿದಂತೆ ರಾಜರತ್ನಂ ಅವರ ಹೆಸರಿನ ಯಾವೊಂದು ಸ್ಮರಣೆಗಳೂ ರಾಮನಗರದಲ್ಲಿಲ್ಲ.ಗುಂಡ್ಲುಪಂಡಿತ: ಜಿ.ಪಿ. ಎಂದರೆ ‘ಗುಂಡ್ಲು’ಪಂಡಿತ ಎಂದರ್ಥ. ಇಂದಿನ ಚಾಮರಾಜನಗರ ಜಿಲ್ಲೆಯಲ್ಲಿರುವ ತಮಿಳುನಾಡು ಹಾಗೂ ಕೇರಳ ಗಡಿ ಭಾಗದ ಗುಂಡ್ಲುಪೇಟೆಯೇ ಅಂದಿನ ಗುಂಡ್ಲು. ರಾಜರತ್ನಂ ಅವರ ವಂಶಸ್ಥರೊಬ್ಬರು ಹಿಂದೆ ತಮಿಳು ನಾಡಿನಿಂದ ಇಲ್ಲಿಗೆ ಬಂದು ಈ ಊರಿನಲ್ಲಿ ಆಯುರ್ವೇದ ಪಂಡಿತರಾಗಿದ್ದರೆಂದೂ ಆದ್ದರಿಂದಲೇ ಜನ ಅವರನ್ನು ಗುಂಡ್ಲುಪಂಡಿತ ಎಂಬುದಾಗಿ ಕರೆಯುತ್ತಿದ್ದರೆಂದೂ, ಅದೇ ನಾಮಧೇಯ ರಾಜರತ್ನಂ ಅವರ ಹೆಸರಿಗೆ ಜಿ.ಪಿ. ಎನ್ನುವ ಸಂಕ್ಷಿಪ್ತ ರೂಪದಲ್ಲಿ ಸೇರಿಕೊಂಡಿತೆಂದೂ ತಿಳಿದು ಬರುತ್ತದೆ.ರಾಜರತ್ನಂ ಅವರ ಮಾತೃಭಾಷೆ ತಮಿಳು. ಆದರೆ ಕನ್ನಡದ ಪರಿಚಾರಿಕೆಗಾಗಿ ಇವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದರು.'ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ

ಬಾಯ್ ಒಲ್ಸಾಕಿದ್ರೂನೆ

ಮೂಗ್ನಲ್ ಕನ್ನಡ ಪದವಾಡ್ತೀನಿ

ನನ್ ಮನಸ್ಸನ್ ನೀ ಕಾಣೆ'

ಎಂದು ತಮಗೆ ಕನ್ನಡದ ಬಗ್ಗೆ ಇದ್ದ ಅನನ್ಯ ಪ್ರೀತಿಯನ್ನು ಯೆಂಡ್ಕುಡ್ಕ ರತ್ನನ ಮೂಲಕ ರಾಜರತ್ನಂ ಅವರು ಅಭಿವ್ಯಕ್ತಿಸಿದವರು.ಕನ್ನಡದ ಬಗ್ಗೆ ಅಸದೃಶ ಅಭಿಮಾನ ಇರಿಸಿಕೊಂಡಿದ್ದ ಅವರು ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಪಾಳಿ, ಪ್ರಾಕೃತ ಭಾಷೆಗಳಲ್ಲಿಯೂ ಮೇರುಸದೃಶ ಪಾಂಡಿತ್ಯ ಪಡೆದಿದ್ದರು. ರಾಜರತ್ನಂ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಸೃಜನಶೀಲ ಕೃತಿಗಳೆಂದರೆ ‘ರತ್ನನ ಪದಗಳು’ ಹಾಗೂ ‘ನಾಗನ ಪದಗಳು’.ಡಾ. ಜಿ.ಪಿ. ರಾಜರತ್ನಂ ಅವರು ತಮ್ಮನ್ನು ಕೇವಲ ಸೃಜನಶೀಲ ಸಾಹಿತ್ಯ ರಚನೆಗಷ್ಟೇ ಸೀಮಿತಗೊಳಿಸಿಕೊಳ್ಳದೆ ಸಾಹಿತ್ಯ ಪರಿಚಾರಕರಾಗಿಯೂ ಕನ್ನಡದ ಸಾರಸ್ವತ ಲೋಕಕ್ಕೆ ನೀಡಿರುವ ಕಾಣ್ಕೆ ಅಪಾರ. ಕನ್ನಡದ ಪುಸ್ತಕಗಳನ್ನು ಹೊತ್ತು ನಾಡಿನ ಮೂಲೆ ಮೂಲೆಗೂ ತಲುಪಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ.ಕಾದಂಬರಿ ಪ್ರಕಾರವೊಂದನ್ನು ಹೊರತುಪಡಿಸಿ ಕಾವ್ಯ, ನಾಟಕ, ಕಥೆ, ಮಕ್ಕಳ ಸಾಹಿತ್ಯ, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ, ಇಸ್ಲಾಂ ಸಾಹಿತ್ಯ... ಹೀಗೆ ಬಹುಮುಖಿ ನೆಲೆಯಲ್ಲಿ ಅವರು ಸರಿಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಪಿ. ಲಂಕೇಶ್, ಕೆ.ಎಸ್. ನಿಸಾರ್ ಅಹಮದ್ ಅವರಂತಹ ಅನೇಕ  ‘ರತ್ನ’ಗಳನ್ನು  ಬೆಳಕಿಗೆ ತಂದ ಶ್ರೇಯಸ್ಸೂ ರಾಜರತ್ನಂ ಅವರಿಗೆ ಸಲ್ಲುತ್ತದೆ ಎಂದು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಎಲ್.ಸಿ. ರಾಜು ನೆನಪಿಸುತ್ತಾರೆ.

 

ಪ್ರತಿಕ್ರಿಯಿಸಿ (+)